ಉಕ್ರೇನ್ ಮೇಲಿನ ರಷ್ಯಾ ಆಕ್ರಮಣದಿಂದಾಗಿ ಭಾರತ ಪೆಟ್ರೋಲ್, ಡೀಸೆಲ್ ಮತ್ತು ಅಡುಗೆ ಎಣ್ಣೆಯ ಬೆಲೆ ಹೆಚ್ಚಾಗುವ ಎಲ್ಲ ಸಾಧ್ಯತೆಗಳು ಗೋಚರವಾಗಿವೆ. ಅದರಲ್ಲೂ ಅಂತಾರಾಷ್ಟ್ರೀಯ ಮಾರುಕಟ್ಟೆಯಲ್ಲಿ ಕಚ್ಚಾ ತೈಲದ ಬೆಲೆ ಪ್ರತೀ ಬ್ಯಾರೆಲ್‌ಗೆ 125 ಡಾಲರ್ ಮುಟ್ಟಿದೆ. ಮುಂದಿನ ದಿನಗಳಲ್ಲಿ ಇದು ಇನ್ನಷ್ಟು ಹೆಚ್ಚಾಗುವ ಎಲ್ಲ ಸಾಧ್ಯತೆಗಳು ಗೋಚರವಾಗಿವೆ.
ಮಂಗಳವಾರ ಬೆಳಗ್ಗೆಯೇ ಪೆಟ್ರೋಲ್ ಮತ್ತು ಡೀಸೆಲ್ ಬೆಲೆ ಏರಿಕೆಯಾಗಲಿದೆ ಎಂಬ ಆತಂಕ ಎಲ್ಲರಲ್ಲಿ ಇತ್ತು. ಇದಕ್ಕೆ ಕಾರಣ, ಕಳೆದ ಮೂರ್ನಾಲ್ಕು ದಿನಗಳಿಂದಲೂ ಅಂತಾರಾಷ್ಟ್ರೀಯ ಕಚ್ಚಾ ತೈಲ ಬೆಲೆಯಲ್ಲಿ ಭಾರೀ ಹೆಚ್ಚಳವಾಗಿದೆ. ಹೀಗಾಗಿ ಕನಿಷ್ಠ 12 ರೂ. ಹೆಚ್ಚಳ ಮಾಡಲಾಗುತ್ತದೆ ಎಂಬ ಮಾತುಗಳೇ ಇದ್ದವು. ಆದರೆ ದಿಲ್ಲಿಯಲ್ಲಿ ಮಾತ್ರ ಸಿಎನ್‌ಜಿಯ ಬೆಲೆಯನ್ನು ಹೆಚ್ಚಿಸಲಾಗಿದ್ದು, ಪೆಟ್ರೋಲ್ ಮತ್ತು ಡೀಸೆಲ್ ಬೆಲೆಯಲ್ಲಿ ಯಥಾಸ್ಥಿತಿ ಕಾಯ್ದುಕೊಂಡಿದೆ. ಇದರ ಹಿಂದೆ ಚುನಾವಣೆ ಮುಗಿದ ಮಾರನೇ ದಿನವೇ ಬೆಲೆ ಏರಿಕೆ ಮಾಡಿದರು ಎಂಬ ಟೀಕೆಗೂ ಗುರಿಯಾಗಬಾರದು ಎಂಬ ಕಾರಣಕ್ಕಾಗಿ ಬೆಲೆ ಹೆಚ್ಚಳದ ನಿರ್ಧಾರಕ್ಕೆ ಕೈಹಾಕಿಲ್ಲ ಎಂದು ರಾಜಕೀಯ ಪಂಡಿತರು ವಿಶ್ಲೇಷಿಸಿದ್ದಾರೆ. ಜತೆಗೆ ಕೇಂದ್ರ ವಿತ್ತ ಸಚಿವೆ ನಿರ್ಮಲಾ ಸೀತಾರಾಮನ್ ಅವರು ತೈಲ ಆಮದಿಗೆ ಪರ್ಯಾಯ ಮಾರ್ಗ ಹುಡುಕಿಕೊಳ್ಳುವ ಬಗ್ಗೆ ಚಿಂತನೆ ನಡೆಯುತ್ತಿದೆ ಎಂದಿರುವುದು ಒಂದಷ್ಟು ಸಮಾಧಾನಕರ ಸುದ್ದಿ.
