Advertisement

ಬಡವರ ಬಳಿ ಸಂತರೇ ಹೋಗಲಿ: ಸುರೇಂದ್ರ ಜೈನ್‌ ಕರೆ

09:32 AM Nov 27, 2017 | Team Udayavani |

ಉಡುಪಿ: ಶ್ರೀಮಂತರೆಲ್ಲ ಸಂತರನ್ನು ಹುಡುಕಿಕೊಂಡು ಮಠಗಳಿಗೆ ಬರುತ್ತಾರೆ. ಬಡವರಿಗೆ ಅಂತಹ ಸೌಭಾಗ್ಯವಿರುವುದಿಲ್ಲ. ಆದ್ದರಿಂದ ಮಠಾಧೀಶರೇ ಬಡವರಲ್ಲಿಗೆ ಹೋಗುವಂತಹ ನಿರ್ಣಯವಾಗಬೇಕು. ಆಗ ನೈಜ ಭಾರತದ ದರ್ಶನವಾಗುತ್ತದೆ ಎಂದು ವಿಶ್ವ ಹಿಂದೂ ಪರಿಷತ್‌ ಅಂತಾರಾಷ್ಟ್ರೀಯ ಸಂಯುಕ್ತ ಪ್ರಧಾನ ಕಾರ್ಯದರ್ಶಿ ಸುರೇಂದ್ರ ಕುಮಾರ್‌ ಜೈನ್‌ ಹೇಳಿದ್ದಾರೆ.

Advertisement

ಅವರು ರವಿವಾರ ಇಲ್ಲಿನ ರಾಜಾಂಗಣದಲ್ಲಿ ಧರ್ಮಸಂಸದ್‌ ಅಂಗವಾಗಿ ನಡೆದ ಸಮಾಜ ಪ್ರಮುಖರ ಸಮಾಲೋಚನ ಸಭೆಯಲ್ಲಿ ದಿಕ್ಸೂಚಿ ಭಾಷಣ ಮಾಡಿದರು. ಕ್ರಾಂತಿ ಉಡುಪಿಯಿಂದ ಆರಂಭ ದೇಶದಲ್ಲಿ ಯಾವುದೇ ಪರಿವರ್ತನೆ ಆಗಲಿ, ಕ್ರಾಂತಿ ಆಗಲಿ ಅದು ಆರಂಭವಾದದ್ದು ಉಡುಪಿಯ ಮಣ್ಣಿ ನಿಂದ. ಕನಕದಾಸರಂತಹವರ ಮೂಲಕ. ಉಡುಪಿಯ ಭೋಜನ ಕೂಡ ಪ್ರಪಂಚದಲ್ಲೇ ಪ್ರಸಿದ್ಧ. ಉಡುಪಿಯ ಧರ್ಮ ಸಂಸದ್‌ನಿಂದಾಗಿ ಹಿಂದೂಗಳು ನಾವೆಲ್ಲ ಒಂದು ಎಂದು ಸಾರುವಂತಾಯಿತು ಎಂದರು.

ಬಾಬರ್‌ ಆದರ್ಶನಲ್ಲ
ಬಾಬರ್‌, ಔರಂಗಜೇಬ್‌, ಟಿಪ್ಪುವಿನಂತಹ ಭಾರತ ವಿರೋಧಿಗಳು ನಮಗೆ ಎಂದಿಗೂ ಆದರ್ಶರಲ್ಲ. ನಮ್ಮ ದೇಶದ ಮೌಲ್ಯ ಎತ್ತಿಹಿಡಿದ ಅಬ್ದುಲ್‌ ಕಲಾಂ ಅವರಂತಹವರು ಆದರ್ಶರಾಗಬೇಕು. ರಾಮನ ಜತೆ ಬಂದರೆ ದೇಶಭಕ್ತಿ, ಬಾಬರನ ಜತೆ ಹೋದರೆ ದೇಶಭಕ್ತಿ ಸಾಧ್ಯವಿಲ್ಲ. ಕರ್ನಾಟಕದಲ್ಲಿ ಗೋಮಾಂಸ ತಿನ್ನುವ ಔತಣಕೂಟಗಳಾಗುತ್ತಿವೆ. ಗೋಕಳ್ಳರ ಮೇಲೆ ಪ್ರಕರಣ ದಾಖಲಾಗುವ ಬದಲು ಗೋರಕ್ಷಕರ ಮೇಲೆ ಕೇಸು, ಗೋರಕ್ಷಕರ ಹತ್ಯೆಗಳಾಗುತ್ತಿವೆ. ಇಂತಹವರು ಅಧಿಕಾರದಲ್ಲಿ ಹೇಗೆ ಮುಂದುವರಿಯುತ್ತಾರೆ ಎನ್ನುವುದನ್ನು ನೋಡಬೇಕು ಎಂದರು.

