ಬೆಂಗಳೂರು: ರಾಜ್ಯದ ಅಭಿವೃದ್ಧಿಗೆ ಪ್ರಾದೇಶಿಕ ಪಕ್ಷದ ಅಗತ್ಯತೆ ಜನರ ಅರಿವಿಗೂ ಬಂದಿದೆ. ಇದರ ಪರಿಣಾಮ ರಾಜ್ಯಾದ್ಯಂತ ಜೆಡಿಎಸ್ ಪರ ವಾತಾವರಣ ನಿರ್ಮಾಣವಾಗಿದೆ ಎಂದು ಮಾಜಿ ಪ್ರಧಾನಿ ಎಚ್.ಡಿ.ದೇವೆಗೌಡ ಹೇಳಿದರು.
ಗುರುವಾರ ಹೆಬ್ಟಾಳ ವಿಧಾನಸಭಾ ಕ್ಷೇತ್ರದ ಜೆಡಿಎಸ್ ಕಚೇರಿ ಉದ್ಘಾಟಿಸಿ ಮಾತನಾಡಿ, ನೆರೆಯ ತಮಿಳುನಾಡಿನಲ್ಲಿ ಪ್ರಾದೇಶಿಕ ಪಕ್ಷಗಳು ಪ್ರಬಲವಾಗಿವೆ. ಈ ಕಾರಣದಿಂದಲೇ ಅಲ್ಲಿ ರಾಷ್ಟ್ರೀಯ ಪಕ್ಷಗಳು ಏನೂ ಮಾಡಲಾಗದೆ ಪ್ರಾದೇಶಿಕ ಪಕ್ಷಗಳ ಮೊರೆ ಹೋಗುತ್ತವೆ. ಪ್ರಾದೇಶಿಕ ಪಕ್ಷಗಳಿಂದ ಮಾತ್ರ ರಾಜ್ಯದ ಅಭಿವೃದ್ಧಿ ಸಾಧ್ಯವಿದ್ದು, ಈ ಜನರು ಬಾರಿ ಜೆಡಿಎಸ್‌ಗೆ ಬೆಂಬಲಿಸಲಿದ್ದಾರೆ ಎಂದು ವಿಶ್ವಾಸ ವ್ಯಕ್ತಪಡಿಸಿದರು.
ತಮಿಳುನಾಡಿನ ಚುನಾವಣೆಯಲ್ಲಿ ಪ್ರಾದೇಶಿಕ ಪಕ್ಷಗಳು ನಿರ್ಣಾಯಕವಾಗಿರುವುದರಿಂದಲೇ ಪ್ರಧಾನಿ ಮೋದಿ ಡಿಎಂಕೆ ನಾಯಕ ಕರುಣಾನಿಧಿ ಅವರನ್ನು ರಾಜಕೀಯ ಹಿತಾಸಕ್ತಿಗಾಗಿ ಭೇಟಿ ಮಾಡಿ ಆಶೀರ್ವಾದ ಪಡೆಯುತ್ತಾರೆ. ಅದೇ ರೀತಿ ನಮ್ಮ ರಾಜ್ಯದಲ್ಲಿಯೂ ಪ್ರಾದೇಶಿಕ ಪಕ್ಷಗಳಿಗೆ ಶಕ್ತಿ ನೀಡುವ ಮೂಲಕ ಕನ್ನಡಿಗರು ಸ್ವಾಭಿಮಾನ ತೋರಬೇಕಿದೆ ಎಂದರು.
9 ಟಿಎಂಸಿ ನೀರು: ತಾವು ಮುಖ್ಯಮಂತ್ರಿಯಾಗಿದ್ದಾಗ ಬೆಂಗಳೂರಿಗೆ ಕುಡಿವ ನೀರಿಗಾಗಿ ಕಾವೇರಿಯಿಂದ 9 ಟಿಎಂಸಿ ನೀರು ನೀಡುವಂತೆ ಕಡತ ಕಳುಹಿಸಲಾಗಿತ್ತು. ಇದಕ್ಕೆ ವಿರೋಧಿಸಿದ್ದ ತ.ನಾಡು ಕೇಂದ್ರದ ಮೇಲೆ ಒತ್ತಡ ತಂದು ನಿರ್ಧಾರವಾಗದಂತೆ ನೋಡಿಕೊಂಡಿತ್ತು. ನಂತರದಲ್ಲಿ ತಾವು ಪ್ರಧಾನ ಮಂತ್ರಿಯಾದಾಗ ಕುಡಿಯುವ ನೀರಿನ ಉದ್ದೇಶಕ್ಕಾಗಿ ಎಂದು ಮನವರಿಗೆ ಮಾಡಿಕೊಟ್ಟು ಬೆಂಗಳೂರಿಗೆ 9 ಟಿಎಂಸಿ ನೀರು ಬರುವಂತೆ ಮಾಡಲಾಗಿದೆ. ಪ್ರಾದೇಶಿಕ ಪಕ್ಷವಿದ್ದರೆ ಇಂತಹ ಕೆಲಸಗಳು ಸಾಧ್ಯವಾಗುತ್ತದೆ ಎಂದು ತಿಳಿಸಿದರು.
