Advertisement

ಯುವಕರು ಭವಿಷ್ಯ ಪ್ರೀತಿಸಲಿ

12:31 PM Aug 11, 2017 | |

ಹುಬ್ಬಳ್ಳಿ: ಇಂದಿನ ಸಿನಿಮಾ, ಧಾರಾವಾಹಿಗಳು ಯುವ ಜನಾಂಗದ ಮೇಲೆ ಪ್ರೀತಿ-ಪ್ರೇಮವೆಂಬ ವಿಷಬೀಜ ಬಿತ್ತುತ್ತಿದ್ದು, ಯುವ ಜನಾಂಗ ಇದರ ಹಿಂದೆ ಬೆನ್ನು ಹತ್ತದೆ ನಿಮ್ಮ ಭವಿಷ್ಯ ಪ್ರೀತಿಸಿರಿ ಎಂದು ಸಾಹಿತಿ ಡಾ| ಜಿ.ಎಚ್‌. ಹನ್ನೆರಡುಮಠ ಕರೆ ನೀಡಿದರು. 

Advertisement

ಇಲ್ಲಿನ ಮೂರುಸಾವಿರ ಮಠ ಆವರಣದ ಜಗದ್ಗುರು ಗಂಗಾಧರ ಪದವಿ ಪೂರ್ವ ಮಹಾವಿದ್ಯಾಲಯದಲ್ಲಿ ತಾಲೂಕು ಕನ್ನಡ ಸಾಹಿತ್ಯ ಪರಿಷತ್ತು, ಜಗದ್ಗುರು ಗಂಗಾಧರ ಪದವಿ ಪೂರ್ವ ಮಹಾವಿದ್ಯಾಲಯ ವತಿಯಿಂದ ಗುರುವಾರ ಗುರುಸಿದ್ಧ ರಾಜಯೋಗೀಂದ್ರ ಸ್ವಾಮಿಗಳ ದತ್ತಿ ಹಾಗೂ ಲಿಂ| ಮಾತೋಶ್ರೀ ಅಂದಾನೆಮ್ಮ ಯಕ್ಕುಂಡಿಮಠ ದತ್ತಿ ಉಪನ್ಯಾಸ ಕಾರ್ಯಕ್ರಮದಲ್ಲಿ ಸಾಹಿತ್ಯಕ್ಕೆ ಮೂಜಗಂ ಕೊಡುಗೆ ವಿಷಯವಾಗಿ ಮಾತನಾಡಿದರು.

ನಿಮ್ಮ ಭವಿಷ್ಯ ಪ್ರೀತಿಸುವ ಮೂಲಕ ಉತ್ತಮ ಜೀವನ ಹೊಂದಬೇಕು. ಬದುಕು ಸುಂದರವಾಗಿ ಬೆಳೆಸಿಕೊಳ್ಳಬೇಕು ಎಂದು ಕಿವಿಮಾತು ಹೇಳಿದರು. ಅಮೆರಿಕದಲ್ಲಿ ವಾಸಿಸುತ್ತಿರುವ ಸ್ಪಾನಿಷ್‌, ಆಫ್ರಿಕಾ, ಚೀನಾ ಮತ್ತು ಬುಡಕಟ್ಟು ಜನರಿಗೆ ಇಂಗ್ಲಿಷ್‌ ಬರಲ್ಲ. ಆದರೆ ಭಾರತೀಯರು ಅಮೆರಿಕಕ್ಕೆ ಹೋದರೆ ತಮ್ಮ ಸಂಸ್ಕೃತಿ, ಸಂಸ್ಕಾರವನ್ನೆ ಮರೆತು ಬಿಡುತ್ತಾರೆ. ಅಲ್ಲಿನ ಸಂಸ್ಕೃತಿ, ಸಂಸ್ಕಾರ ಅಳವಡಿಸಿಕೊಳ್ಳುವುದೇ ತಮ್ಮ ಅಭಿಮಾನ ಎಂದುಕೊಂಡಿದ್ದಾರೆ.

