ಕಲಬುರಗಿ: ಮಹಾನಗರ ಪಾಲಿಕೆಯು ಕಳೆದ ವರ್ಷವೇ ಅವೈಜ್ಞಾನಿಕವಾಗಿ ಶೇ. 15ರಷ್ಟು ಆಸ್ತಿ ತೆರಿಗೆ ಹೆಚ್ಚಳ ಮಾಡಿದ್ದು ತಪ್ಪು ಎಂಬುದಾಗಿ ಹೋರಾಟ ಮಾಡಿದ ಪರಿಣಾಮ ಶೇ. 10ರಷ್ಟು ಕಡಿಮೆ ಮಾಡಿ, ಶೇ. 5ರಷ್ಟು ಆಸ್ತಿ ತೆರಿಗೆ ಜಾರಿಗೆ ತರಲಾಗಿತ್ತು. ಆದರೀಗ ಮತ್ತೆ 2022-23ನೇ ಸಾಲಿಗಾಗಿ ಶೇ. 4ರಷ್ಟು ಆಸ್ತಿ ತೆರಿಗೆ ಹೆಚ್ಚಿಸಿರುವುದನ್ನು ವಾಪಸ್ಸು ಪಡೆಯುವಂತೆ ಹೈದ್ರಾಬಾದ ಕರ್ನಾಟಕ ವಾಣಿಜ್ಯ ಮತ್ತು ಕೈಗಾರಿಕಾ ಸಂಸ್ಥೆ (ಎಚ್‌ಕೆಸಿಸಿಐ) ಆಗ್ರಹಿಸಿದೆ.
ಕೊರೊನಾ ಹಿನ್ನೆಲೆಯಲ್ಲಿ ಲಾಕ್‌ಡೌನ್ ಮಾಡಿದ್ದ ರಿಂದ ವ್ಯಾಪಾರ ವಹಿವಾಟು ಸಂಪೂರ್ಣ ನಷ್ಟದಲ್ಲಿದೆ. ಕಳೆದ ವರ್ಷ ಶೇ. 5ರಷ್ಟು ತೆರಿಗೆ ಹೆಚ್ಚಿಸಿರುವುದೇ ತೆರಿಗೆದಾರರಿಗೆ ಹೊರೆಯಾಗಿದೆ. ಅಂತಹುದ್ದರಲ್ಲಿ ಗಾಯದ ಮೇಲೆ ಬರೆ ಎಳೆದಿರುವುಂತೆ ಮತ್ತೆ ಶೇ. 4ರಷ್ಟು ಆಸ್ತಿ ತೆರಿಗೆಯನ್ನು ಪಾಲಿಕೆ ಹೆಚ್ಚಿಸಿರುವುದರಿಂದ ಇಡೀ ವಾಣಿಜ್ಯ ಉದ್ಯಮಕ್ಕೆ ಹೊಡೆತ ಬೀಳುತ್ತದೆ. ಆದ್ದರಿಂದ ಪಾಲಿಕೆ ಈಗಲಾದರೂ ಎಚ್ಚೆತ್ತು ತೆರಿಗೆ ಹೆಚ್ಚಳ ಕೈ ಬಿಡಬೇಕೆಂದು ಎಚ್‌ಕೆಇಸಿಸಿಐ ಅಧ್ಯಕ್ಷ ಪ್ರಶಾಂತ ಎಸ್. ಮಾನಕರ್, ಗೌರವ ಕಾರ್ಯದರ್ಶಿ ಶರಣು ಪಪ್ಪಾ ಸುದ್ದಿಗೋಷ್ಠಿಯಲ್ಲಿ ಒತ್ತಾಯಿಸಿದರು.
