Advertisement
ಒಂದೆಡೆ ಮಕ್ಕಳು ಶಾಲೆಗೆ ಹೋಗಲು ಸಾಧ್ಯವಾಗದ ಪರಿಸ್ಥಿತಿ, ಇನ್ನೊಂದೆಡೆ ಮನೆಯಲ್ಲಿ ಆನ್‌ಲೈನ್ ಶಿಕ್ಷಣಕ್ಕೆ ಅಗತ್ಯವಾದ ಆಧುನಿಕ ತಂತ್ರಜ್ಞಾನ ಸಾಧನ, ವ್ಯವಸ್ಥೆಗಳನ್ನು ಮಕ್ಕಳಿಗೆ ಒದಗಿಸಲಾಗದ ಪರಿಸ್ಥಿತಿ. ಇನ್ನು ಈ ಸೌಲಭ್ಯಗಳನ್ನು ಒದಗಿಸಿಕೊಟ್ಟರೂ ನೆಟ್‌ವರ್ಕ್ ಎಂಬ “ಪೆಡಂಭೂತ’ ಕಾಡಿದ್ದು ಸುಳ್ಳಲ್ಲ. ಇಂಥ ಅನಿವಾರ್ಯ ಪರಿಸ್ಥಿತಿಯಲ್ಲಿ ಪಟ್ಟಣದಲ್ಲಿನ ಶ್ರೀಮಂತ ಮತ್ತು ಮಧ್ಯಮ ವರ್ಗದ ಕುಟುಂಬಗಳ ಮಕ್ಕಳು ಮನೆಯಲ್ಲಿಯೇ ಕುಳಿತು ಆನ್‌ಲೈನ್ ವ್ಯವಸ್ಥೆಯ ಮೂಲಕ ಕಲಿಯುವಲ್ಲಿ ಸಫಲ ರಾದರೆ, ಬಡಕುಟುಂಬಗಳ ಹಾಗೂ ಹಳ್ಳಿಗಾಡು ಮತ್ತು ಗ್ರಾಮೀಣ ಭಾಗದ ಅದೆಷ್ಟೋ ಮುಗ್ಧ ಮಕ್ಕಳು ಆಯಾ ತರಗತಿ ಯಲ್ಲಿನ ವಿವಿಧ ಪಾಠ ವಿಷಯಗಳನ್ನು ಅರ್ಥೈಸಿಕೊಳ್ಳಲು ಶಾಲೆಯ ಬಾಗಿಲಿನ ತೆರೆಯುವಿಕೆಯನ್ನೇ ಎದುರು ನೋಡಬೇಕಾ ದಂಥ ಸಂದಿಗ್ಧದಲ್ಲಿ ಸಿಲುಕುವಂತಾಯಿತು.
Related Articles
Advertisement
ಬಾಗುವ ಗಿಡಕ್ಕೆ ಕೋಲೇ ಆಧಾರ. ಅದೇ ರೀತಿ ಮಕ್ಕಳ ಸರ್ವಾಂಗೀಣ ಅಭಿ ವೃದ್ಧಿಗೆ ಶಿಕ್ಷಕರೇ ಆಧಾರ. ಈಗಾಗಲೇ ಆನ್‌ಲೈನ್/ಆಫ್‌ಲೈನ್, ಮೊಬೈಲ್/ ದೂರದರ್ಶನವೆಂದು ಮಕ್ಕಳು ಸಾಕಷ್ಟು ಕಡೆಗೆ ವಾಲಿಯಾಗಿದೆ. ಹೀಗೆ ವಾಲಿರುವ ಅವರ ಚಿತ್ತಕ್ಕೆ ಶಿಕ್ಷಕ ಈಗ ಊರುಗೋಲಿನಂತೆ ಆಧಾರ ನೀಡಬೇಕಾಗಿದೆ. ಭೌತಿಕ ತರ ಗತಿಗಳಲ್ಲಿ ಅವರನ್ನು ಪಾಠದತ್ತ ಆಕರ್ಷಿಸ ಬೇಕಾದದ್ದು ಅಗತ್ಯ. ಪಠ್ಯಗಳನ್ನು ಕಲಿಯಲು ಅನುಕೂಲವಾಗುವಂಥ ವಾತಾವರಣ ಒದಗಿಸಬೇಕಾಗಿದೆ. ಈ ನಿಟ್ಟಿನಲ್ಲಿ ಶಿಕ್ಷಕರು ಬಹಳಷ್ಟು ತಯಾರಿಯ ಜತೆಗೆ ಮಕ್ಕಳ ಉತ್ಸಾಹವನ್ನೂ ಹೆಚ್ಚಿಸಬೇಕಾಗಿದೆ.