ಸಾಧನೆ ಪುಸ್ತಕ: ದೇಶದ ಪ್ರಧಾನಿಯಾಗಿ ಹಾಗೂ ರಾಜ್ಯದ ಮುಖ್ಯಮಂತ್ರಿಯಾಗಿ ತಾವು ಮಾಡಿರುವ ಸಾಧನೆಗಳ ಕುರಿತು ಪುಸ್ತಕ ಸಿದ್ಧಪಡಿಸಲಾಗುತ್ತಿದ್ದು, ಡಿ.10ರಂದು ಬಿಡುಗಡೆಗೊಳ್ಳಲಿದೆ. ಆ ಪುಸ್ತಕದಲ್ಲಿ ರಾಜ್ಯ ಹಾಗೂ ದೇಶದ ಅಭಿವೃದ್ಧಿಗೆ ತಾವು ಕೈಗೊಂಡಿರುವ ಸಾಧನೆಗಳ ಮಾಹಿತಿಯಿದೆ. ಪಕ್ಷದ ಸಾಧನೆಗಳನ್ನು ಕಾರ್ಯಕರ್ತರು ಮನೆ ಮನೆಗೆ ತಲುಪಿಸುವ ಮೂಲಕ ಮತ್ತೆ ಪಕ್ಷ ಅಧಿಕಾರಕ್ಕೆ ಬರುವಂತೆ ಮಾಡಬೇಕು ಎಂದು ಮನವಿ ಮಾಡಿದರು.
“ದಿಸ್ ಈಸ್ ನಾಟ್ ಎ ಗುಡ್ ಪಾಲಿಟಿಕ್ಸ್’: ನನಗೆ ಮಖ್ಯಮಂತ್ರಿ ಸ್ಥಾನ ತಪ್ಪಿಸಲಾಯಿತು ಎಂದು ಸಿಎಂ ಸಿದ್ದರಾಮಯ್ಯ ಪದೇಪದೆ ಹೇಳುತ್ತಿರುವುದಕ್ಕೆ ದೇವೇಗೌಡರು ತರಾಟೆಗೆ ತೆಗೆದುಕೊಂಡರು. “ನಮ್ಮದೇ ಪಕ್ಷದಲ್ಲಿದ್ದ ಆ ಮಹಾನುಭಾವ ಈಗ ಮುಖ್ಯಮಂತ್ರಿಯಾಗಿ ಹಳೆಯದನ್ನು ಮರೆತಿದ್ದಾರೆ.
ಆ ಸಂದರ್ಭದಲ್ಲಿ 38 ಲಿಂಗಾಯತ ಶಾಸಕರು ಗೆದ್ದಿದ್ದರಿಂದ ಜೆ.ಎಚ್ ಪಟೇಲ್‌ರಿಗೆ ಮುಖ್ಯಮಂತ್ರಿ ಸ್ಥಾನ ನೀಡಲಾಯಿತು. ಆದರೆ, ಸಿದ್ದರಾಮಯ್ಯ ಕಡೆಯವರು ಕೇವಲ ಮೂವರು ಗೆದ್ದಿದ್ದರು. ಇದೆಲ್ಲ ಅವರಿಗೆ ಗೊತ್ತಿಲ್ಲವೇ? ಈಗ ಕಾಂಗ್ರೆಸ್‌ನಲ್ಲಿ ಅಧಿಕಾರ ಸಿಕ್ಕಿದೆ ಎಂದು ನಮ್ಮ ವಿರುದ್ಧ ಪ್ರಹಾರ ಮಾಡುತ್ತಿದ್ದಾರೆ. ದಿಸ್ ಈಸ್ ನಾಟ್ ಎ ಗುಡ್ ಪಾಲಿಟಿಕ್ಸ್ ಎಂದು ಟಾಂಗ್ ನೀಡಿದರು.