ಮಂಗಳಗಂಗೋತ್ರಿ, ಅ. 6: ಪರಿ ಸರದಲ್ಲಿ ಅದೆಷ್ಟೋ ಜೀವಸಂಕುಲಗಳು ನಾಶವಾಗಿವೆ. ಇನ್ನೆಷ್ಟೋ ವನ್ಯಜೀವಿಗಳು ಅಳಿವಿನಂಚಿನಲ್ಲಿವೆ. ಪರಿಸರಕ್ಕೆ ಪೂರಕ ವಾಗಿರುವ ವನ್ಯಜೀವಿಗಳನ್ನು ಸಂರಕ್ಷಿಸಲು ನಾವು ತಳಮಟ್ಟದಲ್ಲಿ ಕೆಲಸ ಮಾಡಬೇಕು ಎಂದು ಕರ್ನಾಟಕ ಜೀವ ವೈವಿಧ್ಯ ಮಂಡಳಿಯ ಅಧ್ಯಕ್ಷ ಅನಂತ ಹೆಗಡೆ ಅಶೀಸರ ಹೇಳಿದರು.
ಮಂಗಳೂರು ವಿವಿ ಸಿಂಡಿಕೇಟ್ ಸಭಾಂಗಣದಲ್ಲಿ ಪರಿಸರ ಮತ್ತು ವನ್ಯ ಜೀವಿ ಸಂರಕ್ಷಣೆಯ ಕುರಿತು ನಡೆದ ಸಂವಾದ ಕಾರ್ಯಕ್ರಮದಲ್ಲಿ ಭಾಗವಹಿಸಿ ಅವರು ಮಾತನಾಡಿ, ಅನೇಕ ಸರಕಾರಿ ಯೋಜನೆಗಳು ಅದರ ಮುಖ್ಯ ಫಲಾನುಭವಿಗಳಿಗೆ ತಲುಪುವುದೇ ಇಲ್ಲ. ಗೋಬರ್ ಅನಿಲ ಉತ್ಪಾದನೆ, ಸೌರಶಕ್ತಿ, ಮಳೆನೀರು ಕೊಯ್ಲು ಮುಂತಾದ ಪರಿಸರ ಸ್ನೇಹಿ ಚಟುವಟಿಕೆಗಳ ಅನುಷ್ಠಾನಕ್ಕೆ ಸರಕಾರದ ಧನಸಹಾಯ ಮತ್ತು ಸೌಲಭ್ಯಗಳಿವೆ, ಅವುಗಳನ್ನು ಬಳಸಿಕೊಳ್ಳಲು ಸಾಮಾನ್ಯ ಜನರನ್ನು ಪ್ರೇರೇಪಿಸಬೇಕಾಗಿದೆ ಎಂದರು.
ಅಭಿವೃದ್ಧಿ ಪರಿಸರಕ್ಕೆ ಪೂರಕವಾಗಿರಲಿ :
ಹಲವೆಡೆ ಕೆರೆ ಕಟ್ಟೆಗಳು, ನದಿಗಳು ಹೂಳು ತುಂಬಿ ಮರೆಯಾಗುತ್ತಿವೆ, ಮಾತ್ರವಲ್ಲ ಅಭಿವೃದ್ಧಿಯ ಹೆಸರಿನಲ್ಲಿ ಅತಿಕ್ರಮಣವಾಗುತ್ತಿವೆ. ಸಾಂಪ್ರದಾಯಿಕ ಸಂರಕ್ಷಣ ವಿಧಾನವಾಗಿರುವ ದೇವರ ಕಾಡು, ನಾಗಬನಗಳು ಕಣ್ಮರೆಯಾಗುತ್ತಿವೆ. ಅಭಿವೃದ್ದಿ ಕಾರ್ಯಗಳು ಪರಿಸರಕ್ಕೆ ಮಾರಕವಾಗಿರದೆ ಪರಿಸರಕ್ಕೆ ಪೂರಕ ವಾಗಿರಬೇಕು ಎಂದರು. ಮಂಗ ಳೂರು ವಿವಿ ಪ್ರಾಧ್ಯಾಪಕ ಪ್ರೊ| ಎಚ್. ಗಂಗಾಧರ ಭಟ್ ಮತ್ತು ಪ್ರೊ|ಪ್ರಶಾಂತ ನಾಯ್ಕ ವಿಶ್ವವಿದ್ಯಾನಿಲಯದ ಪರಿಸರ ಕೆಲಸ ಕಾರ್ಯ, ಸಂಶೋಧನೆಗಳ ಬಗ್ಗೆ ಕಿರು ವರದಿ ಮಂಡಿಸಿದರು. ಸಂವಾದದಲ್ಲಿ ಪ್ರೊ| ಶ್ರೀಪಾದ ಕೆ.ಎಸ್., ಪ್ರೊ| ಕೆ.ಎಸ್. ಜಯಪ್ಪ, ಪ್ರೊ| ವೈ. ಮುನಿರಾಜು, ನರಸಿಂಹಯ್ಯ ಎನ್., ಡಾ| ಎ . ರಮೇಶ್ ಹಾಗೂ ವಿವಿಧ ವಿಭಾಗಗಳ ಪ್ರಾಧ್ಯಾಪಕರು ಮತ್ತು ಸಂಶೋಧನ ವಿದ್ಯಾರ್ಥಿಗಳು ಸಂವಾದದಲ್ಲಿ ಭಾಗವಹಿಸಿದರು.
ಸಮಾರಂಭದಲ್ಲಿ ಮಂಗಳೂರು ವಿವಿ ಕುಲಸಚಿವ ಕೆ. ರಾಜು ಮೊಗವೀರ ಸ್ವಾಗತಿಸಿದರು, ಪರೀûಾಂಗ ಕುಲಸಚಿವ ಪ್ರೊ| ಪಿ.ಎಲ್ .ಧರ್ಮ ವಂದಿಸಿದರು. ಡಾ| ಚಂದ್ರು ಹೆಗಡೆ ನಿರ್ವಹಿಸಿದರು.
ಪರಿಸರ ಸ್ನೇಹಿ ಕ್ಯಾಂಪಸ್ : ಮಂಗಳೂರು ವಿ.ವಿ. ಕುಲಪತಿ ಪ್ರೊ| ಪಿ.ಎಸ್. ಯಡಪಡಿತ್ತಾಯ ಅವರು ಸಮಾರಂಭದ ಅಧ್ಯಕ್ಷತೆಯನ್ನು ವಹಿಸಿ ಮಾತನಾಡಿ, ಮಂಗಳೂರು ವಿವಿ ಕ್ಯಾಂಪಸ್‌ನ್ನು ಪರಿಸರ ಸ್ನೇಹಿ ಕ್ಯಾಂಪಸನ್ನಾಗಿ ರೂಪಿಸಲಾಗುವುದು. ಈ ನಿಟ್ಟಿನಲ್ಲಿ ಈಗಾಗಲೇ ಹಲವು ಕಾರ್ಯ ಚಟುವಟಿಕೆಗಳನ್ನು ಹಮ್ಮಿಕೊಳ್ಳಲಾಗಿದೆ. ಜ್ಞಾನವನ್ನು ಹಳ್ಳಿ ಹಳ್ಳಿಗೆ ಮುಟ್ಟಿಸುವ ಕಾರ್ಯವನ್ನು ಇನ್ನಷ್ಟು ಹೆಚ್ಚು ಕೈಗೊಳ್ಳಲಾಗುವುದು ಎಂದರು.