Advertisement

ಅಭಿವೃದ್ಧಿ ಎಂದರೆ ಏನೆಂದು ತೋರಿಸಲು ಈ ಬಾರಿ ಅವಕಾಶ ಕೊಡಿ: ಜೆ.ಪಿ. ಹೆಗ್ಡೆ

01:39 AM Apr 25, 2024 | Team Udayavani |

ಕುಂದಾಪುರ: ನಾನು ಯಾವುದೇ ವ್ಯಕ್ತಿಯ ಹೆಸರಿನಲ್ಲಿ ಮತ ಕೇಳುವುದಿಲ್ಲ. ಈ ಹಿಂದೆ ಸಂಸದನಾಗಿ ಕೆಲಸ ಮಾಡಲು ಕಡಿಮೆ ಸಮಯದ ಅವಕಾಶ ದೊರೆತಿತ್ತು. ಹೆಚ್ಚು ಸಮಯ ಅವಕಾಶ ದೊರೆತವರು ಏನು ಮಾಡಿದ್ದಾರೆ ಎಂದು ನಿಮಗೆಲ್ಲ ಗೊತ್ತಿದೆ. ಜನರ ಸಮಸ್ಯೆಗಳಿಗೆ ಸ್ಪಂದಿಸಲು, ಜನರ ನಡುವೆ ಇದ್ದು ಕೆಲಸ ಮಾಡಲು ಅವಕಾಶ ಕೊಡಿ. ಅಭಿವೃದ್ಧಿ ಎಂದರೆ ಏನೆಂದು ಮಾಡಿ ತೋರಿಸುತ್ತೇನೆ ಎಂದು ಉಡುಪಿ-ಚಿಕ್ಕಮಗಳೂರು ಲೋಕಸಭಾ ಕ್ಷೇತ್ರದ ಕಾಂಗ್ರೆಸ್‌ ಅಭ್ಯರ್ಥಿ ಜಯಪ್ರಕಾಶ್‌ ಹೆಗ್ಡೆ ಹೇಳಿದರು.

Advertisement

ಬುಧವಾರ ಅಪರಾಹ್ನ ಇಲ್ಲಿನ ಶಾಸ್ತ್ರಿ ಸರ್ಕಲ್‌ನಿಂದ ಹೊಸ ಬಸ್‌ ನಿಲ್ದಾಣದ ವರೆಗೆ ನಡೆದ ಪಾದಯಾತ್ರೆ ಸಂದರ್ಭ ಮಾತನಾಡಿದ ಅವರು, ಕುಂದಾಪುರ ನಗರದಲ್ಲಿ ಸಭೆ ನಡೆಸಲು ಈವರೆಗೆ ಅನುವು ಆಗಿರಲಿಲ್ಲ. ಈ ಹಿನ್ನೆಲೆಯಲ್ಲಿ ಪಾದಯಾತ್ರೆ ನಡೆಸಿದ್ದೇನೆ ಎಂದರು.

ನಗರ ಇಬ್ಭಾಗ ಆಗದಂತೆ ಫ್ಲೈಓವರ್ ಮಾಡಿಕೊಡಲಾಗಿದೆ. ಅಂತೆಯೇ ಸೀವಾಕ್‌ ಮೊದಲಾದ ರಚನೆಗಳಾಗಿವೆ. ಕುಂದಾಪುರ ಪ್ರವಾಸೋದ್ಯಮವಾಗಿ ಅಭಿವೃದ್ಧಿ ಆಗಲು ನನಗೆ ಮತ ನೀಡಿ. ಈ ಹಿಂದೆ ಅಧಿಕಾರವಿದ್ದಾಗ ನನ್ನ ಕ್ರಿಯಾಶೀಲತೆ, ಅಭಿವೃದ್ಧಿ ವೇಗವನ್ನು ಜನರು ನೋಡಿದ್ದಾರೆ. ಈ ಬಾರಿ ಮತ್ತೂಮ್ಮೆ ಅವಕಾಶ ನೀಡಿದರೆ ಅದೇ ಕ್ರಿಯಾಶೀಲತೆಯೊಂದಿಗೆ ನಿಮ್ಮ ಸೇವೆ ಮಾಡುವೆ ಎಂದು ಹೆಗ್ಡೆ ಹೇಳಿದರು.

