Advertisement
ಬೆಂಗಳೂರು ಕೃಷಿ ವಿಶ್ವವಿದ್ಯಾಲಯ ಹಾಗೂ ಸರ್ಕಾರದ ವಿವಿಧ ಇಲಾಖೆಗಳ ವತಿಯಿಂದ ಹೆಬ್ಟಾಳದ ಜಿಕೆವಿಕೆ ಆವರಣದಲ್ಲಿ ಆಯೋಜಿಸಿದ್ದ ಕೃಷಿಮೇಳ-2018ಕ್ಕೆ ಗುರುವಾರ ಚಾಲನೆ ನೀಡಿ ಮಾತನಾಡಿದ ಅವರು, ಗಂಗಾ ನದಿಯ ನೀರು ಅಂತಿಮವಾಗಿ ಬಂಗಾಳ ಕೊಲ್ಲಿ ಸೇರುತ್ತದೆ. ಹೀಗೆ ದೇಶದ ಅನೇಕ ನದಿಗಳ ನೀರು ಸಮುದ್ರದ ಪಾಲಾಗುತ್ತಿದೆ.
Related Articles
Advertisement
ವಿಶ್ವದಲ್ಲಿ ಕೃಷಿ ತಂತ್ರಜ್ಞಾನ ವೇಗವಾಗಿ ಬೆಳೆಯುತ್ತಿದೆ. ದೇಶದಲ್ಲೂ ಹೊಸ ಸಂಶೋಧನೆಗಳು ಹುಟ್ಟಿಕೊಳ್ಳುತ್ತಿವೆ. ತಂತ್ರಜ್ಞಾನದ ಬಳಕೆ, ತಳಿಗಳ ಸೃಷ್ಟಿ, ಬೀಜೋತ್ಪಾದನೆ ಹೀಗೆ ಎಲ್ಲ ಕ್ಷೇತ್ರದಲ್ಲೂ ಆಧುನಿಕ ವ್ಯವಸ್ಥೆ ಹಾಗೂ ಇರುವ ಅನುಕೂಲವನ್ನು ಸದುಪಯೋಗ ಮಾಡಿಕೊಳ್ಳಬೇಕು ಎಂದು ಸಲಹೆ ನೀಡಿದರು.
ಮೌಲ್ಯಮಾಪನ ಸಮಿತಿ ರಚನೆ: ಕೃಷಿ ಸಚಿವ ಶಿವಶಂಕರ ರೆಡ್ಡಿ ಮಾತನಾಡಿ, ರಾಜ್ಯದ ಕೃಷಿ, ತೋಟಗಾರಿಕೆ, ಹೈನುಗಾರಿಕೆ, ಮೀನುಗಾರಿಕೆ ವಿಶ್ವವಿದ್ಯಾಲಯಗಳ ಸಂಶೋಧನಾ ಗುಣಮಟ್ಟ, ಶೈಕ್ಷಣಿಕ ಪ್ರಗತಿ ಮತ್ತು ಆರ್ಥಿಕ ನಿರ್ವಹಣೆ ಅಧ್ಯಯನಕ್ಕಾಗಿ ವಾರದೊಳಗೆ ರಾಷ್ಟ್ರೀಯ ಮಟ್ಟದ ಉನ್ನತ ಸಮಿತಿ ರಚಿಸಲಾಗುವುದು. ಈ ಸಂಬಂಧ ಕೇಂದ್ರ ಕೃಷಿ ಇಲಾಖೆ ಅಧಿಕಾರಿಗಳೊಂದಿಗೆ ಈಗಾಗಲೇ ಚರ್ಚೆ ನಡೆಸಿದ್ದೇವೆ ಎಂದರು.
ಕೃಷಿಕರ ಜೀವನ ಮಟ್ಟ ಸುಧಾರಣೆ, ಕೃಷಿ ತಂತ್ರಜ್ಞಾನದ ಸರಳ ಬಳಕೆಯ ಹಾಗೂ ರೈತರ ಸಮಸ್ಯೆಗೆ ಪರಿಹಾರ ನೀಡುವ ಸಂಶೋಧನೆಗಳು ನಿರೀಕ್ಷಿತ ಮಟ್ಟದಲ್ಲಿ ಬರುತ್ತಿಲ್ಲ. ಕೃಷಿ, ತೋಟಗಾರಿಕೆ ಮೊದಲಾದ ವಿಶ್ವವಿದ್ಯಾಲಯಗಳ ಆರ್ಥಿಕ ನಿರ್ವಹಣೆ, ಮೂಲ ಸೌಕರ್ಯ ಇತ್ಯಾದಿ ಎಲ್ಲ ವಿಷಯಗಳ ಸಮಗ್ರ ಮಾಹಿತಿ ಪಡೆಯುವ ಉದ್ದೇಶದಿಂದ ಉನ್ನತ ಮಟ್ಟದ ಮೌಲ್ಯಮಾಪನ ಸಮಿತಿ ರಚನೆ ಮಾಡುತ್ತಿದ್ದೇವೆ.