ಜೆಹಾದಿಗಳಿಂದ ಆತಂಕ
ಜೆಹಾದಿ ದಾನವರಿಂದ ಆತಂಕ ಉಂಟಾಗಿದೆ. ಅದು ಲವ್‌ ಜೆಹಾದ್‌, ಮತಾಂತರ ಹೀಗೆ ಬೇರೆ ಬೇರೆ ವಿಧದಲ್ಲಿ ಕಂಡುಬರುತ್ತಿದೆ. ತ್ರಿವಳಿ ತಲಾಖ್‌ ಮೂಲಕ ಆ ಧರ್ಮದಲ್ಲಿ ಮಹಿಳೆಯರಿಗೆ ಬೆಲೆ ಇಲ್ಲವೆಂದು ಗೊತ್ತಾಗಿದೆ. ವಿದ್ಯಾರಣ್ಯರು ಹಕ್ಕಬುಕ್ಕರ ಮೂಲಕ ವಿಜಯನಗರ ಸ್ಥಾಪಿಸಿ ಘರ್‌ ವಾಪ್ಸಿ ಮಾಡಿದರು. ಆದ್ದರಿಂದ ಹೊರಹೋದವರನ್ನು ಮರಳಿ ಕರೆತರುವ ಅಗತ್ಯವಿದೆ. ಹೊರ ಹೋಗಲು ಅವಕಾಶ ಕೊಡಬಾರದು. ನಮ್ಮಲ್ಲಿ ಸಂಘಟನೆ ಇದ್ದರೆ ನಾವೆಲ್ಲ ಒಂದಾಗಿದ್ದರೆ, ನಮ್ಮೊಳಗಿನ ಅಸಮಾನತೆ ತೊಲಗಿದರೆ ಇದು ಸಾಧ್ಯ. ಬಲಾತ್ಕಾರ, ಭ್ರಷ್ಟಾಚಾರ, ಅತ್ಯಾಚಾರ ಕಾನೂನಿನಿಂದ ನಿರ್ಮೂಲನೆ ಅಸಾಧ್ಯ. ಧರ್ಮಪಾಲನೆಯಿಂದ ಸಾಧ್ಯ ಎಂದರು.

ಸಮಾಜ ಪ್ರಮುಖರು
ಸಮಾಜ ಪ್ರಮುಖರ ಸಭೆಗೆ 2,600 ಜಾತಿಗಳ ಪ್ರಮುಖರನ್ನು, 100ಕ್ಕೂ ಹೆಚ್ಚು ಪಂಗಡಗಳ ಮುಖಂಡರನ್ನು ಆಹ್ವಾನಿಸಲಾಗಿತ್ತು. ಅನೇಕರು ಹಿಂದೂ ಧರ್ಮದಲ್ಲಿರುವ ಅಸಮಾನತೆ ಹಾಗೂ ಶೋಷಣೆ ಕುರಿತು ಅಭಿಪ್ರಾಯ ಮಂಡಿಸಿದರು.

Advertisement

ಕಾಣಿಕೆ ಡಬ್ಬಿ ನಿಷೇಧಿಸಿ
ಕುಂಬಾರ ಸಮಾಜದ ಮುಖಂಡ ಡಾ| ಅಣ್ಣಯ್ಯ ಕುಲಾಲ್‌ ಉಳೂ¤ರು ಮಾತನಾಡಿ, ಕಾಣಿಕೆ ಡಬ್ಬಿಯ ಮೂಲಕ ದೇವಾಲಯಗಳಲ್ಲಿ ಲೂಟಿ ನಡೆಯುತ್ತಿದೆ. ಆದ್ದರಿಂದ ಕಾಣಿಕೆ ಡಬ್ಬಿ ಸ್ಥಾಪಿಸ ಬಾರದು. ಬದಲಾಗಿ ಅರ್ಹರಿಗೆ ಕಾಣಿಕೆ ಹಣ ತಲುಪುವಂತಾಗಬೇಕು ಎಂದರು.

ಜಾತಿ ಬದಲು ಸಂಸ್ಕಾರ ಕೇಂದ್ರಿತವಾಗಲಿ
ಮಾಜಿ ಶಾಸಕ ನೆ.ಲ. ನರೇಂದ್ರ ಬಾಬು, ದೇವಾಲಯಗಳು ಜಾತಿ ಆಧಾರಿತವಾಗಬಾರದು. ಸಂಸ್ಕಾರ ಪಸರಿಸುವ ಕೇಂದ್ರಗಳಾಗಬೇಕು. ಪ್ರೀತಿ ಹಂಚುವ ಕಾರ್ಯ ನಡೆಸಬೇಕು ಎಂದರು.

