Advertisement

ಬಿಸಿಲೇ ಬರಲಿ ಮಳೆಯೇ ಬರಲಿ…

10:29 AM Sep 17, 2019 | Sriram |

ಮನೆ ಕಟ್ಟುವಾಗ ಕಲ್ಲು, ಸಿಮೆಂಟ್‌ ಇತ್ಯಾದಿ ಒಮ್ಮೆ ಸೆಟ್‌ ಆದರೆ, ಬಿಸಿಲು, ಗಾಳಿ, ಮಳೆಗೂ ಹೆದರುವುದಿಲ್ಲ! ಆದರೆ ಮರಮುಟ್ಟುಗಳ ಸಂಗತಿ ಹಾಗಲ್ಲ, ಅವು ಬಿಸಿಲಿಗೆ ಬಣ್ಣ ಕಳೆದುಕೊಳ್ಳಬಹುದು, ಗಾಳಿಗೆ ಬಿರುಕು ಬಿಡಬಹುದು. ಇನ್ನು ನೀರು ಬಿದ್ದರಂತೂ ನೆನೆದು ಬಲಹೀನ ಆಗುತ್ತವೆ. ಹೀಗಾಗಿ, ಅವುಗಳ ರಕ್ಷಣೆಗೆ ಮುತುವರ್ಜಿಯ ಅಗತ್ಯವಿದೆ.

Advertisement

ಮನೆ ಕಟ್ಟುವಾಗ ಉಪಯೋಗಿಸುವ ದುಬಾರಿ ವಸ್ತುಗಳಲ್ಲಿ ಮುಖ್ಯವಾದದ್ದು ಬಾಗಿಲು, ಕಿಟಕಿ, ವಾರ್ಡ್‌ರೋಬ್‌ ಇತ್ಯಾದಿಗಳಿಗೆ ಬಳಸುವ ವಿವಿಧ ರೀತಿಯ ಮರಗಳೇ ಆಗಿರುತ್ತದೆ. ಸುಮಾರು ಒಂದು ಘನ ಅಡಿ ಸಿಮೆಂಟಿಗೆ ನಾನೂರು ರೂ.ಗಳಾದರೆ, ಒಂದು ಸಲೆ ಮರಕ್ಕೆ ನಾಲ್ಕು ಸಾವಿರಕ್ಕೂ ಹೆಚ್ಚು ಬೆಲೆ ಆಗಬಹುದು. ಜೊತೆಗೆ ಕಲ್ಲು, ಸಿಮೆಂಟ್‌ ಇತ್ಯಾದಿ ಒಮ್ಮೆ ಸೆಟ್‌ ಆದರೆ, ಸುಲಭದಲ್ಲಿ ಬಿಸಿಲು ಗಾಳಿಗೇನು ಧೋ ಎಂದು ಸುರಿಯುವ ಮಳೆಗೂ ಹೆದರುವುದಿಲ್ಲ! ಆದರೆ ಮರಮುಟ್ಟುಗಳ ಸಂಗತಿ ಹಾಗಲ್ಲ, ಅವು ಬಿಸಿಲಿಗೆ ಬಣ್ಣ ಕಳೆದುಕೊಳ್ಳಬಹುದು, ಗಾಳಿಗೆ ಬಿರುಕು ಬಿಡಬಹುದು. ಇನ್ನು ನೀರು ಬಿದ್ದರಂತೂ ನೆನೆದು ಹಿಗ್ಗುವುದು, ಬಲಹೀನ ಆಗುವುದು ಇತ್ಯಾದಿ ಇದ್ದದ್ದೇ. ಆದುದರಿಂದ, ದುಬಾರಿಯಾಗಿರುವುದರ ಜೊತೆಗೆ ಅಷ್ಟೇನೂ ಗಟ್ಟಿಮುಟ್ಟಲ್ಲದ ಮರಗಳ ಬಗ್ಗೆ ವಿಶೇಷ ಕಾಳಜಿ ವಹಿಸುವುದು ಅಗತ್ಯ.