ಪೌರಾಡಳಿತ ನಿರ್ದೇಶನಾಲಯವೇ ಆಸ್ತಿ ತೆರಿಗೆ ಶೇ. 3ರಿಂದ ಶೇ. 5ರಷ್ಟು ಮಿತಿಯೊಳಗೆ ಇರಬೇಕೆಂದು ನಿರ್ದೇಶನ ಇರುವಾಗಲೂ ಪಾಲಿಕೆ ಆಡಳಿತಾಧಿಕಾರಿಗಳು ಶೇ. 15 ಆಸ್ತಿ ತೆರಿಗೆ ಹೆಚ್ಚಿಸಿ ಅಧಿಸೂಚನೆ ಹೊರಡಿಸಿದ್ದರು. ಇದರ ವಿರುದ್ಧ ಹೋರಾಡಿ, ಸರ್ಕಾರದ ಗಮನಕ್ಕೆ ತಂದ ನಂತರ ಶೇ. 10ರಷ್ಟು ಇಳಿಕೆ ಮಾಡಲಾಗಿತ್ತು. ಶೇ. 5ರಷ್ಟು ಆಸ್ತಿ ತೆರಿಗೆಯೇ ತುಂಬಲು ಉದ್ಯಮಿದಾರರು ಹೆಣಗಾಡುತ್ತಿರುವಾಗ ಮತ್ತೆ ಪ್ರಸಕ್ತ ವರ್ಷಕ್ಕಾಗಿ ಶೇ. 4ರಷ್ಟು ಆಸ್ತಿ ತೆರಿಗೆ ಹೆಚ್ಚಳ ಮಾಡಿ ಪಾಲಿಕೆ ಆಡಳಿತಾಧಿಕಾರಿ, ಆಯುಕ್ತರು ಆದೇಶ ಹೊರಡಿಸಿದ್ದಾರೆ. ಪ್ರಮುಖವಾಗಿ ಸಬ್ ರಜಿಷ್ಟಾರ್ ದಲ್ಲಿ ಆಸ್ತಿ ಮೌಲ್ಯದ ಮೇಲಿನ ತೆರಿಗೆ ಹೆಚ್ಚಳವಾಗಿಲ್ಲ. ಅಂತಹುದ್ದರಲ್ಲಿ ಶೇ. 4ರಷ್ಟು ಆಸ್ತಿ ತೆರಿಗೆ ಸಮಂಜಸವಲ್ಲ ಎಂದು ಅಸಮಾಧಾನ ವ್ಯಕ್ತಪಡಿಸಿದರು.
ಪ್ರಮುಖವಾಗಿ ಶೇ. 15ರಷ್ಟು ಆಸ್ತಿ ತೆರಿಗೆ ಮಾರ್ಪಡಿಸಿ ಶೇ. 3ರಿಂದ ಶೇ. 5 ಒಳಗಾಗಿ ಆಸ್ತಿ ತೆರಿಗೆ ನಿಗದಿಪಡಿಸಿ ಮಾರ್ಪಡಿಸಿದ ಆದೇಶವನ್ನು ಹೊರಡಿಸಿಲ್ಲ. ಹೀಗಾಗಿ 2022-23ನೇ ಸಾಲಿಗೆ ಆಸ್ತಿ ತೆರಿಗೆಯನ್ನು ಕಾನೂನು ಬಾಹಿರವಾಗಿ ಶೇ. 15ರಷ್ಟು ಹೆಚ್ಚಿಸಿದ ದರದಂತೆ ಪಾಲಿಕೆಯವರು ಸಂಗ್ರಹಿಸಬಹುದೆಂಬ ಆತಂಕ ಕಾಡುತ್ತಿದೆ. ಒಟ್ಟಾರೆ ಇದನ್ನೆಲ್ಲ ಪಾಲಿಕೆ ಖಚಿತಪಡಿಸಬೇಕು. ಆಸ್ತಿ ತೆರಿಗೆ ನಿಗದಿಪಡಿಸುವಾಗ ಪರಿಗಣಿಸಲಾಗುವ ಆಸ್ತಿ ಮಾರ್ಗದರ್ಶಿ ಮೌಲ್ಯವನ್ನು ಕೈ ಬಿಡಬೇಕೆಂದು ಆಗ್ರಹಿಸಿದರು. ಎಚ್‌ಕೆಸಿಸಿಐ ಪದಾಧಿಕಾರಿಗಳಾದ ರಾಮಚಂದ್ರ ಕೋಸಗಿ, ಸಂಗಮೇಶ ಕಲ್ಯಾಣಿ ಇದ್ದರು.
