Advertisement

ವಿದ್ಯಾರ್ಥಿಗಳಲ್ಲಿಯೂ ಪೊಲೀಸ್‌, ಕಾನೂನು ತಿಳಿವಳಿಕೆ ಇರಲಿ

01:12 AM Aug 04, 2019 | Sriram |

ಉಡುಪಿ: ದಿನನಿತ್ಯದ ಕಾನೂನು, ಪೊಲೀಸರ ಕರ್ತವ್ಯದ ಕುರಿತು ವಿದ್ಯಾರ್ಥಿಗಳಿಗೂ ತಿಳಿವಳಿಕೆ ಇರಬೇಕು. ಇದು ಉತ್ತಮ ಸಮಾಜ ನಿರ್ಮಾಣಕ್ಕೆ ಸಹಕಾರಿಯಾಗುತ್ತದೆ ಎಂದು ಉಡುಪಿ ಎಎಸ್‌ಪಿ ಕುಮಾರಚಂದ್ರ ಹೇಳಿದರು.

Advertisement

ಆ.3ರಂದು ಮಣಿಪಾಲ ಪ್ರಗತಿ ನಗರದಲ್ಲಿರುವ ಕೇಂದ್ರೀಯ ವಿದ್ಯಾಲಯದಲ್ಲಿ ‘ಸ್ಟೂಡೆಂಟ್ ಪೊಲೀಸ್‌ ಕೆಡೆಟ್’ ಉದ್ಘಾಟಿಸಿ ಅವರು ಮಾತನಾಡಿದರು.

ಪೊಲೀಸರ ಕರ್ತವ್ಯದ ಬಗ್ಗೆ ತಿಳಿದುಕೊಂಡರೆ ವಿದ್ಯಾರ್ಥಿಗಳು ಮತ್ತು ಸಾರ್ವಜನಿಕರಿಗೆ ತಮ್ಮ ಜವಾಬ್ದಾರಿ ಏನು ಎಂಬುದು ಕೂಡ ತಿಳಿಯುತ್ತದೆ. ಹಕ್ಕುಗಳು ಇರುವಂತೆ ಕರ್ತವ್ಯಗಳು ಕೂಡ ಇರುತ್ತವೆ. ಅವುಗಳನ್ನು ಕೂಡ ಪಾಲಿಸಬೇಕು. ಕೆಲವೊಮ್ಮೆ ಪೊಲೀಸರು ಕಾನೂನು ಪ್ರಕಾರ ಕ್ರಮ ಕೈಗೊಂಡಾಗ ಕೆಲವರ ಟೀಕೆಗೆ ಒಳಗಾಗಬೇಕಾಗುತ್ತದೆ. ಆದರೆ ಪೊಲೀಸರು ಕಾನೂನು ಪಾಲನೆಗಾಗಿ ಆ ರೀತಿ ಮಾಡುತ್ತಿದ್ದಾರೆ ಎಂಬುದನ್ನು ಅರಿತುಕೊಳ್ಳುವುದು ಅಗತ್ಯ. ಕಾನೂನು ಕಾರ್ಯಗತಗೊಳಿಸಲು ಪೊಲೀಸರು ಕಠಿಣವಾಗಿ ವರ್ತಿಸುವುದು ಅನಿವಾರ್ಯವಾಗುತ್ತದೆ ಎಂದು ಕುಮಾರಚಂದ್ರ ಹೇಳಿದರು.

