ಗೋಕಾಕ: ಮಹಿಳೆಯರು ಜೀವಿಸುವ ಕಲೆಯನ್ನು ಕರಗತ ಮಾಡಿಕೊಳ್ಳುವುದೇ ನಾಯಕತ್ವವಾಗಿದೆ. ಮಹಿಳೆಯರು ಅಂತಹ ನಾಯಕತ್ವವನ್ನು ತಮ್ಮ ಜೀವನದಲ್ಲಿ ಅಳವಡಿಸಿಕೊಂಡು ಸಾಧಕರಾಗಬೇಕು ಎಂದು ದೇಶದ ಮೊದಲ ಮಹಿಳಾ ಐಪಿಎಸ್ ಅಧಿಕಾರಿ ಡಾ| ಕಿರಣ ಬೇಡಿ ಹೇಳಿದರು.
ಶುಕ್ರವಾರ ನಗರದ ಶೂನ್ಯ ಸಂಪಾದನ ಮಠದ ಕಾಯಕಯೋಗಿ ಲಿಂ| ಬಸವ ಮಹಾ ಸ್ವಾಮೀಜಿಗಳವರ 17ನೇ ಪುಣ್ಯಸ್ಮರಣೋತ್ಸವದ ನಿಮಿತ್ತ ಮಠದ ವತಿಯಿಂದ ಹಮ್ಮಿಕೊಂಡ ಮಹಿಳಾ ಸಮಾವೇಶ ಸಮಾರಂಭದಲ್ಲಿ ಶ್ರೀ ಮಠದ ವತಿಯಿಂದ ನೀಡಲಾದ ಕಾಯಕಶ್ರೀ ಪ್ರಶಸ್ತಿ ಸ್ವೀಕರಿಸಿ ಅವರು ಮಾತನಾಡಿದರು.
ವಿದ್ಯಾರ್ಥಿ ಜೀವನದಲ್ಲಿ ತಂತ್ರಜ್ಞಾನದ ಸದು ಪಯೋಗ ಪಡೆದುಕೊಂಡರೆ ಮುಂದೆ ಒಳ್ಳೆಯ ಅವಕಾಶಗಳು ದೊರೆಯುತ್ತವೆ. ಪಾಲಕರು ಸಹ ಮಕ್ಕಳ ಭವಿಷ್ಯದ ಬಗ್ಗೆ ಕಾಳಜಿ ವಹಿಸಿ, ಉನ್ನತ ವ್ಯಾಸಂಗ ಮಾಡಿಸಿ ಸಮಾಜದಲ್ಲಿ ಸ್ವಾವಲಂಬಿ ಯಾಗಿ ಬದುಕಲು ಪ್ರೋತ್ಸಾಹಿಸಬೇಕು ಎಂದರು. ಸ್ತ್ರೀಯರ ಬೆಳವಣಿಯು ಪುರಷರ ಬೆಳೆವಣಿ ಗೆಗಿಂತ ಕಡಿಮೆ ಇರುವುದರಿಂದ ಸ್ತ್ರೀಯರು ಇಂದು ಹಿಂದೆ ಉಳಿದಿದ್ದಾರೆ. ಇದನ್ನು ಹೊಗಲಾಡಿಸಲು ಶಿಕ್ಷಕರು ಮತ್ತು ಪೋಷಕರು ಮುಂದಾಗಬೇಕು.
ಸ್ತ್ರೀಯರು ಎಲ್ಲಾ ರಂಗದಲ್ಲಿ ಸಾಧನೆ ಮಾಡುವ ಸಾಮರ್ಥ್ಯವನ್ನು ಹೊಂದಿದ್ದಾರೆ. ಅದನ್ನು ಅವರಿಗೆ ತೋರಿಸಿಕೊಡುವ ಕಾರ್ಯ ಶಿಕ್ಷಕ ಮತ್ತು ಪಾಲಕರಿಂದ ಆಗಬೇಕು ಅಂದಾಗ ಮಾತ್ರ ಮಹಿಳೆಯರು ಮುಂದೆ ಬರಲು ಸಾಧ್ಯ ಎಂದು ಅಭಿಪ್ರಾಯ ವ್ಯಕ್ತಪಡಿಸಿದರು.
