ಕನಕಪುರ: ಸಮಾಜದ ಸುತ್ತಮುತ್ತಲಿನ ಸಮಸ್ಯೆ ಅರಿತು ಸಾಹಿತ್ಯ ರಚಿಸಿದರೆ ಸಮಾಜದ ಬದಲಾವಣೆ ತರಲು ಸಾಧ್ಯ ಎಂದು ಪ್ರೌಢಶಾಲಾ ಶಿಕ್ಷಕರ ಸಂಘದ ಅಧ್ಯಕ್ಷ ಮಾಧವ ರಾವ್ ತಿಳಿಸಿದರು.
ಕನ್ನಡ ಸಾಹಿತ್ಯ ಪರಿಷತ್ ತಾಲೂಕು ಘಟಕ ಮತ್ತು ಸಾತನೂರು ಹೋಬಳಿ ಘಟಕದಿಂದ ಸಾತನೂರಿನ ಮಹದೇಶ್ವರ ಸಮುದಾಯ ಭವನದಲ್ಲಿ ನಡೆದ ಕವಿಗೋಷ್ಠಿ ಕಾರ್ಯಕ್ರಮದಲ್ಲಿ ಮಾತನಾಡಿದ ಅವರು, ಸಾಹಿತ್ಯಗಳು ಒಬ್ಬ ವ್ಯಕ್ತಿಯ ಹೃದಯವನ್ನು ಮುಟ್ಟಿದರೆ ಸಾಹಿತ್ಯದ ಸಾರ್ಥಕತೆ ಈಡೇರುತ್ತದೆ. ಸಾಹಿತಿಗಳು ಸಂವೇದನಾಶೀಲರಾಗಬೇಕು. ಸಾಹಿತ್ಯಗಳಿಗೆ ಸಮಾಜವನ್ನು ಬದಲಾಯಿಸುವ ಶಕ್ತಿ ಇದೆ. ಸಾಹಿತಿಗಳು ತಮ್ಮ ಸುತ್ತಮುತ್ತಲಿನ ಸಮಾಜದ ಸಮಸ್ಯೆ ಮೇಲೆ ಬೆಳಕು ಚೆಲ್ಲುವಂತಹ ಸಾಹಿತ್ಯ ರಚಿಸಿದರೆ ಸಮಾಜದಲ್ಲಿ ಸ್ವಲ್ಪ ಸುಧಾರಣೆ ತರಲು ಸಾಧ್ಯವಿದೆ ಎಂದರು.
ಸಾಹಿತ್ಯ ರಚಿಸಿ ಸಮಾಜಕ್ಕೆ ಕೊಡುಗೆ ನೀಡಿ: ಮುಖಂಡ ಚಿಕ್ಕಮರಿಗೌಡ ಮಾತನಾಡಿ, ಕನ್ನಡ ಭಾಷೆ, ಕನ್ನಡ ಸಾಹಿತ್ಯದ ಪ್ರಚಾರ ಉಳಿಸಿ ಬೆಳೆಸುವ ಕೊರತೆ ಇದ್ದು, ಕನ್ನಡ ಸಾಹಿತ್ಯದ ತೇರನ್ನು ಮುಂದೆ ಎಳೆಯಲು ಇಂತಹ ಕಾರ್ಯಕ್ರಮ ಅವಶ್ಯಕವಾಗಿವೆ. ಯುವ ಸಾಹಿತಿಗಳು ಒಳ್ಳೆಯ ಸಾಹಿತ್ಯ ರಚಿಸಿ ಸಮಾಜಕ್ಕೆ ಕೊಡುಗೆಯಾಗಿ ನೀಡಬೇಕೆಂದರು.
ಶಿವಮಲ್ಲಯ್ಯಮಾತನಾಡಿದರು. ಗಟ್ಟಿಗುಂಡ ಮಹಾದೇವ, ಹೂ.ನಾ. ನಾಗೇಂದ್ರ, ಚಂದ್ರ, ರಮೇಶ್, ಜಯರಾಮ, ಮೇದರ ದೊಡ್ಡಿ ಹನುಮಂತ, ಶೋಭಾ ಸೇರಿದಂತೆ ಹಲವು ಯುವ ಕವಿಗಳು ಕವಿತೆ ವಾಚನ ಮಾಡಿದರು.
ತಾಲೂಕು ಅಧ್ಯಕ್ಷ ಶಿವನಹಳ್ಳಿ ಶಿವಲಿಂಗಯ್ಯ, ಸಿ. ಪುಟ್ಟಸ್ವಾಮಿ, ಕೂ.ಗಿ. ಗಿರಿಯಪ್ಪ, ವ್ಯಾಸಕುಮಾರ್, ಮಾಯಣ್ಣ, ವಿಶ್ವರಾಧ್ಯ, ಪ್ರಸನ್ನಕುಮಾರ್ ಉಪಸ್ಥಿತರಿದ್ದರು.