ಕಲ್ಯಾಣ ಕರ್ನಾಟಕ ಭಾಗಕ್ಕೆ ಬರಬೇಕಿದ್ದ ಒಂದೊಂದು ಯೋಜನೆಗಳನ್ನು ಬೇರೆಡೆ ಕಿತ್ತುಕೊಂಡು ಹೋಗಲಾಗಿದೆ. ಈಗ ಯಾವದೇ ಕಾರಣಕ್ಕೂ ಮೆಗಾ ಟೆಕ್ಸ್‌ಟೈಲ್ ಪಾರ್ಕ್ ಕಲಬುರಗಿ ಬಿಟ್ಟು ಹೋಗಬಾರದು. ಎರಡು ದಿನಗಳ ಹಿಂದೆ ನವದೆಹಲಿಗೆ ಹೋಗಿ ಎಚ್‌ಕೆಸಿಸಿಐಯಿಂದ ಕಲಬುರಗಿಯಲ್ಲೇ ಮೆಗಾ ಟೆಕ್ಸ್‌ಟೈಲ್ ಆಗಬೇಕು ಎಂದು ಸಚಿವರಿಗೆ ಮನವಿ ಸಲ್ಲಿಸಲಾಗಿದೆ. ಅವರಿಂದ ಉತ್ತಮ ಪ್ರತಿಕ್ರಿಯೆ ದೊರಕಿದೆ. ಈ ಭಾಗದ ಜನಪ್ರತಿನಿಧಿಗಳು ಒಗ್ಗಟ್ಟಾಗಿ ಒತ್ತಡ ಹೇರಬೇಕು. ಮತ್ತೆ ಎರಡ್ಮೂರು ತಿಂಗಳ ನಂತರ ನವದೆಹಲಿಗೆ ನಿಯೋಗ ತೆರಳಿ ಮನವಿ ಮಾಡಲಾಗುವುದು.
-ಪ್ರಶಾಂತ ಮಾನಕರ್, ಅಧ್ಯಕ್ಷ, ಎಚ್‌ಕೆಇಸಿಸಿಐ
ಕೊರೊನಾದ ಲಾಕ್‌ಡೌನ್ ಸಂದರ್ಭದಲ್ಲಿ ವ್ಯಾಪಾರಸ್ಥರ ಮೇಲೆ ಇಡೀ ರಾಜ್ಯದಲ್ಲೇ ಅತಿ ಹೆಚ್ಚಿನ ಅಂದರೆ 374 ಪ್ರಕರಣ ದಾಖಲಿಸಲಾಗಿದೆ. ಈ ಪ್ರಕರಣಗಳನ್ನು ವಾಪಸ್ಸು ಪಡೆಯುವಂತೆ ಸರ್ಕಾರಕ್ಕೆ ಹಲವು ಸಲ ಮನವಿ ಸಲ್ಲಿಸಿದ್ದರೂ ಪರಿಹಾರವೇ ಸಿಕ್ಕಿಲ್ಲ. ಕಲ್ಯಾಣ ಕರ್ನಾಟಕ ಭಾಗ ಸಂಪೂರ್ಣ ನಿರ್ಲಕ್ಷ್ಯಕ್ಕೆ ಒಳಗಾಗುತ್ತಿದೆ.
-ಶರಣು ಪಪ್ಪಾ, ಗೌರವ ಕಾರ್ಯದರ್ಶಿ, ಎಚ್‌ಕೆಸಿಸಿಐ