Advertisement

ಚಿನ್ನ ಖರೀದಿಸೋಣ, ಆದರೆ ಚಿನ್ನದ ಬಗ್ಗೆ ನಮಗೆ ಗೊತ್ತಿರುವುದೆಷ್ಟು ?

08:00 AM Aug 06, 2018 | udayavani editorial |

ಸಮಾಜದ ಎಲ್ಲ ವರ್ಗದ ಜನರು ಚಿನ್ನವನ್ನು ಇಷ್ಟಪಡುತ್ತಾರೆ ಎನ್ನುವುದರಲ್ಲಿ ಸಂಶಯವೇ ಇಲ್ಲ. ಭಾರತೀಯ ಸಂಸ್ಕೃತಿ ಮತ್ತು ಇತಿಹಾಸವನ್ನು ಅವಲೋಕಿಸಿದರೆ ಹೊಳೆಯುವ ಹಳದಿ ಲೋಹವೆಂಬ ಚಿನ್ನವು ಭಾರತೀಯರ ಬದುಕಿನಲ್ಲಿ  ಹಾಸುಹೊಕ್ಕಾಗಿರುವುದನ್ನು ತಿಳಿಯಬಹುದು. ಹಾಗಿದ್ದರೂ ಚಿನ್ನ, ಅದರ ಭಾವನಾತ್ಮಕ ಮತ್ತು ಹೂಡಿಕೆ ಮೌಲ್ಯ, ಪರಿಶುದ್ಧತೆ, ವ್ಯಾವಹಾರಿಕ ಮಾಹಿತಿ, ಇತ್ಯಾದಿಗಳ ಬಗ್ಗೆ  ನಮಗೆ ತಿಳಿದಿರುವುದು ಅತ್ಯಲ್ಪವೇ. 

Advertisement

ಚಿನ್ನ ನಿಜಕ್ಕೂ ಒಂದು ಉತ್ತಮ ಹೂಡಿಕೆಯ ಮಾಧ್ಯಮ ಹೌದೇ ಅಲ್ಲವೇ ಎಂಬ ಬಗ್ಗೆ ಹೂಡಿಕೆ ತಜ್ಞರಲ್ಲಿ ಸದಾ ಕಾಲ ಚರ್ಚೆ ನಡೆಯುತ್ತಲೇ ಇರುವುದನ್ನು ನಾವು ಕಾಣುತ್ತೇವೆ. ನಿಮಗಿದು ಆಶ್ಚರ್ಯವಾದೀತು : ಅನೇಕ ಹೂಡಿಕೆ ಪರಿಣತರ ದೃಷ್ಟಿಯಲ್ಲಿ ಚಿನ್ನ ಒಂದು ಉತ್ತಮ ಹೂಡಿಕೆ ಮಾಧ್ಯಮ ಅಲ್ಲವೇ ಅಲ್ಲ ! 

ಇನ್ನೂ ಅನೇಕ ಹೂಡಿಕೆ ತಜ್ಞರ ದೃಷ್ಟಿಯಲ್ಲಿ ಚಿನ್ನ ಒಂದು ಉತ್ತಮ ಹೂಡಿಕೆ ಮಾಧ್ಯಮ. ಈ ಭಿನ್ನಾಭಿಪ್ರಾಯ, ದ್ವಂದ್ವ ಯಾವತ್ತೂ ಇದ್ದದ್ದೇ. ಹಾಗಾಗಿ ಇವರಲ್ಲಿ ಯಾರನ್ನು ನಂಬಬೇಕು, ಯಾರನ್ನೂ ನಂಬಬಾರದು ಎಂಬ ಗೊಂದಲ ಜನ ಸಾಮಾನ್ಯರಲ್ಲಿ ಸಹಜವಾಗಿಯೇ ಇರುತ್ತದೆ; ಅದೇನಿದ್ದರೂ ಜನರು ಚಿನ್ನ ಖರೀದಿಸುವದನ್ನು ನಿಲ್ಲಿಸುವುದಿಲ್ಲ ! 

ಇದಕ್ಕೆ  ಜನರು ಕೊಡುವ ಮುಖ್ಯ ಕಾರಣವೆಂದರೆ ಚಿನ್ನ ಖರೀದಿಸುವುದು ಸುಲಭ; ಮಾರುವುದೂ ಸುಲಭ. ಚಿನ್ನವನ್ನು ಸ್ವಲ್ಪ ಸ್ವಲ್ಪ ಪ್ರಮಾಣದಲ್ಲಿ ಖರೀದಿಸುತ್ತಾ ಹೋದರೆ ಅದನ್ನು ತೆರಿಗೆ ಹೊರೆಯಿಂದ ರಕ್ಷಿಸಬಹುದು, ಇತ್ಯಾದಿ. 

