Advertisement

Special Interview: ಮಕ್ಕಳಿರುವ ಮನೆಯಲ್ಲಿ ಮನೆತುಂಬಾ ಪುಸ್ತಕಗಳಿರಲಿ: ನೇಮಿಚಂದ್ರ

10:36 AM Oct 13, 2023 | Team Udayavani |

ನೇಮಿಚಂದ್ರ ಕನ್ನಡ ಸಾಹಿತ್ಯ ಲೋಕದ ಚಿರಪರಿಚಿತ ಹೆಸರು. ಎಂಜಿನಿಯರ್‌ ಆಗಿ ಪ್ರತಿಷ್ಠಿತ ಎಚ್‌.ಎ.ಎಲ್‌. ಸಂಸ್ಥೆಯಲ್ಲಿ ಕಾರ್ಯನಿರ್ವಹಿಸುತ್ತಾ ಸಾಹಿತ್ಯ ಕೃಷಿಯಲ್ಲಿ ತೊಡಗಿಸಿಕೊಂಡವರು. ಸಣ್ಣಕತೆ, ಕಾದಂಬರಿ, ವೈಚಾರಿಕ ಲೇಖನಗಳು ಮಾತ್ರವಲ್ಲದೆ, ಎರಡು ಪ್ರವಾಸಿ ಕಥನಗಳ ಮೂಲಕ ನೇಮಿಚಂದ್ರ ಸಾಹಿತ್ಯ ಪ್ರಿಯರ ಮನಸು ಗೆದ್ದಿದ್ದಾರೆ. ಯಾವುದೇ ಬರಹ ಬರೆಯುವ ಮೊದಲು ಅದರ ಕುರಿತು ಅಧ್ಯಯನ ನಡೆಸುವ  ಶೈಲಿ ಅವರ ಬರಹಗಳನ್ನು ಇನ್ನಷ್ಟು ಎತ್ತರಕ್ಕೆ ಕೊಂಡೊಯ್ಯುವುದರ ಜತೆಗೆ ಅದಕ್ಕೆ ಪ್ರತ್ಯೇಕತೆಯನ್ನು ತಂದುಕೊಟ್ಟಿದೆ. ಇವರ ಪೆರುವಿನ ಪವಿತ್ರ ಕಣಿವೆಯಲ್ಲಿ, ಯಾದ್‌ ವಶೇಮ್‌ ಕೃತಿ ಕರ್ನಾಟಕ ಸಾಹಿತ್ಯ ಅಕಾಡೆಮಿ ಪುರಸ್ಕಾರಕ್ಕೆ ಭಾಜನವಾಗಿವೆ. ಜತೆಗೆ ಅಕ್ಕ ಪ್ರಶಸ್ತಿ, ಸಂದೇಶ ಪ್ರಶಸ್ತಿ, ಕರ್ನಾಟಕ ಸಾಹಿತ್ಯ ಅಕಾಡೆಮಿ ಜೀವನಮಾನದ ಪ್ರಶಸ್ತಿ ಸಹಿತ ಅನೇಕ ಪುರಸ್ಕಾರಗಳು ಅವರಿಗೆ ಸಂದಿವೆ.  ಪ್ರಸ್ತುತ ತಮ್ಮ ನಿವೃತ್ತ ಜೀವನ ಸಾಗಿಸುತ್ತಿರುವ ಅವರು ಉದಯವಾಣಿ  ಫ್ಯೂಷನ್‌ ಜತೆಗೆ ಮಾತನಾಡಿದ್ದಾರೆ.

  1. ನೀವು ವಿಜ್ಞಾನದ ವಿದ್ಯಾರ್ಥಿ. ಸಾಹಿತ್ಯಕ್ಕೂ ನಿಮಗೂ ತಾಳಮೇಳ ಏರ್ಪಟ್ಟಿದ್ದು ಹೇಗೆ?
Advertisement

ವಿಜ್ಞಾನ ಮತ್ತು ಸಾಹಿತ್ಯ ಮೇಲ್ನೋಟಕ್ಕೆ ಭಿನ್ನ ಪ್ರಕಾರಗಳಾಗಿ ಕಂಡರೂ ಮೂಲಭೂತವಾಗಿ ಇವೆರಡೂ ಸೃಜನಾತ್ಮಕ ಕ್ಷೇತ್ರಗಳು. ನೀವು ಹೇಳಿದಂತೆ ನಾನು ವಿಜ್ಞಾನದ ವಿದ್ಯಾರ್ಥಿ. ವಿಜ್ಞಾನ ಮತ್ತು ತಂತ್ರಜ್ಞಾನವನ್ನು ಒಳಗೊಂಡ ಎಂಜಿನಿಯರಿಂಗ್‌ ನನ್ನ ವೃತ್ತಿ ಮಾತ್ರವಲ್ಲ  ಆಸಕ್ತಿಯ ಕ್ಷೇತ್ರವೂ ಆಗಿದೆ. ಆದರೆ ನಾನು ಎಂಜಿನಿಯರ್‌ ಆಗುವ ಮೊದಲೇ ಸಾಹಿತ್ಯದಲ್ಲಿ ತೀವ್ರ ಅಭಿರುಚಿ ಬೆಳೆಸಿಕೊಂಡಿದ್ದೆ.

