ಚಿಕ್ಕೋಡಿ: ಗಡಿ ಗುರುತಿಸುವದು ಭಾಷಾ ದೃಷ್ಟಿಯಿಂದ. ಹೀಗಾಗಿ ಗಡಿ ಭಾಗದ ಆರ್ಥಿಕ, ರಾಜಕೀಯ, ಶೆ„ಕ್ಷಣಿಕ ಸಮಸ್ಯೆಗಳ ನಿವಾರಣೆಗೆ ಚಿಕ್ಕೋಡಿ ಜಿಲ್ಲಾ ರಚನೆ ಮುಖ್ಯ. ಆದ್ದರಿಂದ ಈ ಭಾಗದ ಜನಪ್ರತಿನಿಧಿಗಳು ಒಗ್ಗಟ್ಟಾಗಿ ಬೆಳಗಾವಿಯಲ್ಲಿ ನಡೆಯುತ್ತಿರುವ ಅಧಿವೇಶನದಲ್ಲಿ ಜಿಲ್ಲಾ ರಚನೆಗೆ ಧ್ವನಿ ಎತ್ತಬೇಕೆಂದು ಚಿಂಚಣಿ ಸಿದ್ದಸಂಸ್ಥಾನ ಮಠದ ಶ್ರೀ ಅಲ್ಲಮಪ್ರಭು ಸ್ವಾಮಿಗಳು ಒತ್ತಾಯಿಸಿದರು.
ಚಿಕ್ಕೋಡಿಯನ್ನು ಜಿಲ್ಲೆಯನ್ನಾಗಿಸಬೇಕೆಂದು ಹೋರಾಟ ಸಮಿತಿ ತಹಶೀಲ್ದಾರ್ ಕಚೇರಿ ಎದುರುಗಡೆ ನಡೆಸುತ್ತಿರುವ ಪ್ರತಿಭಟನೆ ನಾಲ್ಕನೇ ದಿನಕ್ಕೆಕಾಲಿಟ್ಟಿದ್ದು, ಚಿಂಚಣಿ ಹಾಗೂ ಚಿಕ್ಕೋಡಿ ಸ್ವಾಮೀಜಿಗಳು ಹೋರಾಟಕ್ಕೆ ಬೆಂಬಲ ವ್ಯಕ್ತಪಡಿಸಿ ಮಾತನಾಡಿದರು.
ಚಿಕ್ಕೋಡಿ ಜಿಲ್ಲೆಯನ್ನಾಗಿಸಬೇಕೆಂದು ಕಳೆದ ಹತ್ತಾರು ವರ್ಷಗಳಿಂದ ಹೋರಾಟ ಮಾಡುತ್ತ ಬಂದಿದ್ದ ಹಿರಿಯ ಧುರೀಣ ಬಿ.ಆರ್.ಸಂಗಪ್ಪಗೋಳ ಹಾಗೂ ಮಾಜಿ ಶಾಸಕ ದತ್ತು ಹಕ್ಯಾಗೋಳ ಆತ್ಮಕ್ಕೆ ಶಾಂತಿ ಸಿಗಬೇಕಾದರೆ ಈ ಭಾಗದ ಜನಪ್ರತಿನಿಧಿಗಳು ಒಂದಾಗಿ ಅಧಿವೇಶನದಲ್ಲಿ ಚಿಕ್ಕೋಡಿ ಜಿಲ್ಲೆಗೆ ಆಗ್ರಹಿಸಬೇಕು ಎಂದರು.
