Advertisement

ಶಾಲಾ ಸಮವಸ್ತ್ರ ಬಟ್ಟೆಯ ಟೆಂಡರ್‌ ದರ ಹೆಚ್ಚಳವಾಗಲಿ​​​​​​​

06:00 AM Dec 02, 2018 | |

ಶಿವಮೊಗ್ಗ: ಕಳೆದ ಬಾರಿ ಕಡಿಮೆ ದರಕ್ಕೆ ಶಾಲಾ ಮಕ್ಕಳ ಸಮವಸ್ತ್ರದ ಬಟ್ಟೆ ಕೇಳಿದ್ದ ರಾಜ್ಯ ಸರಕಾರ, ಈ ಬಾರಿಯೂ ಇದನ್ನು ಮುಂದುವರಿಸಬಹುದೆಂಬ ಆತಂಕ ನೇಕಾರರನ್ನು ಕಾಡುತ್ತಿದೆ. ಜಿಎಸ್‌ಟಿ, ನೋಟ್‌ ಬ್ಯಾನ್‌ ಹೊಡೆತದಿಂದ ತತ್ತರಿಸಿರುವ ನೇಕಾರರು, ಈ ಬಾರಿಯಾದರೂ ಸರಕಾರ ತಮ್ಮ ಕೈ ಹಿಡಿಯಬಹುದೆಂಬ ನಿರೀಕ್ಷೆಯಲ್ಲಿದ್ದಾರೆ.

Advertisement

ಕಳೆದ ಬಾರಿ ಮೈಸೂರಿನ ವ್ಯಕ್ತಿಯೊಬ್ಬರು ಅತಿ ಕಡಿಮೆ ದರಕ್ಕೆ ಅಂದರೆ, ಮೀಟರ್‌ಗೆ 40ರೂ.ಗೆ ಶಾಲಾ ಮಕ್ಕಳ ಬಟ್ಟೆ ಟೆಂಡರ್‌ ಪಡೆದಿದ್ದರು. ಇದನ್ನೇ ಮುಂದಿಟ್ಟುಕೊಂಡ ಸಾರ್ವಜನಿಕ ಶಿಕ್ಷಣ ಇಲಾಖೆ ಅಧಿಕಾರಿಗಳು ಇದೇ ದರಕ್ಕೆ ಬಟ್ಟೆ ಕೊಡಬೇಕೆಂದು ನೇಕಾರರಿಗೆ ತಿಳಿಸಿದ್ದರು. ಅಲ್ಲದೆ, ಏಪ್ರಿಲ್‌ನಲ್ಲಿ ಟೆಂಡರ್‌ ನೀಡಿದ್ದರಿಂದ ನೇಕಾರರು ಬಟ್ಟೆ ಕೊಡಲು ಸಾಧ್ಯವಾಗದೆ ತಿರಸ್ಕರಿಸಿದ್ದರು. ಪ್ರತಿ ಬಾರಿಯೂ ಅಧಿ ಕಾರಿಗಳು ನವೆಂಬರ್‌, ಡಿಸೆಂಬರ್‌ನಲ್ಲಿ ಸಭೆ ನಡೆಸುತ್ತಾರೆ. ಆದರೆ, ಮಾರ್ಚ್‌, ಏಪ್ರಿಲ್‌ ವೇಳೆಗೆ ಟೆಂಡರ್‌ ಕರೆಯುತ್ತಾರೆ. ಜೂನ್‌ ಒಳಗೆ ಬಟ್ಟೆ ಕೊಡಲು ಕೇಳುತ್ತಾರೆ. ಇಷ್ಟು ಕಡಿಮೆ ಸಮಯದಲ್ಲಿ ಬಟ್ಟೆ ಕೊಡುವುದು ಕಷ್ಟ. ಡಿಸೆಂಬರ್‌ ಅಥವಾ ಜನವರಿ ಒಳಗೆ ಎಲ್ಲ ಪ್ರಕ್ರಿಯೆ ಮುಗಿದರೆ ಅನುಕೂಲವಾಗಲಿದೆ ಎನ್ನುವುದು ನೇಕಾರರ ಮಾತು.

ದರ ಹೆಚ್ಚಿಸಲಿ:
ಕಳೆದ ಬಾರಿ 40ರೂ.ಗೆ ಕೊಡಲಾಗಿತ್ತು. ಇಷ್ಟು ಕಡಿಮೆ ದರದಲ್ಲಿ ಉತ್ತಮ ದರ್ಜೆಯ ಬಟ್ಟೆ ಒದಗಿಸುವುದು ಕಷ್ಟದ ಮಾತು. ಒಂದು ಮೀಟರ್‌ ಬಟ್ಟೆಗೆ ಕನಿಷ್ಠ 50 ರೂ.ಖರ್ಚು ಬರುತ್ತದೆ. ಸರಕಾರ ದೊಡ್ಡ ಕಂಪನಿಗಳ ಲೆಕ್ಕದಲ್ಲಿ ನೇಕಾರರನ್ನು ಪರಿಗಣಿಸಿರುವುದು ದುರಂತ. ಒಂದು ಮೀಟರ್‌ ಬಟ್ಟೆಗೆ 50 ರೂ.ಖರ್ಚು ಬರುತ್ತದೆ. 24ರೂ.ದಾರಕ್ಕೆ, ಕಾರ್ಮಿಕರ ಸಂಬಳ, ಬಣ್ಣ ಕಟ್ಟಲು 7.50 ರೂ., ಟ್ರಾನ್ಸ್‌ಪೊàರ್ಟ್‌ಗೆ 50 ಪೈಸೆ, ಲ್ಯಾಬ್‌ ಟೆಸ್ಟ್‌ ಮತ್ತು ಕಟಿಂಗ್‌ ವೇಸ್ಟ್‌ಗೆ 2.60 ರೂ., ಅಲ್ಲದೆ, ಟೆಂಡರ್‌ ಕೊಡಿಸಿದ್ದಕ್ಕೆ ಜವಳಿ ಮೂಲ ಸೌಕರ್ಯ ಅಭಿವೃದ್ಧಿ ನಿಗಮಕ್ಕೆ 2.36 ರೂ. ಕಮಿಷನ್‌ ಕೊಡಬೇಕಾಗುತ್ತದೆ. ಹಾಗಾಗಿ, ಕಡಿಮೆ ದರಕ್ಕೆ ಕೊಡಬೇಕಾದರೆ ಕ್ವಾಲಿಟಿಯಲ್ಲಿ ರಾಜಿ ಮಾಡಿಕೊಳ್ಳಬೇಕಾಗುತ್ತದೆ. ಹೀಗಾಗಿ ದರ ಹೆಚ್ಚಿಸಿದರೆ ಉತ್ತಮ ಎಂಬುದು ನೇಕಾರರ ಒತ್ತಾಯ.