ನನ್ನ ತಂದೆ ಪ್ರೊ| ಜಿ. ಗುಂಡಣ್ಣ ಕನ್ನಡ ಪ್ರಾಧ್ಯಾಪಕರು ಮತ್ತು ಲೇಖಕರು. ಓದುವ ಆಸೆಯಿಂದ ಅಪ್ಪ ಬಯಲುಸೀಮೆಯ ಹಳ್ಳಿಯಿಂದ ಓಡಿ ಬಂದು, ವಾರಾನ್ನ ಉಂಡು ಏಕಲವ್ಯ ಪ್ರಯತ್ನದಲ್ಲಿ ಎಂ.ಎ. ಮಾಡಿದ್ದರು. ಅವರು ಮನೆಯ ತುಂಬಾ ನೂರಾರು  ಪುಸ್ತಕಗಳನ್ನು ಕೊಂಡು ತುಂಬಿದ್ದರು. ನನ್ನನ್ನು ಸಾಹಿತಿಯಾಗಿ ಬೆಳೆಸಿದ್ದೇ ಈ ಪುಸ್ತಕಗಳು. ನನ್ನನ್ನು ವಿಜ್ಞಾನಿಯಾಗಲು ಪ್ರೇರೇಪಿಸಿದ್ದೂ ಇವೇ ಪುಸ್ತಕಗಳು. ನಾವು ಓದುವ ಪುಸ್ತಕಗಳು ನಮ್ಮ ಬದುಕನ್ನೇ ಬದಲಿಸಬಲ್ಲವು; ಮಕ್ಕಳಿರುವ ಮನೆಯಲ್ಲಿ ಮನೆತುಂಬಾ ಪುಸ್ತಕಗಳಿರಲಿ.

  1. ನಿಮ್ಮ ಬದುಕು ಬದಲಿಸಬಹುದು ಪುಸ್ತಕದ ಸರಣಿ ಹಲವು ಸತ್ಯ ಕಥೆಗಳಿಂದ ಕೂಡಿದ್ದು, ಇದು ಹಲವರ ಬದುಕನ್ನು ಬದಲಿಸಿದೆ. ನಿಮ್ಮ ಪುಸ್ತಕದಿಂದ ಬದಲಾದ ಓದುಗನನ್ನು ಭೇಟಿಯಾದ ಅನುಭವ ಹೇಗಿತ್ತು.

ಹೌದು, ಅಂತಹ ಕೆಲವು ಓದುಗರು ನನ್ನನ್ನು ಭೇಟಿಯಾಗಿದ್ದಾರೆ. ಆದರೆ ಅವರ ಬದುಕು ಬದಲಾದದ್ದು ನನ್ನಿಂದಲ್ಲ, ನನ್ನ ಬರಹದಿಂದಲ್ಲ; ನನ್ನ ಈ ಸರಣಿಯ ಪುಸ್ತಕದಲ್ಲಿರುವ ಸಕಾರಾತ್ಮಕ ವ್ಯಕ್ತಿಗಳ ಬದುಕಿನಿಂದ ದೊರೆತ ಪ್ರೇರಣೆ ಮತ್ತು ಅವರದೇ ಕಡು ಪ್ರಯತ್ನ ಹಾಗೂ ಪರಿಶ್ರಮದಿಂದ. ಓರ್ವ ಸಕಾರಾತ್ಮಕ ವ್ಯಕ್ತಿಯನ್ನು ಭೇಟಿಯಾಗಲು ನಾನು ನೂರು ಸಾವಿರ ಮೈಲು ದೂರವೂ ಹೋಗಿದ್ದೇನೆ; ಅಷ್ಟಕ್ಕೆ ಮಾತ್ರ ನಾನು ಕ್ರೆಡಿಟ್‌ ತೆಗೆದುಕೊಳ್ಳಬಲ್ಲೆ.

ಅನೇಕ ಬಾರಿ ಲೇಖಕಿಯಾದ ನನಗೆ, ನನ್ನ ಪುಸ್ತಕಗಳನ್ನು ಯಾರಾದರೂ ಓದುತ್ತಾರಾ ಎಂಬ ಅನುಮಾನ ಮೂಡುತ್ತದೆ.  ಇದೇ ಪುಸ್ತಕ 23 ಮುದ್ರಣಗಳನ್ನು ಕಂಡಮೇಲೂ ನನಗೆ ಈ ಪ್ರಶ್ನೆ ಕಾಡಿರುವುದುಂಟು. ಕೆಲವೊಮ್ಮೆ ಒಂದು ಪುಟ ಬರೆಯಲೂ ಅನೇಕ ದಿನಗಳು  ಹಿಡಿಸಿದಾಗ, ರೈಟರ್ಸ್‌ ಬ್ಲೋಕ್‌ ಬಿಗಿಹಿಡಿದಾಗ, ಓದುಗರಿಂದ ಬಂದ ಒಂದು ಇಮೇಲ್‌, ಒಂದು ಪತ್ರ ನನ್ನೊಳಗಿನ ಲೇಖಕಿಯನ್ನು ಪ್ರೋತ್ಸಾಹಿಸುತ್ತದೆ. ಇಂತಹದೊಂದು ಪತ್ರ ನನ್ನನ್ನು ಅಲುಗಿಸಿಯೇಬಿಟ್ಟಿತು. ದೀರ್ಘ‌ವಾಗಿ ಪತ್ರ ಬರೆದು, ಲಕೋಟೆಯಲ್ಲಿ ಹಾಕಿ, ಅಂಚೆಯ ಮೂಲಕ ಕಳುಹಿಸುವವರು ಇಲ್ಲವಾಗುತ್ತಿರುವ ಈ ಸಮಯದಲ್ಲಿ, ನನಗೊಂದು ಸ್ಪಷ್ಟ ಕೈಬರಹದ ಪತ್ರ ತಲುಪಿತ್ತು.