ತಪ್ಪಿಗೆ ಶಿಕ್ಷೆ
ಯಾವ ತಪ್ಪಿಗೆ ಯಾವ ಶಿಕ್ಷೆ ಎಂಬ ಪರಿಜ್ಞಾನ ವಿದ್ಯಾರ್ಥಿ ಸಮುದಾಯದಲ್ಲಿಯೂ ಇರಬೇಕು. ಒಂದು ವೇಳೆ ಹೆತ್ತವರು ಕಾನೂನು ಉಲ್ಲಂಘನೆ ಮಾಡುತ್ತಿದ್ದರೆ ಅವರಿಗೆ ಅರಿವು ಮೂಡಿಸುವ ಕೆಲಸವನ್ನು ಕೂಡ ವಿದ್ಯಾರ್ಥಿಗಳು ಮಾಡಬೇಕು. ಒಂದೊಂದು ಮನೆ ಸುಧಾರಣೆಯಾಗುತ್ತಾ ಬಂದರೆ ಪೊಲೀಸರ ಕೆಲಸಗಳು ಕೂಡ ಕಡಿಮೆಯಾಗುತ್ತವೆ. ಇತ್ತೀಚಿನ ದಿನಗಳಲ್ಲಿ ಹಲವು ಮಾದಕ ದ್ರವ್ಯ ಪ್ರಕರಣಗಳಲ್ಲಿ ವಿದ್ಯಾರ್ಥಿಗಳು ಭಾಗಿಯಾಗಿರುವುದು ಗೊತ್ತಾಗಿದೆ. ವಿದ್ಯಾರ್ಥಿಗಳು ದೇಶದ ಪ್ರಜೆಗಳು ಮಾತ್ರವಲ್ಲ ಈ ಯುವಸಮುದಾಯ ನಮ್ಮ ದೇಶದ ಸಂಪತ್ತು. ಇದರ ಸದುಪಯೋಗವಾಗಬೇಕು. ಕಾನೂನು ಪಾಲನೆಯಲ್ಲಿ ಸಮಾಜ ಪೊಲೀಸರಿಗೆ ಸಹಕಾರ ನೀಡಬೇಕು ಎಂದು ಕುಮಾರಚಂದ್ರ ಹೇಳಿದರು.

ಉಡುಪಿ ವಲಯ ಬಿಇಒ ಮಂಜಳಾ ಅವರು ಮಾತನಾಡಿ, ಮಕ್ಕಳನ್ನು ಸದೃಢವಾಗಿ ಮೌಲ್ಯಯುತ ಪ್ರಜೆಗಳನ್ನಾಗಿ ರೂಪಿಸಲು ಶಾಲೆಗಳಲ್ಲಿ ವಿವಿಧ ಕಾರ್ಯಕ್ರಮಗಳನ್ನು ಹಮ್ಮಿಕೊಳ್ಳಲಾಗುತ್ತಿದೆ. ಇದೀಗ ಸ್ಟೂಡೆಂಟ್ ಕೆಡೆಟ್ ಪೊಲೀಸ್‌ ಕೂಡ ಜಿಲ್ಲೆಯ ಹಲವು ಶಾಲೆಗಳಲ್ಲಿ ಆರಂಭಗೊಳ್ಳುತ್ತಿದೆ ಎಂದು ಹೇಳಿದರು.

Advertisement

ಪ್ರಾಂಶುಪಾಲ ಎಚ್.ನಾರಾಯಣ ರಾವ್‌ ಮಾತನಾಡಿ, ಸ್ಟೂಡೆಂಟ್ ಪೊಲೀಸ್‌ ಕೆಡೆಟ್ ಕಾರ್ಯಕ್ರಮದಲ್ಲಿ ಈ ವರ್ಷ 8ನೇ ತರಗತಿಯ ವಿದ್ಯಾರ್ಥಿಗಳು, ಮುಂದಿನ ವರ್ಷ 9ನೇ ತರಗತಿ ವಿದ್ಯಾರ್ಥಿಗಳು ತರಬೇತಿ ಪಡೆಯಲಿದ್ದಾರೆ. ರಾಜ್ಯ ಹಾಗೂ ಹೊರ ರಾಜ್ಯಗಳಿಗೆ ಪ್ರವಾಸ ಮಾಡಿ ಪೊಲೀಸ್‌ ಇಲಾಖೆಯ ಕಾರ್ಯಗಳ ಕುರಿತು ಮಾಹಿತಿ ಪಡೆಯಲಿದ್ದಾರೆ ಎಂದು ತಿಳಿಸಿದರು.

ಶಿಕ್ಷಣ ಇಲಾಖೆಯ ಅಧಿಕಾರಿ ಉಮಾ ಪಿ. ಉಪಸ್ಥಿತರಿದ್ದರು. ಶಿಕ್ಷಕಿ ಆಶಾರಾಣಿ ವಂದಿಸಿದರು. ವಿದ್ಯಾರ್ಥಿಗಳಾದ ರಿತಿಕಾ ಸ್ವಾಗತಿಸಿ ಮೋಹಕ ವಂದಿಸಿದರು.

Advertisement

Udayavani is now on Telegram. Click here to join our channel and stay updated with the latest news.

Next