ಮೈಸೂರು ಜಿಲ್ಲೆ ಸೇರಿದಂತೆ ರಾಜ್ಯದ ವಿವಿಧ ಜಿಲ್ಲೆಗಳಲ್ಲಿ ಅನಧಿಕೃತ ದೇಗುಲಗಳ ತೆರವು ಕಾರ್ಯಾಚರಣೆಗೆ ಸಿದ್ಧತೆ ನಡೆಯುತ್ತಿದೆ. ಹಾಗೆಯೇ ಮೈಸೂರಿನಲ್ಲಿ ಈಗಾಗಲೇ ದೇಗುಲಗಳ ತೆರವು ಕಾರ್ಯಾಚರಣೆ ನಡೆಯುತ್ತಿದೆ. ಇತ್ತೀಚೆಗಷ್ಟೇ ಮೈಸೂರು ಜಿಲ್ಲೆಯ ನಂಜನಗೂಡಿನಲ್ಲಿ ದೇಗುಲವೊಂದರ ಧ್ವಂಸ ವಿಧಾನ ಸಾಕಷ್ಟು ಟೀಕೆಗಳಿಗೂ ಕಾರಣವಾಗಿದೆ.
ಹಬ್ಬದ ದಿನವೇ ಜನರ ಧಾರ್ಮಿಕ ಭಾವನೆಗಳಿಗೆ ಬೆಲೆ ಕೊಡದೇ ದೇಗುಲ ಧ್ವಂಸಗೊಳಿಸಿದ್ದು ತಪ್ಪು ಎಂಬುದು ಸಮಾಜದ ಮೂಲೆ ಮೂಲೆಗಳಿಂದಲೂ ಕೇಳಿಬರುತ್ತಿರುವ ಮಾತುಗಳು. ಅನಧಿಕೃತ ಜಾಗದಲ್ಲಿಯೇ ದೇಗುಲ ಇದೆ ಎಂಬುದಾದರೆ ಸ್ಥಳೀಯರ ಮನವೊಲಿಕೆ ಮಾಡಿ ಸುಪ್ರೀಂ ಕೋರ್ಟ್ ಆದೇಶದ ಅನ್ವಯವೇ ಬೇರೊಂದು ಜಾಗದಲ್ಲಿ ದೇಗುವ ನಿರ್ಮಿಸುವ ಭರವಸೆ ಕೊಟ್ಟು ತೆರವು ಮಾಡಬಹುದಿತ್ತು. ಆದರೆ ಏಕಾಏಕಿ ಜೆಸಿಬಿ ತಂದು, ದೇಗುಲ ಕೆಡವಿದ್ದು ಅಧಿಕಾರಿಗಳ ಕಡೆಯಿಂದ ಆದ ಬಹುದೊಡ್ಡ ತಪ್ಪು. ನ್ಯಾಯಾಲಯಗಳ ಆದೇಶಕ್ಕೆ ತಲೆಬಾಗುವುದು ಕಾರ್‍ಯಾಂಗದ ಕರ್ತವ್ಯವಾದರೂ ಇಂಥ ಸೂಕ್ಷ್ಮ ಸಂದರ್ಭಗಳಲ್ಲಿ ಸ್ಥಳೀಯ ಸಂಸತ್ ಸದಸ್ಯರು, ಶಾಸಕರು ಹಾಗೂ ಸ್ಥಳೀಯ ಸಂಸ್ಥೆಗಳ ಜನಪ್ರತಿನಿಧಿಗಳನ್ನು ವಿಶ್ವಾಸಕ್ಕೆ ತೆಗೆದುಕೊಳ್ಳುವುದು ಒಳಿತು.
ಈ ಪ್ರಕರಣವಾದ ಮೇಲೆ ರಾಜ್ಯಾದ್ಯಂತ ಆಕ್ರೋಶವೇ ವ್ಯಕ್ತವಾಗುತ್ತಿದೆ. ಮೂಲಗಳ ಪ್ರಕಾರ ರಾಜ್ಯದಲ್ಲಿ ಒಟ್ಟು 1,700 ಅನಧಿಕೃತ ದೇಗುಲಗಳಿವೆ. ಎಲ್ಲ ಜಿಲ್ಲೆಗಳಲ್ಲಿಯೂ ಪಟ್ಟಿ ಮಾಡಲಾಗಿದೆ. ಇವುಗಳ ತೆರವಿಗಾಗಿ ಆಯಾ ಜಿಲ್ಲಾಡಳಿತ ಮತ್ತು ತಾಲೂಕು ಆಡಳಿತಗಳಿಗೆ ಅಧಿಕಾರ ನೀಡ ಲಾಗಿದೆ. ಮೈಸೂರಿನಲ್ಲಿ ಆಗಿರುವ ಘಟನೆಯೂ ಇಂಥದ್ದೇ. ಏಕೆಂದರೆ ದೇಗುಲ ತೆರವು ವಿಚಾರದಲ್ಲಿ ಸ್ಥಳೀಯ ತಹಶೀಲ್ದಾರ್ ಅವರಿಗೆ ಅಧಿಕಾರ ಕೊಟ್ಟ ಕಾರಣ, ಅವರು ಸ್ಥಳೀಯ ಶಾಸಕರೊಂದಿಗೆ ಚರ್ಚಿಸಿ ಬಳಿಕ ತೆರವು ಮಾಡಿದ್ದಾರೆ. ಆದರೆ ಸುಪ್ರೀಂ ಕೋರ್ಟ್ ಆದೇಶದ ಪ್ರಕಾರ ಮೊದಲಿಗೆ ಸಾರ್ವಜನಿಕರೊಂದಿಗೆ ಚರ್ಚೆ ನಡೆಸಬೇಕಾಗಿತ್ತು.