Advertisement

ಅನೇಕ ಜನರ ದೃಷ್ಟಿಯಲ್ಲಿ  ಚಿನ್ನದ ಮೇಲಿನ ಹೂಡಿಕೆ ಮೌಲ್ಯ ಎಂತಹ ವಿಷಮ ಸಂದರ್ಭದಲ್ಲೂ  ಹಣದುಬ್ಬರಕ್ಕೆ ಕೊರೆದು ಹೋಗುವುದಿಲ್ಲ. ಚಿನ್ನದ ಧಾರಣೆ  ಶೇರು ಧಾರಣೆಯಂತೆ ಪ್ರಪಾತಕ್ಕೆ ಬೀಳುವುದಿಲ್ಲ; ಏಕಾಏಕಿ ಬಾನೆತ್ತರಕ್ಕೂ ಜಿಗಿಯುವುದಿಲ್ಲ; ಆದುದರಿಂದ ಚಿನ್ನದ ಮೇಲಿನ ಹೂಡಿಕೆಗೆ ಯಾವತ್ತೂ ಮೋಸ ಇಲ್ಲ. ಅದೊಂದು ಆಪದ್ಧನ !

ಹಾಗಿದ್ದರೂ ಹಣಕಾಸು ಪರಿಣತರ ದೃಷ್ಟಿಯಲ್ಲಿ ಜನರು ಚಿನ್ನ ಖರೀದಿಸುವುದು ಒಂದು ವ್ಯರ್ಥ ಆರ್ಥಿಕ ಚಟುವಟಿಕೆ; ಚಿನ್ನದ ಮೇಲೆ ಹಾಕುವ ಹಣವನ್ನು ವ್ಯಾಪಾರ – ವಹಿವಾಟಿನ ಮೇಲೆ ಹಾಕಿದರೆ, ಅದರಿಂದ ಉದ್ಯಮ ಬೆಳೆಯುತ್ತದೆ; ಲಾಭ ಬರುತ್ತದೆ; ಸಂಪತ್ತು ಹೆಚ್ಚುತ್ತದೆ, ಒಂದಷ್ಟು ಮಂದಿಗೆ ಉದ್ಯೋಗ ಸಿಗತ್ತದೆ. 

ಜನರು ಚಿನ್ನವನ್ನು ಹೆಚ್ಚೆಚ್ಚು ಖರೀದಿಸಿದರೆ ಸರಕಾರದ ಮೇಲೆ ಆರ್ಥಿಕ ಹೊರೆ ಹೆಚ್ಚುತ್ತದೆ ಎನ್ನುವುದು ಸತ್ಯ. ಜನರು ಖರೀದಿಸಿಡುವ ಚಿನ್ನ ಅಥವಾ ಚಿನ್ನಾಭರಣ ಬ್ಯಾಂಕ್ ಲಾಕರ್ ಸೇರಿ ನಿಷ್ಕ್ರಿಯವಾಗುವ ಸಂಪತ್ತು. ಆದ ಕಾರಣ ಅದು ಯಾವುದೇ ಹುಟ್ಟುವಳಿ ತರುವುದಿಲ್ಲ; ಜನರಿಗಾಗಿ ಸರಕಾರ ಡಾಲರ್ ವ್ಯಯಿಸಿ ಚಿನ್ನವನ್ನು ಆಮದಿಸಿ ದೇಶೀಯ ಮಾರುಕಟ್ಟೆಗೆ ಒದಗಿಸಬೇಕಾಗುತ್ತದೆ.

ಇದರಿಂದ ಸರಕಾರದ ಕೈಯಲ್ಲಿರುವ ಅಮೂಲ್ಯ ಡಾಲರ್ ವ್ಯರ್ಥವಾಗಿ ವ್ಯಯವಾಗುತ್ತದೆ. ವಿದೇಶದಿಂದ ಆಮದಾಗುವ ಬಹುಪಾಲು ಚಿನ್ನವನ್ನು ಜನರು ಆಭರಣದ ಉದ್ದೇಶಗಳಿಗಾಗಿ ಬಳಸುತ್ತಾರೆ.  ಇದು ಕೇವಲ ಸೌಂದರ್ಯವರ್ಧಕ ಸೊತ್ತಾದೀತೇ ಹೊರತು ಆರ್ಥಿಕ ಪ್ರಗತಿಗೆ ಕಾಣಿಕೆ ನೀಡುವುದಿಲ್ಲ ಎನ್ನುವುದು ಸರಕಾರದ ವಾದ.

ಅಂತೆಯೇ ಸರಕಾರ ಪೇಪರ್ ಗೋಲ್ಡ್ ರೂಪದಲ್ಲಿ  ಗೋಲ್ಡ್ ಬಾಂಡ್ ಯೋಜನೆಯನ್ನು ಜನರ ಮುಂದಿಟ್ಟಿದೆ. ಇದರಡಿ ಹೂಡಿಕೆದಾರರು ತಲಾ 4 ಕಿಲೋ ಚಿನ್ನವನ್ನು ಖರೀದಿಸಬಹದು. ಚಿನ್ನದ ಮಾರುಕಟ್ಟೆ ಧಾರಣೆ ಏರಿದಂತೆ ಇದರ ಮೌಲ್ಯವೂ ಏರುತ್ತದೆ. ಮೇಲಾಗಿ ವರ್ಷಕ್ಕೆ ಶೇ.2.50 ಬಡ್ಡಿ ಸಿಗುತ್ತದೆ ಮತ್ತು ಬಾಂಡ್ ಮೇಲಿನ ಗಳಿಕೆ ಆದಾಯ ತೆರಿಗೆಯಿಂದ ಮುಕ್ತವಾಗಿದೆ.  ಇದಲ್ಲದೆ ಹೂಡಿಕೆದಾರರಿಗಾಗಿ ಚಿನ್ನದ ಬೆಂಗಾವಲಿರುವ ಮ್ಯೂಚುವಲ್ ಫಂಡ್ ಗಳು ಕೂಡ ಇವೆ. 