Advertisement

ದಿನಾಂಕ 7 ಜೂನ್‌ 2019ರಂದು ಆಕೆ ಬರೆದ ಪತ್ರ ನನ್ನ ಕೈಸೇರಿತ್ತು. ಪ್ರೀತಿಯ ಮೇಡಂಗೆ ಎಂದು ಸಂಬೋಧಿಸಿದ ಪತ್ರವದು. ಈ ಪತ್ರವನ್ನು ಹೇಗೆ ಪ್ರಾರಂಭಿಸಬೇಕೆಂದೇ ತಿಳಿಯುತ್ತಿಲ್ಲ. ನಿಮಗೆ ಹೃದಯಪೂರ್ವಕ ಧನ್ಯವಾದಗಳನ್ನು ತಿಳಿಸಲು ಈ ಪತ್ರ ಬರೆಯುತ್ತಿದ್ದೇನೆ. ಮೇಡಂ, ನಾನು ಯೋಚಿಸಿದ ಪ್ರಕಾರ 5.6.2019ರಂದು ವಿಷ ಕುಡಿದು ಈ ಲೋಕ, ಇಲ್ಲಿನ ಜನರನ್ನು ಬಿಟ್ಟು ಹೋಗುವ ದೃಢ ನಿರ್ಧಾರಕ್ಕೆ ಬಂದಿದ್ದೆ ಎಂಬ ಎರಡು ಸಾಲು ಓದುವಾಗಲೆ ನನ್ನ ಎದೆ ನಡುಗಿತ್ತು.  ಸಾಯಬೇಕು ಎಂದು ನಿರ್ಧರಿಸಿದ ಸಮಯದಲ್ಲಿ ಬದುಕು ಬದಲಿಸಬಹುದು ಪುಸ್ತಕ ಸಿಕ್ಕಿದೆ. ನಿರ್ಲಿಪ್ತವಾಗಿ ಪುಸ್ತಕ ಓದಲಾರಂಭಿಸಿದೆ. ಮನಸ್ಸಿನಲ್ಲಿ ನೂರಾರು ಕೋಲಾಹಲಗಳು ನಡೆಯುತ್ತಿದ್ದರೂ ಹೇಗೆ ಓದಿದೆ ಎಂಬುದು ನನಗೇ ಗೊತ್ತಿಲ್ಲ. ಓದಿದೆ, ಓದಿದೆ, ಓದಿದೆ. ಅಷ್ಟೇ ಮೇಡಂ ನೀವು ಬರೆದ ಪ್ರತಿಯೊಂದು ಸ್ಫೂರ್ತಿಯ ಸಾಲುಗಳನ್ನು ನಾನು ಡೈರಿಯಲ್ಲಿ ಬರೆಯುತ್ತಾ ಹೋದೆ. ಬೆಳಗ್ಗಿನಿಂದ ಸಂಜೆ, ಸಂಜೆಯಿಂದ ರಾತ್ರಿಯಾಗುವಷ್ಟರಲ್ಲಿ ನನ್ನ ನಿರ್ಧಾರ ಬದಲಾಯಿತು. ಬದುಕು ಮುಗಿಯುವುದಿಲ್ಲ ಅಲ್ಲಿಗೇ.. ಎಂಬುದನ್ನು ಕಂಡುಕೊಂಡೆ. ಬದುಕು ನಿನ್ನಲ್ಲೆಂಥ ಮುನಿಸು, ಸಮಸ್ಯೆಗೆ ಬೆನ್ನು ತೋರಿಸದೆ ಮುಖಾಮುಖೀಯಾದಾಗ ಪರಿಹಾರದ ಹೊಚ್ಚ ಹೊಸ ಹಾದಿಗಳು ಗೋಚರಿಸುತ್ತವೆ – ಹೀಗೆ ಆಕೆ ನನ್ನ ಪುಸ್ತಕದ ಸಾಲುಗಳನ್ನು ಉಲ್ಲೇಖೀಸುತ್ತಾ ಹೋಗಿದ್ದರು. “ಒಂದು ಪುಸ್ತಕವೂ  ಮನುಷ್ಯನನ್ನು ಸಾಯದೆ ಉಳಿಸಬಲ್ಲದು ಎಂಬುದಕ್ಕೆ ನಾನೇ ಸಾಕ್ಷಿ. ನನ್ನ ಬದುಕಿನಲ್ಲಿ ದುರಂತಗಳ ಸರಮಾಲೆಯೇ ನಡೆದು ಹೋಯಿತು’ ಎಂದು ಬರೆದಿದ್ದ ಆಕೆ, “ಮಕ್ಕಳನ್ನೂ ಕೊಂದು ಆತ್ಮಹತ್ಯೆ ಮಾಡಿಕೊಳ್ಳುವ ನಿರ್ಧಾರಕ್ಕೆ ಬಂದಿದ್ದೆ. ಅನಂತರ ಮಕ್ಕಳನ್ನು ಬಿಟ್ಟು ನಾನೊಬ್ಬಳೇ 5.6.2019ರಂದು ವಿಷ ಕುಡಿಯಲೇ ಬೇಕೆಂದುಕೊಂಡೆ. ಆದರೆ ಬದುಕು ಬದಲಿಸಬಹುದು ಎಂಬುದನ್ನು ಕಂಡುಕೊಂಡೆ. ಇವತ್ತು ಬದುಕುವ ಛಲ ಇದೆ, ಧೈರ್ಯವಿದೆ. ಒಬ್ಬಳೇ ಸಾಧಿಸಬಲ್ಲೆನೆಂಬ ಹಠ ಬಂದಿದೆ’ ಎಂದು ಬರೆದಿದ್ದಳು.