ಯಾವ ಮರಕ್ಕೆ ಎಷ್ಟು ರಕ್ಷಣೆ
ಮರಗಳಲ್ಲಿ ರಾಜರಂತಿರುವ ತೇಗ, ಓಕ್‌ ಇತ್ಯಾದಿ ಮರಗಳಿಗೆ ಹೆಚ್ಚು ರಕ್ಷಣೆ ಇಲ್ಲದಿದ್ದರೂ ಪರವಾಗಿಲ್ಲ ಆದರೆ ದುರ್ಬಲ ಮರಗಳಿಗೆ ಕಡ್ಡಾಯವಾಗಿ ರಕ್ಷಣೆ ಕೊಡಬೇಕಾಗುತ್ತದೆ. ಇಲ್ಲದಿದ್ದರೆ ಹತ್ತಾರು ವರ್ಷ ಬಾಳಿಕೆ ಬರುವ ಮರಗಳೂ ಕೆಲವೇ ವರ್ಷಗಳಲ್ಲಿ ಕೆಲಸಕ್ಕೆ ಬಾರದಂತೆ ಆಗಿಬಿಡುತ್ತವೆ. ಕೆಲ ಮರಗಳಲ್ಲಿ ಸ್ವಾಭಾವಿಕವಾಗೇ ಸ್ವರಕ್ಷಣಾ ಗುಣ ಇರುತ್ತದೆ. ತೇಗ ಹಾಗೂ ಬಲಿತ ಬೇವಿನ ಮರಗಳಲ್ಲಿ ಎಣ್ಣೆಯ ಅಂಶವಿದ್ದು, ಈ ವಿಶೇಷತೆಯಿಂದಾಗಿ ನೀರು ನಿರೋಧಕದ ಜೊತೆಗೆ ಕ್ರಿಮಿಕೀಟಗಳಿಂದಲೂ ರಕ್ಷಣೆ ಪಡೆಯುತ್ತವೆ. ಆದರೆ, ಬಹುತೇಕ ಮರಗಳಿಗೆ ಸೂಕ್ತ ಆರೈಕೆ ಮಾಡುವುದು ಅಗತ್ಯವಾಗಿರುತ್ತದೆ. ಸಾಮಾನ್ಯವಾಗಿ ಮರ ಗಟ್ಟಿಮುಟ್ಟಾಗಿ, ಹೆಚ್ಚು ಭಾರ ಇದ್ದಷ್ಟೂ ಸುಲಭದಲ್ಲಿ ಹಾಳಾಗುವುದಿಲ್ಲ. ದೊಡ್ಡ ಗಾತ್ರದ, ಅದರ ಮಧ್ಯದಿಂದ ತಯಾರು ಮಾಡಿದ ರಿಪೀಸುಗಳು ಹಾಗೂ ಹಲಗೆಗಳು ಚೆನ್ನಾಗಿ ಬಲಿತಿರುವುದರಿಂದ ಉತ್ತಮ ಬಾಳಿಕೆ ಬರುತ್ತವೆ. ಆದರೆ ಸಣ್ಣ ಗಾತ್ರದ, ಅದರಲ್ಲೂ ಹೊರಮೈಯಿಂದ ತಯಾರಾದ ತುಂಡುಗಳು ಎಳಸಾಗಿರುವುದರಿಂದ ಬೇಗನೆ ಹಾಳಾಗುತ್ತವೆ. ಈ ಮರಗಳು ತೆಳು ಬಣ್ಣದವಾಗಿದ್ದು “ಬಿಳಿ’ ಮರ ಎಂದೇ ಕರೆಯಲ್ಪಡುತ್ತವೆ. ಗಾಢ ಬಣ್ಣದ, ತಿರುಳು ಮರಗಳು ಹೆಚ್ಚು ಬಾಳಿಕೆ ಬರುತ್ತವೆ.

