ಇರಾನ್‌ನ ಮಿಲಿಟರಿ ಜನರಲ್ ಖಾಸೆಮ್ ಸೊಲೈಮಾನಿಯನ್ನು ಅಮೆರಿಕ ಪಡೆಗಳು ಹತ್ಯೆ ಮಾಡಿದ ಬಳಿಕ ತೈಲ ಸಮೃದ್ಧ ರಾಷ್ಟ್ರದಲ್ಲಿ ಮತ್ತೂಮ್ಮೆ ಯುದ್ಧದ ಕಾರ್ಮೋಡ ಕವಿದಿದೆ. ಇರಾನ್ ಈಗಾಗಲೇ ಅಮೆರಿಕದ ಈ ಕ್ರಮವನ್ನು ಯುದ್ಧ ಘೋಷಣೆ ಎಂದು ಬಣ್ಣಿಸಿ ತೀವ್ರ ಪ್ರತೀಕಾರ ಕೈಗೊಳ್ಳುವ ಪ್ರತಿಜ್ಞೆ ಮಾಡಿದೆ. ಬಾಗ್ಧಾದ್ ವಿಮಾನ ನಿಲ್ದಾಣಕ್ಕೆ ವೈಮಾನಿಕ ದಾಳಿ ಮಾಡುವ ಮೂಲಕ ಅಮೆರಿಕ ಪಡೆ ಖಾಸೆಮ್ ಸೊಲೈಮನಿ ಸೇರಿ ಎಂಟು ಮಂದಿಯನ್ನು ಸಾಯಿಸಿದೆ.
ಇರಾನ್ ಮತ್ತು ಅಮೆರಿಕ ನಡುವೆ ಮುಸುಕಿನ ಯುದ್ಧ ಶುರುವಾಗಿ ತಿಂಗಳುಗಳೇ ಕಳೆದಿವೆ. ಇರಾಕ್‌ನಲ್ಲಿರುವ ತನ್ನ ಪಡೆಗಳ ಮೇಲೆ ಇರಾನ್ ರಾಕೆಟ್ ದಾಳಿ ನಡೆಸಿದೆ ಮತ್ತು ಬಾಗ್ಧಾದ್‌ನಲ್ಲಿರುವ ದೂತವಾಸದ ಮೇಲೆ ದಾಳಿ ಮಾಡಲು ಕುಮ್ಮಕ್ಕು ನೀಡಿದೆ ಎಂದು ಅಮೆರಿಕ ಇತ್ತೀಚೆಗಷ್ಟೆ ಆರೋಪಿಸಿತ್ತು. ಇದಕ್ಕೂ ಮುಂಚೆ ಅಮೆರಿಕದ ಒಂದು ಡ್ರೋನ್ ಅನ್ನು ಇರಾನ್ ಹೊಡೆದುರುಳಿಸಿದಾಗಲೂ ಯುದ್ಧ ಸದೃಶ ಪರಿಸ್ಥಿತಿ ನಿರ್ಮಾಣವಾಗಿತ್ತು. ಆದರೆ ಕಳೆದೊಂದು ವಾರದಿಂದ ಎರಡೂ ದೇಶಗಳು ಬಹಿರಂಗವಾಗಿಯೇ ಯುದೊœàನ್ಮಾದವನ್ನು ಪ್ರದರ್ಶಿಸುತ್ತಿದ್ದವು. ಡಿ.27ರಂದು ಇರಾನ್ ರಾಕೆಟ್ ದಾಳಿಗೆ ಸಿಲುಕಿ ಅಮೆರಿಕದ ಗುತ್ತಿಗೆದಾರರೊಬ್ಬರು ಸಾವಿಗೀಡಾಗಿದ್ದಾರೆ. ಇದಕ್ಕೆ ಪ್ರತೀಕಾರವಾಗಿ ಅಮೆರಿಕ ಮಿಲಿಟರಿ ಜನರಲ್ ಅವರನ್ನೇ ಗುರಿ ಮಾಡಿಕೊಂಡು ದಾಳಿ ಮಾಡಿದೆ.
