ಅರಿಯದೆ ಮಾಡಿದ ತಪ್ಪಿಗೂ, ಅರಿತು ಮಾಡಿದ ತಪ್ಪಿಗೂ ಪಶ್ಚಾತ್ತಾಪವನ್ನು ಅನುಭವಿಸಲೇಬೇಕು. ಆದರೆ ಮಾಡದ ತಪ್ಪಿಗೆ ಅನುಭವಿಸುವ ಪಶ್ಚಾತ್ತಾಪ ನಿಜಕ್ಕೂ ಕಷ್ಟ. ಅದು ಕಠಿನ ದಿನಗಳನ್ನು ತಂದೊಡ್ಡುತ್ತದೆ, ಅದೇ ಚಿಂತೆಯಲ್ಲಿ ಕೊರಗುವಂತೆ ಮಾಡಿಬಿಡುತ್ತದೆ.
ಇಲ್ಲಿ ಯಾರಾದರೂ ನಿನ್ನ ತಪ್ಪು ಇಂತಹದ್ದು ಎಂದು ಹೇಳಿದರೆ ಸಹಿಸಿಕೊಳ್ಳಬಹುದು. ಆದರೆ ಕೇವಲ ನಮ್ಮಿಂದ ದೂರವಾಗುವ ಪ್ರಯತ್ನದಲ್ಲಿ, ನಮ್ಮ ಬಳಿ ಮಾತನಾಡುವುದನ್ನು ತಪ್ಪಿಸಿಕೊಳ್ಳಲು ನಮ್ಮನ್ನು ತಪ್ಪಿತಸ್ಥರ ಸ್ಥಾನದಲ್ಲಿ ನಿಲ್ಲಿಸುವುದು ನಿಜಕ್ಕೂ ಅನ್ಯಾಯ. ಇದಕ್ಕಿಂತ ನಮ್ಮನ್ನು ನಿರ್ಲಕ್ಷಿಸಿ, ನಮ್ಮಷ್ಟಕ್ಕೇ ಬಿಟ್ಟುಬಿಡಬಹುದಲ್ಲವೇ. ಆದರೆ ಸಿಟ್ಟು, ಅಸಹಾಯಕತೆಯ ಭಾವ ಮೂಡಿಸುವ ಈ ಸನ್ನಿವೇಶದಲ್ಲಿ ಮೂಗನಂತೆ ಮೌನವಾಗಿರುವುದೇ ಲೇಸು. ಅವರಿಗೆ ಕಾಲವೇ ಉತ್ತರ ನೀಡುತ್ತದೆ. ಅವರೂ ಪಶ್ಚಾತಾಪ ಪಡುವ ಸಮಯ ಬಂದೇ ಬರುತ್ತದೆ.
ಬೇಡವೆಂದು ದೂರ ಹೋದ, ಅವರಿಗೆ ಬೇಡದ ಸಂಬಂಧ ನಮಗೆ ಏಕೆ? ಇದರ ಮಹತ್ವ ಅರಿತು ಮರಳಿ ನಮ್ಮತ್ತ ಬಳಿಕ ಬಂದರೂ ಕಾಲ ಮೀರಿ ಹೋಗಿರುತ್ತದೆ. ಒಮ್ಮೆ ಒಡೆದ ಮನಸ್ಸು, ಒಡೆದ ಗಾಜು, ಒಡೆದ ಕನಸುಗಳನ್ನು ಮತ್ತೂಮ್ಮೆ ಜೋಡಿಸುವ ಪ್ರಯತ್ನಕ್ಕೆ ಹೋಗಕೂಡದು. ನಮಗಾದ ನೋವು ಅವರಿಗೂ ಆಗಬೇಕು, ಅವರೂ ಪಶ್ಚಾತ್ತಾಪವನ್ನು ಅನುಭವಿಸಬೇಕು. ಆಗ ಮಾತ್ರ ತಿಳಿಯುವುದು ಆ ವೇದನೆ.
ಆದರೂ ಹೆಚ್ಚಿನ ಸಂದರ್ಭದಲ್ಲಿ ಹೀಗೆ ಮಾಡಲು ಮನಸ್ಸು ಬಿಡುವುದಿಲ್ಲ. ಅವರು ಎಷ್ಟೇ ದೂರ ಹೋದರೂ, ಮಾಡಿದ ತಪ್ಪಿಗೆ ಪಶ್ಚಾತ್ತಾಪ ಅನುಭವಿಸಿದ್ದರೂ ಕೂಡ, ಸನಿಹ ಬಂದು ಮಾತನಾಡಿದ ಕೂಡಲೇ ಮಾಡಿದ ತಪ್ಪುಗಳನ್ನು ಮರೆತು ಅವರನ್ನು ಒಪ್ಪಿಕೊಳ್ಳುತ್ತೇವೆ. ಆಗಲೇ ಅವರು ಪಶ್ಚಾತ್ತಾಪ ಪಡುವ ಸಂದರ್ಭ ಬರುವುದು. ಅದೇ ಕಾಲ ಕಲಿಸುವ ಪಾಠ!
ಸುಮ್ಮನೆ ಯಾರನ್ನೂ ಬಿಟ್ಟು ಹೋಗಿ ಕೊರಗುವಂತೆ ಮಾಡುವ ಬದಲು, ಮೊದಲು ಸರಿಯಾದ ಕಾರಣ ಹೇಳಿ ಹೋದರೆ ಮಾಡದ ತಪ್ಪಿಗೆ ಪಶ್ಚಾತ್ತಾಪ ಪಡುವುದು ತಪ್ಪುತ್ತದೆ. ಅವರ ಕನಸನ್ನು ಕೊಲ್ಲಬೇಡಿ, ನೆಮ್ಮದಿಯ ಕದಡಬೇಡಿ, ಅವರಿಗೆ ನಂಬಿಸಿ ಮೋಸ ಮಾಡಬೇಡಿ. ವ್ಯಕ್ತಿ ತನ್ನ ತಪ್ಪು ಅರ್ಥಮಾಡಿಕೊಂಡು ಪಶ್ಚಾತ್ತಾಪ ಪಡುವಂತಾಗಲಿ.
ಪ್ರಶ್ನೆ ಪ್ರಶ್ನೆಯಾಗಿಯೇ ಶಾಶ್ವತವಾಗಿ ಮನಸ್ಸಲ್ಲಿ ಉಳಿದರೆ, ಅದು ಕಷ್ಟ. ಅದರ ಪರಿಣಾಮ ಮನಸ್ಸಲ್ಲಿ ಅಚ್ಚಳಿಯದಂತೆ ಉಳಿದುಬಿಡುತ್ತದೆ.
-ಗಿರೀಶ್ ಪಿ.ಎಂ.
ಮಂಗಳೂರು ವಿವಿ