Advertisement

ಶಾಂತಿ ಕಾಪಾಡುವ ನಿಟ್ಟಿನಲ್ಲಿ ವಿಶ್ವಸಂಸ್ಥೆ ಕಾರ್ಯನಿರ್ವಹಿಸಲಿ

12:59 AM Feb 23, 2022 | Team Udayavani |

ಕೊರೊನಾ ಎಂಬ ಮಹಾಮಾರಿ ವಿರುದ್ಧ ಇಡೀ ಜಗತ್ತು ಹೋರಾಟ ಮುಂದುವರಿಸಿದ್ದು, ಇನ್ನೂ ಪರಿಸ್ಥಿತಿ ಮೊದಲಿನ ಹಂತಕ್ಕೆ ಬಂದಿಲ್ಲ. ಈಗಷ್ಟೇ ಮೂರನೇ ಅಲೆಯ ಸುಳಿಯಿಂದ ಜಗತ್ತು ಹೊರಬಂದಿದೆ. ಮುಂದೆ ಯಾವ ರೂಪಾಂತರ ಕಾಡಬಹುದು ಎಂಬ ಆತಂಕವೂ ಜಗತ್ತಿನ ಮುಂದಿದೆ. ಕಳೆದ ಎರಡು ವರ್ಷಗಳಲ್ಲಿ ಇಡೀ ಮನುಕುಲದ ಆತ್ಮವಿಶ್ವಾಸವನ್ನೇ ಕುಂದಿಸಿದ ಮಹಾಮಾರಿ ಇದು. ಈ ಮಹಾಮಾರಿಯಿಂದಾಗಿ ಯುದ್ಧದಲ್ಲಿ ಕಳೆದುಕೊಳ್ಳುವುದಕ್ಕಿಂತ ಹೆಚ್ಚು ಜನರನ್ನು  ಜಗತ್ತು ಕಳೆದುಕೊಂಡಿದೆ ಎಂದರೆ ತಪ್ಪಾಗಲಾರದು.

Advertisement

ಇದುವರೆಗೂ ಕೊರೊನಾ ಜನ್ಮತಾಳಿದ್ದು ಹೇಗೆ ಎಂಬ ವಿಚಾರದಲ್ಲಿ ನಾನಾ ಗೊಂದಲಗಳಿವೆ. ಲ್ಯಾಬ್‌ನಲ್ಲಿ ಸೃಷ್ಟಿಯಾಯಿತೋ ಅಥವಾ ನೈಸರ್ಗಿಕವಾಗಿ ಸೃಷ್ಟಿಯಾಗಿ ಮನುಕುಲವನ್ನು ಕಾಡಿತೋ ಎಂಬ ಅನು ಮಾನ ಇನ್ನೂ ಬಗೆಹರಿದಿಲ್ಲ. ಹೀಗಾಗಿಯೇ ಜಗತ್ತಿನ ಹಲವಾರು ದೇಶಗಳ ದೃಷ್ಟಿ ಚೀನದತ್ತಲೇ ಇದೆ. ಚೀನದ ಲ್ಯಾಬ್‌ವೊಂದರಲ್ಲಿ ಈ ವೈರಸ್‌ ಸೃಷ್ಟಿಯಾಗಿರಬಹುದು ಎಂಬ ಅನುಮಾನಗಳೂ ಇವೆ. ಈ ಬಗ್ಗೆ ಸರಿಯಾದ ಪ್ರಮಾಣದಲ್ಲಿ ತನಿಖೆಗೆ ಚೀನ ಅವಕಾಶ ಮಾಡಿಕೊಟ್ಟಿಲ್ಲ. ಈ ವಿಚಾರದಲ್ಲಿ ವಿಶ್ವ ಆರೋಗ್ಯ ಸಂಸ್ಥೆ ಸಂಪೂರ್ಣವಾಗಿ ಎಡವಿದೆ. ಈ ಸಂದರ್ಭದಲ್ಲೇ ವಿಶ್ವಸಂಸ್ಥೆ ಅಡಿಯಲ್ಲೇ ಬರುವ ವಿಶ್ವ ಆರೋಗ್ಯ ಸಂಸ್ಥೆಯ ಪ್ರಸ್ತುತತೆ ಬಗ್ಗೆ ಚರ್ಚೆಯಾಗಿದ್ದವು ಎಂಬುದು ಬೇರೆ ಮಾತು.

