Advertisement

ಉಗ್ರರಿಗೆ ಹಣಕಾಸು ನಿಲ್ಲಿಸಲಿ

11:31 AM Jun 24, 2019 | mahesh |

ಹೊಸದಿಲ್ಲಿ: ಉಗ್ರರ ವಿರುದ್ಧ ಕಠಿನ ಕ್ರಮ ಕೈಗೊಳ್ಳದ ಪಾಕಿಸ್ಥಾನಕ್ಕೆ ಜಾಗತಿಕ ಹಣಕಾಸು ವಿಚಕ್ಷಣಾ ದಳವು (ಎಫ್ಎಟಿಎಫ್) ತರಾಟೆಗೆ ತೆಗೆದುಕೊಂಡಿದ್ದಕ್ಕೆ ಪ್ರತಿಕ್ರಿಯಿಸಿದ ಭಾರತ, 2019 ಸೆಪ್ಟಂಬರ್‌ ಒಳಗೆ ಪಾಕಿಸ್ಥಾನ ಈ ನಿಟ್ಟಿನಲ್ಲಿ ಕ್ರಮ ಕೈಗೊಳ್ಳಬೇಕು ಎಂದಿದೆ.

Advertisement

ಎಫ್ಎಟಿಎಫ್ ವಿಧಿಸಿದ ಕಾರ್ಯಯೋಜನೆಯನ್ನು ಪಾಕಿಸ್ಥಾನ ನಿಗದಿತ ಅವಧಿಯಲ್ಲಿ ಪೂರ್ಣಗೊಳಿಸಬೇಕು. ಅಷ್ಟೇ ಅಲ್ಲ, ಉಗ್ರವಾದಕ್ಕೆ ಸಂಬಂಧಿಸಿದ ಹಾಗೂ ಉಗ್ರವಾದಕ್ಕೆ ಹಣಕಾಸು ತಡೆಗೆ ಸಂಬಂಧಿಸಿದಂತೆ ವಿಶ್ವಾಸಾರ್ಹ ಪ್ರಗತಿಯನ್ನೂ ಪಾಕಿಸ್ಥಾನ ತೋರಬೇಕಿದೆ ಎಂದು ವಿದೇಶಾಂಗ ಸಚಿವಾಲಯದ ವಕ್ತಾರ ರವೀಶ್‌ ಕುಮಾರ್‌ ಹೇಳಿದ್ದಾರೆ. ಅಷ್ಟೇ ಅಲ್ಲ, ಎಫ್ಎಟಿಎಫ್ ಕ್ರಮವನ್ನು ಭಾರತ ಸ್ವಾಗತಿಸಿದೆ.

ಎಫ್ಎಟಿಎಫ್ ಎಚ್ಚರಿಕೆ: ಶುಕ್ರವಾರ ಸಭೆ ಸೇರಿದ್ದ ಎಫ್ಎಟಿಎಫ್, ಲಷ್ಕರ್‌ ಎ ತೋಯ್ಬಾ, ಜೈಶ್‌ ಎ ಮೊಹಮ್ಮದ್‌ ಮತ್ತು ಇತರ ಉಗ್ರರಿಗೆ ಹಣಕಾಸು ನೆರವು ನೀಡುವುದನ್ನು ತಡೆಯುವಲ್ಲಿ ಪಾಕಿಸ್ಥಾನ ವಿಫ‌ಲವಾಗಿದೆ ಎಂದು ಎಚ್ಚರಿಕೆ ನೀಡಿತ್ತು. ಅಕ್ಟೋಬರ್‌ ಒಳಗೆ ಈ ನಿಟ್ಟಿನಲ್ಲಿ ಕ್ರಮ ಕೈಗೊಳ್ಳಬೇಕು. ಇಲ್ಲವಾದರೆ ಕಠಿನ ಕ್ರಮ ಎದುರಿಸಬೇಕು ಎಂದು ಸೂಚನೆ ನೀಡಲಾಗಿದೆ. ಒಂದು ವೇಳೆ ಪಾಕಿಸ್ಥಾನವು ಯಾವುದೇ ಕ್ರಮ ತೆಗೆದುಕೊಳ್ಳದಿದ್ದಲ್ಲಿ, ಸೆಪ್ಟೆಂಬರ್‌ನಲ್ಲಿ ನಡೆಯಲಿರುವ ಮತ್ತೂಂದು ಸುತ್ತಿನ ಸಭೆಯಲ್ಲಿ ಪಾಕಿಸ್ಥಾನವನ್ನು ಕಪ್ಪು ಪಟ್ಟಿಗೆ ಸೇರಿಸಲಾಗುತ್ತದೆ. ಎಫ್ಎಟಿಎಫ್ ಈಗಾಗಲೇ ಪಾಕಿಸ್ಥಾನಕ್ಕೆ 27 ಅಂಶಗಳ ಕಾರ್ಯಯೋಜನೆಯನ್ನು ನೀಡಿದೆ.

