ಮಹಾಲಿಂಗಪುರ: ಮಿರ್ಜಿ ಗ್ರಾಮದ ಹತ್ತಿರ ಘಟಪ್ರಭಾ ನದಿಗೆ ಅಡ್ಡಲಾಗಿ ನಿರ್ಮಿಸುತ್ತಿರುವ ಸಮಾನಾಂತರ ಬ್ರಿಡ್ಜ್ ಕಂ-ಬ್ಯಾರೇಜ್ ನಿರ್ಮಾಣ ಕಾಮಗಾರಿ ಗುಣಮಟ್ಟದ್ದಾಗಿರಲಿ ಮತ್ತು ನಿಗದಿತ ವೇಳೆಗೆ ಮುಗಿಯಲಿ ಎಂದು ಡಿಸಿಎಂ ಗೋವಿಂದ ಕಾರಜೋಳ ಹೇಳಿದರು.
ಮಿರ್ಜಿ ಗ್ರಾಮದ ಹತ್ತಿರದ ಘಟಪ್ರಭಾ ನದಿಗೆ ಅಡ್ಡಲಾಗಿ ಸಣ್ಣ ನೀರಾವರಿ ಮತ್ತು ಅಂತರ್ಜಲ ಅಭಿವೃದ್ಧಿ ಇಲಾಖೆ ಆಶ್ರಯದಲ್ಲಿ ಸುಮಾರು 5 ಕೋಟಿ ರೂ. ವೆಚ್ಚದಲ್ಲಿ ಬ್ರಿಡ್ಜ್ ಕಂ ಬ್ಯಾರೇಜ್ ನಿರ್ಮಾಣ ಕಾಮಗಾರಿಗೆ ಸೋಮವಾರ ಭೂಮಿಪೂಜೆ ನೆರವೇರಿಸಿ ಅವರು ಮಾತನಾಡಿದರು.
1995-96ನೇ ಸಾಲಿನಲ್ಲಿ ನಾನು ಪ್ರಥಮ ಬಾರಿಗೆ ಶಾಸಕನಾದ ಸಂದರ್ಭದಲ್ಲಿ ಮಿರ್ಜಿ ಮುಂದಿರುವ ಘಟಪ್ರಭಾ ನದಿಗೆ ಅಡ್ಡಲಾಗಿ ಬ್ರಿಡ್ಜ್ ಕಂ ಬ್ಯಾರೇಜ್ ಮಂಜೂರಿ ಮಾಡಿಸಿದ್ದೆ. ಅದು 3 ಮೀ. ಎತ್ತರವಾಗಿತ್ತು. ಮೇಲ್ಗಡೆ ಮರಳು, ಮಣ್ಣು ತುಂಬಿ ನೀರಿನ ಸಂಗ್ರಹ ಪ್ರಮಾಣ ಕಡಿಮೆಯಾಗುತ್ತಿದೆ. ಬ್ರಿಡ್ಜ್ ಎತ್ತರ ಕೇವಲ 3 ಮೀ. ಮಾತ್ರ ಇರುವ ಕಾರಣ ನೀರಿನ ಸಂಗ್ರಹ ಕಡಿಮೆಯಾಗಿ ಬೇಸಿಗೆಯಲ್ಲಿ ರೈತರಿಗೆ ನೀರಿನ ಸಮಸ್ಯೆಯಾಗಿತ್ತು. ಈ ಭಾಗದ ಎಲ್ಲ ರೈತರು ಇನ್ನೊಂದು ಬೇರೆ ಬ್ಯಾರೇಜ ಮಂಜೂರಿ ಮಾಡಲು ಕೇಳಿದ್ದರು. ಈಗ 5 ಕೋಟಿ ವೆಚ್ಚದಲ್ಲಿ 5 ಮೀ. ಎತ್ತರದ ಬ್ರಿಡ್ಜ್ ಕಂ-ಬ್ಯಾರೇಜ ಮಂಜೂರಿ ಮಾಡಿ ಇಂದು ಭೂಮಿ ಪೂಜೆ ಮಾಡಲಾಗಿದೆ.
