Advertisement
ವಿಚಿತ್ರವೆಂದರೆ, ಕೇಂದ್ರ ಸರಕಾರವಾಗಲಿ, ರಾಜ್ಯ ಸರಕಾರವಾಗಲಿ ಅಧಿಕೃತವಾಗಿ ಲಾಕ್‌ಡೌನ್ ಹೇರಿಕೆ ಮಾಡುತ್ತೇವೆ ಎಂದು ಎಲ್ಲಿಯೂ ಹೇಳಿಯೇ ಇಲ್ಲ. ಅಲ್ಲದೇ ಇನ್ನೂ ಒಮಿಕ್ರಾನ್ ಭಾರತದಲ್ಲಿ ಹೇಗೆ ವರ್ತಿಸಲಿದೆ ಎಂಬ ಬಗ್ಗೆ ಸಂಶೋಧನೆಯೂ ಆಗಬೇಕಿದೆ. ಅಷ್ಟೇ ಅಲ್ಲ, ಇದುವರೆಗೆ ದೇಶದಲ್ಲಿ ಒಂದೇ ಒಂದು ಒಮಿಕ್ರಾನ್ ಪ್ರಕರಣವೂ ದಾಖಲಾಗಿಲ್ಲ. ಇಂಥ ಸಂದರ್ಭದಲ್ಲಿ ಲಾಕ್‌ಡೌನ್ ಹೇರುತ್ತಾರಂತೆ, ಶಾಲಾ-ಕಾಲೇಜು ಮುಚ್ಚುತ್ತಾರಂತೆ ಎಂಬ ವದಂತಿಗಳು ಜನರಲ್ಲಿ ಗೊಂದಲ ಉಂಟು ಮಾಡುವುದು ಸಹಜ.
ಕೊರೊನಾ ಸಾಂಕ್ರಾಮಿಕ ವೇಳೆಯಲ್ಲಿ, ತಮಗೆ ಸೋಂಕು ಬಾರದಿರಲಿ ಎಂಬ ಕಾರಣಕ್ಕಾಗಿ ಮಾಸ್ಕ್ ಧರಿಸುವುದು, ಸಾಮಾಜಿಕ ಅಂತರ ಕಾಪಾಡಿಕೊಳ್ಳುವುದನ್ನು ಅನುಸರಿಸುವ ಮಂದಿ, ಸುಳ್ಳು ಸುದ್ದಿ ಹಬ್ಬಿಸುವಾಗ ತಮಗಿರುವ ದೊಡ್ಡದೊಂದು ಸಾಮಾಜಿಕ ಜವಾಬ್ದಾರಿಯನ್ನೇ ಮರೆತುಬಿಡುತ್ತಾರೆ. ಇದನ್ನೂ ಓದಿ:ಪದ್ಮಶ್ರೀ ಸಿರಿವೆನ್ನೆಲ ಸೀತಾರಾಮ ಶಾಸ್ತ್ರಿ ನಿಧನ
Related Articles
Advertisement
ಕೇವಲ ಜನರಷ್ಟೇ ಅಲ್ಲ, ಸಾಮಾಜಿಕ ಮಾಧ್ಯಮಗಳು, ಸುದ್ದಿ ಮಾಧ್ಯಮಗಳು, ರಾಜ್ಯ ಸರಕಾರದಲ್ಲಿರುವ ಪ್ರತಿನಿಧಿಗಳೂ ಸ್ವಯಂ ನಿಯಂತ್ರಣ ಹೇರಿಕೊಳ್ಳಬೇಕು. ಇಂಥ ವಿಚಾರದಲ್ಲಿ ರಾಜ್ಯ ಸರಕಾರದ ಕಡೆಯಿಂದ ಒಬ್ಬರು ಅಥವಾ ಇಬ್ಬರು ಜನರಿಗೆ ಮತ್ತು ಮಾಧ್ಯಮಗಳಿಗೆ ಮಾಹಿತಿ ನೀಡುವಂಥ ಕ್ರಮವಾಗಬೇಕು. ಅಂದರೆ ಮುಖ್ಯಮಂತ್ರಿಗಳು ಅಥವಾ ಆರೋಗ್ಯ ಸಚಿವರು ಮಾತ್ರ ಕೊರೊನಾ ಕುರಿತ ಅಪ್‌ಡೇಟ್‌ಗಳನ್ನು ನೀಡಬೇಕು. ಸಿಕ್ಕಸಿಕ್ಕವರು ಒಂದೊಂದು ಹೇಳಿಕೆ ನೀಡುತ್ತಾ ಹೋದರೆ ಜನರಲ್ಲಿ ಇನ್ನಷ್ಟು ಭಯ ಉಂಟಾಗುತ್ತದೆಯೇ ಹೊರತು, ಬೇರೇನೂ ಆಗುವುದಿಲ್ಲ. ಇದು ಅಧಿಕಾರಿಗಳ ಮಟ್ಟದಲ್ಲೂ ಆಗಬೇಕು. ಅಲ್ಲದೆ ತಾಂತ್ರಿಕ ಸಮಿತಿ ನೀಡಿರುವ ಶಿಫಾರಸಿನ ಆಧಾರದಂತೆ ಸುಳ್ಳು ಸುದ್ದಿ ಹಬ್ಬಿಸುವವರ ವಿರುದ್ಧ ಮುಲಾಜಿಲ್ಲದೇ ಕಠಿನ ಕ್ರಮ ತೆಗೆದುಕೊಳ್ಳಬೇಕು. ಇಂಥ ಕ್ರಮ ತೆಗೆದುಕೊಂಡರೆ ಒಂದೊಮ್ಮೆ ಭಾರತದಲ್ಲಿ ಒಮಿಕ್ರಾನ್ ಕಾಣಿಸಿಕೊಂಡರೂ ಧೈರ್ಯದಿಂದ ಎದುರಿಸಲು ಆಗುತ್ತದೆ.