Advertisement

ಸಮಾಜ ತಿದ್ದುವ ಸಾಹಿತ್ಯ ರಚನೆಯಾಗಲಿ

09:40 PM Jul 31, 2019 | Lakshmi GovindaRaj |

ಮೈಸೂರು: ಇಂದು ಸಮಾಜದ ಎಲ್ಲಾ ರಂಗಗಳೂ ಹಾದಿ ತಪ್ಪುತ್ತಿದ್ದು, ಸಮಾಜವನ್ನು ಸರಿದಾರಿಗೆ ತರುವ ಕೆಲಸವನ್ನು ಸಾಹಿತ್ಯ ಮಾಡಬೇಕು ಎಂದು ಮಾಜಿ ಸಚಿವ ಕೋಟೆ ಎಂ. ಶಿವಣ್ಣ ಹೇಳಿದರು. ಚುಟುಕು ಸಾಹಿತ್ಯ ಪರಿಷತ್‌ ಮೈಸೂರು ಜಿಲ್ಲಾ ಘಟಕ ಮತ್ತು ಕೌಸ್ತುಭ ಪ್ರಕಾಶನ ವತಿಯಿಂದ ಡಾ. ರತ್ನಹಾಲಪ್ಪಗೌಡ ಸಂಪಾದಿತ ಚುಟುಕು ಚಂದನ ಕೃತಿ ಲೋಕಾರ್ಪಣೆ ಸಮಾರಂಭದಲ್ಲಿ ಮಾತನಾಡಿದರು.

Advertisement

ವಿಸ್ತಾರವಾಗಿ ಹೇಳುವುದನ್ನು ಕೆಲವೇ ಸಾಲುಗಳಲ್ಲಿ ಕಟ್ಟಿಕೊಡುವುದು ಕಷ್ಟ ಸಾಧ್ಯ. ಇದು ಓದುಗರನ್ನು ಬಹುಬೇಗ ಆಕರ್ಷಿಸುವ ಸಾಹಿತ್ಯ ಪ್ರಕಾರವಾಗಿದೆ. ಇಂದು ಸಮಾಜದ ಎಲ್ಲಾ ಕ್ಷೇತ್ರಗಳು ಕೆಟ್ಟುಹೋಗಿವೆ. ಸಾಮಾಜಿಕ ಜಾಲತಾಣಗಳು ಬಂದ ನಂತರ ಮತ್ತಷ್ಟು ಹೆಚ್ಚಾಗಿದೆ. ಈ ಸಂದರ್ಭ ಸಾಹಿತ್ಯವು ಸಮಾಜವನ್ನು ತಿದ್ದುವ ಕೆಲಸ ಮಾಡಬೇಕು. ಇದರಲ್ಲಿ ಬರಹಗಾರರ ಪಾತ್ರ ಮುಖ್ಯವಾಗಿರುತ್ತದೆ. ಈ ನಿಟ್ಟಿನಲ್ಲಿ ಸಮಾಜದ ಸ್ವಾಸ್ಥ್ಯ ಹೆಚ್ಚಿಸುವ ಕೃತಿಗಳು ಮತ್ತು ಸಾಹಿತ್ಯ ಹೊರಬರಲಿ ಎಂದು ಹೇಳಿದರು.

ತಾಣಗಳ ನಿಯಂತ್ರಣ: ಆಧುನಿಕತೆಯ ಹೆಸರಿನಲ್ಲಿ ಇಂದು ಪರಿಸರವನ್ನು ನಾಶ ಮಾಡಲಾಗುತ್ತಿದೆ. ಜೊತೆಗೆ ಸಾಮಾಜಿಕ ಜಾಲತಾಣಗಳಿಂದ ಸಮಾಜದ ಸ್ವಾಸ್ಥ್ಯ ಹಾಳಾಗಿದೆ. ಚುಟುಕು ಸಾಹಿತ್ಯದ ಮೂಲಕ ಓದುಗರನ್ನು ಎಚ್ಚರಿಸುವ ಕೆಲಸವನ್ನು ಬರಹಗಾರರು ಮಾಡಬೇಕು. ಸಾಮಾಜಿಕ ಜಾಲತಾಣಗಳ ಬಳಕೆಗೆ ನಿಯಂತ್ರಣ ಹೇರುವ ಅಗತ್ಯವಿದೆ ಎಂದರು.