ರಾಜ್ಯದಲ್ಲಿಯೇ ಅತೀ ದೊಡ್ಡ ಜಿಲ್ಲೆಯಾಗಿರುವ ಬೆಳಗಾವಿ ಜಿಲ್ಲೆ ವಿಭಜನೆಯಾದರೆ ಗಡಿಯಂಚಿನಲ್ಲಿರುವ ಅಥಣಿ, ನಿಪ್ಪಾಣಿ ಸೇರಿದಂತೆ ಚಿಕ್ಕೋಡಿ ಲೋಕಸಭೆ ಕ್ಷೇತ್ರದ ವ್ಯಾಪ್ತಿಯಲ್ಲಿನ ಜನರಿಗೆ ಅನುಕೂಲವಾಗಲಿದೆ. ಜೊತೆಗೆ ಅನುದಾನ ಹೆಚ್ಚಿನ ಪ್ರಮಾಣದಲ್ಲಿ ಬಂದು ಮಹಾರಾಷ್ಟ್ರದ ಗಡಿಭಾಗದ ಜಿಲ್ಲೆಗಳಿಗೆ ಉದ್ಯೋಗ ಅರಸಿ ಹೋಗುವವರಿಗೆ ಇಲ್ಲಿಯೇ ಉದ್ಯೋಗ ಸೃಷ್ಟಿ ಮಾಡಬಹುದಾಗಿದೆ. ಈ ಭಾಗದ ಎಲ್ಲ ಜನಪ್ರತಿನಿಧಿಗಳು ಅಧಿವೇಶನ ವೇಳೆಯಲ್ಲಿ ಸಿಎಂ ಅವರಿಗೆ ಭೇಟಿಯಾಗಲು ದಿನ ನಿಗದಿ ಮಾಡಿದ್ದಲ್ಲಿ ಈ ಭಾಗ ದಿಂದ ಜಿಲ್ಲಾ ಹೋರಾಟ ಸಮಿತಿ ನಿಯೋಗ ಒಯ್ದು ಮನವರಿಕೆ ಮಾಡಬಹುದಾಗಿದೆ ಎಂದರು.
ಚಿಕ್ಕೋಡಿ ಚರಮೂರ್ತಿ ಮಠದ ಶ್ರೀ ಸಂಪಾದನಾ ಸ್ವಾಮಿಗಳು ಮಾತನಾಡಿ ಹಲವು ದಶಕದಿಂದ ಜಿಲ್ಲಾ ರಚನೆ ಹೋರಾಟ ನಡೆದು ಬಂದಿದೆ. ಇದರಲ್ಲಿ ಹಲವು ಜನರು ತಮ್ಮ ಪ್ರಾಣ ಕಳೆದುಕೊಂಡಿದ್ದಾರೆ.ಆದ್ದರಿಂದ ಬೆಳಗಾವಿಯಲ್ಲಿ ನಡೆಯುತ್ತಿರುವ ಅಧಿವೇಶನದಲ್ಲಿ ಎಲ್ಲಾ ಜನಪ್ರತಿನಿಧಿಗಳು ಮುಖ್ಯಮಂತ್ರಿಗಳಿಗೆ ಒತ್ತಾಯ ಮಾಡಬೇಕು, ಮಾಡದಿದ್ದರೆ ಉಗ್ರ ಹೋರಾಟಕ್ಕೆ ಮುಂದಾಗಬೇಕು. ಅಂದಾಗ ಸರ್ಕಾರ ಎಚ್ಚೆತ್ತುಕೊಳ್ಳಲು ಸಾಧ್ಯ ಎಂದರು.
ಜಿಲ್ಲಾ ಹೋರಾಟ ಸಮಿತಿ ಅಧ್ಯಕ್ಷ ಕಾಶಿನಾಥ ಕುರಣೆ ಮಾತನಾಡಿ, ಸರ್ಕಾರ10 ಲಕ್ಷಜನವಸತಿ ಇರುವ ಪ್ರದೇಶಕ್ಕೆ ಜಿಲ್ಲಾ ಸ್ಥಾನಮಾನ ನೀಡಿದೆ ಆದರೆ 7 ಲಕ್ಷ ಜನರಿರುವ ಚಿಕ್ಕೋಡಿಗೆ ಜಿಲ್ಲೆ ಸ್ಥಾನಮಾನ ನೀಡದೇ ಇರುವುದು ರಾಜಕೀಯ ಇಚ್ಛಾಶಕ್ತಿ ಕೊರತೆ ಎದ್ದು ತೋರುತ್ತದೆ ಎಂದರು.
ಸಂಜು ಬಡಿಗೇರ, ಚಂದ್ರಕಾಂತ ಹುಕ್ಕೇರಿ, ಚನ್ನಪ್ಪಾ ಬಡಿಗೇರ, ಶಿವು ಮದಾಳೆ, ಈರಗೌಡ ಕೆಳಗಿನಮನಿ, ರಮೇಶ ಕರನೂರೆ, ರುದ್ರಯ್ನಾ ಹಿರೇಮಠ, ಕುಮಾರ ಪಾಟೀಲ ಸೇರಿದಂತೆ ಹೋರಾಟ ಸಮಿತಿ ಪದಾಧಿಕಾರಿಗಳು ಉಪಸ್ಥಿತರಿದ್ದರು.