ಈ ಸಮಿತಿಯಲ್ಲಿರುವ ಕೃಷಿ ತಜ್ಞರು, ವಿಶ್ರಾಂತ ಕುಲಪತಿಗಳು, ರಾಜ್ಯಾದ್ಯಂತ ಸಂಚರಿಸಿ ಶಿಫಾರಸಿನ ರೂಪದಲ್ಲಿ ಸರ್ಕಾರಕ್ಕೆ ವರದಿ ಸಲ್ಲಿಸಲಿದ್ದಾರೆ. ವರದಿ ಪರಿಶೀಲನೆ ನಂತರ ಅನುಷ್ಠಾನಕ್ಕೆ ಬೇಕಾದ ಕ್ರಮಗಳನ್ನು ಸರ್ಕಾರ ತೆಗೆದುಕೊಳ್ಳಲಿದೆ ಎಂದು ಹೇಳಿದರು.
ಖಾಸಗಿ ಕೃಷಿ ಕಾಲೇಜುಗಳಿಗೆ ಕಡಿವಾಣ: ಖಾಸಗಿ ಕೃಷಿ ಕಾಲೇಜುಗಳಿಗೆ ಕಡಿವಾಣ ಹಾಕಲು ಕಾನೂನು ಜಾರಿಗೆ ತರಲಾಗುವುದು. ಖಾಸಗಿ ಕೃಷಿ ಕಾಲೇಜುಗಳಲ್ಲಿ ಸಂಶೋಧನೆ ಸಹಿತವಾಗಿ ಎಲ್ಲವೂ ವ್ಯವಸ್ಥಿತವಾಗಿ ನಡೆಯುತ್ತದೆ ಎಂದು ನಿರೀಕ್ಷಿಸಲು ಸಾಧ್ಯವಿಲ್ಲ.
ಇದರಿಂದ ವಿದ್ಯಾರ್ಥಿಗಳಿಗೆ ಅನ್ಯಾಯವಾಗುವ ಜತೆಗೆ ಶೈಕ್ಷಣಿಕ ಗುಣಮಟ್ಟ ಕುಸಿಯುತ್ತದೆ. ಹೀಗಾಗಿ ಖಾಸಗಿ ಕೃಷಿ ಕಾಲೇಜುಗಳಿಗೆ ಕಡಿವಾಣ ಹಾಕಲು ಸರ್ಕಾರ ನಿರ್ಧರಿಸಿದೆ. ಇದರೊಂದಿಗೆ ಇಸ್ರೇಲ್ ಮಾದರಿ ಕೃಷಿ ಪದ್ಧತಿ ಅನುಷ್ಠಾನಕ್ಕೆ ಈಗಾಗಲೇ ಅಗತ್ಯ ಕ್ರಮ ಕೈಗೊಳ್ಳಲಾಗುತ್ತಿದೆ.
ಸಾವಯವ ಕೃಷಿ, ಶೂನ್ಯ ಬಂಡವಾಳ ಕೃಷಿ, ಸಿರಿಧಾನ್ಯ ಉತ್ತೇಜನ ಹೀಗೆ ಹಲವು ಕಾರ್ಯಕ್ರಮಗಳನ್ನು ಸರ್ಕಾರ ಕೈಗೆತ್ತಿಕೊಂಡಿದೆ ಎಂದು ಸಚಿವ ಶಿವಶಂಕರ ರೆಡ್ಡಿ ಮಾಹಿತಿ ನೀಡಿದರು. ಕೃಷಿ ವಿವಿ ಕುಲಪತಿ ಡಾ.ಎಸ್.ರಾಜೇಂದ್ರ ಪ್ರಸಾದ್, ಸಂಶೋಧನಾ ನಿರ್ದೇಶ ಡಾ.ವೈ.ಜಿ.ಷಡಕ್ಷರಿ, ವಿಸ್ತರಣಾ ನಿರ್ದೇಶಕ ಡಾ.ಎಂ.ಎಸ್.ನಟರಾಜು, ವಿವಿ ವ್ಯವಸ್ಥಾಪನ ಮಂಡಳಿ ಸದಸ್ಯರು ಉಪಸ್ಥಿತರಿದ್ದರು.
ಹೊಸ ತಳಿಗಳ ಲೋಕಾರ್ಪಣೆ: ಬೆಂಗಳೂರು ಕೃಷಿ ವಿಶ್ವವಿದ್ಯಾಲಯ ಸಂಶೋಧಿಸಿರುವ ರಾಗಿ, ಸೂರ್ಯಕಾಂತಿ, ಅಕ್ಕಿ ಅವರೆ ಹಾಗೂ ಸೋಯಾ ಅವರೆಯ ಹೊಸ ತಳಿಗಳನ್ನು ಗುರುವಾರ ಕೃಷಿ ಮೇಳದಲ್ಲಿ ರಾಜ್ಯಪಾಲ ವಿ.ಆರ್.ವಾಲಾ ಬಿಡುಗಡೆಗೊಳಿಸಿದರು.
