ಧಾರವಾಡ: ಶ್ರೇಣೀಕೃತ ಸಮಾಜ ವ್ಯವಸ್ಥೆಯ ಎಲ್ಲ ದ್ವಂದ್ವ-ವೈರುಧ್ಯಗಳನ್ನು ಮರೆತು ಸಹೋದರ ಪ್ರೀತಿಯ ವಿಶ್ವ ಕುಟುಂಬಿ ಬದುಕು ಮನುಕುಲದ ಸಂಕಲ್ಪವಾಗಲಿ ಎಂದು ಉಪ್ಪಿನಬೆಟಗೇರಿ ಮೂರುಸಾವಿರ ವಿರಕ್ತಮಠದ ಶ್ರೀಕುಮಾರ ವಿರೂಪಾಕ್ಷ ಸ್ವಾಮೀಜಿ ಹೇಳಿದರು.
ತಿಮ್ಮಾಪುರದ ಶ್ರೀ ವೀರಾಂಜನೇಯಸ್ವಾಮಿ ದೇವಾಲಯದ ಕಾರ್ತಿಕ ದೀಪೋತ್ಸವ ಉದ್ಘಾಟಿಸಿ ಅವರು ಮಾತನಾಡಿದರು. ಬದುಕಿನ ತಾಪತ್ರಯಗಳನ್ನು ಅಳಿದು ಭಕ್ತಿಯ ಬದ್ಧತೆಯಿಂದ ಭಗವತ್ ಸಾನ್ನಿಧ್ಯದಲ್ಲಿ ಲಕ್ಷ್ಯವಹಿಸುವುದೇ ಲಕ್ಷ ದೀಪೋತ್ಸವವಾಗಿದೆ ಎಂದರು.
ಸಾನ್ನಿಧ್ಯ ವಹಿಸಿದ್ದ ಅಮ್ಮಿನಬಾವಿ ಪಂಚಗೃಹ ಹಿರೇಮಠದ ಕಿರಿಯ ಶ್ರೀ ಅಭಿನವ ಶಾಂತಲಿಂಗ ಶಿವಾಚಾರ್ಯ ಸ್ವಾಮೀಜಿ ಮಾತನಾಡಿ, ಸ್ವಾರ್ಥದ ಬದುಕಿನ ದ್ವೇಷ-ಅಸೂಯೆಗಳನ್ನು ಮರೆತು ಪರಸ್ಪರ ಪ್ರೀತಿ, ವಿಶ್ವಾಸ, ಭಾವೈಕ್ಯದ ಸ್ನೇಹ ಭಾವ ಹೊಂದುವ ಜೀವನ ವಿಧಾನವೇ ಎಲ್ಲಾ ಧರ್ಮ ಸಿದ್ಧಾಂತಗಳ ಮೂಲ ಆಶಯವಾಗಿದೆ. ಕಾರ್ತಿಕ ದೀಪೋತ್ಸವ ಎಲ್ಲರಲ್ಲಿ ಅಂತರಂಗದ ಕತ್ತಲೆ ನಿವಾರಿಸಿ ಅರಿವಿನ ಬೆಳಗನ್ನು ಮೂಡಿಸಲಿ ಎಂದು ಹೇಳಿದರು.
ನಯಾನಗರದ ಶ್ರೀ ಅಭಿನವ ಸಿದ್ಧಲಿಂಗ ಸ್ವಾಮೀಜಿ, ಕರ್ನಾಟಕ ರೇಷ್ಮೆ ಮಾರಾಟ ಮಂಡಳಿ ಅಧ್ಯಕ್ಷೆ ಸವಿತಾ ಅಮರಶೆಟ್ಟಿ ಹಾಗೂ ಖ್ಯಾತ ಶಸ್ತ್ರಚಿಕಿತ್ಸಕ ಡಾ| ಎಸ್.ಆರ್. ರಾಮನಗೌಡರ ಮಾತನಾಡಿದರು. ಎಪಿಎಂಸಿ ಮಾಜಿ ಅಧ್ಯಕ್ಷ ಬಸವರಾಜ ಹೊಸೂರ, ಮರೇವಾಡ ಗ್ರಾಪಂ ಅಧ್ಯಕ್ಷೆ ನೀಲವ್ವ ವಗ್ಗರ ಅತಿಥಿಯಾಗಿದ್ದರು. ತಿಮ್ಮಾಪೂರ ರುದ್ರಸ್ವಾಮಿಮಠದ ಬಸಯ್ಯ ಸ್ವಾಮೀಜಿ ಅಧ್ಯಕ್ಷತೆ ವಹಿಸಿದ್ದರು.
ಪಟ್ಟಾ ಧಿಕಾರದ ದ್ವಿದಶಮಾನೋತ್ಸವ ನೆನಪಿನಲ್ಲಿ ಉಪ್ಪಿನಬೆಟಗೇರಿಯ ಶ್ರೀಕುಮಾರ ವಿರೂಪಾಕ್ಷ ಸ್ವಾಮೀಜಿ ಅವರನ್ನು, ರಾಜ್ಯೋತ್ಸವ ಪ್ರಶಸ್ತಿ ಪುರಸ್ಕೃತ ಡಾ| ಎಸ್.ಆರ್. ರಾಮನಗೌಡರ ಹಾಗೂ ಮಲ್ಲನಗೌಡ ಚಿಕ್ಕನಗೌಡರ ಅವರನ್ನು ಗೌರವಿಸಲಾಯಿತು. ಚಿತ್ರಕಲೆ ಮತ್ತು ರಂಗೋಲಿ ಸ್ಪರ್ಧೆಯಲ್ಲಿ ವಿಜೇತರಾದ ವಿದ್ಯಾರ್ಥಿಗಳಿಗೆ ಪಾರಿತೋಷಕ ವಿತರಿಸಲಾಯಿತು. ಬಸನಗೌಡ ಸೋಮನಗೌಡ್ರ, ಲವ-ಕುಶ ಹುಲಗೂರ, ಮಹಾದೇವಗೌಡ ದೊಡ್ಡಗೌಡ್ರ, ಮಂಜುಗೌಡ ಜಟ್ಟಿನಗೌಡ್ರ, ಫಕ್ಕೀರಪ್ಪ ಜಾಲಗಾರ, ಅಡೆಮ್ಮಾ ಜಟ್ಟಿನಗೌಡ್ರ ಇತರರು ಇದ್ದರು. ಡಾ| ಗುರುಮೂರ್ತಿ ಯರಗಂಬಳಿಮಠ ವಂದಿಸಿದರು.