6 ತಿಂಗಳೊಳಗಾಗಿ ಕಾಮಗಾರಿ ಮುಗಿಸುವಂತೆ ಗುತ್ತಿಗೆದಾರರಿಗೆ ಸೂಚಿಸಲಾಗಿದೆ ಎಂದರು. ಈ ಬ್ರಿಡ್ಜ್ ಎಲ್ಲ ಗೋಡೆಗಳು ಕಾಂಕ್ರೀಟ್‌ನಿಂದ ನಿರ್ಮಾಣವಾಗುತ್ತಿದ್ದು, ಬ್ರಿಡ್ಜ್ ನಲ್ಲಿ ನೀರು ಸಂಗ್ರಹಿಸುವುದರಿಂದ ಸುಮಾರು 450 ಎಕರೆ ವಿಸ್ತೀರ್ಣಕ್ಕೆ ಅರೆ ಒಣಬೇಸಾಯಕ್ಕೆ ನೀರಾವರಿ ಸೌಲಭ್ಯ ದೊರೆಯಲಿದೆ. ದನಕರುಗಳಿಗೆ ಕುಡಿಯುವ ನೀರು ಸಿಗಲಿದೆ. ಈ ಬ್ರಿಡ್ಜ್ನಿಂದ ಮಹಾಲಿಂಗಪುರದಿಂದ ಹುಬ್ಬಳ್ಳಿ, ಬೆಳಗಾವಗಳಿಗೆ ಸಂಚರಿಸುವ ಪ್ರಯಾಣಿಕರಿಗೂ ಅನುಕೂಲವಾಗಲಿದೆ ಎಂದರು.
ಒಂಟಗೋಡಿ ಬ್ಯಾರೇಜ್ ನಿರ್ಮಾಣಕ್ಕೆ ಚಾಲನೆ: ಒಂಟಿಗೋಡಿ ಗ್ರಾಮದ ಸೈಟ್ ಒಂದರ ಬಳಿ ಹಳ್ಳಕ್ಕೆ ಅಡ್ಡವಾಗಿ 2 ಕೋಟಿ ರೂ. ವೆಚ್ಚದಲ್ಲಿ ಬ್ರಿಡ್ಜ್ ಕಂ ಬ್ಯಾರೇಜ್ ನಿರ್ಮಾಣಕ್ಕೆ ಶಂಕುಸ್ಥಾಪನೆ ನೆರವೇರಿಸಲಾಗಿದ್ದು, 11 ತಿಂಗಳಲ್ಲಿ ಕಾಮಗಾರಿ ಪೂರ್ಣಗೊಳ್ಳಲಿದೆ. ಇದರಿಂದ 98 ಎಕರೆ ಜಮೀನಿಗೆ ನೀರಾವರಿ ಸೌಲಭ್ಯ ಕಲ್ಪಿಸಬಹುದು. ಆದ್ದರಿಂದ, ಈ ಯೋಜನೆ ಕೈಗೊಂಡಿದ್ದು, 11 ತಿಂಗಳಲ್ಲಿ ಸಂಪೂರ್ಣವಾಗಿ ಯೋಜನೆ ಪೂರ್ಣಗೊಳ್ಳಲಿದೆ ಎಂದು ತಿಳಿಸಿದರು.
ಈ ಸಂದರ್ಭದಲ್ಲಿ ಜಮಖಂಡಿಯ ಎ.ಸಿ ಸಿದ್ದು ಹುಲ್ಲೋಳ್ಳಿ, ಮುಧೋಳ ತಾಲೂಕು ಸಣ್ಣ ನೀರಾವರಿ ಇಲಾಖೆ ಎಇಇ ಎಚ್.ಡಿ. ಆಲೂರ, ಆರ್. ಕೆ. ಮಳಲಿ, ಆರ್.ಟಿ ಪಾಟೀಲ, ಜಿ.ಪಂ ಮಾಜಿ ಸದಸ್ಯ ಮಹಾಂತೇಶ ಹಿಟ್ಟಿನಮಠ, ಬಸವರಾಜ ಮಳಲಿ, ಮಹಾಲಿಂಗಪ್ಪ ತಟ್ಟಿಮನಿ, ವೆಂಕಣ್ಣ ಕುಂದರಗಿ, ವೆಂಕಣ್ಣ ತಟ್ಟಿಮನಿ, ಭೀಮಸಿ ಲೊಗಾಂವಿ, ರಾಮಣ್ಣ ತಟ್ಟಿಮನಿ, ಮಂಜುನಾಥಗೌಡ ಪಾಟೀಲ, ಲೋಕಣ್ಣ ತಟ್ಟಿಮನಿ, ಪ್ರಕಾಶ ತಟ್ಟಿಮನಿ, ಮುತ್ತಪ್ಪ ದೊಪನವರ, ಎಂ.ಎಸ್. ಕಂಬಿ ಇತರರು ಇದ್ದರು.