ಪಡುಬಿದ್ರಿ: ಜಗತ್ತಿಗೆ ಎಲ್ಲವನ್ನೂ ಕೊಟ್ಟು ಸಮಾಜದಿಂದ ಏನನ್ನೂ ಬಯಸದೆ ಇರುವವನು ಭಗವಂತ. ಅವನಿಂದ ಸೃಷ್ಟಿಸಲ್ಪಟ್ಟ ನಾವು ನಮ್ಮ ಜೀವನಾವಶ್ಯಕತೆಗಾಗಿ ಪಂಚ ಭೂತಗಳ ಸೇವೆಯನ್ನು ಉಪಯೋಗಿಸಿಕೊಳ್ಳುತ್ತಾ ಭಗವಂತನಿಗೆ ಸದಾ ನಾವು ಕೃತಜ್ಞರಾಗಿರೋಣ, ನೆಲ ಜಲಕ್ಕಾಗಿ ಸರಕಾರಕ್ಕೆ ತೆರಿಗೆ ಕಟ್ಟುವ ನಾವು ಪಂಚ ಭೂತಾತ್ಮಕ ಶರೀರದೊಂದಿಗೇ ಸಾಮಾಜಿಕ ವಿಚಾರಗಳಿಗೂ ಸದಾ ಸ್ಪಂದಿಸುತ್ತಿರಬೇಕು ಎಂದು ಭಾವೀ ಪರ್ಯಾಯ ಪೀಠಾಧಿಪತಿ ಅದಮಾರು ಮಠಾಧೀಶರಾದ ಶ್ರೀ ವಿಶ್ವಪ್ರಿಯ ತೀರ್ಥ ಶ್ರೀಪಾದರು ಹೇಳಿದರು.
ಅವರು ಮೇ 4ರಂದು ಎರ್ಮಾಳು ಶ್ರೀ ಜನಾರ್ದನ ಚೆಂಡೆ ಬಳಗದ ಪಂಚಮ ವಾರ್ಷಿಕೋತ್ಸವ ಸಮಾರಂಭವನ್ನು ಉದ್ಘಾಟಿಸಿ, ಸಮಾಜದ ವಿವಿಧ ಕ್ಷೇತ್ರದ ಸಾಧಕರನ್ನು ಸಮ್ಮಾನಿಸಿ, ಆಶೀರ್ವಚಿಸಿದರು.
ಈ ಸಂದರ್ಭ ಸಮಾಜದ ವಿವಿಧ ಕ್ಷೇತ್ರದ ಸಾಧಕರಾದ ಉದ್ಯಮಿ ಮನೋಹರ ಶೆಟ್ಟಿ, ಸಮಾಜ ಸೇವಕಿ ಶೀಲಾ ಕೆ. ಶೆಟ್ಟಿ, ನಿವೃತ್ತ ಅಧ್ಯಾಪಕ ವೈ. ವಾಸುದೇವ ರಾವ್, ಸಮಾಜ ಸೇವಕ ಸೂರಿ ಶೆಟ್ಟಿ ಬೆಳಪು ಹಾಗೂ ವಂದನೀಯರಾದ ಚೆಂಡೆ ತರಗತಿ ಗುರು ಸುಬ್ರಹ್ಮಣ್ಯ ಉಪಾಧ್ಯಾಯ, ಅದಮಾರು ಶಾಲಾ ನಿವೃತ್ತ ಮುಖ್ಯೋಪಾಧ್ಯಾಯ ಪಿ. ಜನಾರ್ದನ ರಾವ್, ನಿವೃತ್ತ ಉಪನ್ಯಾಸಕ ವೈ. ರಾಮಕೃಷ್ಣ ರಾವ್, ಚೆಂಡೆ ತಯಾರಕ ನಾಗರಾಜ ಸುರತ್ಕಲ್ ಇವರನ್ನು ಸಮ್ಮಾನಿಸಲಾಯಿತು.
