ದಾವಣಗೆರೆ: ವೃಂದ ಮತ್ತು ನೇಮಕಾತಿ ನಿಯಮಗಳ ಅಧಿಸೂಚನೆಗೆ ಒತ್ತಾಯಿಸಿ ಪಶು ವೈದ್ಯಕೀಯ ಇಲಾಖೆ ಅಧಿಕಾರಿ, ನೌಕರರು ಹಮ್ಮಿಕೊಂಡಿರುವ ಹೋರಾಟಕ್ಕೆ ಶಾಸಕ ಎಚ್.ಎಸ್. ಶಿವಶಂಕರ್ ಬೆಂಬಲ ಸೂಚಿಸಿದ್ದಾರೆ.
ಧರಣಿಯ ನಾಲ್ಕನೆಯ ದಿನವಾದ ಶುಕ್ರವಾರ ನಗರದ ಪಶು ವೈದ್ಯಕೀಯ ಜಿಲ್ಲಾ ಕಚೇರಿ ಆವರಣಕ್ಕೆ ಭೇಟಿ ನೀಡಿದ ಅವರು, ಹೋರಾಟಕ್ಕೆ ನನ್ನ ಬೆಂಬಲ ಇದೆ ಎಂದು ತಿಳಿಸಿದರು. ಧರಣಿ ನಿರತರನ್ನು ಉದ್ದೇಶಿಸಿ ಮಾತನಾಡಿದ ಶಾಸಕರು, ಮೂಕ ಪ್ರಾಣಿಗಳ ಸೇವೆಯಲ್ಲಿ ತೊಡಗಿರುವ ಪಶು ಸಂಗೋಪನಾ ಇಲಾಖೆ ಸಿಬ್ಬಂದಿ, ನೌಕರರ ಬೇಡಿಕೆಗೆ ಸರ್ಕಾರ ಸ್ಪಂದಿಸಬೇಕಿದೆ.
ಪಶು ವೈದ್ಯಕೀಯ ಇಲಾಖೆ ಅಧಿಕಾರಿ, ನೌಕರರ ಮುಷ್ಕರದಿಂದ ಜಾನುವಾರುಗಳಿಗೂ ತೀವ್ರ ಸಮಸ್ಯೆಯಾಗಿದೆ. ಅನಿಧಿìಷ್ಟಾವದಿ ಹೋರಾಟದ ಬದಲಿಗೆ, ವಿವಿಧ ಹಂತದ ಹೋರಾಟ ನಡೆಸುವ ಬಗ್ಗೆ ಸಂಘಗಳು ಆಲೋಚಿಸಲಿ.
ಈಗಾಗಲೇ ತಾವು, ತಮ್ಮ ಪಕ್ಷ ಸರ್ಕಾರದ ಗಮನ ಸೆಳೆಯುವ ಮೂಲಕ ನಿಮ್ಮ ಬೇಡಿಕೆ ಈಡೇರಿಸುವಂತೆ ಒತ್ತಡ ಹೇರಿದ್ದೇವೆ ಎಂದು ತಿಳಿಸಿದರು. ಸಂಘದ ಮುಖಂಡರು ಮಾತನಾಡಿ, ಪಶು ಸಂಗೋಪನಾ ಇಲಾಖೆಯ ವೃಂದ ಮತ್ತು ನೇಮಕಾತಿ ನಿಯಮಗಳ ಅಂತಿಮ ಅಧಿಸೂಚನೆ ಹೊರಡಿಸಲು ಕಳೆದ 5 ವರ್ಷಗಳಿಂದ ಸರ್ಕಾರ ವಿಳಂಬ ಧೋರಣೆ ತೋರುತ್ತಿದೆ.
ಇದರಿಂದ ನೌಕರರು ಬಡ್ತಿ ಅವಕಾಶ ವಂಚಿತರಾಗುತ್ತಿದ್ದು, ಈ ಹಿನ್ನೆಲೆಯಲ್ಲಿ ರಾಜ್ಯವ್ಯಾಪಿ ಹೋರಾಟ ನಡೆಸಿದ್ದೇವೆ ಎಂದರು. ರಾಜ್ಯ ಸರ್ಕಾರಿ ನೌಕರರ ಸಂಘದ ಜಿಲ್ಲಾಧ್ಯಕ್ಷ ಎಸ್. ಹಾಲೇಶಪ್ಪ, ಹನುಮಂತಪ್ಪ, ಡಾ| ಜಯಣ್ಣ, ಡಾ| ಖಾಜಿ ನಿಸಾರ್ ಅಹಮ್ಮದ್, ಡಾ| ಜಿ.ಎಂ. ಸಂತೋಷ್,
ಸಂಘದ ಜಿಲ್ಲಾಧ್ಯಕ್ಷ ಡಾ| ಶಿವಪ್ರಕಾಶ, ಪಶು ವೈದ್ಯಕೀಯ ಪರೀಕ್ಷಕರ ಸಂಘದ ಜಿಲ್ಲಾಧ್ಯಕ್ಷ ಮಲ್ಲಿಕಾರ್ಜುನ, ಪಶು ವೈದ್ಯಕೀಯ ಸಹಾಯಕರ ಸಂಘದ ಜಿಲ್ಲಾಧ್ಯಕ್ಷ ನರೇಂದ್ರ, ಕಲ್ಲೇಶಪ್ಪ, ಭೂಮೇಶ, ಬಿ.ಚನ್ನವೀರಪ್ಪ, ಎಸ್.ಎಸ್.ಸಂಗಮೇಶ ಮುಷ್ಕರದಲ್ಲಿ ಭಾಗವಹಿಸಿದ್ದರು.