Advertisement

ವಿದ್ಯಾರ್ಥಿಗಳು ಸಂಪತ್ತಿನ ನಿರ್ಮೋಹಿಗಳಾಗಲಿ; ಪ್ರಾಧ್ಯಾಪಕ ಡಾ|ದಾದಾಪೀರ್‌

06:15 PM Sep 06, 2022 | Team Udayavani |

ದಾವಣಗೆರೆ: ಶಿಕ್ಷಕರು ಇಂದು ವಿದ್ಯಾರ್ಥಿಗಳನ್ನು ಸಂಪತ್ತಿನ ನಿರ್ಮೋಹಿಗಳನ್ನಾಗಿ ರೂಪಿಸುವ ಅವಶ್ಯಕತೆ ಇದೆ ಎಂದು ಸರ್ಕಾರಿ ಪ್ರಥಮದರ್ಜೆ ಕಾಲೇಜಿನ ಕನ್ನಡ ಪ್ರಾಧ್ಯಾಪಕ ಡಾ| ದಾದಾಪೀರ್‌ ನವಿಲೇಹಾಳ್‌ ಹೇಳಿದರು.

Advertisement

ನಗರದ ಶಾಮನೂರು ಪಾರ್ವತಮ್ಮ ಕಲ್ಯಾಣಮಂಟಪದಲ್ಲಿ ಸೋಮವಾರ ನಡೆದ ಶಿಕ್ಷಕರ ದಿನಾಚರಣೆ ಹಾಗೂ ಜಿಲ್ಲಾ ಮಟ್ಟದ ಅತ್ಯುತ್ತಮ ಶಿಕ್ಷಕ ಪ್ರಶಸ್ತಿ ಪುರಸ್ಕೃತರಿಗೆ ಸನ್ಮಾನ ಕಾರ್ಯಕ್ರಮದಲ್ಲಿ ಅವರು ಉಪನ್ಯಾಸ ನೀಡಿದರು.

ಜೀವನದಲ್ಲಿ ಎಷ್ಟೇ ಹಣ, ದೊಡ್ಡ ಮನೆ, ಆಸ್ತಿ ಇದ್ದರೂ ಮನುಷ್ಯನಿಗೆ ಬೇಕಿರುವುದು ಗೇಣು ಹೊಟ್ಟೆ ತುಂಬುವಷ್ಟು ಊಟ, ದೇಹ ಮುಚ್ಚುವಷ್ಟು ಬಟ್ಟೆ ಹಾಗೂ ಮಲಗಲು ಒಂದಿಷ್ಟು ಜಾಗ ಮಾತ್ರವೇ ಸಾಕು. ಬದುಕಿರುವಾಗ ದೇಹಕ್ಕೆ ಎಷ್ಟೇ ಅಲಂಕಾರ ಮಾಡಿದರೂ ಸತ್ತ ಮೇಲೆ ಆ ದೇಹವನ್ನು ಮುಚ್ಚುವರು ಇಲ್ಲವೇ ಸುಡುವರು ಎಂಬುದನ್ನು ಹಲವು ಶರಣರು, ಜ್ಞಾನಿಗಳು ಹೇಳಿದ್ದಾರೆ. ಇದರ ಬಗ್ಗೆ ವಿದ್ಯಾರ್ಥಿಗಳಿಗೆ ಅರ್ಥ ಮಾಡಿಸಬೇಕು ಎಂದರು.

ಜ್ಞಾನ ಪಿತ್ರಾರ್ಜಿತ ಆಸ್ತಿಯಲ್ಲ. ಅದನ್ನು ಪ್ರತಿಯೊಬ್ಬರೂ ಸ್ವಯಂ ಆಗಿ ನಿರಂತರ ಪ್ರಯತ್ನ, ಶ್ರಮದಿಂದ ಪಡೆದುಕೊಳ್ಳಬೇಕು. ವಿದ್ಯಾದಾನ ಬಹು ದೊಡ್ಡ ದಾನವಾಗಿದ್ದು ಶಿಕ್ಷಕರು ಜ್ಞಾನವನ್ನು ಧಾರೆಎರೆಯುವ ಕೆಲಸ ನಿಷ್ಠೆಯಿಂದ ಮಾಡಬೇಕು ಎಂದರು.

ಶಿಕ್ಷಕರಾದವರಿಗೆ ತಾಳ್ಮೆ, ಸಹನೆ ಇರಬೇಕು. ಮಕ್ಕಳ ಜತೆ ಮಕ್ಕಳಾಗಬೇಕು. ನಿತ್ಯ ಜ್ಞಾನ ಕಲಿಯಲು, ಪಡೆಯಲು ಆಸಕ್ತಿ ತೋರಬೇಕು. ಶಿಕ್ಷಕ ವೃತ್ತಿಯನ್ನು ಗೌರವಿಸಬೇಕು. ಒಂದು ಅಧ್ಯಯನ ವಿಷಯದಲ್ಲಿ ಪರಿಪೂರ್ಣತೆ ಸಾಧಿಸಲು ಪ್ರಯತ್ನಿಸಬೇಕು. ವಿದ್ಯಾರ್ಥಿಗಳನ್ನು ತಮ್ಮ ಮಕ್ಕಳಂತೆ ಪೀÅತಿಸಬೇಕು. ವೃತ್ತಿಯ ಘನತೆಯನ್ನು ಮುಂದಿನ ಪೀಳಿಗೆಗೆ ದಾಟಿಸಬೇಕು. ಶಿಕ್ಷಕರು ಅಭ್ಯಾಸ ಪಠ್ಯಕ್ಕೆ ಸೀಮಿತವಾಗಬಾರದು.ತರಗತಿ ಕೋಣೆಯ ಶಿಕ್ಷಕರಾಗಬಾರದು. ಮಕ್ಕಳಿಗೆ ಎಲ್ಲವನ್ನೂ ತಿಳಿಸುವ ವಿಶ್ವಕೋಶವಾಗಬೇಕು ಎಂದು ಕರೆ ನೀಡಿದರು.