ಪತ್ರವನ್ನು ಓದುತ್ತಾ ನನ್ನ ಕರುಳು ಕಿವುಚಿ ಬಂದಿತ್ತು. ಆಕೆ ವಿದ್ಯಾವಂತೆ, ಎಷ್ಟು ಸ್ಪಷ್ಟವಾದ ಕನ್ನಡದ ಅಕ್ಷರಗಳು, ಭಾವನೆಗಳನ್ನು ಅಭಿವ್ಯಕ್ತಿಸಿದ ಸರಾಗ ರೀತಿ; ಬರೆದರೆ ಆಕೆಯೇ ಒಂದು ಬೃಹತ್‌ ಗ್ರಂಥ ಬರೆಯಬಲ್ಲ ಪ್ರತಿಭೆ ಆ ಪತ್ರದ ಸಾಲುಗಳಲ್ಲಿ ನನಗೆ ಕಂಡಿತ್ತು. ಆಕೆ ಉದ್ಯೋಗಸ್ಥೆ ಕೂಡ. ಬದುಕಿನ ಯಾವ ಸಂದರ್ಭವೋ, ಎಂತಹ ಸಂಕಷ್ಟವನ್ನು ಕಂಡಿದ್ದರೋ, ಮನಸ್ಸು ಖನ್ನವಾದ ಒಂದು ಕ್ಷಣದಲ್ಲಿ ಸಾವಿನ ಹೊಸಿಲಿಗೆ ಹೋಗಿ ನಿಂತು ಬಿಟ್ಟಿದ್ದರು. ನಾನು ಬದುಕುತ್ತೇನೆ ಎಂಬ ಅವರ ನಿರ್ಧಾರ, ಛಲ, ಧೈರ್ಯ ಎಲ್ಲವೂ ಅವರದೇ ಆಗಿತ್ತು. ಆದರೆ ಅಲ್ಲಿ ನನ್ನ ಪುಸ್ತಕ ನಿಮಿತ್ತ ಮಾತ್ರವಾದ ಸಂತಸ ನನ್ನದಾಗಿತ್ತು. ಅವರು ನನ್ನೊಳಗಿನ ಲೇಖಕಿ ಎಂದಿಗೂ ವಿಶ್ರಮಿಸದೆ ಇರುವಂತೆ ಬದುಕಿಸಿದ್ದಾರೆ ಎಂದರೆ ಉತ್ಪ್ರೇಕ್ಷೆ ಅಲ್ಲ. ಲೇಖಕಿಯ ಬದುಕನ್ನು ಓದುಗರೂ ಬದಲಿಸುತ್ತಾರೆ.

  1. ನಿಮ್ಮ ಪ್ರತಿಯೊಂದು ಕೃತಿಯಲ್ಲೂ ಅಧ್ಯಯನದ ನೆರಳು ಕಂಡು ಬರುತ್ತದೆ. ಆ ಮನಸ್ಥಿತಿಯ ಸಿದ್ಧತೆ ಬಗ್ಗೆ ಹೇಳಿ

ನಾನು ಆಯ್ದುಕೊಂಡ ಕಥಾವಸ್ತು ಅಥವಾ ನನ್ನನ್ನು ಆಯ್ದುಕೊಂಡ ಕಥಾವಸ್ತು ಸದಾ ಅಧ್ಯಯನ ಮತ್ತು ಸಂಶೋಧನೆಯನ್ನು ಬೇಡಿದೆ. ಅಧ್ಯಯನ, ಸಂಶೋಧನೆ, ವಿಶ್ಲೇಷಣೆ  ಓರ್ವ ವಿಜ್ಞಾನಿಯಾಗಿ ವೈಮಾನಿಕ ರಂಗದ ಎಂಜಿನಿಯರ್‌ ಆಗಿ ನನ್ನ ಬದುಕಿನ ಭಾಗವೂ ಹೌದು. ಯಾದ್‌ ವಶೇಮ್‌ ಕಾದಂಬರಿಯನ್ನೇ ತೆಗೆದುಕೊಳ್ಳಿ. ಅದರ ಕಥೆ ನನ್ನೊಳಗೆ ಮೂಡಿದ್ದು ಆಕಸ್ಮಿಕವಾಗಿ. ಅದನ್ನು ದಿನಾಂಕ 9.11.2003 ಉದಯವಾಣಿ ಪತ್ರಿಕೆಯಲ್ಲಿಯ ನನ್ನ ಅಂಕಣ ಬರಹದಲ್ಲಿ ಹಂಚಿಕೊಂಡಿದ್ದೆ. ಇಸವಿ 1995ರಲ್ಲಿ ಗೋರಿಪಾಳ್ಯದಲ್ಲಿ ಕಂಡ ಯಹೂದಿಗಳ ಶ್ಮ¾ಶಾನ, ಅಲ್ಲೊಂದು ಜರ್ಮನ್‌ ವ್ಯಕ್ತಿಯ ಸಮಾಧಿ, ನನ್ನೊಳಗೊಂದು ಕತೆಯನ್ನು ಹುಟ್ಟು ಹಾಕಿದ್ದವು; ಹಿಟ್ಲರನ ನೆಲದಿಂದ ಗಾಂಧಿಯ ನೆಲಕ್ಕೆ ಬಂದ ಪುಟ್ಟ ಯಹೂದಿ ಬಾಲೆಯ ಕತೆ ಅದಾಗಿತ್ತು.