ಮರಗಳಿಗೆ ವಿವಿಧ ಲೇಪನಗಳು
ಗೆದ್ದಲು ಹಾಗೂ ಇತರೆ ಹುಳಗಳು ಮರಗಳಿಗೆ ತೊಂದರೆ ಕೊಡುವುದು ಗೋಡೆ ಹಾಗೂ ನೆಲದ ಮೂಲಕ. ಹಾಗಾಗಿ, ಬಾಗಿಲು ಕಿಟಕಿಗಳ ಚೌಕಟ್ಟುಗಳಿಗೆ ಕಡ್ಡಾಯವಾಗಿ ಸೂಕ್ತ ರಾಸಾಯನಿಕಗಳಿಂದ ಲೇಪನ ಮಾಡಬೇಕು. ಈ ಹಿಂದೆ ಟಾರ್‌- ಡಾಂಬರ್‌ಅನ್ನು ಕರಗಿಸಿ, ಚೌಕಟ್ಟುಗಳ ಹಿಂಬದಿ ಹಾಗೂ ಕೆಳಗೆ ಬಳಿಯಲಾಗುತ್ತಿತ್ತು. ಈ ಭಾಗಗಳು ನೆಲ ಹಾಗೂ ಗೋಡೆಗಳ ನೇರ ಸಂಪರ್ಕದಲ್ಲಿ ಇರುವುದರಿಂದ- ಈ ದಾರಿಯಿಂದಲೇ ಹುಳಗಳ ದಾಳಿ ಶುರುವಾಗುವುದು. ಈಗ ಅನೇಕ ಗೆದ್ದಲು ನಿರೋಧಕ ಕೀಟನಾಶಕಗಳು ಲಭ್ಯವಿದ್ದರೂ ಇವೆಲ್ಲವೂ ಮಾನವರಿಗೂ ಹಾನಿಕಾರಕ ಆಗಿರುತ್ತವೆ. ಆದುದರಿಂದ, ಇವುಗಳನ್ನು ಬಳಿದ ಬಳಿಕ ನಮ್ಮ ಸಂಪರ್ಕಕ್ಕೆ ಬಾರದಂತೆ ನೋಡಿಕೊಳ್ಳಬೇಕು. ಈ ಕಾರಣದಿಂದಾಗಿಯೇ, ಮರದ ಚೌಕಟ್ಟುಗಳಿಗೆ ಕ್ರಿಮಿನಾಶಕಗಳನ್ನು ಬಳಿದ ಕೂಡಲೆ, ನಿಲ್ಲಿಸಿ, ಅಕ್ಕ ಪಕ್ಕ ಗೋಡೆಗಳನ್ನು ಕಟ್ಟಲಾಗುತ್ತದೆ. ನಿಮಗೆ ರಾಸಾಯನಿಕಗಳ ಬಗ್ಗೆ ಅನುಮಾನವಿದ್ದರೆ, ಅಲರ್ಜಿ ಇತ್ಯಾದಿಯ ಶಂಕೆ ಇದ್ದರೆ, ಸಾಂಪ್ರದಾಯಿಕವಾಗಿ ಬಳಕೆಯಲ್ಲಿರುವ, ಹೆಚ್ಚು ವಿಷಕಾರಿಯಲ್ಲದ ಡಾಂಬರ್‌ಅನ್ನೇ ಉಪಯೋಗಿಸಬಹುದು.

ಕಾರ್ಖಾನೆಯಲ್ಲಿ ಟ್ರೀಟ್‌ಮೆಂಟ್‌
ಇತ್ತೀಚಿನ ದಿನಗಳಲ್ಲಿ ಫ್ಯಾಕ್ಟರಿಗಳಲ್ಲೇ ಸೂಕ್ತ ರೀತಿಯಲ್ಲಿ ರಾಸಾಯನಿಕಗಳ ಲೇಪನ ಹಾಗೂ ಒತ್ತಡದಲ್ಲಿ ಹೀರಿಕೊಳ್ಳುವಂತೆಯೂ ಮಾಡಲಾಗುತ್ತದೆ. ಈ ರೀತಿಯಾಗಿ ತಯಾರಾದ ದುರ್ಬಲ, ಸುಲಭದಲ್ಲಿ ಹಾಳಾಗುವ ಮರಗಳೂ ಉತ್ತಮ ಗುಣಹೊಂದುತ್ತವೆ. ಈ ವಿಶೇಷ ಕ್ರಿಯೆಗಳಿಂದಾಗಿ, ಅಗ್ಗದ ಮರಗಳೂ ಸಾಕಷ್ಟು ನೀರು ನಿರೋಧಕ ಹಾಗೂ ಕೀಟ ನಿರೋಧಕ ಗುಣಗಳನ್ನು ಪಡೆಯುತ್ತವೆ. ಈ ಹಿಂದೆ ನಿರುಪಯೋಗಿ ಎಂದು ಉರುವಲಾಗಿ ಬಳಸಲಾಗುತ್ತಿದ್ದ ಮರಗಳನ್ನೂ ಟ್ರೀಟ್‌ಮೆಂಟ್‌ ನಂತರ ಎಲ್ಲ ರೀತಿಯ ಬಳಕೆಗೆ ಮನೆಗಳಲ್ಲಿ ಬಳಸಲಾಗುತ್ತದೆ. ಈ ಮಾದರಿಯ ಮರಗಳು ಸ್ವಲ್ಪ ದುಬಾರಿ. ಆದರೂ ಕಾರ್ಖಾನೆಗಳಲ್ಲಿ, ನಿಯಂತ್ರಿತ ವಾತಾವರಣದಲ್ಲಿ ತಯಾರಾಗುವುದರಿಂದ ಗುಣಮಟ್ಟದ ಖಾತರಿಯೂ ಇರುತ್ತದೆ. ಹಾಗಾಗಿ ನಾವು ನಿವೇಶನದಲ್ಲಿ ಬಳಸುವಾಗ ಹೆಚ್ಚಿನ ಕಾಳಜಿ ವಹಿಸುವ ಅಗತ್ಯ ಇರುವುದಿಲ್ಲ.