Advertisement

ಕಾರ್ಯಕ್ರಮ ಉದ್ಘಾಟಿಸಿದ ಸಂಸದ ಡಾ| ಜಿ.ಎಂ. ಸಿದ್ದೇಶ್ವರ ಮಾತನಾಡಿ, ಶಿಕ್ಷಕ ವೃತ್ತಿ ಮಹತ್ವದ್ದಾಗಿದೆ. ಶಿಕ್ಷಕ ಇಲ್ಲದಿದ್ದರೆ ಶಿಕ್ಷಣವೇ ಇಲ್ಲ. ಶಿಕ್ಷಣ, ಶಿಕ್ಷಕ ಎರಡಕ್ಕೂ ಬೆಲೆ ಕಟ್ಟಲಾಗದು. ಶಿಕ್ಷಣ ಪಡೆಯಲು ಹಾಗೂ ಶಿಕ್ಷಣ ನೀಡಲು ತ್ಯಾಗ, ಪರಿಶ್ರಮ ಮುಖ್ಯ. ಶಿಕ್ಷಕರು ವಿದ್ಯಾರ್ಥಿಗಳನ್ನು ಸಮಾಜದ ಸುಂದರ ಶಿಲ್ಪಗಳನ್ನಾಗಿ ತಯಾರು ಮಾಡುವ ಮೂಲಕ ದೇಶದ ಆಸ್ತಿಯನ್ನಾಗಿ ಮಾಡಬೇಕು ಎಂದರು.

ಜಿಲ್ಲೆಯಲ್ಲಿ ಯಾವ ಶಿಕ್ಷಕನಿಗೂ ರಾಷ್ಟ್ರಮಟ್ಟದ ಅತ್ಯುತ್ತಮ ಶಿಕ್ಷಕ ಪ್ರಶಸ್ತಿ ಬಾರದೇ ಇರುವುದಕ್ಕೆ ಬೇಸರ ವ್ಯಕ್ತಪಡಿಸಿದ ಸಂಸದರು, ಮುಂದಿನ ದಿನಗಳಲ್ಲಿ ಜಿಲ್ಲೆಯ ಶಿಕ್ಷಕರೂ ರಾಷ್ಟ್ರ ಮಟ್ಟದ ಪ್ರಶಸ್ತಿ ಪಡೆಯುವ ರೀತಿಯಲ್ಲಿ ಕಾರ್ಯ ನಿರ್ವಹಿಸಬೇಕೆಂದು ಆಶಿಸಿದರು. ಇದೇ ಸಂದರ್ಭದಲ್ಲಿ ಜಿಲ್ಲಾ ಮಟ್ಟದ ಅತ್ಯುತ್ತಮ ಶಿಕ್ಷಕ ಪ್ರಶಸ್ತಿ ಪುರಸ್ಕೃತ 23 ಶಿಕ್ಷಕರನ್ನು ಹಾಗೂ ನಿವೃತ್ತ ಶಿಕ್ಷಕರನ್ನು ಸನ್ಮಾನಿಸಿ ಗೌರವಿಸಲಾಯಿತು.

ಶಾಸಕ ಎಸ್‌.ಎ. ರವೀಂದ್ರನಾಥ್‌ ಕಾರ್ಯಕ್ರಮದ ಅಧ್ಯಕ್ಷತೆ ವಹಿಸಿದ್ದರು. ಮಹಾನಗರ ಪಾಲಿಕೆ ಮೇಯರ್‌ ಜಯಮ್ಮ ಗೋಪಿ ನಾಯ್ಕ, ಪಾಲಿಕೆ ಸದಸ್ಯೆ ಗೀತಾ ದಿಳ್ಯಪ್ಪ, ಕೇಂದ್ರ ಪರಿಹಾರ ಸಮಿತಿ ಅಧ್ಯಕ್ಷ ಹಾಗೂ ಮಾಜಿ ಶಾಸಕ ಬಸವರಾಜ ನಾಯ್ಕ, ಜಿಪಂ ಸಿಇಒ ಡಾ| ಎ. ಚನ್ನಪ್ಪ, ಸಾರ್ವಜನಿಕ ಶಿಕ್ಷಣ ಇಲಾಖೆ ಉಪನಿರ್ದೇಶಕ ಜಿ.ಆರ್‌. ತಿಪ್ಪೇಶಪ್ಪ ವೇದಿಕೆಯಲ್ಲಿದ್ದರು.

Advertisement

Udayavani is now on Telegram. Click here to join our channel and stay updated with the latest news.

Next