ಕತೆಯ ಬೆನ್ನು ಹತ್ತಿ ಹೋಗಲೇಬೇಕಿತ್ತು, ಈ ಕಾದಂಬರಿಯ ಪೂರ್ವ ಸಿದ್ಧತೆಗೆ ವಿದೇಶಗಳ ಪ್ರವಾಸ, ಧರ್ಮಗ್ರಂಥಗಳ ಅಧ್ಯಯನ ಇವೆಲ್ಲ ಅನಿವಾರ್ಯವಿತ್ತು. ನಾಜಿ ಸಮಯದಲ್ಲಿ ಬರ್ಲಿನ್‌ನಲ್ಲಿ ನಡೆಯುತ್ತಿದ್ದ ವಿಜ್ಞಾನದ ಸಂಶೋಧನೆ ಬಗ್ಗೆಯೂ ತಿಳಿಯುವ ಅಗತ್ಯವಿತ್ತು. ಈ ಬಗೆಯಲ್ಲಿ ಅಧ್ಯಯನ ನನ್ನ ಬರಹದ ಅವಿಭಾಜ್ಯ ಅಂಗವಾಗಿದೆ. ಆದರೆ ಈ ಕಾದಂಬರಿಗಾಗಲಿ, ಕತೆಗಾಗಲಿ ಬಹಿರಂಗದ ಪ್ರವಾಸಕ್ಕಿಂತ ಹೆಚ್ಚಾಗಿ ಅಂತರಂಗದ ಶೋಧ, ಅಂತರಂಗದ ಪಯಣ ನನಗೆ ಅಗತ್ಯದ್ದಾಗಿದೆ.

4ಕೃತಿಗಾಗಿ ಅಧ್ಯಯನವೋ? ಅಧ್ಯಯನದ ಫ‌ಲಿತ ಕೃತಿಯೋ?

ಎರಡೂ ಸಂದರ್ಭಗಳಿವೆ. ವಿಜ್ಞಾನ, ಸಾಹಿತ್ಯ, ಮಹಿಳಾ ಅಧ್ಯಯನದ ಫ‌ಲವಾಗಿ ಕಾಲುಹಾದಿಯ ಕೋಲಿ¾ಂಚುಗಳು – ಮಹಿಳಾ ವಿಜ್ಞಾನಿಗಳು, ನೊಬೆಲ್‌ ವಿಜೇತ ಮಹಿಳಾ ವಿಜ್ಞಾನಿಗಳು ಮುಂತಾದ ಕೃತಿಗಳು ಬಂದಿವೆ. ಆದರೆ ಯಾದ್‌ ವಶೇಮ್‌ನಂತೆ ಕತೆ, ಕಾದಂಬರಿಗೆ ಆಯ್ದ ವಸ್ತುವೇ ಅಧ್ಯಯನವನ್ನು, ಶೋಧವನ್ನು ಬೇಡಿದೆ. ಒಂದು ಸಣ್ಣ ಕತೆಗೂ ಅಧ್ಯಯನದ ಅಗತ್ಯ ನನಗೆ ಬಿದ್ದಿದೆ. ಒಳ-ಹೊರಗಿನ ಹುಡುಕಾಟವಿದೆ. ಈ ಅಧ್ಯಯನದ ಹುಚ್ಚನ್ನು ನನ್ನ ಗಂಡನಿಗೂ ಹಿಡಿಸಿದ್ದೇನೆ. ಇತ್ತೀಚೆಗೆ ನನ್ನ ಪತಿ ಕೀರ್ತಿ, ಒಂದು ಸಣ್ಣ ಲೇಖನ ಬರೆಯಲು ಮೂರು ಬಾರಿ ಐಜೂರಿಗೆ ಹೋಗಿ ಬಂದರು. ಇಸವಿ 869ರ ಶಾಸನವೊಂದನ್ನು ಹುಡುಕಿ ಹೋಗಿದ್ದರು. “ಅದೆಲ್ಲಿ ಸಿಗುತ್ತದೆ, ರಾಷ್ಟ್ರೀಯ ಹೆದ್ದಾರಿ ಕೂಡ  ಹರಿದ ಜಾಗದಲ್ಲಿ’ ಎಂದು ನಾನು ಅನುಮಾನಿಸಿದ್ದೆ. ಆದರೆ ಕಡೆಗೂ 1154 ವರ್ಷಗಳ ಹಿಂದಿನ ಆ ಶಾಸನವನ್ನು, ಆದಿಕವಿ ಪಂಪ ಕೂಡ  ಹುಟ್ಟಿಲ್ಲದ ಸಮಯದ ಶಾಸನವನ್ನು ಹುಡುಕಿ ಬಂದರು. ಶಾಸನದಲ್ಲಿ ಉಲ್ಲೇಖೀಸಿದ ಜೈನ  ರಾಜನ ವಿವರಗಳಿಗೆ ಬಹಳಷ್ಟು ಆಕೈìವಲ್‌ ಮೆಟೀರಿಯಲ್‌ ಪರಾಮರ್ಶಿಸಿದರು.

  1. ಸಾಹಿತಿ ಏಕಕಾಲದಲ್ಲಿ ಸೃಜನಶೀಲನೂ, ಸಂಶೋಧಕನೂ ಆಗಿರಬೇಕಾ? ಅದು ಅನಿವಾರ್ಯವೇ?

