ರಾಜ್ಯದ 17 ವಿವಿಗಳಲ್ಲಿನ ಅಧ್ಯಯನ ಪೀಠಗಳಲ್ಲಿ ಬಹುತೇಕ ಪೀಠಗಳು ಮತ್ತು ಸಂಶೋಧನ ಕೇಂದ್ರಗಳಲ್ಲಿ ವಿದ್ಯಾರ್ಥಿಗಳಿಲ್ಲದೆ ಸೊರಗುತ್ತಿವೆ. ಸ್ವತಃ ಉದಯವಾಣಿ ನಡೆಸಿದ ರಿಯಾಲಿಟಿ ಚೆಕ್‌ನಲ್ಲಿ ಈ ಅಂಶ ಬಹಿರಂಗವಾಗಿದೆ. ಜಗತ್ತು ತಂಡ ಮಹನೀಯರನ್ನು ಸ್ಮರಿಸುವ ಸಲುವಾಗಿಸ್ಥಾಪಿತವಾದ ಅಧ್ಯಯನ ಪೀಠಗಳಲ್ಲಿ ವಿದ್ಯಾರ್ಥಿಗಳು ಅಥವಾ ಸಂಶೋಧನಾರ್ಥಿಗಳು ಇಲ್ಲದೇ ಇರುವುದು ದುರಂತವೇ ಸರಿ.
ಅಧ್ಯಯನ ಪೀಠಗಳ ವಿಚಾರದಲ್ಲಿ ಸರಕಾರದ ನಿರ್ಲಕ್ಷ್ಯ ಅಥವಾ ವಿದ್ಯಾರ್ಥಿಗಳ ನಿರಾಸಕ್ತಿ ಕುರಿತಂತೆ ಒಂದು ಅಧ್ಯಯನದ ಅಗತ್ಯ ಜರೂರತ್ತಾಗಿದೆ. ಬಹು ಹಿಂದಿನಿಂದಲೂ ವಿಶ್ವವಿದ್ಯಾನಿಲಯಗಳಲ್ಲಿ ಅಧ್ಯಯನ ಪೀಠಗಳನ್ನು ರಚಿಸುವ ರೂಢಿ ನಡೆದುಕೊಂಡು ಬಂದಿದೆ. ಕೆಲವೊಮ್ಮೆ ಅಂತೂ ಜಾತಿಗಳ ನಡುವಿನ ಜಿದ್ದಾಜಿದ್ದಿಗಾಗಿ ಅಧ್ಯಯನ ಪೀಠ ರಚನೆಯಾಗಿರಬಹುದೇ ಎಂಬ ಸಂದೇಹಗಳೂ ಮೂಡುತ್ತವೆ.
ಸದ್ಯ ರಾಜ್ಯದಲ್ಲಿ ರಾಷ್ಟ್ರಪಿತ ಮಹಾತ್ಮಾ ಗಾಂಧೀಜಿ, ಬಸವಣ್ಣ, ಸಂವಿಧಾನ ಶಿಲ್ಪಿ ಡಾ|ಬಿ.ಆರ್. ಅಂಬೇಡ್ಕರ್, ಸ್ವಾಮಿ ವಿವೇಕಾನಂದ, ರಾಷ್ಟ್ರಕವಿ ಕುವೆಂಪು, ಬಾಬು ಜಗಜೀವನ್ ರಾಂ, ಡಾ| ರಾಜಕುಮಾರ್, ಕೆಂಪೇಗೌಡ ಹಾಗೂ ಆಯಾಯ ಸ್ಥಳೀಯ ಸಂಸ್ಕೃತಿ ಮತ್ತು ಪರಂಪರೆಗೆ ಅನುಸಾರವಾಗಿ ಅಧ್ಯಯನ ಪೀಠಗಳು ರಚನೆಯಾಗಿವೆ. ಒಂದು ಲೆಕ್ಕಾಚಾರದಲ್ಲಿ ನೋಡುವುದಾದರೆ ಇದು ಅತ್ಯಂತ ಉತ್ತಮವಾದ ಕೆಲಸ. ಸಾಮಾನ್ಯವಾಗಿ ವಿದ್ಯಾರ್ಥಿಗಳು ಯಾವುದೇ ಮಹನೀಯ ವ್ಯಕ್ತಿ ಬಗ್ಗೆ ಸುದೀರ್ಘವಾಗಿ ಅಧ್ಯಯನ ನಡೆಸಿರುವುದಿಲ್ಲ. ಅಲ್ಲದೆ ಕೆಲವು ಮಹನೀಯರ ನುಡಿಯಾದರ್ಶಗಳು ಮುಂದಿನ ಪೀಳಿಗೆಗೂ ತೆಗೆದುಕೊಂಡು ಹೋಗಬೇಕಾದ ಅನಿವಾರ್ಯತೆಯೂ ಇದೆ. ಇಂಥ
ಸಂದರ್ಭದಲ್ಲಿ ಮಹನೀಯರ ಕುರಿತಾದ ಅಧ್ಯಯನ ಪೀಠಗಳು ಹೆಚ್ಚೆಚ್ಚು ಕೆಲಸ ಮಾಡಿ, ಇವರ ಸಾಧನೆಗಳನ್ನು ಮುಂದುವರಿಸಿಕೊಂಡು ಹೋಗಬೇಕಾಗಿದೆ.
