ಬೆಂಗಳೂರು: ಎಚ್‌ಎಂಟಿ ಸೇರಿದಂತೆ ರಾಜ್ಯದಲ್ಲಿರುವ ಕೇಂದ್ರ ಸರಕಾರದ ಮಾಲಕತ್ವದ ಉದ್ದಿಮೆಗಳ ಪುನಶ್ಚೇತನಕ್ಕೆ ರಾಜ್ಯ ಸರಕಾರ ಅಗತ್ಯ ಸಹಕಾರ ನೀಡಬೇಕು. ರಾಜ್ಯದ ಉದ್ದಿಮೆಗಳ ಪುನಶ್ಚೇತನ ಸಂಬಂಧ ಪ್ರಮುಖರ ಸಭೆ ನಡೆಸಿ ಅಗತ್ಯ ಕ್ರಮ ಕೈಗೊಳ್ಳಲಾಗುವುದು ಎಂದು ಕೇಂದ್ರದ ಬೃಹತ್ ಉದ್ದಿಮೆ ಮತ್ತು ಉಕ್ಕು ಸಚಿವ ಎಚ್.ಡಿ. ಕುಮಾರಸ್ವಾಮಿ ಹೇಳಿದ್ದಾರೆ.
ಸುದ್ದಿಗಾರರ ಜತೆ ಮಾತನಾಡಿದ ಅವರು, ಶನಿವಾರ ಎಚ್‌ಎಂಟಿ ಕಚೇರಿಗೆ ತೆರಳಿ 3 ಗಂಟೆಗಳ ಕಾಲ ಸಂಸ್ಥೆಯ ಬಗ್ಗೆ ಮಾಹಿತಿ ಪಡೆದಿದ್ದೇನೆ. ಸಾವಿರಾರು ಜನರಿಗೆ ಉದ್ಯೋಗ ನೀಡಿದ್ದ ಉದ್ಯಮವನ್ನು ಇಂದು ಸಂಪೂರ್ಣವಾಗಿ ಸರ್ವನಾಶ ಮಾಡಿದ್ದಾರೆ. ಎಚ್‌ಎಂಟಿಯ ಹರಿಯಾಣ, ಹೈದರಾಬಾದ್, ಬೆಂಗಳೂರು ಕಚೇರಿಗಳಿಂದ ವಿವರಣೆ ಪಡೆದಿದ್ದೇನೆ. ಕೆಲವು ಕಡೆ ಸಂಬಳ ಕೊಡಲೂ ಹಣವಿಲ್ಲದ ಪರಿಸ್ಥಿತಿ ಇದೆ ಎಂದರು.
ಎಚ್‌ಎಂಟಿ ಸೇರಿದಂತೆ ರಾಜ್ಯದಲ್ಲಿರುವ ಕೇಂದ್ರ ಸರಕಾರದ ಮಾಲಕತ್ವದ ಉದ್ದಿಮೆಗಳ ಪುನಶ್ಚೇತನಕ್ಕೆ ಅಗತ್ಯ ಕ್ರಮ ಕೈಗೊಳ್ಳಬೇಕಿದೆ. ಆದರೆ ರಾಜ್ಯ ಸರಕಾರದ ನಡೆ ನೋಡಿದರೆ ಅದಕ್ಕೆ ಸಮಸ್ಯೆಗಳನ್ನು ಪರಿಹರಿಸಲು ಆಸಕ್ತಿ ಇದ್ದಂತಿಲ್ಲ ಎಂದು ಬೇಸರ ವ್ಯಕ್ತಪಡಿಸಿದರು.
ನಮ್ಮಲ್ಲಿ ಮಹಾರಾಜರ ಕಾಲದಲ್ಲಿ ಹಲವು ಉದ್ದಿಮೆಗಳು ಆರಂಭಗೊಂಡಿದ್ದವು. ಈ ಉದ್ದಿಮೆಗಳು ನಾಶವಾಗಲು ಯಾರು ಕಾರಣ ಎಂದು ಚಿಂತನೆ ಮಾಡಬೇಕು. ಎಚ್‌ಎಂಟಿಗೆ ಅನುಕೂಲವಾಗಲಿ ಎಂದು ಸುಮಾರು 500 ಎಕರೆ ಭೂಮಿಯನ್ನು ಕಡಿಮೆ ಬೆಲೆಗೆ ನೀಡಲಾಗಿತ್ತು. ಆದರೆ 115 ಎಕರೆಯನ್ನು ಖಾಸಗಿಯವರಿಗೆ ಬೇಕಾಬಿಟ್ಟಿಯಾಗಿ ಮಾರಿದ್ದಾರೆ. ಈ ಸಂಸ್ಥೆಗಳ ಆಸ್ತಿ ಮಾರಾಟ ಮಾಡಿ ಜೇಬು ತುಂಬಿಸಿಕೊಳ್ಳುವುದು ನಡೆದು ಹೋಗಿದೆ ಎಂದು ಆರೋಪಿಸಿದರು.
ಪುನಃಶ್ಚೇತನ ಬಗ್ಗೆ ಮುಂದೆ ಹೇಳುವೆ
ಶನಿವಾರ ಸಂಸ್ಥೆಯ ಬಗ್ಗೆ ಸಂಪೂರ್ಣವಾಗಿ ಮಾಹಿತಿ ಪಡೆಯಲು ಅಲ್ಲಿಯ ಪ್ರಮುಖರ ಜತೆ ಸಭೆ ಮಾಡಿದ್ದೇನೆ. ಯಾವ ರೀತಿ ಪುನಃಶ್ಚೇತನ ಎಂಬ ಬಗ್ಗೆ ಮುಂದೆ ಹೇಳುತ್ತೇನೆ ಎಂದರು.
ಸಂಸ್ಥೆಗಳ ಉಳಿವು ಗುರಿ
ಸಾರ್ವಜನಿಕ ಸ್ವಾಮ್ಯದ ಸಂಸ್ಥೆಗಳಿಂದ ಬಂಡವಾಳ ಹಿಂದೆಗೆದುಕೊಳ್ಳಬೇಕು ಎಂದು ನಾನು ಸಚಿವನಾಗಿಲ್ಲ. ಸಾಧ್ಯವಾದ ಮಟ್ಟಿಗೆ ಈ ಸಂಸ್ಥೆಗಳನ್ನು ಉಳಿಸಬೇಕು ಎಂಬ ನಿಲುವನ್ನು ಇಟ್ಟುಕೊಂಡು ಕಾರ್ಯತತ್ಪರನಾಗಿದ್ದೇನೆ ಎಂದು ಕುಮಾರಸ್ವಾಮಿ ಹೇಳಿದರು.