ಯಾವುದೇ ಕೃತಿಗೆ ಎರಡರ ಅಗತ್ಯವೂ ಇದೆ ಎಂಬುದು ನನ್ನ ಭಾವನೆ. ಸೃಜನಶೀಲತೆ ಇಲ್ಲದೆ ಒಂದು ಕೃತಿ ಮೂಡಲು ಸಾಧ್ಯವಿಲ್ಲ. ಸಂಶೋಧನೆಯೂ ಅಗತ್ಯದ್ದು – ಅದು ಬಹಿರಂಗದ ಶೋಧವೇ ಆಗಬೇಕೆಂದಿಲ್ಲ, ಅಂತರಂಗದ ಶೋಧವಿರಬಹುದು. ಬದುಕಿನಿಂದಲೇ ಪ್ರೇರಣೆ ಪಡೆದು ಒಂದು ಕತೆಯನ್ನು ಬರೆದಾಗಲೂ, ಯಾಕೆ ಈ ಪಾತ್ರಗಳು ಹೀಗೆ ವರ್ತಿಸಿದವು ಎಂದು ನಾವೇ ಆ ಪಾತ್ರಗಳಾಗಿ ಪರಿಶೋಧಿಸಬೇಕಾಗುತ್ತದೆ.

  1. ನಿಮ್ಮ ಪ್ರವಾಸ ಕಥನಗಳ ಬರೀ ಮಾರ್ಗವನ್ನು ಹೇಳುವುದಲ್ಲ; ಅದರಲ್ಲಿ ಅಲ್ಲಿನ ಪರಿಸರ, ಸಂಸ್ಕೃತಿ ಎಲ್ಲವೂ ನಿಚ್ಚಳವಾಗಿರುತ್ತದೆ. ಆ ವೈಶಿಷ್ಟéತೆಯನ್ನು ಹೇಗೆ ಗಳಿಸಿಕೊಂಡಿರಿ?

ನನ್ನ ಪ್ರವಾಸ ಕಥನ ಬರೀ ಮಾರ್ಗವನ್ನು ಹೇಳಿದರೆ, ಅದು ಪ್ರವಾಸ ಕಥನ ಹೇಗಾಗುತ್ತದೆ? ಓರ್ವ  ಕಂಡಕ್ಟೆರ್‌, ಟೂರಿನ ಆಪರೇಟರ್‌ ಕೂಡ ಮಾರ್ಗವನ್ನು ಹೇಳುತ್ತಾರಲ್ಲವೆ? ಒಂದು ಪ್ರವಾಸ ಅಲ್ಲಿಯ ಪರಿಸರ, ಸಂಸ್ಕೃತಿ, ಜನ, ಜೀವನ, ಅವುಗಳೊಡನೆ ನಮ್ಮ ಒಡನಾಟದ ಕತೆಯಾಗದಿದ್ದರೆ, ನಮ್ಮ ಅನುಭವವಾಗದಿದ್ದರೆ ಅದು ಪ್ರವಾಸ ಕಥನ ಆಗಲಾರದು ಎಂದು ನನ್ನ ಭಾವನೆ.

  1. ಈಗಿನ ಕಾಲದವರಿಗೆ ಪ್ರವಾಸ ಅಂದರೆ ಸೆಲ್ಫಿ ತೆಗೆದು ಸೋಷಿಯಲ್‌ ಮೀಡಿಯಾದಲ್ಲಿ ಹರಿಬಿಡಲು ಒಂದು ಅವಕಾಶ ಎಂಬಂತಾಗಿದೆ. ಇದರ ಬಗ್ಗೆ ನಿಮ್ಮ ಅಭಿಪ್ರಾಯ ಏನು?

ಈಗಿನ ಕಾಲದವರಿಂದಲೂ ಉತ್ತಮ ಪ್ರವಾಸ ಕಥನಗಳು ಬಂದಿವೆ. ಮಲ್ಲಿಕಾರ್ಜಿನ ಡಿ.ಜೆ. ಅವರ “ಯೋರಾxನ್‌ ಪಿರೆಮಸ್‌’, “ನಾನೊಬ್ಬ ಮುಸಾಫಿರ್‌… ಪಯಣವೇ ನನ್ನ ಬದುಕು’ ಎಂಬ ಪ್ರಸಾದ್‌ ನಾಯ್ಕ ಅವರ “ಹಾಯ್‌… ಅಂಗೋಲಾ!’ ಬಿ.ವಿ. ಭಾರತಿ ಅವರ‌ “ನಕ್ಷತ್ರಗಳ ಸುಟ್ಟ ನಾಡಿನಲ್ಲಿ’ – ಹೀಗೆ ಇತ್ತೀಚೆಗೆ ಓದಿದ ಅನೇಕ ಕೃತಿಗಳು ನೆನಪಾಗುತ್ತವೆ.

ಆದರೆ ನೀವು ಹೇಳುವ ಮಾತೂ ನಿಜ. ಸೆಲ್ಫಿ ತೆಗೆದು ಸೋಷಿಯಲ್‌ ಮೀಡಿಯಾದಲ್ಲಿ ಹರಿಬಿಡುವ ಗೀಳು ಒಂದು ಮಾನಸಿಕ ರೋಗವಾಗಿ ಇಂದು ಪರಿಣಮಿಸಿದೆ. ಈ ಡಿಜಿಟಲ್‌ ವ್ಯಸನ ಈಗಿನ ಕಾಲದವರಿಗೆ ಮಾತ್ರವಲ್ಲ, ನಮ್ಮ ಕಾಲದವರಿಗೂ ನಮಗಿಂತ ಬಹಳ ಹಿರಿಯರಿಗೂ ಅಂಟಿರುವುದು ಆತಂಕದ ವಿಷಯ.