ಸಾರ್ವಜನಿಕ ಶಿಕ್ಷಣ ಇಲಾಖೆ ಪ್ರತಿ ಬಾರಿ ಬೆಳಗಾವಿ ವಿಭಾಗದ 10 ಜಿಲ್ಲೆಗಳಿಗೆ ಅಂದಾಜು 40 ಲಕ್ಷ ಮೀಟರ್‌ ಬಟ್ಟೆ ಟೆಂಡರ್‌ ನೀಡುತ್ತಿದೆ. 2016-17ರಲ್ಲಿ 30 ಲಕ್ಷ ಮೀಟರ್‌ ಬಟ್ಟೆಗೆ ಟೆಂಡರ್‌ ನೀಡಲಾಗಿತ್ತು. ಮೀಟರ್‌ಗೆ 53ರೂ.ದರ ನಿಗದಿ ಮಾಡಲಾಗಿತ್ತು. 2017-18ರಲ್ಲಿ 25 ಲಕ್ಷ ಮೀಟರ್‌ ಬಟ್ಟೆಯನ್ನು 49ರೂ.ಗೆ ಕೇಳಲಾಗಿತ್ತು. 2018-19ರಲ್ಲಿ 40 ರೂ.ನಿಗದಿ ಮಾಡಲಾಗಿತ್ತು. ಸರಕಾರ ವರ್ಷದಿಂದ ವರ್ಷಕ್ಕೆ ದರವನ್ನು ಕಡಿಮೆ ಮಾಡುತ್ತಿದೆ. ಆದರೆ, ಉತ್ಪಾದನಾ ವೆಚ್ಚ ಮಾತ್ರ ಅ ಧಿಕವಾಗುತ್ತಿದೆ. ಕನಿಷ್ಠ ಮೀಟರ್‌ಗೆ 50ರೂ.ಮಾಡಿದರೆ ಜವಳಿ ಉದ್ಯಮಿಗಳು ಉಸಿರಾಡಬಹುದು ಎನ್ನುತ್ತಾರೆ ಜವಳಿ ಉದ್ಯಮಿ ಕರಿಬಸಪ್ಪ.

ರಾಜ್ಯದಲ್ಲಿ ಪವರ್‌ ಲೂಮ್‌ ನೇಕಾರರು 5 ಸಾವಿರ, ಕೈಮಗ್ಗ ನೇಕಾರರು ಅಂದಾಜು 5 ಸಾವಿರ ಮಂದಿ ಇದ್ದಾರೆ. ಕೈಮಗ್ಗ ನೇಕಾರರಿಗೆ ಪ್ರತಿ ವರ್ಷ ಮುಂಚಿತವಾಗಿಯೇ ಟೆಂಡರ್‌ ನೀಡಲಾಗುತ್ತದೆ. ಅಲ್ಲದೆ, ಕನಿಷ್ಠ 15ರೂ.ಗಳನ್ನು ಹೆಚ್ಚುವರಿಯಾಗಿ ನೀಡಲಾಗುತ್ತದೆ. ಸರಕಾರ ಅವರಿಗೆ ನೀಡಿದಷ್ಟು ಆದ್ಯತೆಯನ್ನು ನಮಗೂ ನೀಡಬೇಕು ಎಂಬುದು ಅವರ ಒತ್ತಾಯ.

Advertisement

ಬೆಳಗಾವಿಯಲ್ಲಿ ಡಿ.5ರಂದು ನಿಗಮದ ವ್ಯವಸ್ಥಾಪಕರ ಜತೆ ಸಭೆಯಿದೆ. ಶಾಲಾ ಮಕ್ಕಳ ಬಟ್ಟೆ ಟೆಂಡರ್‌ನ್ನು ಜನವರಿ ಒಳಗೆ ನೀಡಿದರೆ ಸಾಕಷ್ಟು ಅನುಕೂಲವಾಗುತ್ತದೆ. ಈಗಾಗಲೇ ಆರ್ಥಿಕ ಸಂಕಷ್ಟದಿಂದ ಚೇತರಿಸಿಕೊಳ್ಳುತ್ತಿರುವ ನೇಕಾರರಿಗೆ ಬಲ ನೀಡಿದಂತಾಗುತ್ತದೆ.
– ಮಂಜುನಾಥ್‌, ಜವಳಿ ಉದ್ಯಮಿ, ದಾವಣಗೆರೆ

– ಶರತ್‌ ಭದ್ರಾವತಿ

Advertisement

Udayavani is now on Telegram. Click here to join our channel and stay updated with the latest news.

Next