Advertisement

ಶೋಷಣೆ ವಿರುದ್ಧ ಸಂಗ್ರಾಮ ನಡೆಯಲಿ

01:08 AM Jul 18, 2019 | Lakshmi GovindaRaj |

ಬೆಂಗಳೂರು: ಕಾರ್ಮಿಕ ವಿರೋಧಿ ನೀತಿಗಳನ್ನು ಖಂಡಿಸಲು ಸಂಘಟನೆಗಳ ನಾಯಕರು ಸದಾ ಸಕ್ರಿಯವಾಗಿರಬೇಕು ಎಂದು ನಿವೃತ್ತ ನ್ಯಾಯಮೂರ್ತಿ ವಿ.ಗೋಪಾಲಗೌಡ ಹೇಳಿದರು.

Advertisement

ಶಾಸಕರ ಭವನದಲ್ಲಿ ಬುಧವಾರ ಆಯೋಜಿಸಿದ್ದ ಸಾಮಾಜಿಕ ಸುರಕ್ಷಾ ಕಲ್ಯಾಣ ಮಸೂದೆ-2018 ಹಾಗೂ ಕಟ್ಟಡ ಕಾರ್ಮಿಕ ಕಾನೂನು-1996, ಸೆಸ್‌ ಕಾನೂನು ಮತ್ತು ಕಾರ್ಮಿಕರ ಬದುಕಿನ ಮೇಲೆ ಅದರ ಪರಿಣಾಮ ಕುರಿತ ದುಂಡು ಮೇಜಿನ ಸಭೆಯಲ್ಲಿ ಮಾತನಾಡಿ, ಕಾರ್ಮಿಕರ ಹಿತ ಕಾಯಬೇಕಿದ್ದ ಸೆಸ್‌ಗಳು ಕೈಗಾರಿಕೋದ್ಯಮಿಗಳ ಪರವಾಗಿವೆ. ಕಾರ್ಮಿಕರ ಶೋಷಣೆ ವಿರುದ್ಧ ಎರಡನೇ ಸ್ವಾತಂತ್ರ್ಯ ಸಂಗ್ರಾಮ ನಡೆಯಬೇಕಿದೆ ಎಂದರು.

ದೇಶದಲ್ಲಿ ಬಂಡವಾಳಶಾಹಿಗಳ ಪ್ರಾಬಲ್ಯ ಮಿತಿಮೀರಿದೆ. ಇದರಿಂದಾಗಿ ಕಾರ್ಮಿಕರಿಗೆ ಆರ್ಥಿಕ ಮತ್ತು ಸಾಮಾಜಿಕ ಭದ್ರತೆ ಇಲ್ಲದಂತಾಗಿದೆ. ಇದರ ಬೆನ್ನಲ್ಲೇ ಕಾರ್ಮಿಕರಿಗೆ ನ್ಯಾಯ ಒದಗಿಸುವ ಕೆಲ ಪ್ರಮುಖ ಅಂಶಗಳನ್ನು ಕೇಂದ್ರ ಸರ್ಕಾರ ರದ್ದು ಮಾಡಲು ಮುಂದಾಗಿದೆ. ಸಾಮಾಜಿಕ ಸುರಕ್ಷಾ ಮಸೂದೆ ಜಾರಿಯಾದರೆ ನಾಲ್ಕು ಕೋಟಿ ಕಟ್ಟಡ ಕಾರ್ಮಿಕರ ಸೌಲಭ್ಯಗಳು ಕಡಿತಗೊಳ್ಳಲಿವೆ. ಇದರ ವಿರುದ್ಧ ಕಾರ್ಮಿಕರು ಸಂಘಟಿತರಾಗಿ ಹೋರಾಟ ಮಾಡಬೇಕಿದೆ ಎಂದು ಹೇಳಿದರು.

1996ರಲ್ಲಿ ಜಾರಿಯಾದ ಕಟ್ಟಡ ಕಾರ್ಮಿಕ ಹಾಗೂ ಸೆಸ್‌ ಕಾನೂನುಗಳು ಈಗಲೂ ಹಲವು ರಾಜ್ಯಗಳಲ್ಲಿ ಕಾರ್ಯರೂಪಕ್ಕೆ ಬಂದಿಲ್ಲ. ಕಾರ್ಮಿಕರಿಗೆ ಆರ್ಥಿಕ ಮತ್ತು ಸಾಮಾಜಿಕ ಭದ್ರತೆ ಒದಗಿಸುವ ಸ್ವಾತಂತ್ರ್ಯ ಕಾರ್ಮಿಕರಿಗೆ ಮರೀಚಿಕೆಯಾಗಿದೆ. ಕಾಯಿದೆಯ ಫ‌ಲಾನುಭವಿಗಳ ಅಂಕಿ ಅಂಶ ದಾಖಲಿಸುವ ಇಲಾಖೆ ಇನ್ನೂ ಸ್ಥಾಪನೆ ಆಗದಿರುವುದು ದುರಾದೃಷ್ಟಕರ ಸಂಗತಿ ಎಂದರು.

ಕಾರ್ಯಕ್ರಮದಲ್ಲಿ ಮಾಜಿ ಜಂಟಿ ಕಾರ್ಮಿಕ ಆಯುಕ್ತ ವಸಂತ್‌ ಕುಮಾರ್‌, ಸಾಮಾಜಿಕ ಕಾರ್ಯಕರ್ತೆ ಕಾತ್ಯಾಯಿನಿ ಚಾಮರಾಜ್‌, ಸುಭಾಷ್‌ ಭಟ್ನಾಗರ್‌ ಉಪಸ್ಥಿತರಿದ್ದರು.

Advertisement
Advertisement

Udayavani is now on Telegram. Click here to join our channel and stay updated with the latest news.

Next