ನಾವು ಎಲ್ಲೇ ಹೋದರೂ ನಮ್ಮತನ, ನಾಡು-ನುಡಿ, ಜಲ-ನೆಲ, ಸಂಸ್ಕೃತಿ ಬಿಟ್ಟುಕೊಡಬಾರದು. ಅದನ್ನು ಎತ್ತಿ ಹಿಡಿಯಬೇಕು. ನಮ್ಮ ಮೂಲ ಸಂಸ್ಕೃತಿ, ಸಂಸ್ಕಾರ ಉಳಿಸಿ-ಬೆಳೆಸಿಕೊಂಡು ಹೋಗಬೇಕು. ರಾಜ್ಯದಲ್ಲೂ ಅದೇಷ್ಟೋ  ಕನ್ನಡಿಗರು ಕನ್ನಡ ಭಾಷೆ ಬಗ್ಗೆ ಅಸಡ್ಡೆ ತೋರುತ್ತಿದ್ದಾರೆ. ಕನ್ನಡ ಭಾಷೆಗೆ ಅನ್ಯಭಾಷೆಯವರಿಗಿಂತ ಕನ್ನಡಿಗರೇ ವಿರೋಧಿಗಳಾಗಿದ್ದಾರೆ ಎಂದರು. 

ಮೂರುಸಾವಿರ ಮಠದ ಜಗದ್ಗುರು ಗಂಗಾಧರ ಸ್ವಾಮೀಜಿ ಸಹ ಗುಡಿಸಲಿನಲ್ಲೇ ಜನಿಸಿದ್ದರು. ಆದರೆ ಅವರಲ್ಲಿ ಅಪಾರ ಜ್ಞಾನವಿತ್ತು. ನಾಲ್ಕು ವರ್ಷದವರಿದ್ದಾಗಲೇ ಅವರ ಪಾಲಕರು ಅವರನ್ನು ಶಿವಯೋಗ ಮಂದಿರಕ್ಕೆ ಕಳುಹಿಸಿದರು. ಚಿಕ್ಕವರಿದ್ದಾಗಲೇ ಕವನ ಸಂಕಲನ ಬರೆಯುತ್ತಿದ್ದರು. ಈಜು ಬಲ್ಲವರಾಗಿದ್ದರು. ಮುಂದೆ ಕವನ,  ಪ್ರಬಂಧ ಬರೆಯುವುದು, ಭಾಷಣ, ಸಮಾಜ ಸಂಘಟನೆ ಶಕ್ತಿ ಬೆಳೆಯಿತು. 

Advertisement

ಹಾನಗಲ್ಲ ಕುಮಾರ ಸ್ವಾಮಿಗಳ ಬಗ್ಗೆ ಇಂಗ್ಲಿಷ್‌ನಲ್ಲಿ ಪುಸ್ತಕ ಬರೆದಿದ್ದರು. ಅದನ್ನು ನೋಡಿದ ಮೂರುಸಾವಿರ ಮಠದ ಅಂದಿನ ಗುರುಸಿದ್ಧಶ್ರೀಗಳು ಇವರ ಪ್ರಾವಿಣ್ಯತೆಯನ್ನು ಮನಗಂಡು ತಮ್ಮ ಮಠದ ಪೀಠಾಧಿಕಾರಿಯನ್ನಾಗಿ ಮಾಡಿದರು. ಆದರೆ ಇಲಕಲ್ಲ ಜನರು ಗಂಗಾಧರ ಸ್ವಾಮಿಗಳನ್ನು ಬಿಟ್ಟುಕೊಡಲು ಸಿದ್ಧರಿರಲಿಲ್ಲ. ಅವರಿಗೆ ಸಮಾಧಾನ ಮಾಡಿ ಗುರುಸಿದ್ಧಶ್ರೀಗಳು ಗಂಗಾಧರ ಶ್ರೀಗಳನ್ನು ಶ್ರೀಮಠಕ್ಕೆ ಪೀಠಾಧಿಕಾರ ಮಾಡಿದರು ಎಂದರು. 

ಮೂಜಗಂ ಅವರು ಎಲ್ಲರನ್ನೂ ವಿಶ್ವಾಸಕ್ಕೆ ತೆಗೆದುಕೊಳ್ಳುತ್ತಿದ್ದರು. ಪತ್ರಿಕೆಗಳ ಮೇಲೆ ತುಂಬಾ ಪ್ರೀತಿ ಹೊಂದಿದ್ದರು. ಮಠದಿಂದಲೇ ಏಕೆ ಪತ್ರಿಕೆ ತೆಗೆಯಬಾರದೆಂದುಕೊಂಡು “ಪರಂಜ್ಯೋತಿ’ ಎಂಬ ಮಾಸ ಪತ್ರಿಕೆ ಆರಂಭಿಸಿದರು. ಅದಕ್ಕೆ ನನ್ನನ್ನೆ ಸಂಪಾದಕರನ್ನಾಗಿ ಮಾಡಿದರು. ತಿಂಗಳಿಗೆ 8-10 ಸಾವಿರ ಮುದ್ರಣ ಮಾಡಿ ವಿತರಿಸುತ್ತಿದ್ದರು. ಶ್ರೀಗಳು ಸಾಹಿತ್ಯದಲ್ಲಿ ಅಂತಹ ಗುರುತರ ಶಕ್ತಿ ಬೆಳೆಸಿಕೊಂಡಿದ್ದರು ಎಂದರು.