Advertisement

ಸೀಸನಿಂಗ್‌- ಕ್ಯೂರಿಂಗ್‌ ಪ್ರಾಮುಖ್ಯತೆ
ಎಲ್ಲ ಮರಗಳಲ್ಲೂ ಒಂದಷ್ಟು ತೇವಾಂಶ ಹೆಚ್ಚುವರಿಯಾಗಿ ಇರುತ್ತದೆ. ಹಸಿ ಮರದಲ್ಲಿ ಹೆಚ್ಚಿದ್ದು, ಇತರೆ ಮರಗಳಲ್ಲಿ ಅವು ಮಳೆಗೆ ತೆರೆದುಕೊಂಡಿದ್ದರೆ, ನೀರು ಕುಡಿದು ಬಿಟ್ಟಿರುತ್ತವೆ. ಆದುದರಿಂದ, ಮರಗಳನ್ನು ಮನೆಗೆ ಬಳಸುವ ನಾಲ್ಕಾರು ತಿಂಗಳುಗಳ ಹಿಂದೆಯೇ ಖರೀದಿಸಿ ಇಡುವುದು ಉತ್ತಮ. ಇನ್ನೂ ಕೆಲವು ಮರಗಳು ಹಾನಿಕಾರಕ ಅಂಶಗಳನ್ನು ಹೊಂದಿರುತ್ತವೆ, ಇವುಗಳಿಂದಾಗಿ ಈ ಮಾದರಿಯ ಮರಗಳಿಗೆ ಸುಲಭದಲ್ಲಿ ಹುಳಗಳು ಹೊಡೆಯುತ್ತವೆ. ಮರಗಳ ದಿಮ್ಮಿಗಳನ್ನು ನೀರಿನಲ್ಲಿ ತೇಲಲು ಬಿಟ್ಟು, ಅವುಗಳಲ್ಲಿ ಸ್ವಾಭಾವಿಕವಾಗಿಯೇ ಇರುವ ಸ್ಯಾಪ್‌- ಕೀಟಗಳ ಆಹಾರ ಕರಗಿಹೋಗುವಂತೆ ಮಾಡಿ ನಂತರ ಬಳಸಬೇಕಾಗುತ್ತದೆ. ಮರ ಯಾವುದೇ ಇರಲಿ, ಒಂದಷ್ಟು ಸೀಸನಿಂಗ್‌- ನೆರಳಿನಲ್ಲಿ ಗಾಳಿಗೆ ತೆರೆದಿಡುವುದು ಅಗತ್ಯ. ಇದು ಟೀಕ್‌ ಥರದ ದುಬಾರಿ ಮರಗಳಿಗೂ ಅನ್ವಯವಾಗುತ್ತದೆ.