ಹಲವು ಸಲಹೆಗಳು
ಸ್ವಾಮೀಜಿಗಳು ಜಾತಿ ಆಧಾರದಲ್ಲಿ ಕೆಲಸ ಮಾಡ ಬಾರದು, ಸಮಾಜ ಒಡೆವ‌ ಕೆಲಸ ಮಾಡಬಾರದು, ಎಡಪಂಥದ ಕಡೆಗೆ ವಾಲುವ ಸ್ವಾಮೀಜಿಗಳ ಮನವೊಲಿಸಬೇಕು. ವೀರಶೈವ-ಲಿಂಗಾಯತ ಪ್ರತ್ಯೇಕತೆ ವಿವಾದ ಬಗೆಹರಿಸಬೇಕು, ಮೀಸಲಾತಿಗೆ ಮಾತ್ರ ಜಾತಿಗಳು ಸೀಮಿತವಾಗಬಾರದು, ದೇವಾಲಯಗಳಿಗೆ ಚಿನ್ನಬೆಳ್ಳಿ ಹರಕೆ ಕೊಡುವ ಬದಲು ದೇವಾಲಯ, ಮಠ ಮಂದಿರಗಳು, ಶಿಕ್ಷಣ, ಆರೋಗ್ಯ ಕೇಂದ್ರಗಳ ಸ್ಥಾಪನೆಗೆ ಆದ್ಯತೆ ನೀಡಬೇಕು. ಚಿಕ್ಕಬಳ್ಳಾಪುರದಲ್ಲಿ ಹೆಚ್ಚುತ್ತಿರುವ ಮತಾಂತರ ತಡೆಯಬೇಕು ಎಂಬ ಅಭಿಪ್ರಾಯಗಳು ಬಂದವು. ಬಾರಕೂರು ಸಂಸ್ಥಾನದ ಶ್ರೀ ವಿಶ್ವಸಂತೋಷ ಭಾರತಿ ಗುರೂಜಿ, ಚಿತ್ರದುರ್ಗದ ಶ್ರೀ ಮಾದಾರ ಚೆನ್ನಯ್ಯ ಸ್ವಾಮೀಜಿ, ವಿಹಿಂಪ ಕರ್ನಾಟಕ ಉತ್ತರ ಪ್ರಾಂತ ಅಧ್ಯಕ್ಷ ಡಾ| ಎಸ್‌.ಆರ್‌. ರಾಮನ ಗೌಡರ್‌ ಧಾರವಾಡ, ಉಪಾಧ್ಯಕ್ಷೆ ವಿಜಯಲಕ್ಷ್ಮೀ ಹಿರೇಮs… ಹೊಸಪೇಟೆ, ದಕ್ಷಿಣ ಪ್ರಾಂತ ಅಧ್ಯಕ್ಷೆ ಡಾ| ವಿಜಯಲಕ್ಷ್ಮೀ ದೇಶಮಾನೆ ಇದ್ದರು. ಉ. ಪ್ರಾಂತ ಪ್ರಮುಖ್‌ ಗೋವರ್ಧನ್‌ ರಾವ್‌ ಸ್ವಾಗತಿಸಿ, ದ. ಪ್ರಾಂತ ಉಪಾಧ್ಯಕ್ಷ ಶಂಕರಪ್ಪ ವಂದಿಸಿದರು.

ಅಸ್ಪೃಶ್ಯತೆ ನಿವಾರಣೆಯಾಗಲಿ
ಅಸ್ಪೃಶ್ಯತೆ ನಿವಾರಣೆಯಾಗದೇ  ಹಿಂದೂ ಸಮಾಜದ ಕಳಂಕ ತಪ್ಪದು  ಎಂದು ಅಂಬೇಡ್ಕರ್‌, ಗುರೂಜಿ ಗೋಳವಲ್ಕರ್‌ ಮೊದಲಾದವರು ಹೇಳಿದ್ದರು. 1969ರಲ್ಲಿ ನಡೆದ ಮೊದಲ ಧರ್ಮ ಸಂಸದ್‌ನ ನಿರ್ಣಯ ಕೂಡ ಹಿಂದವಃ ಸೋದರಾಃ ಸರ್ವೇ ಎನ್ನುವುದೇ ಆಗಿದೆ. ಅಸಮಾನತೆ ಹೇಗೆ ನಮಗೆ ಕಳಂಕವೋ ಹಾಗೆಯೇ ನಮ್ಮಲ್ಲಿ ದ್ವಿತೀಯ ದರ್ಜೆ ನಾಗರಿಕರು, ಉಪೇಕ್ಷಿತರು, ಅವಮಾನಿತರು ಎಂದಿರಬಾರದು. ಬ್ರಾಹ್ಮಣ, ಕ್ಷತ್ರಿಯ, ವೈಶ್ಯ, ಶೂದ್ರ ಏನೇ ಇದ್ದರೂ ಭಾರತಮಾತೆಯ ಮಕ್ಕಳು. ಎಲ್ಲರೂ ಹಿಂದೂ ಧರ್ಮದ ಅನುಯಾಯಿಗಳು ಎಂದರು.

ಲಕ್ಷ್ಮೀ ಮಚ್ಚಿನ

Advertisement

Udayavani is now on Telegram. Click here to join our channel and stay updated with the latest news.

Next