ಚಿಕ್ಕಮಗಳೂರು: ಸಾತ್ವಿಕ ಪ್ರಜೆಗಳನ್ನು ತಯಾರಿಸುವ ಪ್ರಯೋಗಶಾಲೆಗಳಾಗಿ ದೇವಸ್ಥಾನಗಳು ಕಾರ್ಯನಿರ್ವಹಿಸಬೇಕು. ಏಕಾಗ್ರತೆ ಮತ್ತು ಪ್ರಶಾಂತತೆಯ ತಾಣಗಳಾದ ದೇಗುಲಗಳು ದೇವರ ಇರುವಿಕೆಗಿಂತ ಸಾಕ್ಷಿಪ್ರಜ್ಞೆ ಎಚ್ಚರಿಸುವ ತಾಣಗಳಾಗಬೇಕೆಂದು ಸಾಹಿತಿ ಚಟ್ನಳ್ಳಿ ಮಹೇಶ್ ಹೇಳಿದರು.
ಬ್ಯಾಗದಹಳ್ಳಿ ಗ್ರಾಮದ ಉದ್ಭವರಾಮೇಶ್ವರಸ್ವಾಮಿ ದೇವಸ್ಥಾನ ಜೀರ್ಣೋದ್ಧಾರ ಪ್ರವೇಶೋತ್ಸವದ ಅಂಗವಾಗಿ ಆಯೋಜಿಸಿದ್ದ ಧರ್ಮ ಸಮಾರಂಭದಲ್ಲಿ ಅವರು ಪ್ರಧಾನ ಉಪನ್ಯಾಸ ನೀಡಿದರು.
ಕಲ್ಪನೆ ನಿರೀಕ್ಷೆಗಳಿಗಿಂತ ಮೀರಿ ವಿಜ್ಞಾನ ಬೆಳೆದಿದೆ. ಆದರೂ ವಿಜ್ಞಾನದಿಂದಲೇ ಎಲ್ಲ ಪ್ರಶ್ನೆಗಳಿಗೆ ಉತ್ತರ ಸಿಕ್ಕಿಲ್ಲ. ಸಂಸ್ಕೃತಿ, ಸಂಪ್ರದಾಯ, ಆಧ್ಯಾತ್ಮಕತೆಯಿಂದ ಶಾಂತಿ-ನೆಮ್ಮದಿಯನ್ನು ನಮ್ಮ ಹಿರಿಯರು ಕಂಡುಕೊಂಡಿದ್ದರು. ಭಕ್ತಿ ಭ್ರಮೆ ಅಲ್ಲ. ದೃಢವಾದ ನಂಬಿಕೆಯೆ ಭಕ್ತಿ. ದೇವಾಲಯದ ಒಳಗಿನ ವಿಗ್ರಹದ ಶಕ್ತಿ-ಎದುರು ಕುಳಿತ ಕುಬ್ಜಭಕ್ತನ ನಡುವಿನ ಭಕ್ತಿ ಮಾತಿಗೆ ಸಿಲುಕಿದೆ ಎಂದರು.
ನೈಜವಾದ ಪ್ರಾರ್ಥನೆ ದೇವರಿಗೆ ತಲುಪುತ್ತದೆ. ಅಂತರಂಗದ ಪ್ರೀತಿಗೆ ದೈವಸಾಕ್ಷಾತ್ಕಾರದ ಶಕ್ತಿ ಇದೆ. ನೇರ, ನಿಖರ, ಪ್ರಖರವಾದ ಭಕ್ತಿಯ ಪ್ರಾರ್ಥನೆಯಿಂದ ದೈವಶಕ್ತಿಯನ್ನು ವಶಮಾಡಿಕೊಳ್ಳಬಹುದು. ಶ್ರದ್ಧೆ ಮತ್ತು ಭಕ್ತಿ ಅಗತ್ಯ. ಆದರೆ ಹಠ ಮತ್ತು ದ್ವೇಷ ಬೇಡ. ದೇವಸ್ಥಾನದಲ್ಲಿ ಭಕ್ತಿಯ ಸಾಕ್ಷಾತ್ಕಾರವಾಗುತ್ತದೆ. ಒಳ್ಳೆಯ ವಿಚಾರಗಳಷ್ಟೇ ಇಲ್ಲಿ ಮೂಡಲು ಸಾಧ್ಯ ಎಂದರು.