ಬೆಸುಗೆಗಳಿದ್ದಷ್ಟೂ ಬಾಗಿಲು ದುರ್ಬಲವಾಗುತ್ತೆ
ಟೀಕ್‌ ಮಾದರಿಯ ಮರಗಳು ದುಬಾರಿಯಾಗಲು ಅವುಗಳ ವಿಶೇಷ ಗುಣಗಳೇ ಕಾರಣ ಆಗಿರುತ್ತವೆ. ಹೆಚ್ಚು ಭಾರ ಇರದಿದ್ದರೂ ಒಂದೇ ಮಾದರಿಯ ಗ್ರೇನ್ಸ್‌- ಸೆಲೆಗಳು ಹಾಗೂ ಗಟ್ಟಿತನ ಇರುವುದರಿಂದ ಸಣ್ಣ ಅಳತೆಯ ರಿಪೀಸುಗಳೂ ನಿರಾಯಾಸವಾಗಿ ಕಾರ್ಯ ನಿರ್ವಹಿಸಬಲ್ಲವು. ಇತರೆ ಮರಗಳಾದರೆ, ಅವುಗಳ ಗುಣಾವಗುಣಗಳ ಬಗ್ಗೆ ಹೆಚ್ಚು ನಿಖರತೆ ಇರದ ಕಾರಣ ಸ್ವಲ್ಪ ದಪ್ಪ ರಿಪೀಸುಗಳನ್ನೇ ಬಳಸಬೇಕಾಗುತ್ತದೆ. ರಿಪೀಸುಗಳ ಬಣ್ಣ, ಅದೇ ಜಾತಿಯ ಮರದ ಹೃದಯ ಭಾಗದ ಬಣ್ಣಕ್ಕಿಂತ ಕಡಿಮೆ ಇದ್ದಷ್ಟೂ ಅವು ಕಡಿಮೆ ಗಟ್ಟಿತನದಿಂದ ಕೂಡಿರುತ್ತವೆ. ಹಾಗಾಗಿ ಸಣ್ಣಸಣ್ಣ ಬೆಸುಗೆ- ಜಾಯಿಂಟ್‌ಗಳನ್ನು ಮಾಡಬಾರದು. ಮರ ಮೆದುವಾಗಿದ್ದಷ್ಟೂ, ಸುಲಭದಲ್ಲಿ ಮುರಿಯುವುದು, ಇಲ್ಲವೇ ಬಾಗಿಲು, ಮೂಲ ರೂಪವನ್ನು ಕಳೆದುಕೊಂಡು, ಬಾಗಿಲು ಕಿಟಕಿಗಳನ್ನು ಹಾಕಿ ತೆಗೆಯಲು ಕಷ್ಟ ಆಗಬಹುದು. ಜೊತೆಗೆ, ಮುಂಬಾಗಿಲಿಗೆ ಬಳಸುವ ಹಾಗಿದ್ದರೆ, ಹೆಚ್ಚು ಜಾಯಿಂಟ್‌ಗಳನ್ನು ಮಾಡದೆ, ಒಂದರ ಮೇಲೆ ಒಂದರಂತೆ ಹಾಕುವುದರ ಮೂಲಕ “ಲ್ಯಾಪ್‌’ ಮಾದರಿಯಲ್ಲಿ ಬೆಸೆಯುವುದೇ ಉತ್ತಮ. ಮರಗಳಲ್ಲಿ ಸಣ್ಣ ಸಣ್ಣ ಬೆಸುಗೆಗಳು ಬಂದಷ್ಟೂ ಅವು ದುರ್ಬಲವಾಗುತ್ತವೆ. ಆದುದರಿಂದ, ಉತ್ತಮ ಗುಣದ ಮರಗಳು ಸಿಗದಿದ್ದರೆ, ಇರುವುದರಲ್ಲೇ ಹೆಚ್ಚು ಬೆಸುಗೆಗಳು ಬಾರದಂತೆ ಬಾಗಿಲು ಕಿಟಕಿಗಳ ವಿನ್ಯಾಸ ಮಾಡಿ ಉಪಯೋಗಿಸುವುದು ಉತ್ತಮ.

 - ಆರ್ಕಿಟೆಕ್ಟ್ ಕೆ. ಜಯರಾಮ್‌

ಹೆಚ್ಚಿನ ಮಾಹಿತಿಗೆ: 9844132826

 

Advertisement

Udayavani is now on Telegram. Click here to join our channel and stay updated with the latest news.

Next