ಗಲ್ಫ್ ರಾಷ್ಟ್ರಗಲ್ಲಾಗುವ ಯಾವುದೇ ಕ್ಷೋಭೆಯ ಪರಿಣಾಮ ಪ್ರತ್ಯಕ್ಷ ಮತ್ತು ಪರೋಕ್ಷವಾಗಿ ಭಾರತವೂ ಸೇರಿದಂತೆ ಹಲವು ದೇಶಗಳಿಗೆ ತಟ್ಟುತ್ತದೆ. ಈ ಕಾರಣಕ್ಕೆ ಇರಾನ್ ಮತ್ತು ಅಮೆರಿಕದ ಸಂಘರ್ಷ ಉಳಿದ ರಾಷ್ಟ್ರಗಳನ್ನು ಚಿಂತೆಗೀಡು ಮಾಡಿವೆ. ಇರಾನ್ ಮತ್ತು ಅಮೆರಿಕದ ನಡುವಿನ ಸಂಘರ್ಷ ತಾರಕಕ್ಕೇರಿದ ಬೆನ್ನಿಗೆ ಅಂತಾರಾಷ್ಟ್ರೀಯ ಮಾರುಕಟ್ಟೆಯಲ್ಲಿ ಕಚ್ಚಾತೈಲ ಬೆಲೆ ಶೇ.4 ಹೆಚ್ಚಳವಾಗಿದೆ. ಎಲ್ಲಿಯಾದರೂ ನಿಜವಾದ ಯುದ್ಧವೇ ನಡೆದರೆ ತೈಲ ಬೆಲೆ ನಿಯಂತ್ರಣಕ್ಕೆ ಸಿಗದು. ಭಾರತಕ್ಕೆ ಇದರಿಂದ ಸಮಸ್ಯೆಗಳ ಸರಮಾಲೆಯೇ ಪ್ರಾರಂಭವಾಗಲಿದೆ. ಈಗಾಗಲೇ ಪೆಟ್ರೋಲು ಮತ್ತು ಡೀಸೆಲ್ ಬೆಲೆ ಕೈಸುಡುತ್ತಿದ್ದು, ಇನ್ನಷ್ಟು ಬೆಲೆ ಹೆಚ್ಚಳವನ್ನು ಸಹಿಸಿಕೊಳ್ಳುವ ಸ್ಥಿತಿಯಲ್ಲಿ ಜನರಿಲ್ಲ. ಯುದ್ಧದಿಂದಾಗಿ ತೈಲ ಪೂರೈಕೆ ವ್ಯತ್ಯಯಗೊಂಡು ಬೆಲೆ ಹೆಚ್ಚಿದರೆ ಸರಕಾರವೂ ಏನೂ ಮಾಡಲಾಗದು. ನಮ್ಮಲ್ಲಿರುವ ದಾಸ್ತಾನು ಒಂದು ವಾರದ ಮಟ್ಟಿಗೂ ಸಾಕಾಗದು. ಇರಾನ್ ನಮ್ಮ ಮುಖ್ಯ ತೈಲ ಪೂರೈಕೆದಾರ ರಾಷ್ಟ್ರ.