ಇಷ್ಟೆಲ್ಲ ಬೆಳವಣಿಗೆಗಳಾದರೂ ಸುಪ್ರೀಂ ಕೋರ್ಟ್ ಆದೇಶ ಪಾಲನೆ ಮಾಡಲೇಬೇಕಾದದ್ದು ರಾಜ್ಯ ಸರಕಾರದ ಕರ್ತವ್ಯವಾಗಿದೆ. ಆದರೂ ರಾಜ್ಯ ಸರಕಾರ, ಜಿಲ್ಲಾಡಳಿತಗಳು ಮತ್ತು ತಾಲೂಕು ಆಡಳಿತಗಳು ಮೊದಲಿಗೆ ವಿಷಯದ ಸೂಕ್ಷ್ಮತೆ ಅರ್ಥ ಮಾಡಿಕೊಳ್ಳಬೇಕು. ಪಟ್ಟಿ ಮಾಡಿರುವ ಎಲ್ಲ ದೇಗುಲಗಳನ್ನು ತೆರವು ಮಾಡಲೇಬೇಕೇ ಎಂಬುದರ ಬಗ್ಗೆ ಮೊದಲಿಗೆ ಸ್ಥಳೀಯರೊಂದಿಗೆ ಚರ್ಚಿಸಬೇಕು. ಒಂದು ವೇಳೆ ತೆರವು ಮಾಡಲೇಬೇಕು ಎಂದಾದರೆ ಜನರನ್ನು ವಿಶ್ವಾಸಕ್ಕೆ ತೆಗೆದುಕೊಂಡು ಬೇರೆಡೆ ದೇಗುಲ ನಿರ್ಮಾಣಕ್ಕೆ ಅವಕಾಶ ಮಾಡಿಕೊಡಬೇಕು. ಜತೆಗೆ ಸರಕಾರವೇ ದೇಗುಲ ನಿರ್ಮಾಣ ಮಾಡಿಕೊಟ್ಟರೆ ಇನ್ನೂ ಒಳ್ಳೆಯದು.
ಸುಪ್ರೀಂ ಕೋರ್ಟ್ ಕೂಡ ತನ್ನ ಆದೇಶದಲ್ಲಿ ಎಲ್ಲಿಯೂ ಬಲವಂತವಾಗಿ ತೆರವು ಮಾಡುವಂತೆ ಸೂಚಿಸಿಲ್ಲ. ಬದಲಾಗಿ ಸ್ಥಳೀಯರನ್ನು ವಿಶ್ವಾಸಕ್ಕೆ ತೆಗೆದುಕೊಂಡೇ ತೆರವು ಮಾಡಲು ಹೇಳಿದೆ. ಈ ತೀರ್ಪಿನ ಒಳಾರ್ಥವನ್ನು ಅಧಿಕಾರಿಗಳು ಪಾಲನೆ ಮಾಡಬೇಕು.
ಧಾರ್ಮಿಕ ಕಟ್ಟಡಗಳು ಜನರ ಪಾಲಿಗೆ ಭಾವನಾತ್ಮಕವಾಗಿ ಹೊಂದಿಕೊಂಡಿರುತ್ತವೆ. ಈ ವಿಚಾರದಲ್ಲಿ ಎಷ್ಟೇ ಸೂಕ್ಷ್ಮತೆಯಿಂದ ಇದ್ದರೂ ಸಾಲದು. ಹಾಗೆಯೇ ರಾಜ್ಯ ಸರಕಾರ ಸುಪ್ರೀಂ ಕೋರ್ಟ್‌ಗೆ ಮೇಲ್ಮನವಿ ಸಲ್ಲಿಕೆ ಮಾಡಿ ತೀರ್ಪಿನ ಪುನರ್ ಪರಿಶೀಲನೆಗೆ ಯತ್ನಿಸಬೇಕು.