ಶ್ರೀ ಜನಾರ್ದನ ದೇವಸ್ಥಾನದ ತಂತ್ರಿಗಳಾದ ವೇ | ಮೂ ಕಂಬÛಕಟ್ಟ ಶ್ರೀ ರಾಧಾಕೃಷ್ಣ ಉಪಾಧ್ಯಾಯ ಅವರು ಶುಭ ಹಾರೈಸಿದರು. ಶ್ರೀ ಜನಾರ್ದನ ದೇವಸ್ಥಾನ ಎರ್ಮಾಳು ಇಲ್ಲಿನ ಆನುವಂಶೀಯ ಮೊಕ್ತೇಸರ ಎರ್ಮಾಳುಬೀಡು ಅಶೋಕ್‌ರಾಜ ಅವರು ಸಭಾಧ್ಯಕ್ಷತೆಯನ್ನು ವಹಿಸಿದ್ದರು.
ವೇದಿಕೆಯಲ್ಲಿ ಅರ್ಚಕ ವೈ. ಕೃಷ್ಣಮೂರ್ತಿ ಭಟ್, ಉಡುಪಿ ಬ್ರಾಹ್ಮಣ ಮಹಾಸಭಾ ಜಿಲ್ಲಾಧ್ಯಕ್ಷ ಮಂಜುನಾಥ ಉಪಾಧ್ಯ, ಉದ್ಯಮಿಗಳಾದ ಬಾಲಾಜಿ ಯೋಗೀಶ್ ಶೆಟ್ಟಿ, ಯಶಪಾಲ್ ಸುವರ್ಣ, ಪ್ರಕಾಶ್ ಶೆಟ್ಟಿ ಪಾದೆಬೆಟ್ಟು, ರಂಜನ್ ಕಲ್ಕೂರ, ಶ್ರೀಪತಿ ಭಟ್ ಮೂಡುಬಿದಿರೆ, ಜಿ. ಪಂ. ಸದಸ್ಯೆ ಶಿಲ್ಪಾ ಜಿ. ಸುವರ್ಣ, ತಾ. ಪಂ. ಸದಸ್ಯ ಕೇಶವ ಮೊಲಿ, ಜನಾರ್ದನ ಚೆಂಡೆ ಬಳಗದ ಎರ್ಮಾಳು ಅಧ್ಯಕ್ಷ ಅರುಣ್ ಕುಮಾರ್ ಉಪಸ್ಥಿತರಿದ್ದರು.
ಅರುಣ್ ಕುಮಾರ್ ಸ್ವಾಗತಿಸಿದರು. ಆದಿತ್ಯ ಉಪಾಧ್ಯಾಯ ಪ್ರಸ್ತಾವಿಸಿದರು. ವೈ. ರಾಮಕೃಷ್ಣ ರಾವ್ ಕಾರ್ಯಕ್ರಮವನ್ನು ನಿರೂಪಿಸಿದರು. ರಾಘವೇಂದ್ರ ಎರ್ಮಾಳ್ ವಂದಿಸಿದರು. ಸಾಂಸ್ಕೃತಿಕ ಕಾರ್ಯಕ್ರಮದ ಅಂಗವಾಗಿ ಕೊಡವೂರು ನೃತ್ಯ ನಿಕೇತನ ತಂಡದಿಂದ ನೃತ್ಯ ವೈವಿಧ್ಯ ಹಾಗೂ ಹನುಮಗಿರಿ ಶ್ರೀ ಕೋದಂಡರಾಮ ಕೃಪಾಪೋಷಿತ ಯಕ್ಷಗಾನ ಕಲಾ ಮಂಡಳಿ ಇವರಿಂದ ಶ್ರೀ ದೇವಿ ಮಹಾತೆ¾ ಯಕ್ಷಗಾನ ಪ್ರದರ್ಶನವು ನಡೆಯಿತು.