Advertisement

ಪ್ರಧಾನಿ ಶ್ರಮಯೋಗಿ ಯೋಜನೆ ಸದ್ಬಳಕೆಯಾಗಲಿ

07:28 AM Mar 06, 2019 | |

ವಿಜಯಪುರ: ಜಿಲ್ಲಾ ಅಸಂಘಟಿತ ಕೂಲಿ ಕಾರ್ಮಿಕರು, ಬಡತನ ರೇಖೆಗಿಂತ ಕೆಳಗಿರುವ ಕಾರ್ಮಿಕರು ಆರ್ಥಿಕವಾಗಿ ಸಬಲರಾಗಲು ಕೇಂದ್ರ ಸರ್ಕಾರದ ಪ್ರಧಾನ ಮಂತ್ರಿ ಶ್ರಮಯೊಗಿ ಮನ-ಧನ ಯೋಜನೆ ಸಹಕಾರಿಯಾಗಿದೆ ಎಂದು ನಗರ ಶಾಸಕ ಬಸನಗೌಡ ಪಾಟೀಲ ಯತ್ನಾಳ ಹೇಳಿದರು.

Advertisement

ಮಂಗಳವಾರ ನಗರದ ಕಾರ್ಮಿಕ ಸಮುದಾಯ ಭವನದಲ್ಲಿ ಅಸಂಘಟಿತ ಕಾರ್ಮಿಕರ ಪಿಂಚಣಿ ಯೋಜನೆಯ ಸೌಲಭ್ಯ ವಿತರಣೆ ಕಾರ್ಯಕ್ರಮಕ್ಕೆ ಚಾಲನೆ ನೀಡಿ ಮಾತನಾಡಿದ ಅವರು, ದೇಶದಲ್ಲಿ ಬಡತನ ಹೋಗಲಾಡಿಸಲು ಇಂತಹ ಅತ್ಯುತ್ತಮ ಯೋಜನೆಗಳ ಅವಶ್ಯಕತೆ ಇದೆ. ಅರ್ಹ ಅಸಂಘಟಿತ ಬಡ ಕಾರ್ಮಿಕರಿಗೆ ನೇರವಾಗಿ ಸೌಲಭ್ಯ ತಲುಪಲು ಪ್ರಧಾನಿಗಳ ಯೋಜನೆ ಸಹಕಾರಿಯಾಗಿವೆ ಎಂದರು.

ಇದಲ್ಲದೇ ಪ್ರಧಾನ ಮಂತ್ರಿ ಜನಧನ್‌ ಯೋಜನೆ, ಜನ ಔಷಧಿ ಯೋಜನೆ , ಪ್ರಧಾನ ಮಂತ್ರಿ ಕೌಶಲ್ಯ ಅಭಿವೃದ್ಧಿ ಯೋಜನೆ ಇನ್ನೂ ಮುಂತಾದ ಯೋಜನೆಗಳು ಬಡವರ ಹಿತರಕ್ಷಣೆ ಮಾಡುವಲ್ಲಿ ಪ್ರಮುಖ ಪಾತ್ರ ವಹಿಸುತ್ತವೆ ಎಂದರು.

ಪ್ರಧಾನ ಮಂತ್ರಿಗಳ ಯೋಜನೆಗಳು ಬಡವರ ಪರವಾಗಿದ್ದು ಕೂಲಿಕಾರ್ಮಿಕರು ವಿಕಲಚೇತನರು, ವಿಧವೆಯರು, ಮುಂತಾದ ಅಸಂಘಟಿತರು ಎಲ್ಲರಂತೆ ಉತ್ತಮ ಜೀವನ ನಡೆಸಲು ಸರ್ವೋತೋಮುಖ ಅಭಿವೃದ್ಧಿಗೆ ಸಹಕಾರಿಯಾಗಿವೆ.

ಈ ನಿಟ್ಟಿನಲ್ಲಿ ಬಡವರು ಅಧಿಕಾರಿಗಳ ಬಳಿ ಸಹಕಾರಕ್ಕಾಗಿ ಬಂದರೆ ತಾತ್ಸಾರ ಮನೋಭಾವದಿಂದ ನೋಡಿದರೆ ಅಂತಹ ಅಧಿಕಾರಿಗಳ ವಿರುದ್ಧ ಕಠಿಣ ಕ್ರಮ ಜರುಗಿಸಲಾಗುವುದು ಎಂದು ಹೇಳಿದರು.

