Advertisement

ವಿದ್ಯಾರ್ಥಿಗಳಲ್ಲಿ ಸಹೋದರತ್ವ ಭಾವ ಬೆಳೆಯಲಿ

01:39 PM Aug 19, 2019 | Suhan S |

ಹಾವೇರಿ: ವಿದ್ಯಾರ್ಥಿಗಳು ಸಹೋದರತ್ವ ಭಾವನೆ, ಸ್ನೇಹ-ಪ್ರೀತಿ, ಸೇವಾ ಮನೋಭಾವ, ನಾವೆಲ್ಲ ಒಂದೇ ಎಂಬ ಭಾವ ಬೆಳಸಿಕೊಳ್ಳಬೇಕು ಎಂದು ಜಿಲ್ಲಾ ಕಾನೂನು ಸೇವೆಗಳ ಪ್ರಾಧಿಕಾರದ ಅಧ್ಯಕ್ಷೆ ಹಾಗೂ ಪ್ರಧಾನ ಜಿಲ್ಲಾ ಮತ್ತು ಸತ್ರ ನ್ಯಾಯಾಧೀಶೆ ಎಸ್‌.ಎಚ್. ರೇಣುಕಾದೇವಿ ಹೇಳಿದರು.

Advertisement

ನಗರದ ಎಸ್‌.ಎಂ.ಎಸ್‌ ಫ್ರೌಢಶಾಲೆಯಲ್ಲಿ ಜಿಲ್ಲಾ ಕಾನೂನು ಸೇವೆಗಳ ಪ್ರಾಧಿಕಾರ, ನ್ಯಾಯವಾದಿಗಳ ಸಂಘ, ಜಿಲ್ಲಾ ಅಭಿಯೋಜನಾ ಇಲಾಖೆ, ಸಾರ್ವಜನಿಕ ಶಿಕ್ಷಣ ಇಲಾಖೆ, ಪೊಲೀಸ್‌ ಇಲಾಖೆ ಹಾಗೂ ಎಸ್‌ಎಂಎಸ್‌ ಫ್ರೌಢಶಾಲೆ ಸಹಯೋಗದಲ್ಲಿ ‘ಸಂತ್ರಸ್ತರ ಪರಿಹಾರ ಯೋಜನೆ, ಮೂಲಭೂತ ಹಕ್ಕುಗಳು ಮತ್ತು ಕರ್ತವ್ಯಗಳು, ಸಾಮಾನ್ಯ ಕಾನೂನುಗಳು, ಜನತಾ ನ್ಯಾಯಾಲಯಗಳು ಹಾಗೂ ಮಧ್ಯಸ್ಥಿಕಾ ಕೇಂದ್ರದ ಮಹತ್ವ’ ವಿಷಯದ ಕುರಿತು ಜರುಗಿದ ಕಾನೂನು ಜಾಗೃತಿ ಕಾರ್ಯಕ್ರಮ ಉದ್ಘಾಟಿಸಿ ಅವರು ಮಾತನಾಡಿದರು.

ವಿದ್ಯಾರ್ಥಿಗಳು ಉತ್ತಮ ಓದಿನ ಜತೆಗೆ ಉತ್ತಮ ಭವಿಷ್ಯ ರೂಪಿಸಿಕೊಳ್ಳಬೇಕು. ಶೈಕ್ಷಣಿಕ ಕ್ಷೇತ್ರದಲ್ಲಿ ಸಾಧನೆ ಮಾಡಬೇಕು. ವಿದ್ಯಾರ್ಥಿಗಳಿಗೆ ಪ್ರಾಥಮಿಕ ಕಾನೂನು ಅರಿವು ಅತ್ಯಗತ್ಯ ಹಾಗೂ ವಿದ್ಯಾರ್ಥಿಗಳು ದೇಶದ ಸಂವಿಧಾನದ ಮೂಲಭೂತ ಹಕ್ಕುಗಳು ಮತ್ತು ಕರ್ತವ್ಯಗಳ ಬಗ್ಗೆ ತಿಳಿದುಕೊಳ್ಳಬೇಕು ಎಂದರು.

