Advertisement

SC: ಶಾಸಕ, ಸಂಸದರ ವಿರುದ್ಧ ಪ್ರಕರಣ ವಿಚಾರಣೆಗೆ ವೇಗ ಸಿಗಲಿ: ಸುಪ್ರೀಂಕೋರ್ಟ್‌

09:57 PM Nov 09, 2023 | Team Udayavani |

ಹೊಸದಿಲ್ಲಿ: ಸಂಸದರು ಮತ್ತು ಶಾಸಕರ ವಿರುದ್ಧ ದಾಖಲಾಗಿರುವ ಪ್ರಕರಣಗಳನ್ನು ತ್ವರಿತವಾಗಿ ವಿಚಾರಣೆ ನಡೆಸಿ ಮುಕ್ತಾಯಗೊಳಿಸಬೇಕು ಎಂದು ದೇಶದ ಹೈಕೋರ್ಟ್‌ಗಳಿಗೆ ಗುರುವಾರ ಸುಪ್ರೀಂಕೋರ್ಟ್‌ ನಿರ್ದೇಶನ ನೀಡಿದೆ.

Advertisement

ಸೀಮಿತ ಅವಧಿಯಲ್ಲಿ ವಿಚಾರಣೆ ಮುಕ್ತಾಯಕ್ಕೆ ಹೈಕೋರ್ಟ್‌ಗಳು ಮೇಲುಸ್ತುವಾರಿ ವಹಿಸಿಕೊಳ್ಳಬೇಕು. ವಿಶೇಷ ಪೀಠಗಳನ್ನು ಸ್ಥಾಪಿಸುವ ಮೂಲಕ ಅವುಗಳನ್ನು ಇತ್ಯರ್ಥಪಡಿಸಬೇಕು ಎಂದಿದೆ. ಇಂಥ ವಿಶೇಷ ಪೀಠಗಳು ಅತ್ಯಂತ ಅಪರೂಪದ ಮತ್ತು ವಿಶೇಷ ಬೆಳವಣಿಗೆಯ ಹೊರತಾಗಿ ಪ್ರಕರಣಗಳ ವಿಚಾರಣೆಯ್ನು ಮುಂದೂಡಬಾರದು ಎಂದು ಮುಖ್ಯ ನ್ಯಾಯಮೂರ್ತಿ ಡಿ.ವೈ. ಚಂದ್ರಚೂಡ್‌, ನ್ಯಾ| ಜೆ.ಬಿ. ಪರ್ದಿವಾಲಾ ಮತ್ತು ನ್ಯಾ| ಮನೋಜ್‌ ಮಿಶ್ರಾ ಅವರನ್ನೊಳಗೊಂಡ ನ್ಯಾಯಪೀಠ ಸೂಚನೆಗಳನ್ನು ನೀಡಿದೆ.

ಸ್ವಯಂಪ್ರೇರಿತ ಪ್ರಕರಣ
ಸಂಸದರು, ಶಾಸಕರ ವಿರುದ್ಧ ಪ್ರಕರಣಗಳು ತ್ವರಿತವಾಗಿ ಇತ್ಯರ್ಥಗೊಳಿಸುವ ನಿಟ್ಟಿನಲ್ಲಿ ಹೈಕೋರ್ಟ್‌ ಮುಖ್ಯ ನ್ಯಾಯಮೂರ್ತಿಗಳು “ಅಪರೂಪದ ಪ್ರಕರಣಗಳಲ್ಲಿ’ ಸ್ವಯಂಪ್ರೇರಿತರಾಗಿ ದೂರು ದಾಖಲಿಸಿಕೊಳ್ಳಬೇಕು. ಅದನ್ನು ಮುಖ್ಯ ನ್ಯಾಯಮೂರ್ತಿಯೇ ಅಥವಾ ಅವರಿಂದ ನಿರ್ದೇಶನಗೊಂಡ ನ್ಯಾಯಮೂರ್ತಿಯೇ ವಿಚಾರಣೆ ನಡೆಸಬೇಕು. ಈ ಮೂಲಕ ತ್ವರಿತ ವಿಚಾರಣೆ ನಡೆಯುವಂತೆ ಮಾಡಬೇಕು ಎಂದು ನ್ಯಾಯಪೀಠ ಹೇಳಿದೆ.

ದಿನವಹಿ ವಿಚಾರಣೆ
ಸಾಧ್ಯವಾದಷ್ಟು ಮಟ್ಟಿಗೆ ಪ್ರತೀ ದಿನವೂ ವಿಚಾರಣೆ ನಡೆಸಬೇಕು. ಗರಿಷ್ಠವೆಂದರೆ ಒಂದು ವರ್ಷದ ಅವಧಿಯಲ್ಲಿ ವಿಚಾರಣೆ ಮುಕ್ತಾಯಗೊಳಿಸಲು ಸಾಧ್ಯವಾಗದಿದ್ದರೆ ಅದಕ್ಕೆ ಕಾರಣಗಳನ್ನು ನೀಡಿ ಮುಖ್ಯ ನ್ಯಾಯಮೂರ್ತಿಗೆ ವರದಿ ಸಲ್ಲಿಸಬೇಕು. ಹೈಕೋರ್ಟ್‌ಗಳು ತಮ್ಮ ವೆಬ್‌ಸೈಟ್‌ಗಳಲ್ಲಿ ಪ್ರಕರಣಗಳ ವಿವರಗಳನ್ನು ನೀಡಬೇಕು ಎಂದು ನ್ಯಾಯಪೀಠ ಸೂಚಿಸಿದೆ.

Advertisement

Udayavani is now on Telegram. Click here to join our channel and stay updated with the latest news.

Next