ಈವರೆಗೆ ಭೌತಿಕ ತರಗತಿಗಳು ಪ್ರಾರಂಭ ವಾಗದಿರಲು ನೇರವಾಗಿ ಕಾರಣವಾದ ಕೊರೊನಾ ಮಹಾಮಾರಿಯ ಬಗೆಗೆ ಮಕ್ಕಳೂ ಒಂದಿಷ್ಟು ತಿಳಿದುಕೊಂಡಿದ್ದು ಸಹಜವಾಗಿಯೇ ಮಕ್ಕಳು ಮತ್ತವರ ಹೆತ್ತವರಲ್ಲೂ ಈ ಸಾಂಕ್ರಾಮಿಕದ ಬಗೆಗೆ ಭೀತಿ ಇದೆ. ಇದನ್ನು ಹೋಗಲಾಡಿಸುವ ಕಾರ್ಯ ಶಿಕ್ಷಕ ವರ್ಗದಿಂದಾಗಬೇಕಿದೆ. ಪ್ರತಿಯೊಬ್ಬ ಮಗುವಿನ ಭವಿಷ್ಯ ಉಜ್ವಲವಾಗಲು, ಶಾಲಾ ಭೌತಿಕ ತರಗತಿಗಳಿಗೆ ಮಗದೊಮ್ಮೆ ಒಗ್ಗಿಕೊಳ್ಳಲು ಅವರಲ್ಲಿ ಆತ್ಮ ವಿಶ್ವಾಸ ತುಂಬಿಸಬೇಕಾಗಿದೆ. ಶಾಲೆಯಲ್ಲಿರುವ ಶಿಕ್ಷಕರ ಹಾಗೂ ಮಕ್ಕಳ ಸಂಖ್ಯೆಗನು ಗುಣವಾಗಿ ಭೌತಿಕ ತರಗತಿಗಳನ್ನು ಪ್ರಾರಂಭಿಸಲು ದಿಟ್ಟ ನಿರ್ಧಾರ ಕೈಗೊಂಡ ಸರಕಾರದ ಜತೆ ಶಿಕ್ಷಕರು ಸ್ಪಂದಿಸಬೇಕಾಗಿದೆ.
ಶಾಲೆಗಳಲ್ಲಿ ಶಿಕ್ಷಕರ ಕೊರತೆ, ಭೌತಿಕ ಸೌಲಭ್ಯಗಳ ಕೊರತೆಯ ಜತೆಗೆ ಮಕ್ಕಳು ಶಾಲೆಗೆ ಬರುವಾಗ ಮಾಮೂಲಿ ಶೀತಕ್ಕೂ ಹೆದರುವ ಇನ್ನೊಂದು ಸಮಸ್ಯೆಯೂ ಬಂದೊದಗಿದೆ. ಸರಕಾರ ಅತಿಥಿ ಶಿಕ್ಷಕರನ್ನಾದರೂ ನೇಮಕಾತಿ ಮಾಡಿಕೊಳ್ಳುವ ಮೂಲಕ ಶಾಲೆ ಗಳಲ್ಲಿನ ಶಿಕ್ಷಕರ ಕೊರತೆಯ ಸಮಸ್ಯೆಯನ್ನು ನಿವಾರಿಸಬೇಕಿದೆ. ಇನ್ನು ಕೊರೊನಾ ಹರಡದಂತೆ ಗ್ರಾ.ಪಂ.ಗಳು ಶಾಲೆಯ ಜತೆ ಕೈಜೋಡಿಸಬೇಕಾಗಿದೆ. ಈಗಾಗಲೇ ಗ್ರಾ.ಪಂ.