ಹಿಜಾಬ್ ಮತ್ತು ಕೇಸರಿ ಶಾಲು ವಿವಾದದಿಂದಾಗಿ ಕಳೆದ ವಾರದಿಂದ ಸ್ಥಗಿತವಾಗಿದ್ದ ಪದವಿಪೂರ್ವ ಮತ್ತು ಪದವಿ ಕಾಲೇಜುಗಳು ಬುಧವಾರ ಪುನರಾರಂಭವಾಗಲಿವೆ. ಸೋಮವಾರವೇ ಪ್ರೌಢಶಾಲೆಗಳು ಆರಂಭವಾಗಿದ್ದು, ರಾಜ್ಯದ ಕೆಲವು ಶಾಲೆಗಳಲ್ಲಿ ಹಿಜಾಬ್ ಗದ್ದಲ ನಡೆಯುತ್ತಲೇ ಇದೆ. ಅದರಲ್ಲೂ ಈಗ ಕೆಲವು ಜಿಲ್ಲೆಗಳಲ್ಲಿ ಎಸೆಸೆಲ್ಸಿ ಪೂರ್ವ ಸಿದ್ಧತಾ ಪರೀಕ್ಷೆಯೂ ನಡೆಯುತ್ತಿದ್ದು, ಕೆಲವು ವಿದ್ಯಾರ್ಥಿನಿಯರು ಹಿಜಾಬ್ ಧರಿಸಿ ಕಾಲೇಜಿಗೆ ಬರುವುದಾಗಿ ಪಟ್ಟು ಹಿಡಿದಿದ್ದಾರೆ. ಆದರೆ ಶಾಲಾ ಆಡಳಿತ ಮಂಡಳಿಗಳು ಒಪ್ಪದ ಕಾರಣ ಪರೀಕ್ಷೆ ಬರೆಯುವುದನ್ನು ಬಿಟ್ಟು ಮನೆಗೆ ವಾಪಸ್ ಆಗಿದ್ದಾರೆ.
ಕೆಲವು ಶಾಲೆಗಳಲ್ಲಿ ವಿದ್ಯಾರ್ಥಿನಿಯರು ತಮಗೆ ಶಿಕ್ಷಣಕ್ಕಿಂತ, ಧರ್ಮವೇ ಮುಖ್ಯ. ಹಿಜಾಬ್ ಧರಿಸಿಕೊಂಡೇ ಬರುತ್ತೇವೆ ಎಂದು ಹೇಳಿರುವುದೂ ಕಂಡು ಬಂದಿದೆ. ಇದೇ ಕಾರಣಕ್ಕಾಗಿ ಪರೀಕ್ಷೆಯನ್ನೂ ತ್ಯಜಿಸಿದ್ದಾರೆ.
ಸದ್ಯ ರಾಜ್ಯದಲ್ಲಿ ಎದ್ದಿರುವ ಈ ಹಿಜಾಬ್ ಮತ್ತು ಕೇಸರಿ ಶಾಲು ವಿವಾದ ಯಾರಿಗೂ ಬೇಕಾಗಿಲ್ಲವಾದದ್ದು. ಇದರಿಂದ ವಿದ್ಯಾರ್ಥಿಗಳಲ್ಲಿ ವೈಮನಸ್ಸು ಬೆಳೆಯುತ್ತದೆಯೇ ಹೊರತು ಬೇರೇನೂ ಸಾಧಿಸಲು ಸಾಧ್ಯವಿಲ್ಲ. ಮೊದಲಿಗೆ ಪದವಿ ಪೂರ್ವ ಕಾಲೇಜುಗಳಲ್ಲಿ ಆರಂಭವಾಗಿದ್ದು, ಈಗ ಪ್ರೌಢಶಾಲೆಗಳಿಗೂ ವಿಸ್ತರಣೆಯಾಗಿದೆ. ಇದು ಅಪಾಯಕಾರಿ ಬೆಳವಣಿಗೆಯಾಗಿದ್ದು, ಏನೂ ಅರಿಯದ ಮುಗ್ಧ ಮನಸ್ಸುಗಳಲ್ಲಿ ವೈಮನಸ್ಸು ಬೆಳೆಯಲೂ ಕಾರಣವಾಗಿದೆ.
