ಗೋಕಾಕ: ರೈತರ ಜಾನುವಾರುಗಳ ಆರೋಗ್ಯ ರಕ್ಷಣೆಗಾಗಿ ಸರಕಾರ ಸಂಚಾರಿ ಪಶುಚಿಕಿತ್ಸಾ ವಾಹನಗಳನ್ನು ಪ್ರಾರಂಭಿಸಿದ್ದು, ಇದರ ಉಪಯೋಗ ಪಡೆದುಕೊಳ್ಳುವಂತೆ ಶಾಸಕ ರಮೇಶ ಜಾರಕಿಹೊಳಿ ಹೇಳಿದರು.
ಅವರು, ಶುಕ್ರವಾರ ನಗರದ ಶಾಸಕರ ಕಚೇರಿ ಆವರಣದಲ್ಲಿ ಪಶುಪಾಲನಾ ಮತ್ತು ಪಶು ವೈದ್ಯಕೀಯ ಸೇವಾ ಇಲಾಖೆಯಿಂದ ಕೇಂದ್ರ ಪುರಸ್ಕೃತ ಯೋಜನೆಯಾದ ಸಂಚಾರಿ ತುರ್ತು ಪಶು ಚಿಕಿತ್ಸಾ ವಾಹನಗಳಿಗೆ ಚಾಲನೆ ನೀಡಿ ಮಾತನಾಡಿದರು.
ರೈತರ ಬದುಕಿನಲ್ಲಿ ಜಾನುವಾರುಗಳ ಪಾತ್ರ ಮಹತ್ವದ್ದಾಗಿದೆ. ಅವುಗಳ ಆರೋಗ್ಯ ರಕ್ಷಣೆಗಾಗಿ ಈ ಯೋಜನೆ ಜಾರಿಗೊಳಿಸಲಾಗಿದ್ದು, ರೈತರು 1962 ಸಹಾಯವಾಣಿಗೆ ಕರೆ ಮಾಡಿದರೆ ಜಾನುವಾರುಗಳು ಇದ್ದಲ್ಲಿಯೇ ವೈದ್ಯರೊಂದಿಗೆ ಈ ವಾಹನಗಳು ಆಗಮಿಸಿ ಚಿಕಿತ್ಸೆ ನೀಡುತ್ತವೆ. ಈ ವ್ಯವಸ್ಥೆಯ ಉಪಯೋಗ ಪಡೆದುಕೊಳ್ಳುವಂತೆ ಕರೆ ನೀಡಿದರು.
ಇದೇ ಸಂದರ್ಭದಲ್ಲಿ 2021-22ನೇಯ ಸಾಲಿನ ಮುಖ್ಯಮಂತ್ರಿಗಳ ಅಮೃತ ಜೀವನ ಯೋಜನೆಯಡಿ ರೈತರಿಗೆ ಹೈನು ರಾಸು ಘಟಕ ಸ್ಥಾಪಿಸಲು ತಾಲೂಕಿನ 12 ಫಲಾನುಭವಿಗಳಿಗೆ ಸಹಾಯ ಧನ ಚೆಕ್ ವಿತರಿಸಲಾಯಿತು. ಪಶು ಪಾಲನಾ ಇಲಾಖೆಯ ಸಹಾಯಕ ನಿರ್ದೇಶಕ ಡಾ| ಮೋಹನ ಕಮತ, ಡಾ| ಶಶಿಕಾಂತ ಕೌಜಲಗಿ, ಡಾ| ಪ್ರವೀಣ ಒಡೆಯರ, ಡಾ| ಧರೆಪ್ಪ ಹೊಸಮನಿ, ಡಾ| ಸುರೇಶ ಗೊಂಡೆ, ಜಿಪಂ ಮಾಜಿ ಸದಸ್ಯ ಟಿ ಆರ್ ಕಾಗಲ, ಶಾಸಕರ ಆಪ್ತಸಹಾಯಕರಾದ ಭೀಮಗೌಡ ಪೋಲಿಸಗೌಡರ, ಕಾಂತು ಎತ್ತಿನಮನಿ, ಮುಖಂಡರಾದ ಅಶೋಕ ಗೋಣಿ, ಭೀಮಶಿ ಭರಮನ್ನವರ, ಈಶ್ವರ ಬಾಗೋಜಿ, ಪ್ರಮೋದ ಜೋಶಿ
ಸೇರಿದಂತೆ ಅನೇಕರು ಇದ್ದರು.