2018 ಅಕ್ಟೋಬರ್‌ನಲ್ಲಿ ನಡೆದ ಸಭೆಯಲ್ಲಿ ಭಾರತವು ಎಫ್ಎಟಿಎಫ್ಗೆ ಪಾಕಿಸ್ಥಾನದಲ್ಲಿನ ಉಗ್ರ ಸಂಘಟನೆಗಳ ಬಗ್ಗೆ ಹೆಚ್ಚುವರಿ ಮಾಹಿತಿ ನೀಡಿತ್ತು. ಇದರಿಂದಾಗಿ ಪಾಕಿಸ್ಥಾನದ ಮೇಲೆ ಒತ್ತಡ ಹೆಚ್ಚಾಗಿದೆ. ಇದಕ್ಕೆ ಪ್ರತಿಕ್ರಿಯೆಯಾಗಿ ಲಷ್ಕರ್‌, ಜೈಶ್‌ ಹಾಗೂ ಜಮಾತ್‌ ಉದ್‌ ದಾವಾ ಮತ್ತು ಇತರ ಉಗ್ರ ಸಂಘಟನೆಗಳ ಮುಖಂಡರನ್ನು ಪಾಕಿಸ್ಥಾನ ಬಂಧಿಸಿತಾದರೂ, ಇವರ ವಿರುದ್ಧ ಭಯೋತ್ಪಾದನೆ ತಡೆ ಕಾಯ್ದೆ ಅಡಿಯಲ್ಲಿ ಪ್ರಕರಣ ದಾಖಲಿಸಿಲ್ಲ. ಬದಲಿಗೆ ಕಾನೂನು ಸುವ್ಯವಸ್ಥೆ ಪಾಲನೆ ಕಾಯ್ದೆ ಅಡಿಯಲ್ಲಿ ಪ್ರಕರಣ ದಾಖಲಿಸಲಾಗಿತ್ತು.

ಹಲವು ದೇಶಗಳ ಆಕ್ಷೇಪ: ಎಫ್ಎಟಿಎಫ್ ಸಭೆಯಲ್ಲಿ ಅಮೆರಿಕ, ರಷ್ಯಾ ಸೇರಿದಂತೆ ಹಲವು ದೇಶಗಳು ಪಾಕಿಸ್ಥಾನದ ನಿಷ್ಕ್ರಿಯತೆಯ ಬಗ್ಗೆ ಆಕ್ಷೇಪ ವ್ಯಕ್ತಪಡಿಸಿವೆ ಎನ್ನಲಾಗಿದೆ. ಅಷ್ಟೇ ಅಲ್ಲ, ಪಾಕಿಸ್ಥಾನದಲ್ಲಿರುವ ಉಗ್ರಗಾಮಿಗಳು ನಡೆಸುವ ಅಂತಾರಾಷ್ಟ್ರೀಯ ಉಗ್ರವಾದದ ಬಗ್ಗೆ ಪಾಕಿಸ್ಥಾನ ಯಾವುದೇ ಕಾಳಜಿಯನ್ನೇ ಹೊಂದಿಲ್ಲ ಎಂಬ ಆಕ್ಷೇಪವೂ ಕೇಳಿ ಬಂದಿದೆ. ಇದರ ಪರಿಣಾಮವಾಗಿಯೇ ಪಾಕ್‌ಗೆ ಕಠಿನ ಎಚ್ಚರಿಕೆಯನ್ನು ನೀಡಲಾಗಿದೆ.