ರಂಗನಾಥ ದಿವಾಕರ ಅವರು ಜಪಾನ್‌ ದ ಕ್ಯೂಟೋದಲ್ಲಿ ಅಂತಾರಾಷ್ಟ್ರೀಯ ಧರ್ಮ ಸಮ್ಮೇಳನ ಆಯೋಜಿಸಿದ್ದರು. ಅಲ್ಲಿ ಮೂಜಗಂ ಪಾಲ್ಗೊಂಡಿದ್ದರು. ಆಗ ಜಪಾನದ ಪ್ರಮುಖ ಪತ್ರಿಕೆಗಳಲ್ಲಿ ಶ್ರೀಗಳ ಸುದ್ದಿ ಮುಖಪುಟಗಳಲ್ಲಿ ಫೋಟೋ ಸಮೇತ ಪ್ರಕಟಗೊಂಡಿತ್ತು. ಮುಂದೆ ಯುರೋಪದ ಬ್ರುಸೆಲ್‌, ಲಂಡನ್‌, ಪ್ಯಾರಿಸ್‌, ನ್ಯೂಜಿಲೆಂಡ್‌, ಜರ್ಮನಿಗಳಲ್ಲಿ ನಡೆದ ಧರ್ಮ ಸಮ್ಮೇಳನಗಳಲ್ಲೂ ಶ್ರೀಗಳು ಭಾಗವಹಿಸಿದ್ದರು.

ಈ ಕುರಿತು ಅವರು ಬರೆದ “ನಮ್ಮ ವಿದೇಶ ಯಾತ್ರೆ’ ಪುಸ್ತಕವನ್ನು ಉಪರಾಷ್ಟ್ರಪತಿಯಾಗಿದ್ದ ಬಿ.ಡಿ. ಜತ್ತಿ ಅವರು ಸರಕಾರದ ವೆಚ್ಚದಲ್ಲಿಯೇ ಐದು ಸಾವಿರ ಪ್ರತಿಗಳನ್ನು ಮುದ್ರಿಸಿದ್ದರು. ಮೂಜಗಂ ಅವರು ಅಂತಹ ಮಹಾನ್‌ ವ್ಯಕ್ತಿಯಾಗಿದ್ದರು ಎಂದರು. ಎಸ್‌ಜೆಎಂವಿಎಸ್‌ನ ಗೌರವ ಕಾರ್ಯದರ್ಶಿ ಹನುಮಂತ ಶಿಗ್ಗಾಂವಿ ಉಪನ್ಯಾಸ ಕಾರ್ಯಕ್ರಮ ಉದ್ಘಾಟಿಸಿದರು.
 
ಜಗದ್ಗುರು ಗಂಗಾಧರ ಪಪೂ ಕಾಲೇಜ್‌ನ ಪ್ರಾಚಾರ್ಯ ಪ್ರೊ| ಬಿ.ಎಂ. ಸಾಲಿಮಠ ಅಧ್ಯಕ್ಷತೆ ವಹಿಸಿದ್ದರು. ತಾಲೂಕು ಕಸಾಪದ ಗೌರ ಕಾರ್ಯದರ್ಶಿ ಪ್ರೊ| ಕೆ.ಎಸ್‌. ಕೌಜಲಗಿ, ಪ್ರೊ| ಎಸ್‌.ವಿ. ಪಟ್ಟಣಶೆಟ್ಟಿ  ಇದ್ದರು. ಡಾ| ಲಿಂಗರಾಜ ಅಂಗಡಿ ಸ್ವಾಗತಿಸಿದರು. ಪ್ರೊ| ಕೆ.ಎ. ದೊಡ್ಡಮನಿ ನಿರೂಪಿಸಿದರು.  

Advertisement

Udayavani is now on Telegram. Click here to join our channel and stay updated with the latest news.

Next