ಸೈದಾಪುರ: 15ರಿಂದ 18 ವರ್ಷದೊಳಗಿನ ವಿದ್ಯಾರ್ಥಿಗಳು ಸ್ವ-ಇಚ್ಛೆಯಿಂದ ಲಸಿಕೆ ಪಡೆದು ಕೋವಿಡ್-19 ರೂಪಾಂತರ ತಳಿ ಒಮಿಕ್ರಾನ್ ವೈರಸ್ ತಡೆಯಲು ಸಹಕರಿಸಬೇಕು ಎಂದು ಪ್ರಜ್ಞಾ ಕೈಗಾರಿಕಾ ತರಬೇತಿ ಕೇಂದ್ರದ ಅಧ್ಯಕ್ಷ ಮಲ್ಲಿಕಾರ್ಜುನ ಅಲ್ಲಿಪುರ ಅಭಿಪ್ರಾಯಪಟ್ಟರು.
ಪಟ್ಟಣದ ಪ್ರಜ್ಞಾ ಕೈಗಾರಿಕಾ ತರಬೇತಿ ಸಂಸ್ಥೆಯಲ್ಲಿ ಹಮ್ಮಿಕೊಂಡ ಲಸಿಕಾ ಅಭಿಯಾನಕ್ಕೆ ಚಾಲನೆ ನೀಡಿ ಅವರು ಮಾತನಾಡಿದರು.
ಕೋವಿಡ್‌ನಿಂದ ನಾವು ರಕ್ಷಿಸಿಕೊಳ್ಳುವುದರ ಜೊತೆಗೆ ನಮ್ಮವರನ್ನು ಸಹ ಕಾಪಾಡುವುದು ಯುವ ಸಮೂಹದ ಬಹುದೊಡ್ಡ ಜವಾಬ್ದಾರಿಯಾಗಿದೆ. ಕೋವ್ಯಾಕ್ಸಿನ್ ಮತ್ತು ಕೋವಿಶಿಲ್ಡ್ ಜಗತ್ತಿನಲ್ಲೇ ಅತ್ಯಂತ ಪರಿಣಾಮಕಾರಿ ಲಸಿಕೆ ಎನಿಸಿಕೊಂಡಿವೆ. ಇದರಿಂದ ಯಾವುದೇ ಅಡ್ಡ ಪರಿಣಾಮಗಳಾಗಲ್ಲ. ಅಲ್ಲದೇ ಲಸಿಕೆ ಪಡೆದುಕೊಂಡವರಲ್ಲಿ ರೋಗ ನಿರೋಧಕ ಶಕ್ತಿ ಹೆಚ್ಚಾಗಿ, ಕೋವಿಡ್ ವೈರಸ್ ವಿರುದ್ಧ ಹೋರಾಡುವ ಶಕ್ತಿ ಹೆಚ್ಚುತ್ತದೆ ಎಂಬುದು ವೈದ್ಯರ ಸಲಹೆಯಾಗಿದೆ. ಆರೋಗ್ಯ ಇಲಾಖೆ ಶಾಲಾ-ಕಾಲೇಜುಗಳಿಗೆ ಹೋಗಿ ಲಸಿಕೆ ನೀಡುತ್ತಿರುವುದು ಶ್ಲಾಘನೀಯ ಎಂದರು.
ಕಿರಿಯ ತರಬೇತಿ ಅಧಿಕಾರಿಗಳಾದ ಭೀಮಣ್ಣ ಮಡಿವಾಳಕರ್, ಶಂಕರ್‌ರೆಡ್ಡಿ ಗೌಡ ಬಿಳ್ಹಾರ, ಮಹಾದೇವಪ್ಪ ದದ್ದಲ್, ಆರೋಗ್ಯ ಇಲಾಖೆಯ ಸಿಬ್ಬಂದಿ ಮಂಜುನಾಥ ಸೇರಿದಂತೆ ಇತರರಿದ್ದರು.