Advertisement

ಕರ್ತಾರ್ಪುರ ಕಾರಿಡಾರ್‌: ಭಾರತದ ಪ್ರಸ್ತಾವ ತಿರಸ್ಕೃತ
ಹೊಸದಿಲ್ಲಿ: ಕರ್ತಾರ್ಪುರ ಕಾರಿಡಾರಿಗೆ ಸಂಬಂಧಿಸಿಯೂ ಪಾಕಿಸ್ಥಾನ ಈಗ ಕ್ಯಾತೆ ತೆಗೆಯಲಾರಂಭಿಸಿದೆ. ಕಾರಿಡಾರ್‌ ಕಾರ್ಯನಿರ್ವಹಣೆ ಕುರಿತು ಹಲವು ಷರತ್ತುಗಳನ್ನು ಪಾಕಿಸ್ಥಾನ ವಿಧಿಸಿರುವುದಲ್ಲದೆ, ಭಾರತ ಮಾಡಿರುವ ಎಲ್ಲ ಪ್ರಸ್ತಾವಗಳನ್ನೂ ತಿರಸ್ಕರಿಸಿದೆ.

ಸಿಕ್ಖರ ಪವಿತ್ರ ಯಾತ್ರಾ ಸ್ಥಳಕ್ಕೆ ಯಾವತ್ತೂ ಪ್ರಯಾಣಿಸಲು ಅನುಕೂಲವಾಗುವಂತೆ, ವರ್ಷಪೂರ್ತಿ ಕರ್ತಾರ್ಪುರ ಕಾರಿಡಾರ್‌ ಅನ್ನು ತೆರೆದಿಡಲು ಕ್ರಮ ಕೈಗೊಳ್ಳಿ ಎಂದು ಭಾರತವು ಮನವಿ ಮಾಡಿತ್ತು. ಆದರೆ, ಅದನ್ನು ತಿರಸ್ಕರಿಸಿರುವ ಪಾಕ್‌, ವರ್ಷಪೂರ್ತಿ ಕಾರಿಡಾರ್‌ ತೆರೆದಿಡಲು ಸಾಧ್ಯವಿಲ್ಲ ಎಂದಿದೆ. ಇದೇ ವೇಳೆ, ಯಾತ್ರಿಗಳಿಗೆ ವೀಸಾರಹಿತ ಹಾಗೂ ಶುಲ್ಕರಹಿತ ಪ್ರಯಾಣಕ್ಕೆ ಅವಕಾಶ ಕಲ್ಪಿಸುವಂತೆ, ಸಾಗರೋತ್ತರ ಭಾರತೀಯ ಕಾರ್ಡ್‌ ಹೊಂದಿರುವವರಿಗೂ ಭೇಟಿಗೆ ಅನುಮತಿ ನೀಡುವಂತೆ, ರಾವಿ ನದಿಗೆ ಸೇತುವೆ ನಿರ್ಮಿಸುವಂತೆ, ವಿಶೇಷ ದಿನಗಳಲ್ಲಿ 10 ಸಾವಿರ ಯಾತ್ರಿಗಳಿಗೆ ಪ್ರವೇಶಾವಕಾಶ ನೀಡುವಂತೆಯೂ ಭಾರತ ಕೋರಿತ್ತು.