ಇದರ ನಡುವೆಯೇ ಕರ್ನಾಟಕ ಹೈಕೋರ್ಟ್‌ನಲ್ಲಿ ಹಿಜಾಬ್ ಕುರಿತಂತೆ ವಿಚಾರಣೆ ಮುಂದುವರಿದಿದ್ದು, ಸದ್ಯದಲ್ಲೇ ತೀರ್ಪು ಹೊರ ಬೀಳುವ ಸಾಧ್ಯತೆಯೂ ಇದೆ. ಇಷ್ಟೆಲ್ಲ ಇದ್ದರೂ ಈ ವಸ್ತ್ರ ವಿವಾದವನ್ನು ಮುಂದುವರಿಸಿಕೊಂಡು ಹೋಗುವುದು ಬೇಕಿಲ್ಲದ ವಿಷಯವಾಗಿತ್ತು.
ಈ ಹಿಂದೆ ವಿವಾದಕ್ಕೆ ಕಾರಣವಾಗಿದ್ದ ಮತ್ತು ಮೊದಲಿಗೆ ವಿವಾದ ಆರಂಭವಾಗಿದ್ದ ಪಿಯು ತರಗತಿಗಳಿಗೂ ಬುಧವಾರ ಶಾಲೆ ಆರಂಭವಾಗುತ್ತಿರುವುದರಿಂದ ಈ ಬಗ್ಗೆ ಎಚ್ಚರಿಕೆಯಿಂದ ಇರುವುದು ಅತ್ಯಂತ ಅಗತ್ಯವಾಗಿದೆ. ವಿವಾದಕ್ಕೆ ಕಾರಣವಾಗುವ ಶಾಲೆಗಳನ್ನು ಗುರುತಿಸಿ ರಾಜ್ಯ ಸರಕಾರ ಪೊಲೀಸ್ ಬಂದೋಬಸ್ತ್ ಕೈಗೊಳ್ಳಬೇಕು. ಯಾವುದೇ ಕಾರಣಕ್ಕೂ ಈ ವಿವಾದ ಮತ್ತಷ್ಟು ಬೆಳೆಯಲು ಬಿಡಬಾರದು.
ಹಾಗೆಯೇ ಪದವಿ ಕಾಲೇಜುಗಳೂ ಬುಧವಾರ ಆರಂಭವಾಗುತ್ತಿವೆ. ಸದ್ಯ ಇಲ್ಲಿ ಯಾವುದೇ ಸಮವಸ್ತ್ರ ಸಂಹಿತೆ ಇರದೇ ಇರುವುದರಿಂದ ವಿವಾದವಾಗುವ ಸಾಧ್ಯತೆಗಳು ಕಡಿಮೆ. ಅಲ್ಲದೆ ಉನ್ನತ ಶಿಕ್ಷಣ ಸಚಿವ ಡಾ| ಸಿ. ಎನ್. ಅಶ್ವತ್ಥನಾರಾಯಣ್ ಅವರೇ ಒಂದು ಸ್ಪಷ್ಟನೆಯನ್ನು ನೀಡಿದ್ದಾರೆ. ಪದವಿ ಕಾಲೇಜುಗಳಿಗೆ ವಿದ್ಯಾರ್ಥಿಗಳು ತಮಗಿಷ್ಟ ಬಂದ ಬಟ್ಟೆಗಳನ್ನು ಧರಿಸಿಕೊಂಡು ಬರಬಹುದು. ಇದಕ್ಕೆ ಯಾರ ಅಡ್ಡಿಯೂ ಇಲ್ಲ ಎಂದೂ ಹೇಳಿದ್ದಾರೆ. ಹೀಗಾಗಿ ಇಲ್ಲಿ ಅಂಥ ವಿವಾದವಾಗುವುದಿಲ್ಲ ಎಂಬ ಭರವಸೆ ಇದೆ.
ಏನೇ ಆಗಲಿ ಬುಧವಾರ ಆರಂಭವಾಗಲಿರುವ ಪದವಿ ಪೂರ್ವ ಮತ್ತು ಪದವಿ ಕಾಲೇಜುಗಳು ಶಾಂತರೀತಿಯಲ್ಲಿ ನಡೆಯಬೇಕು. ಇನ್ನು ಕೆಲವೇ ದಿನಗಳಲ್ಲಿ ವಿದ್ಯಾರ್ಥಿಗಳಿಗೆ ಪರೀಕ್ಷೆ ಇರುವುದರಿಂದ ಮತ್ತು ಈಗಾಗಲೇ ಎಂಜಿನಿಯರಿಂಗ್ ಕಾಲೇಜಿನಲ್ಲಿ ಕೆಲವೊಂದು ಪರೀಕ್ಷೆಗಳೂ ಆರಂಭವಾಗಿರುವುದರಿಂದ ಇಲ್ಲಿ ಗೊಂದಲಕ್ಕೆ ಆಸ್ಪದ ನೀಡಬಾರದು. ಈ ನಿಟ್ಟಿನಲ್ಲಿ ಸರಕಾರ ಗಮನ ಹರಿಸಬೇಕು.