Advertisement

ಸಹಾಯಕ ಭವಿಷ್ಯನಿಧಿ ಆಯುಕ್ತ ಪಿ.ಗೋಪಾಲಸಿಂಗ್‌ ಮಾತನಾಡಿ, ಅಸಂಘಟಿತ ಕಾರ್ಮಿಕರಿಗೆ 60 ವರ್ಷದ ನಂತರ ತಿಂಗಳಿಗೆ 3000 ರೂ. ಪಿಂಚಣಿ ನೀಡುವ ಕೇಂದ್ರ ಸರ್ಕಾರದ ಮಹತ್ವಾಕಾಂಕ್ಷೆ ಯೋಜನೆಗೆ ದೇಶಾದ್ಯಂತ ನೋಂದಣಿ ಆರಂಭವಾಗಿದ್ದು, ಪ್ರಧಾನ ಮಂತ್ರಿ ಶ್ರಮಯೋಗಿ ಮಾನ್‌-ಧನ್‌ (ಪಿಎಂಎಸ್‌ವೈಎಂ) ಹೆಸರಿನ ಈ ಯೋಜನೆಗೆ ದೇಶದಲ್ಲೆಡೆ ಇರುವ 3.13 ಲಕ್ಷ ಸರ್ವ ಸೇವಾ ಕೇಂದ್ರಗಳಲ್ಲಿ ಕಾರ್ಮಿಕರು ನೋಂದಣಿ ಮಾಡಿಸಿಕೊಳ್ಳಬಹುದು.

18ರಿಂದ 40 ವರ್ಷದ ನಡುವಿನ ಮನೆಗೆಲಸದವರು, ಬೀದಿ ಬದಿ ವ್ಯಾಪಾರಿಗಳು, ಬಿಸಿಯೂಟದ ಕೆಲಸದವರು, ಚರ್ಮಕಾರರು, ಇಟ್ಟಿಗೆ-ಗಾರೆ ಕೆಲಸದವರು, ಚರ್ಮಕಾರರು, ಚಿಂದಿ ಆಯುವವರು, ಅಗಸರು, ರಿಕ್ಷಾ ಎಳೆಯುವರು, ಭೂರಹಿತ ಕಾರ್ಮಿಕರು, ಕೃಷಿ ಕಾರ್ಮಿಕರು ಕಟ್ಟಡ ಕಾರ್ಮಿಕರು ಹೀಗೆ ಎಲ್ಲ ಬಗೆಯ ಅಸಂಘಟಿತ ಕಾರ್ಮಿಕರು ಈ ಯೋಜನೆಗೆ ಅರ್ಹರಾಗಿದ್ದಾರೆ. ಕಾರ್ಮಿಕರು ತಮ್ಮ ಆಧಾರ್‌ ಕಾರ್ಡ್‌, ಬ್ಯಾಂಕ್‌ ಉಳಿತಾಯ ಖಾತೆ ಪಾಸ್‌ಬುಕ್‌ ತೆಗೆದುಕೊಂಡು ಸರ್ವ ಸೇವಾ ಕೇಂದ್ರಗಳಿಗೆ ತೆರಳಿ ನೋಂದಣಿ ಮಾಡಿಸಿಕೊಳ್ಳಬಹುದು ಎಂದರು.

ಇದೇ ವೇಳೆ ಅರ್ಹ ಕೆಲ ಕಾರ್ಮಿಕರಿಗೆ ಪಿಂಚಣಿ ನೊಂದಣಿ ಕಾರ್ಡ್‌ ವಿತರಿಸಲಾಯಿತು. ಜಗದೇವಿ, ಪ್ರಭುಗೌಡ ಪಾಟೀಲ, ಅಶೋಕ ಬಾಳಿಕಟ್ಟಿ, ಅರುಣಕುಮಾರ, ಶ್ರೀಧರ, ಅಜೇಜಾ ಕುಮಾರ, ವಿಜಯಕುಮಾರ ಸೇರಿದಂತೆ ಇತರರು ಇದ್ದರು. 

Advertisement

Udayavani is now on Telegram. Click here to join our channel and stay updated with the latest news.

Next