ದಾನಿ ಗೌರಮ್ಮ ಬಸವೇಗೌಡ ಸಮಾರಂಭದ ಅಧ್ಯಕ್ಷತೆ ವಹಿಸಿ ಮಾತನಾಡಿ, ದೇವರ ಮುಂದೆ ಸ್ವಾರ್ಥದ ಬೇಡಿಕೆಗಳನ್ನು ಇಡುವ ಬದಲು ಸಮಾಜದ ಒಳಿತಿಗೆ ಪ್ರಾರ್ಥಿಸಿದರೆ ಸಾಕಾರವಾಗುತ್ತದೆ. ದೇವರಿಗೂ ಸಹನೀಯವಾಗುತ್ತದೆ. ಜನಸಾಮಾನ್ಯರ ಭಕ್ತಿ ನಂಬಿಕೆಗಳಿಗೆ ದೇವರು, ದೇವಸ್ಥಾನಗಳ ಮೂಲಕ ಭದ್ರಬುನಾದಿ ಹಿರಿಯರು ಹಾಕಿಕೊಟ್ಟಿದ್ದಾರೆ. ಕಷ್ಟನಷ್ಟಗಳನ್ನು ಸಹಿಸಿ ಬಾಳುವ ಶಕ್ತಿ ಭಗವಂತ ಕರುಣಿಸಬೇಕು. ಮಳೆ, ಬೆಳೆ ಚೆನ್ನಾಗಿ ಆಗಿ ಉತ್ತಮ ಬೆಲೆಯೂ ದೊರೆತು ರೈತರ ಬಾಳು ಹಸನಾಗಬೇಕು. ಮೂರುದಿನಗಳ ಪ್ರವೇಶೋತ್ಸವ ಧಾರ್ಮಿಕ ಕಾರ್ಯಕ್ರಮಗಳು ದೇವರಿಗೂ ಪ್ರಿಯವಾಗಿ ಮಳೆ ಸುರಿದಿದೆ ಎಂದರು.
ಶ್ರೀ ಉದ್ಭವ ರಾಮೇಶ್ವರ ದೇವಸ್ಥಾನ ಜೀರ್ಣೋದ್ಧಾರ ಸೇವಾ ಸಮಿತಿ ಅಧ್ಯಕ್ಷ ಎ.ಬಿ.ಸುದರ್ಶನ್ ಸಮಾರಂಭ ಉದ್ಘಾಟಿಸಿದರು.
ಹುಲಿಕೆರೆ ದೊಡ್ಡಮಠದ ಶ್ರೀ ವಿರೂಪಾಕ್ಷಲಿಂಗಶಿವಾಚಾರ್ಯ ಸ್ವಾಮೀಜಿ ಸಾನ್ನಿಧ್ಯ ವಹಿಸಿದ್ದರು.
ಕಾಫಿಮಂಡಳಿ ಮಾಜಿಸದಸ್ಯ ಕೆ.ಕೆ.ಮನುಕುಮಾರ್ ಮತ್ತು ಬ್ಯಾಗದಹಳ್ಳಿ ಗ್ರಾ.ಪಂ.ಸದಸ್ಯ ಹಾಲೇಶ್ ಮಾತನಾಡಿದರು.
ಕಾಫಿ ಬೆಳೆಗಾರ ಎ.ಬಿ.ರವಿಶಂಕರ್, ಜಿ.ಪಂ.ಸದಸ್ಯ ಸೋಮಶೇಖರ, ಅಲ್ಲಂಪುರ ಗ್ರಾ.ಪಂ.ಅಧ್ಯಕ್ಷೆ ಗಾಯತ್ರಿ, ಟಿಪಿಎಸ್ ಸದಸ್ಯೆ ದಾಕ್ಷಾಯಣಿ, ಬ್ಯಾಗದಹಳ್ಳಿ ಗ್ರಾ.ಪಂ.ಸದಸ್ಯೆ ಸಿ.ಜೆ.ಲೀಲಾ ಪರಮೇಶ್, ಸ್ವಸಹಾಯ ಸಂಘದ ಪುಷ್ಪಾ, ಜೀರ್ಣೋದ್ಧಾರ ಸಮಿತಿಯ ಸ್ವಾಮಿ ಮತ್ತಿತರರು ಮುಖ್ಯಅತಿಥಿಗಳಾಗಿದ್ದರು.
ಭಗವತ್ ಕೃಪೆಗೆ ಭಕ್ತಿ ಮುಖ್ಯ ಕಾರಣ. ನಿರ್ಮಲವಾದ ಮನಸ್ಸಿನಿಂದ ನೆನೆಸಿದರೆ ಭಗವಂತನಿಗೆ ತಲುಪುತ್ತದೆ. ನಿತ್ಯ, ನಿರಂತರ ಪೂಜೆಯ ಜೊತೆಗೆ ವಾರಕ್ಕೊಮ್ಮೆಯಾದರೂ ಭಜನೆ, ಸತ್ಸಂಗಗಳು ನಡೆಯಬೇಕು. ಸಂಸ್ಕಾರದಿಂದ ಪದಾರ್ಥ ಪ್ರಸಾದವಾಗುತ್ತದೆ. ಹತ್ತಿ ಬಟ್ಟೆಯಾಗುತ್ತದೆ. ಅಕ್ಕಿ ಅಕ್ಷತೆ ಎನಿಸಿಕೊಳ್ಳುತ್ತದೆ. ಮಾತು ಮಂತ್ರವಾಗುತ್ತದೆ. ದೇವಸ್ಥಾನಗಳು ಸಂಪ್ರದಾಯ -ಸಂಸ್ಕೃತಿಗಳನ್ನು ಪೋಷಿಸುವ ತಾಣಗಳಾಗಬೇಕು
• ಹುಲಿಕೆರೆ ದೊಡ್ಡಮಠದ ಶ್ರೀ ವಿರೂಪಾಕ್ಷಲಿಂಗಶಿವಾಚಾರ್ಯ ಸ್ವಾಮೀಜಿ