  1. ಕನ್ನಡದಲ್ಲಿ ಸಂಶೋಧನಾತ್ಮಕ ಬರಹಗಳು ಹಾಗೂ ಬರಹಗಾರರ ಕೊರತೆ ಇದೆ ಎಂದೆನಿಸುತ್ತದೆಯೇ? ಹೌದಾದರೆ ಯಾಕೆ? ಅದನ್ನು ಸರಿಪಡಿಸುವುದು ಹೇಗೆ?

ಇಲ್ಲ, ನನಗೆ ಅಂತಹ ಕೊರತೆ ಇದೆ ಅನಿಸುವುದಿಲ್ಲ. ಗಣೇಶಯ್ಯನವರ ಕೃತಿಗಳನ್ನು ನೋಡಿ, ವಸುಧೇಂದ್ರ ಅವರ ತೇಜೋತುಂಗಭದ್ರ ಓದಿ, ಎಷ್ಟೊಂದು ಶೋಧದ ಹಿನ್ನೆಲೆಯಲ್ಲಿ ಬಂದವು. ಸಹನಾ ಕಾಂತಬೈಲು ಅವರ ಆನೆ ಸಾಕಳು ಹೊರಟವಳು ಓದಿ, ಆನೆ ತಮ್ಮ ತೋಟಕ್ಕೆ ಏಕೆ ಬಂದಿತು ಎಂದು ಅದರ ಬಾಲ ಹಿಡಿದು ಹೋದ ಸಹನಾ ಅವರದೂ ಶೋಧನೆಯೇ ಅಲ್ಲವೆ? ಅದು ಕೇವಲ ಅಲ್ಲಿಗೇ ನಿಲ್ಲದೆ, ಕಾಡಿನಲ್ಲಿ ಕಲ್ಲುಬಾಳೆ ನೆಟ್ಟದ್ದು ಒಂದು ಹೆಜ್ಜೆ ಮುಂದೆ ಇಟ್ಟಂತೆ ಅಲ್ಲವೆ? ಎಳೆಯ ಬರಹಗಾರ್ತಿ ಮೈತ್ರಿ ಬಿ. ಅವರು ಎಳೆಯ ಓದುಗರಿಗೆ ಬರೆದಿರುವ ಸರ್ವಾಂತರ್ಯಾಮಿ ಪುಸ್ತಕ ನೋಡಿ, ಅದೆಷ್ಟು ಅದ್ಭುತವಾಗಿದೆ. ಎಷ್ಟು ಸರಳವಾಗಿ, ಸರಾಗವಾಗಿ ಸರ್ವಾಂತರ್ಯಾಮಿಗಳಾದ ಮೈಕ್ರೋಆರ್ಗಾನಿಸಮ್ಸ್‌ ಬಗ್ಗೆ ಕತೆ ಹೇಳಿದ್ದಾರೆ. ಪುಟ್ಟ ಹುಡುಗಿಯೊಬ್ಬಳು ತನ್ನ ವಿಜ್ಞಾನಿ ಅಮ್ಮನ ಸಹಾಯದಲ್ಲಿ ಮಾಡಲು ಹೊರಟ ಒಂದು ಶಾಲೆಯ ಪ್ರಾಜೆಕ್ಟ್ ಮೂಲಕ ನಮ್ಮೆದುರು ಸೂûಾ¾ಣುಜೀವಿಗಳ ಜಗತ್ತನ್ನೇ ತೆರೆದಿಡುತ್ತಾರೆ. ಮಕ್ಕಳನ್ನು, ಅದರಲ್ಲಿಯೂ ಹೆಣ್ಣು ಮಕ್ಕಳನ್ನು ವಿಜ್ಞಾನ ರಂಗಕ್ಕೆ ಆಕರ್ಷಿಸುವ ಪ್ರಯತ್ನವನ್ನೂ ಇಲ್ಲಿ ಕಾಣುತ್ತೇವೆ.

ನಿಜ, ಆತುರವಾಗಿ ಹೆಚ್ಚೇನೂ ಹೇಳದ ಬಹಳಷ್ಟು ಕೃತಿಗಳೂ ಹೊರಬರುತ್ತಿವೆ; ಅವನ್ನು ಓದುಗರೇ ಪಕ್ಕಕ್ಕೆ ಎತ್ತಿಡುತ್ತಾರೆ.

  1. ನಿಮಗೆ ಮುಂದೊಂದು ದಿನ ಬರೆಯುವುದು ಸಾಕೆನಿಸಬಹುದು. ಆಗ ಏನು ಮಾಡುತ್ತೀರಿ? ಯಾವ ಹೊಸತಿಗೆ ಕೈ ಹಾಕುತ್ತೀರಿ?

ಅರೆ ಮೇಡಂ, ಎಂಥಾ ಪ್ರಶ್ನೆ ಕೇಳುತ್ತಿರುವಿರಿ. ನಿಮಗೆ ಮುಂದೊಮ್ಮೆ ಬದುಕು ಸಾಕೆನಿಸಿದರೆ ಏನು ಮಾಡುವಿರಿ ಎಂದು ಕೇಳಿದಂತೆ ನನಗೆ ಭಾಸವಾಗುತ್ತಿದೆ. ಬರಹ ನನಗೆ ಉಸಿರಿನಷ್ಟೆ ಸಹಜ ಕ್ರಿಯೆ. ಬರಹ ನನ್ನ ಬದುಕಿನ ಅನಿವಾರ್ಯ ಭಾಗವಾಗಿದೆ. ನನ್ನ ತಂದೆಯಂತೆಯೇ ಬದುಕಿನ ಕೊನೆಯ ದಿನದವರೆಗೂ ನಾನು ಬರೆಯಲಿದ್ದೇನೆ. ಜತೆಯಲ್ಲೇ, ಅನೇಕ ಹೊಸತಿಗೂ ಕೈ ಚಾಚಿರುವೆ.

