ಸೇಡಂ: ಕಲ್ಯಾಣ ಕರ್ನಾಟಕ ಭಾಗದ ವಿದ್ಯಾರ್ಥಿಗಳಲ್ಲಿಯೂ ಅನೇಕ ಪ್ರತಿಭೆಗಳಿವೆ. ಎಲೆ ಮರೆಯ ಕಾಯಿಯಂತಿರುವ ವಿದ್ಯಾರ್ಥಿಗಳ ಪ್ರತಿಭೆ ಬೆಳಕಿಗೆ ತರುವ ನಿಟ್ಟಿನಲ್ಲಿ ಕೆಲಸ ಮಾಡಬೇಕಾಗಿದೆ ಎಂದು ಸಾಹಿತಿ ಮುಡಬಿ ಗುಂಡೇರಾವ್ ಹೇಳಿದರು.
ಪಟ್ಟಣದ ಕಲಬುರಗಿ ರಸ್ತೆಯಲ್ಲಿರುವ ನಳಂದ ನವೋದಯ ತರಬೇತಿ ಕೇಂದ್ರದ ವಿದ್ಯಾರ್ಥಿಗಳು ನವೋದಯ ಶಾಲೆಗೆ ಆಯ್ಕೆಗೊಂಡ ನಿಮಿತ್ತ ಆಯೋಜಿಸಿದ ಸತ್ಕಾರ ಸಮಾರಂಭದಲ್ಲಿ ಅವರು ಮಾತನಾಡಿದರು.
ವಿದ್ಯಾರ್ಥಿಗಳು ಅಧ್ಯಯನದೊಂದಿಗೆ ಸಂಸ್ಕೃತಿ ಮೈಗೂಡಿಸಿಕೊಳ್ಳುವುದು ಅವಶ್ಯವಾಗಿದೆ. ಇದು ಜೀವನದಲ್ಲಿ ಉನ್ನತ ಸ್ಥಾನಕ್ಕೇರಲು ಪೂರಕವಾಗಲಿದೆ. ನಳಂದ ಕೇಂದ್ರವು ಮಕ್ಕಳಿಗೆ ಉತ್ತಮ ತರಬೇತಿ ನೀಡುತ್ತಿದೆ. ಅದರಂತೆ ಮುಂದಿನ ದಿನಗಳಲ್ಲಿ ತಾಲೂಕಿನ ವಿದ್ಯಾರ್ಥಿಗಳು ದೇಶದ ಅತ್ಯುನ್ನತ ಹುದ್ದೆಗಳಿಗೆ ಆಯ್ಕೆಯಾಗುವ ಸ್ಪರ್ಧಾತ್ಮಕ ಪರೀಕ್ಷೆಗಳು ಎದುರಿಸಲು ಸನ್ನದ್ಧರಾಗಬೇಕು ಎಂದರು.
ಕಾರ್ಯನಿರತ ಪತ್ರಕರ್ತರ ಸಂಘದ ಅಧ್ಯಕ್ಷ ಶರಣು ಮಹಾಗಾಂವ ಮಾತನಾಡಿ, ಕೊರೊನಾ ನಂತರದ ದಿನಗಳಲ್ಲಿ ಖಾಸಗಿ ಶಿಕ್ಷಣ ಸಂಸ್ಥೆಗಳು ನಡೆಸುವುದು ಕಷ್ಟದ ಕೆಲಸವಾಗಿದೆ. ಇಂತಹ ಸಂದರ್ಭದಲ್ಲಿಯೂ ಸಣ್ಣ ಮಕ್ಕಳಿಗೆ ವಸತಿ ವ್ಯವಸ್ಥೆ ಕಲ್ಪಿಸಿ ಸ್ಪರ್ಧಾತ್ಮಕ ಪರೀಕ್ಷೆಗೆ ತರಬೇತಿ ನೀಡುತ್ತಿರುವುದು ಉತ್ತಮ ಕೆಲಸವಾಗಿದೆ ಎಂದರು.
ಸಂಸ್ಥೆಯ ಸಂಸ್ಥಾಪಕ ಕಾಶಪ್ಪ ತೆಲ್ಕಾಪಲ್ಲಿ, ಕಾರ್ಯದರ್ಶಿ ಉಮಾಶ್ರೀ, ಶಿಕ್ಷಕ ನೀಲಕಂಠಪ್ಪ, ಕರವೇ ಅಧ್ಯಕ್ಷ ರಾಮಚಂದ್ರ ಗುತ್ತೇದಾರ, ಗುರುರಾಜ ಹಿರೇಮಠ, ಶ್ರೀಕಾಂತ ರಾಹುಲ್, ಅಂಬಿಕಾ, ಮಲ್ಲಪ್ಪ ಪೂಜಾರಿ, ಜಗದೀಶ್ವರ, ಬಸವಂತು, ಜನಾರ್ದನ, ವೆಂಕಟೇಶ, ಕಿಷ್ಟಪ್ಪ ಇದ್ದರು. ಸೌಮ್ಯ ದೇವೀಂದ್ರಪ್ಪ ಸ್ವಾಗತಿಸಿದರು. ಗುರುರಾಜ್ ಹಿರೇಮಠ ನಿರೂಪಿಸಿದರು. ಭೂಮಿ ಬಾಲರಾಜ್ ವಂದಿಸಿದರು.