ಕನ್ನಡ ಸಾಹಿತ್ಯ ಪರಿಷತ್‌ ಜಿಲ್ಲಾಧ್ಯಕ್ಷ ಡಾ.ವೈ.ಡಿ. ರಾಜಣ್ಣ ಮಾತನಾಡಿ, ಗದ್ಯ ರೂಪದಲ್ಲಿರುವುದನ್ನು ಮೂರು ಸಾಲುಗಳ ಚುಟುಕು ಕವಿತೆಯನ್ನಾಗಿಸುವುದು ಸಾಹಸದ ಕೆಲಸ. ಇದಕ್ಕೆ ಆಳವಾದ ಅಧ್ಯಯನ ಹಾಗೂ ಹೆಚ್ಚು ಕವಿಗಳನ್ನು ಓದಿಕೊಂಡಿರಬೇಕು. ಆಗ ಚುಟುಕು ಕವಿತೆಗಳನ್ನು ಬರೆಯಲು ಸಾಧ್ಯ. ಚುಟುಕು ಸಾಹಿತ್ಯವು, ಸಾಹಿತ್ಯ ಪ್ರಕಾರಗಳಲ್ಲಿ ವೈಶಿಷ್ಟ ಪಡೆದುಕೊಂಡಿದೆ ಎಂದರು.

ಸಂದೇಶ: ಓದುಗನ ಮನೋಲ್ಲಾಸದ ಜತೆಗೆ ಮನೋವಿಕಾಸ ಮಾಡುವುದು ಚುಟುಕು ಸಾಹಿತ್ಯದ ಉದ್ದೇಶವಾಗಿರಬೇಕು. ಇದರ ಜೊತೆಗೆ ಸಮಾಜಕ್ಕೆ ಒಳ್ಳೆಯ ಸಂದೇಶ ನೀಡುವಂತಿರಬೇಕು. ಕಡಿಮೆ ಸಾಲಿನಲ್ಲಿ ಹೆಚ್ಚು ಅರ್ಥವನ್ನು ನೀಡುವ ಚುಟುಕು ಸಾಹಿತ್ಯವನ್ನು ಓದುವ ದೊಡ್ಡ ವರ್ಗವೇ ನಮ್ಮ ನಡುವೆ ಇದೆ ಎಂದರು.

Advertisement

ಡಾ.ರತ್ನಹಾಲಪ್ಪಗೌಡ ಸಂಪಾದಿತ ಚುಟುಕು ಚಂದನ ಕೃತಿಯನ್ನು ದಾವಣಗೆರೆ ಜಿಲ್ಲೆ ಚೆನ್ನಗಿರಿ ತಾಲೂಕಿನ ಶಿಲಾಮಠದ ಡಾ.ಅಭಿನವ ಸಿದ್ಧಲಿಂಗ ಶಿವಚಾರ್ಯ ಸ್ವಾಮೀಜಿ ಲೋಕಾರ್ಪಣೆ ಮಾಡಿದರು. ಈ ಸಂದರ್ಭ ಕಾರ್ಗಿಲ್‌ ವಿಜಯ್‌ ದಿವಸ್‌ ಅಂಗವಾಗಿ ಇಬ್ಬರು ಮಾಜಿ ಸೈನಿಕರಾದ ತಾರನಾಥ ಬೋಳಾರ್‌, ಪಿ. ನಾರಾಯಣಪ್ಪ ಹಾಗೂ ಬೆಂಗಳೂರು ಜಿಲ್ಲಾ ಚುಟುಕು ಸಾಹಿತ್ಯ ಪರಿಷತ್‌ ಅಧ್ಯಕ್ಷ ವಿಜಯ ಸಮರ್ಥ ಅವರನ್ನು ಸನ್ಮಾನಿಸಲಾಯಿತು.

ಕಾರ್ಯಕ್ರಮದಲ್ಲಿ ಅನ್ವೇಷಣ ಸೇವಾ ಟ್ರಸ್ಟ್‌ನ ಡಾ.ಎಂ.ಜಿ.ಆರ್‌. ಅರಸ್‌, ಚುಟುಕು ಸಾಹಿತ್ಯ ಪರಿಷತ್‌ ಕೇಂದ್ರ ಸಮಿತಿ ಅಧ್ಯಕ್ಷ ತೋಂಟದಾರ್ಯ, ಶಿವರಾತ್ರೀಶ್ವರ ಮಹಿಳಾ ಸಮಾಜದ ಮುಖ್ಯ ನಿಲಯ ಪಾಲಕಿ ಮಮತಾ ಸುರೇಶ್‌ ಇದ್ದರು.

Advertisement

Udayavani is now on Telegram. Click here to join our channel and stay updated with the latest news.

Next