ಗಳಿಂದ ಶಾಲೆಗಳಿಗೆ ಸೂಕ್ತ ಸ್ಪಂದನೆ ಲಭಿಸುತ್ತಿದೆಯಾದರೂ ಇದೀಗ ಶಾಲೆಗಳಲ್ಲಿ ತರಗತಿಗಳು ಪುನರಾ ರಂಭಗೊಂಡಿರುವ ಹಿನ್ನೆಲೆಯಲ್ಲಿ ವಾರಕ್ಕೆ ಒಮ್ಮೆಯಾದರೂ ಸಂಪೂರ್ಣ ಸ್ಯಾನಿಟೈ ಸೇಶನ್ ಮತ್ತು ಶಾಲಾ ಸ್ವತ್ಛತೆಗೆ ಬೇಕಾಗುವ ಸಲಕರಣೆಗಳನ್ನು ಒದಗಿಸಬೇಕು. ಈ ಕಾರ್ಯದಲ್ಲಿ ಶಿಕ್ಷಕರು, ಎಸ್.ಡಿ.ಎಂ.ಸಿ. ಸದಸ್ಯರು ಕೈ ಜೋಡಿಸಬೇಕಾಗಿದೆ.
ಕೋವಿಡ್ ಜತೆಗಿನ ಜೀವನ ಅನಿ ವಾರ್ಯವಾಗಿರುವ ಈ ಪರಿಸ್ಥಿತಿಯಲ್ಲಿ ಮಕ್ಕಳ ಶಿಕ್ಷಣವೂ ಕೂಡಾ ಭೌತಿಕವಾಗಿ ಮತ್ತು ಮುಂಜಾಗ್ರತ ನಿಯಮಗಳ ಜತೆಗೆಆಗಬೇಕಾಗಿದೆ. ಈ ನಿಟ್ಟಿನಲ್ಲಿ ಈಗಾಗಲೇ ವಿದ್ಯಾಸಂಸ್ಥೆಗಳು ತೆರೆದಿವೆ. ಏನೇ ಆಗಲಿ ಪ್ರತಿಯೊಂದೂ ಮಗುವಿಗೂ ಉಚಿತ ಮತ್ತು ಮೌಲ್ಯಯುತ ಶಿಕ್ಷಣ ಲಭಿಸುವಂತಾಗಬೇಕಿದೆ. ಶಾಲೆಗಳಲ್ಲಿ ಶಿಕ್ಷಕರಿಗೆ ಮಕ್ಕಳನ್ನು ಮುಖಾಮುಖೀ ನೋಡಿ ಅವರ ಆನಂದವನ್ನು ಹೆಚ್ಚಿಸುವ ಅದೃಷ್ಟಮತ್ತೆ ಒದಗಿ ಬಂದಿದೆ. ಇದು ಕೇವಲ ಶಿಕ್ಷಕರಿಗೆ ಮಾತ್ರವಲ್ಲದೆ ಇಡೀ ವ್ಯವಸ್ಥೆಯ ಪಾಲಿಗೆ ಸವಾಲಾಗಿದ್ದು ಸಮಾಜ ಕೈಜೋಡಿಸಿದಲ್ಲಿ ಈ ಸವಾಲನ್ನು ಸಮರ್ಥ ವಾಗಿ ಎದುರಿಸಬಹುದಾಗಿದೆ. ಮಕ್ಕಳ ಸರ್ವಾಂಗೀಣ ಬೆಳವಣಿಗೆಗೆ ಶಿಕ್ಷಣ ಇಲಾಖೆ, ಶಿಕ್ಷಕರು, ಹೆತ್ತವರು, ಊರಿನ ಜನರು ಒಗ್ಗಟ್ಟಾಗಿ ಶ್ರಮಿಸೋಣ.
-ಪ್ಲೇವಿಯಾ ಡಿ’ಸೋಜಾಶಿಕ್ಷಕಿ, ಸ. ಹಿ. ಪ್ರಾ. ಶಾಲೆ ಫಂಡಿಜೆವಾಳ್ಯ, ಬೆಳ್ತಂಗಡಿ