  1. ಯುವ ಬರಹಗಾರರಿಗೆ ಅನುಭವಿಸುವುದಕ್ಕೆ ಜಗತ್ತು ಚಿಕ್ಕದಾಗುತ್ತಿದೆ ಎಂದು ಅಸುವುದಿಲ್ಲವೇ? ಎಲ್ಲ ಅನುಕೂಲಗಳ ಮಧ್ಯೆ ಅನುಭವ ದಕ್ಕಿಸಿಕೊಳ್ಳುವುದು ಕಷ್ಟವೆನಿಸುವುದಿಲ್ಲವೇ?

ಎಲ್ಲ ಅನುಕೂಲಗಳು ಎಲ್ಲರಿಗೂ ಎಲ್ಲಿವೆ ಮೇಡಂ? ಈಗಷ್ಟೇ ಬೆಂಗಳೂರಿನ ನಡುಮಧ್ಯೆ ವಿದ್ಯುತ್‌ ಇಲ್ಲದೆ, ಶೌಚಾಲಯವಿಲ್ಲದೆ, ಸೌದೆ ಒಲೆಯಲ್ಲಿ ಅಡುಗೆ ಮಾಡುತ್ತಾ, ತಗಡಿನ ಮನೆಯಲ್ಲಿ ಜೀವಿಸುತ್ತಾ ವಿದ್ಯಾಭ್ಯಾಸದ ಕನಸು ಕಾಣುತ್ತಿರುವ ವಲಸೆ ಮಕ್ಕಳನ್ನು  ಭೇಟಿಯಾಗಿ ಬಂದಿದ್ದೇನೆ. ಗಾಲಿ ಕುರ್ಚಿಯಲ್ಲಿರುವ ಮಹೇಶ್‌ ಮುನಿಯಪ್ಪ ಆ ಮಕ್ಕಳ ಬದುಕಿಗೆ ರೆಕ್ಕೆ ಕಟ್ಟುವುದನ್ನು ಕಂಡಿದ್ದೇನೆ. ಅನುಭವ ದಕ್ಕಿಸಿಕೊಳ್ಳಲು ಬಯಸುವ ಯುವ ಬರಹಗಾರರಿಗೆ ಜಗತ್ತು ಹಿಗ್ಗಿ ನಿಂತಿದೆ. ಅನುಕೂಲಗಳನ್ನು ದೂರುವುದು ಬೇಡ, ಅನುಕೂಲಗಳನ್ನು ಸಕಾರಾತ್ಮಕವಾಗಿ ಬಳಸಿಕೊಂಡರೆ, ಅವೇ ನಮ್ಮ ಶಕ್ತಿಯಾಗಬಲ್ಲವು.

  1. ಒಂದು ಕೃತಿಯ ವಿಮರ್ಶೆಯೊಂದಿಗೆ ಆಯಾ ಲೇಖಕ ನನ್ನೂ ವಿಮರ್ಶೆಗೆ ಒಳಪಡಿಸುವುದು ಸರಿಯೇ? ತಪ್ಪೇ?

ಲೇಖಕರ ವೈಯಕ್ತಿಕ ಬದುಕಿನ ಒಳಕ್ಕೆ ಚಪಲಚಿತ್ತರಾಗಿ ಇಣುಕುವುದು ಸರಿಯಲ್ಲ. ಆದರೆ ಊಹಿಸಿ, ಓರ್ವ ಲೇಖಕ ಸ್ತ್ರೀ ಸಮಾನತೆ ಬಗ್ಗೆ ಅದ್ಭುತ ಕೃತಿ ಬರೆದು, ಮನೆಯಲ್ಲಿ ತನ್ನದೇ ಪತ್ನಿಯನ್ನು ಬಡಿಯುತ್ತಿದ್ದ ಎಂದು ತಿಳಿದರೆ, ಆ ಕೃತಿಯನ್ನು ನಾವು ಹೇಗೆ ನೋಡಬೇಕು?

ಒಂದು ಕೃತಿ, ಲೇಖಕರ ಜೀವನ ದರ್ಶನ, ಧೋರಣೆ, ಚಿಂತನೆಗಳನ್ನು ಪ್ರತಿಬಿಂಬಿಸಬೇಕು. ನಿಜ, ಲೇಖಕರಾಗಿ ನಮ್ಮ  ನಂಬಿಕೆ, ಧೋರಣೆಗಳೆಲ್ಲವನ್ನೂ ಶತಾಂಶ ಬದುಕಿನಲ್ಲಿ ಅಳವಡಿಸುವುದು ಸುಲಭ ಇಲ್ಲದಿರಬಹುದು; ಆದರೆ ಪ್ರಜ್ಞಾಪೂರ್ವಕ ಸಣ್ಣ ಪ್ರಯತ್ನವಾದರೂ ನಮ್ಮದಾಗಬೇಕು. ಈ ದೃಷ್ಟಿಯಲ್ಲಿ ಕೃತಿ ಮತ್ತು ಕೃತಿಕಾರ ಬೇರೆಯಲ್ಲ. ನಮ್ಮ  ಬರಹ ನಮ್ಮ ಸ್ವ-ಅನ್ವೇಷಣೆಯ ಒಂದು ಮಾರ್ಗ ಎಂದು ನಾನು ನಂಬುತ್ತೇನೆ.

-ಸುಶ್ಮಿತಾ ನೇರಳಕಟ್ಟೆ

Advertisement

Udayavani is now on Telegram. Click here to join our channel and stay updated with the latest news.

Next