ಪಾಕಿಸ್ಥಾನದ ಷರತ್ತುಗಳು
•ರ್ತಾರ್ಪುರದ ಗುರುದ್ವಾರ ದರ್ಬಾರ್‌ ಸಾಹಿಬ್‌ ದರ್ಶನಕ್ಕೆ ಕೇವಲ 700 ಯಾತ್ರಿಗಳಿಗಷ್ಟೇ ಅವಕಾಶ
•ವಿಶೇಷ ಅನುಮತಿ ಪಡೆದು, ಶುಲ್ಕ ಪಾವತಿಸಿಯೇ ಕರ್ತಾರ್ಪುರಕ್ಕೆ ಯಾತ್ರಿಗಳು ಬರಬೇಕು
•ಕೇವಲ ಭಾರತೀಯ ನಾಗರಿಕರಿಗಷ್ಟೇ ಬರಲು ಅನುಮತಿ.ಸಾಗರೋತ್ತರ ಭಾರತೀಯ ಕಾರ್ಡ್‌ ಇರುವವರಿಗೆ ಪ್ರವೇಶವಿಲ್ಲ
•ಕರ್ತಾರ್ಪುರ ಕಾರಿಡಾರ್‌ ಅನ್ನು ವರ್ಷಪೂರ್ತಿ ತೆರೆದಿಡಲು ಆಗುವುದಿಲ್ಲ. ನಿಗದಿತ ಸಮಯದಲ್ಲಷ್ಟೇ ಪ್ರವೇಶಾವಕಾಶ
•ರಾವಿ ನದಿಗೆ ಸೇತುವೆ ನಿರ್ಮಿಸಬೇಕೆಂಬ ಭಾರತದ ಕೋರಿಕೆಯನ್ನೂ ಒಪ್ಪುವುದಿಲ್ಲ

ಭಾರತದ ಹೇಳಿಕೆ ಬೆನ್ನಲ್ಲೇ ಪಾಕ್‌ ಉದ್ಧಟತನ
ಎಫ್ಎಟಿಎಫ್ ಸೂಚಿಸಿರುವ ಕ್ರಮಗಳನ್ನು ಅನುಸರಿಸುವಂತೆ ಭಾರತವು ಪಾಕ್‌ಗೆ ತಾಕೀತು ಮಾಡಿದ ಬೆನ್ನಲ್ಲೇ ಪಾಕಿಸ್ಥಾನವು ಉದ್ಧಟತನ ಪ್ರದರ್ಶಿಸಿದೆ. ‘ಭಾರತದ ಹೇಳಿಕೆಯು ಅಸಂಬದ್ಧ ಹಾಗೂ ಅನಗತ್ಯವಾದದ್ದು’ ಎಂದು ಪಾಕ್‌ ಪ್ರತಿಕ್ರಿಯಿಸಿದೆ. ಜತೆಗೆ, ಭಾರತವು ತನ್ನ ಸಂಕುಚಿತ ಹಾಗೂ ಪಕ್ಷಪಾತೀಯ ಉದ್ದೇಶವನ್ನು ಈಡೇರಿಸಿಕೊಳ್ಳುವ ಸಲುವಾಗಿ ಹಾಗೂ ಪಾಕಿಸ್ಥಾನವನ್ನು ಋಣಾತ್ಮಕವಾಗಿ ಬಿಂಬಿಸಲು ವ್ಯರ್ಥ ಪ್ರಯತ್ನ ಮಾಡುತ್ತಿದೆ. ಎಫ್ಎಟಿಎಫ್ ಪ್ರಕ್ರಿಯೆಗೆ ರಾಜಕೀಯ ಬಣ್ಣ ನೀಡುತ್ತಿರುವ ಭಾರತದ ನಡೆಯನ್ನು ಕೂಡಲೇ ಸದಸ್ಯ ರಾಷ್ಟ್ರಗಳು ವಿರೋಧಿಸಬೇಕು ಎಂದೂ ಪಾಕ್‌ ಆಗ್ರಹಿಸಿದೆ.

Advertisement

Udayavani is now on Telegram. Click here to join our channel and stay updated with the latest news.

Next