ಮಾನವೀಯತೆಯ ಧರ್ಮ ಸಮಾಜದಲ್ಲಿ ದೊಡ್ಡ ಧರ್ಮವಾಗಿದೆ. ಆತ್ಮನಿರ್ಭರ ಸಮಾಜ ನಿರ್ಮಾಣ ಮಾಡುವಲ್ಲಿ ಶರಣರ ಪಾತ್ರ ಬಹು ಮುಖ್ಯವಾಗಿದೆ. ಬಸವಣ್ಣನವರಂತ ಶರಣರು ಕಾಯಕವೇ ಕೈಲಾಸ ಎಂದು ಸಾರಿದ್ದಾರೆ. ಅಂತಹ ಶರಣರ ತತ್ವಗಳನ್ನು ತಮ್ಮ ಜೀವನದಲ್ಲಿ ಅಳವಡಿಸಿಕೊಂಡು ಸಮಾಜ ಸುಧಾಕರಾಗಬೇಕು ಎಂದರು. ಮಹಿಳಾ ಸಮಾವೇಶವನ್ನು ಸಂಸದೆ ಮಂಗಲ ಅಂಗಡಿ ಉದ್ಘಾಟಿಸಿ, ಮಾತನಾಡಿದರು.
ಇದೇ ಸಂದರ್ಭದಲ್ಲಿ ವಿವಿಧ ಕ್ಷೇತ್ರಗಳ ಸಾಧಕರನ್ನು ಹಾಗೂ ವಿದ್ಯಾರ್ಥಿಗಳನ್ನು ಸತ್ಕರಿಸಿ, ಗೌರವಿಸಲಾಯಿತು. ಓಲೆಮಠ ಜಮಖಂಡಿಯ ಡಾ.ಅಭಿನವಕುಮಾರ ಚೆನ್ನಬಸವ ಸ್ವಾಮಿಗಳು ಸಾನ್ನಿಧ್ಯ ವಹಿಸಿ ಆಶೀರ್ವಚನ ನೀಡಿದರು. ವೇದಿಕೆಯ ಮೇಲೆ ಕಾರ್ಯಕ್ರಮದ ನೇತೃತ್ವ ವಹಿಸಿದ್ದ ಶೂನ್ಯ ಸಂಪಾದನ ಮಠದ ಶ್ರೀ ಮುರುಘರಾಜೇಂದ್ರ ಸ್ವಾಮಿಗಳು, ಡಾ| ವಿಶ್ವನಾಥ್ ಶಿಂದೋಳಿಮಠ, ಯುವ ನಾಯಕಿ ಪ್ರಿಯಾಂಕಾ ಜಾರಕಿಹೊಳಿ, ಸೇವಂತಾ ಮುಚ್ಚಂಡಿಹಿರೇಮಠ, ಸುಸ್ಮಿತಾ ಭಟ್ಟ್ ಉಪಸ್ಥಿತರಿದ್ದರು.ಶಿಕ್ಷಕರಾದ ಆರ್.ಎಲ್.ಮಿರ್ಜಿ, ಎಸ್.ಕೆ ಮಠದ ನಿರೂಪಿಸಿ, ವಂದಿಸಿದರು. ಕೊನೆಯಲ್ಲಿ ಧಾರವಾಡದ ರತಿಕಾ ನೃತ್ಯ ನಿಕೇತನ ತಂಡದವರಿಂದ ಸಾಂಸ್ಕೃತಿಕ ಕಾರ್ಯಕ್ರಮ ಜರುಗಿದವು.