Advertisement
ರಾಜ್ಯದಲ್ಲಿ ದೂರವಾಣಿ ಕದ್ದಾಲಿಕೆ ಪ್ರಕರಣ ದೊಡ್ಡದಾಗಿಯೇ ಸದ್ದು ಮಾಡುತ್ತಿದೆ. ಹಿಂದೆ ರಾಜ್ಯದಲ್ಲಿ ಮೊದಲ ಬಾರಿಗೆ 1988ರಲ್ಲಿ ಜನತಾ ಪಕ್ಷದ ಸರ್ಕಾರ ಇದ್ದಾಗ ರಾಮಕೃಷ್ಣ ಹೆಗಡೆ ಅವರು ಮುಖ್ಯಮಂತ್ರಿಯಾಗಿದ್ದಾಗ ಇಂಥದ್ದೊಂದು ಆರೋಪ ಕೇಳಿಬಂದಿತ್ತು. ಇಡೀ ರಾಷ್ಟ್ರದಲ್ಲಿ ಇದು ಸಂಚಲನ ಮೂಡಿಸಿತ್ತು. ಅವರು ಮುಖ್ಯಮಂತ್ರಿ ಸ್ಥಾನ ಕಳೆದುಕೊಳ್ಳಬೇಕಾಯಿತು. ಆಗ ರಾಮಕೃಷ್ಣ ಹೆಗಡೆ ವಿರುದ್ಧ ದೂರವಾಣಿ ಕದ್ದಾಲಿಕೆ ಆರೋಪ ಮಾಡಿದವರಲ್ಲಿ ಅವರ ಸಂಪುಟದಲ್ಲಿ ಸಚಿವರಾಗಿದ್ದ ಎಚ್.ಡಿ.ದೇವೇಗೌಡರು ಸೇರಿದ್ದರು.
Related Articles
Advertisement
ಎಚ್.ಡಿ.ಕುಮಾರಸ್ವಾಮಿ ನೇತೃತ್ವದ ಸಮ್ಮಿಶ್ರ ಸರ್ಕಾರ ಪತನಗೊಂಡಿದೆ. ಈ ಹಂತದಲ್ಲಿ ಸಿಬಿಐ ತನಿಖೆಯಿಂದ ಮುಂದೇನಾಗಬಹುದು ಎಂಬ ಪ್ರಶ್ನೆ ಮೂಡಿದೆ. ರಾಜಕೀಯವಾಗಿ ಕುಮಾರಸ್ವಾಮಿಯವರನ್ನು ಹಣಿಯಲು ಈ ಪ್ರಕರಣ ಬಳಕೆ ಮಾಡಬಹುದೇ ಎಂಬ ಮಾತುಗಳು ಕೇಳಿಬರುತ್ತಿವೆ.
ಈ ಮಧ್ಯೆ, ದೂರವಾಣಿ ಕದ್ದಾಲಿಕೆ ಪ್ರಕರಣದಲ್ಲಿ ರಾಜಕಾರಣಿಗಳಿಗಿಂತ ಕೆಲವು ಪೊಲೀಸ್ ಅಧಿಕಾರಿಗಳಿಗೆ ಸಂಕಷ್ಟ ಎದುರಾಗಲಿದೆ. ಯಾಕೆಂದರೆ ದೂರವಾಣಿ ಕದ್ದಾಲಿಕೆ ಮಾಡಿರುವುದು ಬಹಿರಂಗಗೊಂಡಿರುವುದು ಅಧಿಕಾರಿಗಳ ನಡುವಿನ ಆಂತರಿಕ ಸಂಘರ್ಷದಿಂದ. ಹೀಗಾಗಿ, ಮೊದಲಿಗೆ ಪ್ರಕರಣದಲ್ಲಿ ಪೊಲೀಸ್ ಅಧಿಕಾರಿಗಳ ನೆತ್ತಿ ಮೇಲೆಯೇ ತೂಗುಕತ್ತಿಯಿದೆ.
ಮಾಜಿ ಮುಖ್ಯಮಂತ್ರಿ ಎಚ್.ಡಿ.ಕುಮಾರಸ್ವಾಮಿಯವರು ಹಿಂದಿನ ಮುಖ್ಯಮಂತ್ರಿ ಬಿ.ಎಸ್.ಯಡಿಯೂರಪ್ಪ, ಆ ನಂತರದ ಸಿದ್ದರಾಮಯ್ಯ ಅವರ ಸರ್ಕಾರದ ಅವಧಿಯಲ್ಲಿ ನಡೆದಿರುವ ಕದ್ದಾಲಿಕೆಗಳೂ ತನಿಖೆಯಾಗಲಿ ಎಂದು ಒತ್ತಾಯಿಸಿದ್ದಾರೆ. ಕಾಂಗ್ರೆಸ್‌ನ ಹಿರಿಯ ನಾಯಕ ಮಲ್ಲಿಕಾರ್ಜುನ ಖರ್ಗೆ ಅವರು ಆಪರೇಷನ್ ಕಮಲ ಕಾರ್ಯಾಚರಣೆ ಬಗ್ಗೆಯೂ ಸಿಬಿಐ ತನಿಖೆಯಾಗಲಿ ಎಂದು ಆಗ್ರಹವನ್ನೂ ಮಾಡಿದ್ದಾರೆ.
ಆದರೆ, ಈಗ ರಾಜ್ಯ ಸರ್ಕಾರ ಒಂದು ವರ್ಷದ ಅವಧಿಯಲ್ಲಿ ನಡೆದ ದೂರವಾಣಿ ಕದ್ದಾಲಿಕೆ ಪ್ರಕರಣ ಸಿಬಿಐ ತನಿಖೆಗೆ ಒಪ್ಪಿಸಿದೆ. ಪ್ರಕರಣದ ಬಗ್ಗೆ ನಿಷ್ಪಕ್ಷಪಾತ ತನಿಖೆ ನಡೆದು ಸತ್ಯ ಹೊರಬರಲಿ ಎನ್ನುವುದು ಎಲ್ಲರ ಆಶಯ.