ಇದೆಲ್ಲ ಸರಿ. ಆದರೆ ಚಿನ್ನದ ಮೇಲಿನ ಪ್ರೀತಿ ಇರುವಂತೆಯೇ ನಾವು ಖರೀದಿಸುವ ಚಿನ್ನಾಭರಣದ ಬಗ್ಗೆಯೂ ನಮಗೆ ಒಂದಿಷ್ಟು ಅಗತ್ಯ ಮಾಹಿತಿ ಇರುವುದು ಅಗತ್ಯ. ಅವುಗಳನ್ನು ನಾವಿಲ್ಲಿ ಸಂಕ್ಷಿಪ್ತವಾಗಿ ಗುರುತಿಸಬಹುದು. 

ಚಿನ್ನದ ಪರಿಶುದ್ಧತೆ ಎಂದರೇನು ? ಚಿನ್ನದ ಪರಿಶುದ್ಧತೆಯನ್ನು ಕ್ಯಾರೆಟ್‌ ನಲ್ಲಿ ಅಳೆಯಲಾಗುತ್ತದೆ. ಅವು ಹೀಗಿವೆ : 

* 24 ಕ್ಯಾರೆಟ್ : 99.99%

* 23 ಕ್ಯಾರೆಟ್ : 95.80%

* 22 ಕ್ಯಾರೆಟ್ : 91.66% 

* 21 ಕ್ಯಾರೆಟ್ ; 87.50%

* 18 ಕ್ಯಾರೆಟ್ : 75.00%

* 14 ಕ್ಯಾರೆಟ್ : 58.30%

22 ಕ್ಯಾರೆಟ್ ಅಂದರೆ 91.66 ಶುದ್ಧ ಚಿನ್ನ: ಉಳಿದ ಭಾಗ ಲೋಹ

24 ಕ್ಯಾರೆಟ್ ಚಿನ್ನವನ್ನು 22 ಕ್ಯಾರೆಟ್‌ ಗೆ ಪರಿವರ್ತಿಸಲು ಬೇಕಿರುವ ಲೋಹ ತಾಮ್ರ ಮತ್ತು ಬೆಳ್ಳಿ.

ಭಾರತದಲ್ಲಿ ಚಿನ್ನಾಭರಣ ತಯಾರಿಗೆ ವ್ಯಾಪಕವಾಗಿ 22 ಕ್ಯಾರೆಟ್ ಬಳಸಲಾಗುತ್ತದೆ.

ವಜ್ರಾಭರಣಗಳ ತೆರೆದ ಸೆಟ್ಟಿಂಗ್ ಗೆ 18 ಕ್ಯಾರೆಟ್ ಚಿನ್ನ ಬಳಸಲಾಗುತ್ತದೆ; ಮುಚ್ಚಿದ ವಜ್ರಾಭರಣಗಳ ಸೆಟ್ಟಿಂಗ್ ಗ 22 ಕ್ಯಾರೆಟ್ ಬಳಸಲಾಗುತ್ತದೆ.

ಬಿಐಎಸ್ (ಬ್ಯೂರೋ ಆಫ್ ಇಂಡಿಯನ್ ಸ್ಟಾಂಡರ್ಡ್ಸ್) ನಿಂದ ಸ್ಥಾಪಿಸಲ್ಪಟ್ಟ ಹಾಲ್ ಮಾರ್ಕಿಂಗ್ ಸೆಂಟರ್ಗಳು ಚಿನ್ನಾಭರಣಗಳನ್ನು ಪ್ರಮಾಣೀಕರಿಸುತ್ತವೆ.

ಚಿನ್ನಾಭರಣ ತಯಾರಿಯಲ್ಲಿ ಸತು ವನ್ನು ಸೋಲ್ಡರ್ ಗೆ ಬಳಸಲಾಗುತ್ತದೆ.

ಕ್ಯಾಡ್ಮಿಯಂ ವಿಶ್ವ ಆರೋಗ್ಯ ಸಂಸ್ಥೆ (ಡಬ್ಲ್ಯು ಎಚ್ ಓ) ಯಿಂದ ನಿಷೇಧಿತವಾಗಿರುವ ಲೋಹ. ಕ್ಯಾಡ್ಮಿಯಂ ಬಳಸಿ ಸೋಲ್ಡರ್ ಮಾಡುವಾಗ ಹೊರ ಸೂಸಲ್ಪಡುವ ಧೂಮವು ಕ್ಯಾನ್ಸರ್ ಕಾರಕ.

 

Advertisement

Udayavani is now on Telegram. Click here to join our channel and stay updated with the latest news.

Next