ರಾಗಿ: ಕೆಎಂಆರ್-630 ತಳಿಯು ಅಧಿಕ ಇಳುವರಿ ನೀಡುವ ಅಲ್ಪಾವಧಿಯ ಬೆಳೆಯಾಗಿದ್ದು, ಬೆಂಕಿ ರೋಗದ ಸಹಿಷ್ಣುತೆ ಹೊಂದಿದೆ. ನೆಲಕ್ಕೆ ಬೀಳದಿರುವ ಗುಣದೊಂದಿಗೆ ಯಾಂತ್ರೀಕೃತ ಕಟಾವಿಗೆ ಸೂಕ್ತವಾಗಿರುವ ಈ ತಳಿಯನ್ನು ನೀರಾವರಿ ಹಾಗೂ ಶುಷ್ಕ ಭೂಮಿಯಲ್ಲಿ ಬೆಳೆಯಬಹುದಾಗಿದೆ.
ಅಕ್ಕಿ ಅವರೆ: ಕೆಬಿಆರ್-1 ತಳಿಯು ಹೆಕ್ಟೇರ್‌ಗೆ 12ರಿಂದ 14 ಕ್ವಿಂಟಾಲ್ ಇಳುವರಿ ನೀಡಬಲ್ಲದು. ಬೀಜವು ದಪ್ಪವಾಗಿದ್ದು, ತಿಳಿ ಹಸಿರು ಬಣ್ಣದಿಂದ ಕೂಡಿದೆ. ಪೋಷಕಾಂಶ ಭರಿತ, ಹೆಚ್ಚಿನ ಸಸಾರಜನದ ಸಾರವುಳ್ಳ ಬೆಳೆಯಾಗಿದೆ.
ಸೋಯಾ ಅವರೆ: ಬಿತ್ತನೆ ಮಾಡಿದ 90ರಿಂದ 95 ದಿನದಲ್ಲಿ ಕಟಾವಿಗೆ ಬರುವ ಕೆಬಿಎಸ್-23 ತಳಿ, ಹೆಕ್ಟೇರ್‌ಗೆ 25ರಿಂದ 30 ಕ್ವಿಂಟಾಲ್ ಇಳುವರಿ ನೀಡುತ್ತದೆ. ಮುಂಗಾರಿನಲ್ಲಿ ಶುಷ್ಕ ಹಾಗೂ ನೀರಾವರಿ ಪ್ರದೇಶಕ್ಕೆ ಈ ತಳಿ ಸೂಕ್ತವಾಗಿದೆ.
ಸೂರ್ಯಕಾಂತಿ: ಕೆಬಿಎಸ್‌ಎಚ್-78 ಅಲ್ಪವಧಿ ತಳಿಯಾಗಿದೆ. ಮಳೆಯಾಶ್ರಿತ ಪ್ರದೇಶದಲ್ಲಿ ಹೆಕ್ಟೇರ್‌ಗೆ 10ರಿಂದ 12 ಕ್ವಿಂಟಾಲ್, ನೀರಾವರಿ ಪ್ರದೇಶವಾದರೆ ಹೆಕ್ಟೇರ್‌ಗೆ 22ರಿಂದ 25 ಕ್ವಿಂಟಾಲ್ ಬೆಳೆ ತೆಗೆಯಬಹುದು. ಎಣ್ಣೆಯ ಇಳುವರಿ ಹೆಕ್ಟೇರ್‌ಗೆ 900ರಿಂದ 950 ಕೆ.ಜಿ ಇರುತ್ತದೆ. ಈ ತಳಿಯು ಮಧ್ಯಮ ಎತ್ತರ ಹಾಗೂ ಗಟ್ಟಿಯಾದ ಕಾಂಡ ಹೊಂದಿರುತ್ತದೆ.
ಕೃಷಿ ಕ್ಯಾಲೆಂಡರ್ ಬಿಡುಗಡೆ: ಕೃಷಿ ವಿಶ್ವವಿದ್ಯಾಲಯದಿಂದ ಹೊರ ತಂದಿರುವ 2019ನೇ ಸಾಲಿನ ಕೃಷಿ ಕ್ಯಾಲೆಂಡರ್ ಅನ್ನು ಕೃಷಿ ಮೇಳದಲ್ಲಿ ಬಿಡುಗಡೆ ಮಾಡಲಾಯಿತು. ಕೃಷಿಕರಿಗೆ ಹೆಚ್ಚು ಉಪಯುಕ್ತವಾಗಿರುವ ಈ ಕ್ಯಾಲೇಂಡರ್‌ನಲ್ಲಿ ಹವಮಾನ ಮತ್ತು ಋತುಮಾನಕ್ಕೆ ಅನುಗುಣವಾಗಿ ಬೆಳೆಯಬಹುದಾದ ಬೆಳೆಗಳ ಕುರಿತ ಮಾಹಿತಿ ಇರಲಿದೆ. ದರೊಂದಿಗೆ ಕೃಷಿಗೆ ಸಂಬಂಧಿಸಿದ ನೂರಾರು ಅಗತ್ಯ ಮಾಹಿತಿಗಳನ್ನು ಕ್ಯಾಲೆಂಡರ್‌ನಲ್ಲಿ ನೀಡಲಾಗಿದೆ.