ಅರೆಬರೆ ಕಾಮಗಾರಿ ಮುಗಿಸಿ ಕಲ್ಯಾಣಪುರ ರಸ್ತೆ ಮುಕ್ತ!
ಜಯಪ್ರಕಾಶ್‌ ಹೆಗ್ಡೆ ಗೆದ್ದರೆ ನಮ್ಮ ಜೆಲ್ಲೆಯಲ್ಲಿ ಕಾಂಗ್ರೆಸ್‌ ಶಾಸಕರಿಲ್ಲ ಎನ್ನುವ ನೋವು ದೂರವಾಗಲಿದೆ. ಉಡುಪಿ ಜಿಲ್ಲೆಗೊಂದು ಎಂಜಿನಿಯರಿಂಗ್‌ ಕಾಲೇಜು, ಮೆಡಿಕಲ್‌ ಕಾಲೇಜು ಸ್ಥಾಪನೆಯಾಗಲಿದೆ. ಕೈಗಾರಿಕೆ ವಲಯ, ಕಂಪೆನಿಗಳು ಸ್ಥಾಪನೆಯಾಗಿ ಯುವ ಕರಿಗೆ ಉದ್ಯೋಗ ಸೃಷ್ಟಿಯಾಗಲಿದೆ. ಈ ಮೂಲಕ ಪ್ರತೀ ವಿಧಾನಸಭಾ ಕ್ಷೇತ್ರಕ್ಕೆ ಅಭಿವೃದ್ಧಿ ಯೋಜನೆ ಹರಿದುಬರಲಿದೆ. ಆದ್ದರಿಂದ ಹೆಗ್ಡೆ ಗೆಲುವು ಕ್ಷೇತ್ರದ ಜನರಿಗೆ, ನಮ್ಮ ನಿಮ್ಮಲ್ಲರಿಗೆ ಅಗತ್ಯವಿದೆ ಹಾಗೂ ಚುನಾವಣೆ ಸಂದರ್ಭ ಜನರ ಆಕ್ರೋಶ ಎದುರಿಸಲಾಗದೆ ಅರೆಬರೆ ಕಾಮಗಾರಿ ಮುಗಿಸಿ ಕಲ್ಯಾಣಪುರ ರಸ್ತೆಯನ್ನು ಸಂಚಾರಕ್ಕೆ ಮುಕ್ತಗೊಳಿಸಿದ್ದಾರೆ. ಚುನಾವಣೆ ಮುಗಿಯುತ್ತಿದ್ದಂತೆ ರಸ್ತೆಯ ನಿಜಬಣ್ಣ ಬಯಲಾಗಲಿದೆ ಹಾಗೂ ಈ ಬಾರಿ ಮಳೆಗಾಲದಲ್ಲಿ ಸಂಚಾರಕ್ಕೆ ಮತ್ತಷ್ಟು ಸಂಕಷ್ಟ ಎದುರಾಗಲಿದೆ ಎಂದು ಮಾಜಿ ಶಾಸಕರಾದ ಗೋಪಾಲ ಪೂಜಾರಿ ಆಕ್ರೋಶ ಹೊರಹಾಕಿದರು.

ಬಿ.ಎಂ. ಸುಕುಮಾರ ಶೆಟ್ಟಿ, ಮುಖಂಡರಾದ ಎಂ.ಎ. ಗಫೂರ್‌, ಜಿ.ಎ. ಬಾವಾ, ಕಿಶನ್‌ ಹೆಗ್ಡೆ ಕೊಳ್ಕೆಬೈಲು, ಎಸ್‌. ರಾಜು ಪೂಜಾರಿ, ದೇವಾನಂದ ಶೆಟ್ಟಿ ಹಳ್ನಾಡು, ಹರಿಪ್ರಸಾದ್‌ ಶೆಟ್ಟಿ ಕಾನ್ಮಕ್ಕಿ, ಪ್ರದೀಪ್‌ ಕುಮಾರ್‌ ಶೆಟ್ಟಿ ಗುಡಿಬೆಟ್ಟು, ದಿನೇಶ್‌ ಹೆಗ್ಡೆ ಮೊಳಹಳ್ಳಿ, ಮಲ್ಯಾಡಿ ಶಿವರಾಮ ಶೆಟ್ಟಿ, ಹೆರಿಯಣ್ಣ, ಅಶೋಕ್‌ ಪೂಜಾರಿ ಬೀಜಾಡಿ ಮೊದಲಾದವರು ಇದ್ದರು.

Advertisement

ಕಾಂಗ್ರೆಸ್‌ ಪದಾಧಿಕಾರಿಗಳು, ಕಾರ್ಯಕರ್ತರು, ಜನಪ್ರತಿನಿಧಿಗಳು ಪಾದಯಾತ್ರೆಯಲ್ಲಿ ಹೆಚ್ಚಿನ ಸಂಖ್ಯೆ ಯಲ್ಲಿ ಭಾಗವಹಿಸಿದ್ದರು.

Advertisement

Udayavani is now on Telegram. Click here to join our channel and stay updated with the latest news.

Next