ಅಧ್ಯಕ್ಷತೆ ವಹಿಸಿದ್ದ ಸಾರ್ವಜನಿಕ ಶಿಕ್ಷಣ ಇಲಾಖೆಯ ಉಪನಿರ್ದೇಶಕ ಅಂದಾನೆಪ್ಪ ವಡಗೇರಿ ಮಾತನಾಡಿ, ಓದಿಗೆ ಯಾವುದೇ ಅಡ್ಡಿ ಆತಂಕಗಳಿಲ್ಲ, ಏಕಾಗ್ರತೆಯೇ ಯಶಸ್ಸಿಗೆ ಪ್ರಮುಖ ಕಾರಣ. ಬಡತನದಲ್ಲಿ ಓದಿದ ವಿದ್ಯಾರ್ಥಿಗಳು ಅತಿ ಹೆಚ್ಚು ಅಂಕಗಳಿಸಿ ರಾಜ್ಯ, ಜಿಲ್ಲೆ ಹಾಗೂ ತಾಲೂಕಿಗೆ ಕೀರ್ತಿ ತಂದಿದ್ದಾರೆ ಎಂದರು.

ಸಂತ್ರಸ್ತರ ಪರಿಹಾರ ಯೋಜನೆ 2011, ಮೂಲಭೂತ ಹಕ್ಕುಗಳು ಮತ್ತು ಕರ್ತವ್ಯಗಳು ಕುರಿತು ಜಿಲ್ಲಾ ಕಾನೂನು ಸೇವೆಗಳ ಪ್ರಾಧಿಕಾರದ ವಕೀಲರಾದ ಎಸ್‌.ಪಿ. ದೇವಸೂರ, ಸಾಮಾನ್ಯ ಕಾನೂನುಗಳು, ಜನತಾ ನ್ಯಾಯಾಲಯ ಮತ್ತು ಮಧ್ಯಸ್ಥಿಕೆಯ ಮಹತ್ವ ಕುರಿತು ಜಿಲ್ಲಾ ಕಾನೂನು ಸೇವೆಗಳ ಪ್ರಾಧಿಕಾರದ ಮಧ್ಯಸ್ಥಿಕೆದಾರ ವಕೀಲರಾದ ಜಿ.ಕೆ. ಕಮ್ಮಾರ ಹಾಗೂ ಪೊಲೀಸ್‌ ದೂರು ಪ್ರಾಧಿಕಾರದ ರಚನೆ, ಮಹತ್ವ ಮತ್ತು ಕಾರ್ಯ ವೈಖರಿ ಕುರಿತು ನಗರ ಪೊಲೀಸ್‌ ಠಾಣೆಯ ಪಿಎಸ್‌ಐ ಯು.ಕೆ. ಕುಲಕರ್ಣಿ ವಿದ್ಯಾರ್ಥಿಗಳಿಗೆ ಉಪನ್ಯಾಸ ನೀಡಿದರು.

Advertisement

ಕಾರ್ಯಕ್ರಮದಲ್ಲಿ ಹಿರಿಯ ಸಿವಿಲ್ ನ್ಯಾಯಾಧೀಶರು ಹಾಗೂ ಜಿಲ್ಲಾ ಕಾನೂನು ಸೇವೆಗಳ ಪ್ರಾಧಿಕಾರದ ಸದಸ್ಯ ಕಾರ್ಯದರ್ಶಿ ಕೆ. ಶ್ರೀವಿದ್ಯಾ, ಹಿರಿಯ ಸರ್ಕಾರಿ ಅಭಿಯೋಜಕರು ಸರೋಜ ಕೂಡಲಮಠ, ಜಿಲ್ಲಾ ನ್ಯಾಯವಾದಿಗಳ ಸಂಘದ ಅಧ್ಯಕ್ಷ ಕೆ.ಸಿ. ಪಾವಲಿ, ಜಿಲ್ಲಾ ನ್ಯಾಯವಾದಿಗಳ ಸಂಘದ ಕಾರ್ಯದರ್ಶಿ ಪಿ.ಎಂ. ಬೆನ್ನೂರು, ಎಸ್‌.ಎಂ.ಎಸ್‌. ಫ್ರೌಢಶಾಲೆಯ ಮುಖ್ಯೋಪಾಧ್ಯಾಯ ವೈ.ಎಂ. ಓಲೇಕಾರ, ಎಸ್‌.ಎಚ್. ಕಬ್ಬಿಣಕಂತಿಮಠ ಮತ್ತಿತರರು ಇದ್ದರು.

Advertisement

Udayavani is now on Telegram. Click here to join our channel and stay updated with the latest news.

Next