ಆದರೆ ರಾಜ್ಯದಲ್ಲಿರುವ ಬಹುತೇಕ ಅಧ್ಯಯನ ಪೀಠಗಳಿಗೆ ಸರಿಯಾದ ಅನುದಾನವೇ ಸಿಗುತ್ತಿಲ್ಲ. ಅಲ್ಲದೆ ಈ ಅಧ್ಯಯನ ಪೀಠಗಳಿಗೆ ಪ್ರತಿಧೀವರ್ಷವೂ ಸರಕಾರದ ಕಡೆಯಿಂದ ಅನುದಾನ ಹೋಗಬೇಕು. ಈ ಅನುದಾನದ ವಿಚಾರದಲ್ಲೇ ರಾಜ್ಯ ಸರಕಾರ ಅತ್ಯಂತ ನಿರ್ಲಕ್ಷ್ಯ ವಹಿಸಿದೆ ಎಂಬುದು ಅಧ್ಯಯನ ಪೀಠಗಳ ಸ್ಥಿತಿ ನೋಡಿದರೆ ಗೊತ್ತಾಗುತ್ತದೆ. ಏಕೆಂದರೆ ಎಲ್ಲ ವಿವಿಗಳಲ್ಲಿನ ಅಧ್ಯಯನ ಪೀಠಗಳನ್ನು ನೋಡಿದಾಗ, ಎಲ್ಲರದ್ದೂ ಇದೊಂದೇ ಆಕ್ಷೇಪ ಕೇಳಿಬಂದಿತ್ತು.
ಎಲ್ಲಕ್ಕಿಂತ ಮುಖ್ಯವಾಗಿ, ಅಧ್ಯಯನ ಪೀಠಗಳು ಇನ್ನಷ್ಟು ಕಾರ್ಯಚಟುವಟಿಕೆಗಳನ್ನು ನಡೆಸಲೇಬೇಕಾಗಿದೆ. ಕಾರ್ಯಚಟುವಟಿಕೆ ಎಂದರೆ, ಕೇವಲ ಜಯಂತಿ ಮತ್ತು ವಿಚಾರ ಸಂಕಿರಣ ನಡೆಸುವುದಲ್ಲ. ಇದಕ್ಕಿಂತಲೂ ಮಹನೀಯರ ಜೀವನಾದರ್ಶಗಳನ್ನು ವಿದ್ಯಾರ್ಥಿ ಸಮುದಾಯಕ್ಕೆ ತಿಳಿಸಿ ಹೇಳಬೇಕಾಗಿದೆ. ಇದನ್ನು ಬಿಟ್ಟು,
ಹೆಸರಿಗಷ್ಟೇ ಪೀಠ ಮಾಡಿ, ಅವುಗಳಿಗೆ ಅನುದಾನ ನೀಡದೇ
ಹೋದರೆ ಆ ಮಹನೀಯರಿಗೆ ಅವಮಾನ ಮಾಡಿದಂತೆಯೇ ಸರಿ. ಯಾವುದೇ ಕಾರಣಕ್ಕೂ ಸರಕಾರಗಳಾಗಲಿ ಅಥವಾ ವಿಶ್ವವಿದ್ಯಾನಿಲಯಗಳಾಗಲಿ ಮಹನೀಯರಿಗೆ ಅವಮಾನ ಮಾಡುವ ಕೆಲಸ ಮಾಡಬಾರದು. ಈ ಕೂಡಲೇ ಅಧ್ಯಯನ ಪೀಠಗಳಿಗೆ ಅಗತ್ಯ ಅನುದಾನ ನೀಡಿ,ಸಂಶೋಧನಾರ್ಥಿಗಳು ಮತ್ತು ವಿದ್ಯಾರ್ಥಿಗಳ ಅಧ್ಯಯನಕ್ಕೆ ಅವಕಾಶ ಮಾಡಿಕೊಡಬೇಕು.