ಪೆಟ್ರೋಲ್, ಡೀಸೆಲ್‌ನಂತೆಯೇ ಅಡುಗೆ ಎಣ್ಣೆ ಬೆಲೆಯೂ ಈಗಾಗಲೇ ಗಗನಮುಖಿಯಾಗಿದೆ. ಸಾಮಾನ್ಯವಾಗಿ ಭಾರತಕ್ಕೆ ಉಕ್ರೇನ್‌ನಿಂದ ಸೂರ್ಯಕಾಂತಿ ಎಣ್ಣೆ ಆಮದಾಗುತ್ತದೆ. ಈಗ ಯುದ್ಧ ಶುರುವಾಗಿರುವುದರಿಂದ ಸಾಕಷ್ಟು ಪ್ರಮಾಣದಲ್ಲಿ ಸೂರ್ಯಕಾಂತಿ ಎಣ್ಣೆ ಬರುತ್ತಿಲ್ಲ. ಇಲ್ಲಿ ಬೇಡಿಕೆ ಹೆಚ್ಚಾಗಿದ್ದು, ಇದಕ್ಕೆ ತಕ್ಕ ಹಾಗೆ ಪೂರೈಕೆಯಾಗುತ್ತಿಲ್ಲ. ಹೀಗಾಗಿಯೇ ಒಂದು ವಾರದ ಹಿಂದೆ 140ರ ಆಸುಪಾಸಿನಲ್ಲಿದ್ದ ಅಡುಗೆ ಎಣ್ಣೆ, ಈಗ 180 ರೂ.ಗಳ ಆಸುಪಾಸಿಗೆ ತಲುಪಿದೆ.
ಇದರ ಜತೆಗೆ ರಾಜ್ಯದ ಕೆಲವೆಡೆ ಒಬ್ಬರಿಗೆ 5 ಲೀ. ಸೂರ್ಯಕಾಂತಿ ಎಣ್ಣೆ ಎಂಬ ರೀತಿಯಲ್ಲಿ ವ್ಯಾಪಾರ ಮಾಡುತ್ತಿರುವ ವಿದ್ಯಮಾನಗಳೂ ನಡೆದಿವೆ. ಅಲ್ಲದೆ ಆನ್‌ಲೈನ್ ಮೂಲಕ ಸೂರ್ಯಕಾಂತಿ ಎಣ್ಣೆ ಖರೀದಿ ಸಾಧ್ಯವೇ ಆಗುತ್ತಿಲ್ಲ. ಬಹುತೇಕ ಕಡೆಗಳಲ್ಲಿ ದಾಸ್ಥಾನು ಇಲ್ಲ ಎಂಬ ಉತ್ತರಗಳೇ ಸಿಗುತ್ತಿವೆ. ಹೀಗಾಗಿ ಅಡುಗೆ ಎಣ್ಣೆ ಲಭ್ಯವಾಗದೆ ಜನರಲ್ಲಿ ಆತಂಕವೂ ಹೆಚ್ಚಾಗಿದೆ ಎಂದರೆ ತಪ್ಪಾಗಲಾರದು.
ಇಲ್ಲಿ ಬೇರೆ ರೀತಿಯ ಅನುಮಾನಗಳೂ ಉದ್ಭವವಾಗಿವೆ. ನಿಜಕ್ಕೂ ರಾಜ್ಯದಲ್ಲಿ ಸೂರ್ಯಕಾಂತಿ ಎಣ್ಣೆಯ ಅಭಾವ ಕಾಡುತ್ತಿದೆಯೇ ಎಂಬ ಸಂದೇಹಗಳಿವೆ. ಕೊರೊನಾ ಲಾಕ್‌ಡೌನ್ ಅವಧಿಯಲ್ಲಿ ಮಾಡಿದಂತೆ ಈಗ ಈ ಅಡುಗೆ ಎಣ್ಣೆಯನ್ನು ಮಾರುಕಟ್ಟೆಗೆ ಬಿಡದೆ, ಬೇರೆಡೆ ಸಂಗ್ರಹಿಸಿ ಅದನ್ನು ಕಾಳಸಂತೆಯಲ್ಲಿ ಮಾರಾಟ ಮಾಡುವ ಅವಕಾಶಗಳೂ ಇವೆ. ಅಲ್ಲದೆ ಬೇಕೆಂದೇ ಕೊರತೆ ಸೃಷ್ಟಿಸಿ, ಬೆಲೆ ಹೆಚ್ಚಳಕ್ಕೆ ಅನುವು ಮಾಡಿಕೊಟ್ಟಿರಬಹುದು. ಈ ಎಲ್ಲ ಅಂಶಗಳನ್ನು ಗಮನದಲ್ಲಿ ಇರಿಸಿಕೊಂಡು, ರಾಜ್ಯ ಸರಕಾರ ಸೂರ್ಯಕಾಂತಿ ಎಣ್ಣೆಯನ್ನು ಮಾರಾಟ ಮಾಡುವ ಸಗಟುದಾರರ ಮೇಲೆ ಒಂದು ಕಣ್ಣಿಡಬೇಕು. ಸೂಕ್ತ ರೀತಿಯಲ್ಲಿ ನಿಗಾ ಇರಿಸಿ ಕೃತಕವಾಗಿ ಅಭಾವ ಸೃಷ್ಟಿಯಾಗುವುದು ಮತ್ತು ಬೆಲೆ ಏರಿಕೆಯಾಗದಂತೆ ನೋಡಿಕೊಳ್ಳಬೇಕು. ಆಗ ಈಗಾಗಲೇ ಕೊರೊನೋತ್ತರ ಕಷ್ಟದಲ್ಲಿರುವ ಜನರಿಗೆ ಒಂದಷ್ಟು ಸಮಾಧಾನವನ್ನಾದರೂ ನೀಡಿದಂತೆ ಆಗುತ್ತದೆ.