ನೇರವಾಗಿ ವಿಚಾರಕ್ಕೆ ಬರುವುದಾದರೆ ವಿಶ್ವಸಂಸ್ಥೆ ತನ್ನ ಕರ್ತವ್ಯ ಮರೆತು ಬಹಳಷ್ಟು ವರ್ಷಗಳಾಗಿವೆ ಎಂಬುದನ್ನು ಖಡಕ್ಕಾಗಿಯೇ ಹೇಳಬೇಕಾದೀತು. 2ನೇ ಮಹಾಯುದ್ಧದ ಬಳಿಕ ಜಾಗತಿಕವಾಗಿ ಯಾವುದೇ ಯುದ್ಧಗಳಾಗದಿರಲಿ, ಶಾಂತಿ ನೆಲೆಸಲಿ ಎಂಬ ಉದ್ದೇಶದಿಂದ ಸ್ಥಾಪನೆಯಾದ ಈ ವಿಶ್ವಸಂಸ್ಥೆ ಇಂದು ಕೆಲವೇ ಕೆಲವು ದೇಶಗಳ ಕೈಗೊಂಬೆಯಾಗಿದೆ. ಚೀನ ಪ್ರವರ್ಧಮಾನಕ್ಕೆ ಬರುವ ಮುನ್ನ ಅಮೆರಿಕ ಹೇಳಿದಂತೆ ಕೇಳುತ್ತಿದ್ದ ವಿಶ್ವಸಂಸ್ಥೆ, ಈಗ ಚೀನದ ಹಿಡಿತಕ್ಕೂ ಸಿಕ್ಕಿಹಾಕಿಕೊಂಡಿದೆ. ಅಲ್ಲದೇ ಕೇವಲ ಐದು ರಾಷ್ಟ್ರಗಳಿಗಿದ್ದ ಶಾಶ್ವತ ಸದಸ್ಯ ಸ್ಥಾನಮಾನವನ್ನು ಬೇರೆಯವರಿಗೆ ವಿಸ್ತರಿಸಿಲ್ಲ. ವಿಶ್ವಸಂಸ್ಥೆ ಆರಂಭವಾದಾಗ, ಜಾಗತಿಕವಾಗಿ ಕೆಲವೇ ಕೆಲವು ದೇಶಗಳು ಪ್ರಬಲವಾಗಿದ್ದವು. ಆದರೆ ಅನಂತರದ ದಿನದಲ್ಲಿ ಭಾರತ, ಜಪಾನ್‌, ಜರ್ಮನಿ, ಬ್ರೆಜಿಲ್‌ ಸೇರಿದಂತೆ ಹಲವಾರು ದೇಶಗಳು ಮುಂದುವರಿದಿವೆ. ಈ ದೇಶಗಳಿಗೆ  ಭದ್ರತಾ ಮಂಡಳಿಯಲ್ಲಿ ಶಾಶ್ವತ ಸದಸ್ಯ ಸ್ಥಾನಮಾನ ಕೊಡಬೇಕು ಎಂಬ ಬೇಡಿಕೆ ಹಲವಾರು ವರ್ಷಗಳಿಂದ ಹಾಗೆಯೇ ಉಳಿದುಕೊಂಡಿದೆ.

ಈಗ ರಷ್ಯಾ ಮತ್ತು ಉಕ್ರೇನ್‌ ನಡುವೆ ಯುದ್ಧದ ಭೀತಿ ಶುರುವಾಗಿದೆ. ರಷ್ಯಾ ಬೆನ್ನಿಗೆ ಚೀನ ನಿಂತಿದ್ದರೆ, ಉಕ್ರೇನ್‌ ಬೆನ್ನಿಗೆ ಅಮೆರಿಕ ಮತ್ತು ಐರೋಪ್ಯ ದೇಶಗಳು ನಿಂತಿವೆ. ಒಂದು ವೇಳೆ ಯುದ್ಧವಾದರೆ, ಈಗಷ್ಟೇ ಸಹಜ ಸ್ಥಿತಿಗೆ ಮರಳುತ್ತಿರುವ ಆರ್ಥಿಕತೆ ಸಂಪೂರ್ಣ ಕುಸಿಯುವುದು ಖಚಿತ. ಹಾಗೆಯೇ ಜಗತ್ತಿನಾದ್ಯಂತ ನಿರುದ್ಯೋಗ, ಹಸಿವು, ಅಸ್ಥಿರತೆ ತಾಂಡವವಾಡಬಹುದು. ಇದಕ್ಕೆ ವಿರಾಮ ನೀಡಬೇಕು ಎಂದಾದರೆ, ವಿಶ್ವಸಂಸ್ಥೆ ಮಧ್ಯಪ್ರವೇಶಿಸಲೇಬೇಕು.

ಈಗ ವಿಶ್ವಸಂಸ್ಥೆ ಎಲ್ಲ ಪಾಲುದಾರರನ್ನು ಕರೆದು ಚರ್ಚೆ ನಡೆಸಬೇಕು. ಈಗ ಯುದ್ಧವಾದರೆ ಜಗತ್ತಿನ ಸ್ಥಿತಿಯೇ ಹದಗೆಟ್ಟು ಹೋಗುತ್ತದೆ ಎಂಬುದನ್ನು ಮನವರಿಕೆ ಮಾಡಿಕೊಡಬೇಕು. ಯಾವುದೇ ದೇಶಗಳ ಬೆನ್ನಿಗೆ ನಿಲ್ಲದ ಭಾರತದಂಥ ದೇಶಗಳಿಗೆ ವಿಟೋ ಅಧಿಕಾರವಿರುವ ಶಾಶ್ವತ ಸದಸ್ಯ ಸ್ಥಾನಮಾನ ನೀಡಬೇಕು. ಇಲ್ಲದಿದ್ದರೆ ಖಂಡಿತವಾಗಿಯೂ ವಿಶ್ವಸಂಸ್ಥೆ ತನ್ನ ಅಸ್ತಿತ್ವ ಕಳೆದುಕೊಳ್ಳುವುದರಲ್ಲಿ ಯಾವುದೇ ಸಂಶಯವಿಲ್ಲ.

Advertisement
Advertisement

Udayavani is now on Telegram. Click here to join our channel and stay updated with the latest news.

Next