ದೊಡ್ಡಬಳ್ಳಾಪುರ: ಜನಪದ ಕಲೆಗಳು ನಮ್ಮ ಬದುಕಿನ ಅವಿಭಾಜ್ಯವಾಗಿವೆ. ಆದರೆ, ಮೂಲ ಜನಪದ ಇಂದು ಮರೆಯಾಗುತ್ತಿದ್ದು, ಜನಪದ ಗೀತೆಗಳು ಸೇರಿದಂತೆ ಜಾನಪದ ಕಲೆ ಉಳಿಸಿ-ಬೆಳೆಸುವಲ್ಲಿ ಇಂದಿನ ಪೀಳಿಗೆ ಆಸಕ್ತಿ ವಹಿಸಬೇಕಿದೆ ಎಂದು ಬೆಂಗಳೂರು ಗ್ರಾಮಾಂತರ ಜಿಲ್ಲೆಯ ಅಪರ ಜಿಲ್ಲಾಧಿಕಾರಿ ವಿಜಯಾ ಈ. ರವಿಕುಮಾರ್ ಹೇಳಿದರು.
ನಗರದ ಶ್ರೀ ದೇವರಾಜ ಅರಸ್ ವ್ಯವಹಾರ ನಿರ್ವಹಣಾ ಮಹಾವಿದ್ಯಾಲಯ ಮತ್ತು ಶ್ರೀ ದೇವರಾಜ ಅರಸ್ ಪ್ರಥಮ ದರ್ಜೆ ಸಂಜೆ ಕಾಲೇಜಿನ ಸಹಯೋಗದಲ್ಲಿ ಹಮ್ಮಿಕೊಂಡಿದ್ದ ರಂಗಧಾಮ ಸಾಂಸ್ಕೃತಿಕ ಉತ್ಸವ ಕಾರ್ಯಕ್ರಮವನ್ನು ಉದ್ಘಾಟಿಸಿ ಮಾತನಾಡಿದ ಅವರು, ಭಾರತೀಯ ಸಂಪ್ರದಾಯ ಮತ್ತು ಸಂಸ್ಕೃತಿಯನ್ನು ಪ್ರತಿಬಿಂಬಿಸುವ ಇಂತಹ ವೇದಿಕೆಗಳಲ್ಲಿ ವಿದ್ಯಾರ್ಥಿಗಳು ತಮ್ಮಲ್ಲಿರುವ ಸುಪ್ತ ಪ್ರತಿಭೆಗಳನ್ನು ಹೊರ ಹಾಕಬೇಕು. ಈಗಿನ ವಿದ್ಯಾರ್ಥಿಗಳಿಗೆ ಕಲಿಯಲು ಎಲ್ಲಾ ರೀತಿಯ ಸೌಲಭ್ಯಗಳು ಸಿಗುತ್ತಿವೆ. ಆ ಸೌಲಭ್ಯ ಸದುಪಯೋಗಪಡಿಸಿಕೊಂಡು ಓದು, ಕ್ರೀಡೆ, ಸಾಂಸ್ಕೃತಿಕ ಚಟುವಟಿಕೆಗಳಲ್ಲಿ ವಿದ್ಯಾರ್ಥಿಗಳು ಪಾಲ್ಗೊಳ್ಳಬೇಕು ಎಂದರು.
ಶಿಸ್ತು ಪಾಲನೆಗೆ ಹೆಚ್ಚು ಒತ್ತು ನೀಡಿ: ಶ್ರೀ ದೇವರಾಜ ಅರಸ್ ಎಜುಕೇಷನಲ್ ಟ್ರಸ್ಟ್ ನ ಉಪಾಧ್ಯಕ್ಷ ಜೆ.ರಾಜೇಂದ್ರ ಮಾತನಾಡಿ, ಹಿಂದಿನ ಕಾಲದಲ್ಲಿ ಮನೆಗಳ ಮುಂದೆ, ಅಂಗಳಗಳಲ್ಲಿ ರಂಗೋಲಿ ತುಂಬಾ ಚೆನ್ನಾಗಿ ಕಾಣುತ್ತಿದ್ದವು. ಆದರೆ, ಇಂದು ಕಾಂಕ್ರೀಟ್ ನಗರ ಮತ್ತು ಕಾಂಕ್ರೀಟ್ ನೆಲಗಳಲ್ಲಿ ರಂಗೋಲಿಗಳು ಕಣ್ಮರೆಯಾಗಿವೆ. ವಿದ್ಯಾರ್ಥಿಗಳು ಪಠ್ಯ, ಪಠ್ಯೇತರ ಚಟುವಟಿಕೆ ಗಳಲ್ಲೂ ಪಾಲ್ಗೊಳ್ಳಬೇಕು. ಸಮಯವನ್ನು ವ್ಯರ್ಥ ಮಾಡಬಾರದು. ಶಿಸ್ತು ಪಾಲನೆಗೆ ಹೆಚ್ಚು ಮಹತ್ವ ನೀಡಬೇಕು ಎಂದರು.
ಶ್ರೀವಾಣಿ ಪದವಿ ಪೂರ್ವ ಕಾಲೇಜಿನ ಪ್ರಾಂಶುಪಾಲ ವೇಣುಗೋಪಾಲ್, ಶ್ರೀ ದೇವರಾಜ್ ಅರಸ್ ಪದವಿ ಪೂರ್ವ ಕಾಲೇಜಿನ ಪ್ರಾಂಶುಪಾಲ ಮಹಾಂತೇಶ್, ಶ್ರೀ ವಿದ್ಯಾನಿಧಿ ಪದವಿ ಪೂರ್ವ ಕಾಲೇಜಿನ ಪ್ರಾಂಶುಪಾಲ ರಂಗನಾಥ್, ಶ್ರೀ ದೇವರಾಜ ಅರಸ್ ಎಜುಕೇಷನ್ ಟ್ರಸ್ಟ್ ನ ಸಿಇಒ ಜೆ.ನಾಗೇಂದ್ರಸ್ವಾಮಿ, ಎಚ್.ಆರ್. ಮ್ಯಾನೇಜರ್ ಬಾಬುರೆಡ್ಡಿ, ಶ್ರೀ ದೇವರಾಜ ಅರಸ್ ವ್ಯವಹಾರ ನಿರ್ವಹಣಾ ಮಹಾವಿದ್ಯಾಲಯದ ಪ್ರಾಂಶುಪಾಲ ಸಿ.ಎಂ. ಸುರೇಂದ್ರ ರೆಡ್ಡಿ, ಶ್ರೀ ದೇವರಾಜ ಅರಸ್ ಪ್ರಥಮ ದರ್ಜೆ ಸಂಜೆ ಕಾಲೇಜಿನ ಪ್ರಾಂಶುಪಾಲ ಡಾ.ಎಂ ಚಿಕ್ಕಣ್ಣ, ಉಪ ಪ್ರಾಂಶುಪಾಲ ಕೆ. ದಕ್ಷಿಣಾಮೂರ್ತಿ, ನ್ಯಾಕ್ ಸಂಯೋಜಕ ಆರ್. ಉಮೇಶ್, ಸಾಂಸ್ಕೃತಿಕ ಘಟಕದ ಸಂಚಾಲಕ ಪಿ. ಚೈತ್ರಾ, ನಿರ್ವಹಣಾ ವಿಭಾಗದ ಮುಖ್ಯಸ್ಥ ಸಿ.ಪಿ.ಪ್ರಕಾಶ್ ಹಾಗೂ ಮತ್ತಿತರರು ಇದ್ದರು.