ಇದೊಂದು ಕಾರಣವಾದರೆ ಪಶ್ಚಿಮ ಏಷ್ಯಾದಲ್ಲಿರುವ ಸುಮಾರು 80 ಲಕ್ಷ ಭಾರತೀಯರ ಸ್ಥಿತಿಯೂ ಅತಂತ್ರವಾಗಲಿದೆ. ಈ ಪೈಕಿ ಸುಮಾರು 30 ಲಕ್ಷ ಭಾರತೀಯರು ಸೌದಿ ಅರೇಬಿಯಾದಲ್ಲೇ ಇದ್ದಾರೆ. ಈ ಭಾಗದಲ್ಲಿ ಹಿಂದೆ ಯುದ್ಧದಂಥ ಪರಿಸ್ಥಿತಿ ತಲೆದೋರಿದಾಗ ಭಾರೀ ಪ್ರಮಾಣದಲ್ಲಿ ಜನರು ವಾಪಾಸು ಬಂದಿದ್ದರು. ಈಗ ದೇಶ ಆರ್ಥಿಕವಾಗಿಯೂ ಸಂಕಷ್ಟದ ಸ್ಥಿತಿಯಲ್ಲಿದ್ದು, ಈ ಪರಿಸ್ಥಿತಿಯಲ್ಲಿ ಈ ಮಾದರಿಯ ಬಿಕ್ಕಟ್ಟನ್ನು ಸಹಿಸಿಕೊಳ್ಳುವುದು ಕಷ್ಟವಾಗಬಹುದು. ಅನಿವಾಸಿ ಭಾರತೀಯರು, ನಿರ್ದಿಷ್ಟವಾಗಿ ಕೊಲ್ಲಿ ರಾಷ್ಟ್ರಗಳಲ್ಲಿರುವ ಭಾರತೀಯರು ವಾರ್ಷಿಕ ಸುಮಾರು 1 ಲಕ್ಷ ಕೋ. ರೂ.ಯಷ್ಟು ಮೊತ್ತವನ್ನು ತವರು ದೇಶಕ್ಕೆ ರವಾನಿಸಿಕೊಡುತ್ತಾರೆ. ಕೊಲ್ಲಿ ದೇಶಗಳ ಬಿಕ್ಕಟ್ಟು ಇದರ ಮೇಲೆ ದೊಡ್ಡ ಮಟ್ಟದ ಹೊಡೆತ ನೀಡಲಿದೆ.
ಇರಾನ್‌ನ ಚಾಬಹರ್ ಅಭಿವೃದ್ಧಿ ಯೋಜನೆಗೂ ಹಿನ್ನಡೆಯಾಗಬಹುದು. ಪಾಕಿಸ್ತಾನದ ಮಾರ್ಗವನ್ನು ತಪ್ಪಿಸಿ ಅಫ್ಘಾನಿಸ್ತಾನ ಮತ್ತು ಮಧ್ಯ ಏಷ್ಯಾದ ಮಾರುಕಟ್ಟೆಗಳಿಗೆ ನೇರ ಸಂಪರ್ಕ ಕಲ್ಪಿಸುವ ಸಲುವಾಗಿ ಭಾರತ ಇರಾನ್‌ನ ಚಾಬಹರ್ ಬಂದರನ್ನು ಅಭಿವೃದ್ಧಿಪಡಿಸುತ್ತಿದೆ. ಇಷ್ಟರ ತನಕ ಅಮೆರಿಕದ ಆರ್ಥಿಕ ದಿಗ್ಬಂಧನಗಳಿಂದ ಈ ಬಂದರನ್ನು ರಕ್ಷಿಸಿಕೊಳ್ಳುವಲ್ಲಿ ಯಶಸ್ವಿಯಾಗಿದ್ದೇವೆ. ಆದರೆ ಯುದ್ಧವೇನಾದರೂ ಸ್ಫೋಟಗೊಂಡರೆ ಈ ಯೋಜನೆ ಬಾಧಿತವಾಗಬಹುದು. ಅಲ್ಲದೆ ಯುದ್ಧ ಶೀಘ್ರವಾಗಿ ಇತರ ದೇಶಗಳಿಗೂ ಹರಡುವ ಸಾಧ್ಯತೆ ಇರುವುದರಿಂದ ಅದರ ಒಟ್ಟಾರೆ ಪರಿಣಾಮ ಭೀಕರವಾಗಬಹುದು. ಈ ಹಿನ್ನೆಲೆಯಲ್ಲಿ ಎರಡೂ ದೇಶಗಳು ಸಂಯಮ ವಹಿಸುವಂತೆ ಮಾಡುವುದು ಈಗ ಅಂತಾರಾಷ್ಟ್ರೀಯ ಸಮುದಾಯದ ಆದ್ಯತೆಯ ನಡೆಯಾಗಬೇಕು.