ಕೋಲಾರ: ಕೋಲಾರ ಕ್ಷೇತ್ರದಲ್ಲಿ ಗುಂಪುಗಾರಿಕೆ ಇಲ್ಲ ಎಂದು ಹೇಳಲಾರೆ, ಸಿದ್ದರಾಮಯ್ಯ ಜನಸಮೂಹದ ನಾಯಕ, ಜನರ ನಾಡಿಮಿಡಿತ ಅರಿತವರು. ಅವರು ಎಲ್ಲಿ ಚುನಾವಣೆಗೆ ನಿಲ್ಲಬೇಕು ಎಂಬುದನ್ನು ಪಕ್ಷದ ಹೈಕಮಾಂಡ್ ನಿರ್ಧರಿಸುತ್ತದೆ ಎಂದು ಮಾಜಿ ಸಭಾಪತಿ ವಿ.ಆರ್.ಸುದರ್ಶನ್ ತಿಳಿಸಿದರು.
ತಾಲೂಕಿನ ವೇಮಗಲ್‌ನಲ್ಲಿ ಸುದ್ದಿಗಾರರೊಂದಿಗೆ ಮಾತನಾಡಿ, ಚುನಾವಣಾ ಪ್ರಚಾರ ಕೆಪಿಸಿಸಿಯಿಂದ ಅಧಿಕೃತವಾಗಿ ಘೋಷಣೆಯಾಗಿಲ್ಲ, ನ.13ರಂದು ಸಿದ್ದರಾಮಯ್ಯ ಸೀತಿ ಗ್ರಾಮಕ್ಕೆ ಭೇಟಿ ನೀಡಲಿದ್ದಾರೆ. ಅವರು ದಿ.ಬೈರೇಗೌಡರ ಜತೆಯಲ್ಲಿ ರಾಜಕಾರಣ ಮಾಡಿದವರಾಗಿದ್ದು, ಅವರ ಸಮಾಧಿಗೂ ಪೂಜೆ ಸಲ್ಲಿಸಲಿದ್ದಾರೆ. ನಂತರ ಕೋಲಾರಮ್ಮ ದೇವಾಲಯಕ್ಕೂ ಭೇಟಿ ನೀಡಲಿದ್ದಾರೆ ಎಂದು ಹೇಳಿದರು.
ಕೋಲಾರ ವಿಧಾನಸಭಾ ಕ್ಷೇತ್ರದಲ್ಲಿ ಕಳೆದ 2014, 2018ರಲ್ಲಿ ನಾನೂ ಸ್ಪರ್ಧಿಸಲು ಬಯಸಿದ್ದೆ, ನಾನೂ ಟಿಕೆಟ್ ಆಕಾಂಕ್ಷಿಯೇ ಎಂದ ಸುದರ್ಶನ್, ಸಿದ್ದರಾಮಯ್ಯ ಬರುವುದಾದರೆ ಸ್ವಾಗತ. ಆದರೆ, ಅದಕ್ಕೆ ಅವರೂ ಅರ್ಜಿ ಹಾಕಬೇಕು. ಚುನಾವಣಾ ಸಮಿತಿ ಅದನ್ನು ಕೆಪಿಸಿಸಿಗೆ ನೀಡಿ, ಅಲ್ಲಿಂದ ಎಐಸಿಸಿ ಹಂತದಲ್ಲಿ ಸ್ಕ್ರೀನಿಂಗ್ ಕಮಿಟಿ ಇದ್ದು, ನಂತರ ಪಕ್ಷ ತೀರ್ಮಾನ ಕೈಗೊಳ್ಳುತ್ತದೆ ಎಂದರು.
ಕೋಲಾರದಿಂದ ನಾನು ಸ್ಪರ್ಧಿಸಲು ಬಯಸಿರುವೆ, ಇಲ್ಲಿನ ಜನರು, ಕಾಂಗ್ರೆಸ್ ಕಾರ್ಯಕರ್ತರ ಒತ್ತಾಯವೂ ಇದೆ. ಸಿದ್ದರಾಮಯ್ಯ ಬರಲಿ, ಇಲ್ಲವಾದಲ್ಲಿ ನನಗೂ ಅವಕಾಶ ನೀಡಲು ಪಕ್ಷವನ್ನು ಕೋರುವೆ ಎಂಬ ಸ್ಪರ್ಧೆ ಇಂಗಿತ ವ್ಯಕ್ತಪಡಿಸಿದರು.