Advertisement

ಕಾಲದೊಂದಿಗೆ  ನೋವೂ  ಮರೆಯಾಗಲಿ

02:46 PM Jul 04, 2021 | Team Udayavani |

ಮಳೆಗಾಲ ಸನ್ನಿಹಿತವಾಗಿದೆ. ಪ್ರಕೃತಿಯೂ ಒಳಗೊಂಡ ಸಮಾಜ ಅಮೋಘ ವರ್ಷಧಾರೆಯ ಆಗಮನದ ನಿರೀಕ್ಷೆಯಲ್ಲಿದೆ. ಬೆಂದ ವಸುಧೆ ತಂಪೆರೆವ ಮಳೆಯ ಮಧುರ ಸುಧೆಗಾಗಿ ಪರಿತಪಿಸುತ್ತಿದೆ. ಪ್ರಕೃತಿ ಮರಳಿ ಮೈದಳೆಯುವ ಈ ಅತ್ಯಪೂರ್ವ ಸಂದರ್ಭಕ್ಕೆ ಸಾಕ್ಷಿಯಾಗಲು ಸಕಲ ಜೀವ ಸಂಕುಲವೇ ಕಾತುರದಿಂದ ಕಾದಿದೆ. ಮಳೆಗಾಲದ ಈ ಋತುವೇ ಅಪೂರ್ವ. ಮನುಷ್ಯನ ಪ್ರಕೋಪವೂ ಸಹಿತ ಕಾವಿನ ಬಿಗುವಿನಿಂದ ಐಸೊಲೇಶನ್‌ನಲ್ಲಿರುವ ಪ್ರಕೃತಿಗೆ ಮತ್ತೆ ಜೀವ ತುಂಬುವ ವರ್ಷಧಾರೆ ಹೊಸ ಭರವಸೆಯ ನಾಳೆಗಳ ಕನಸು ಬಿತ್ತಿ ಚಿಗುರೊಡಿಸಿ ಮರೆಯಾಗುತ್ತವೆ.  ಮತ್ತೆ ಆ ದಿನಗಳು ಸಮೀಪಿಸುತ್ತಿದೆ. ಗುಡುಗು-ಸಿಡಿಲಿನ ಹಿಮ್ಮೇಳದೊಂದಿಗೆ ಮಿಂಚಿನ ಪ್ರಜ್ವಲನದಿ ಮಳೆಯ ಆಮಂತ್ರಣ ಹೊತ್ತು ಬೀಸುವ ತಣ್ಣನೆಯ ತಂಗಾಳಿಯ ಇಂಪಿಗೆ ಮೈಯ್ಯೊಡ್ಡಿ, ಬಲು ಅವಸರದಿ ಧುಮ್ಮಿಕ್ಕುವ ಹನಿಗಳಿಗೆ ಮೈಸೋಕಿ ನಡುಗುತ್ತಾ, ಸೂಸುವ ಧರೆಯ ಕಂಪಿನೊಳು ಮನೆಯ ಚಾವಡಿಯ ಮೂಲೆಯಲಿ ಕಿಟಕಿಯ ಸರಳುಗಳ ಎಣಿಸುತ್ತಾ, ಬಿಂಕದಿಂದ ಹೊಗೆಯಾಡುವ ಚಹಾ ಹೀರುತ್ತಾ, ಕರ್ಣಗಳೆರಡಕ್ಕೂ ವರ್ತಮಾನದ ಸಾಥೀ ಇಯರ್‌ಫೋನ್‌ ಗಳ ಸಿಕ್ಕಿಸಿ, ಹಳೆಯ ಹಾಡೊಂದ ಗುನುಗುತ್ತಾ ಗಾಢವಾಗಿ ಜಗವ ಮರೆವ ಆ ದಿನಗಳು ಮತ್ತೆ ಸಮೀಪಿಸಿದೆ. ಮಳೆಯಲ್ಲಿ ಕಳೆದು ಹೋದ ಒಂದು ಸುಂದರ ಬಾಲ್ಯ ಮರುಕಳಿಸುವ ಆಸೆಯಲ್ಲಿ ನಾವಿದ್ದೇವೆ.

Advertisement

ವಿಷಾದವೆಂಬಂತೆ ಈ ಬಾರಿ ಪರಿಸ್ಥಿತಿ ಮೊದಲಿನಂತಿಲ್ಲ. ಆತಂಕಗಳೇ ಸರ್ವಾಧಿಕಾರಿಗಳೆಂಬಂತೆ ಬದುಕಿನ ಸಹಜ ಸುಖವ ಕಸಿದಿವೆ. ಒಂದೆಡೆ ಕೊರೊನಾ ಕರಿಮೋಡವು ಮಳೆಗಾಲದ ನೈಜ ಸೌಂದರ್ಯವ ಅನುಭವಿಸುವ ಅಭಿಲಾಷೆಗಳಿಗೆ ಅಡ್ಡಿಯಾಗಿದೆ. ಮತ್ತೂಂದೆಡೆ ಇತ್ತೀಚಿನ ವರ್ಷಗಳ ಮಳೆಗಾಲಗಳು ತಂದೊಡ್ಡಿದ ಸಂಕಷ್ಟಗಳು ಇನ್ನೂ ಹಸಿಯಾಗಿವೆ. ಮಾನವ ಪ್ರಕೃತಿಯ ಮೇಲೆಸಗುವ ಕರ್ಮವೇ ಘೋರವಾಗಿ ರುವಾಗ ಕರ್ಮದ ಫಲ ಸೌಮ್ಯವಾಗಿರ ಬೇಕೆಂದು ಬಯಸಲು ಹೇಗೆ ಸಾಧ್ಯ?

ಆ ಕರ್ಮಗಳ ಫಲವೆಂಬಂತೆ ತೀರ ಇತ್ತೀಚಿನ ಪ್ರತೀ ಮಳೆಗಲವೂ ಸಿಹಿಗಿಂತಲೂ ಕೊಂಚ ಅಧಿಕ ಮರೆಯಲಾಗದ ಕಹಿ ನೆನಪುಗಳನ್ನೇ ಬಳುವಳಿಯಾಗಿ ನೀಡುತ್ತಲೇ ಸಾಗಿವೆ.

ಕಳೆದ ಕೆಲ ವರ್ಷಗಳ ಲೆಕ್ಕಾಚಾರದಲ್ಲಿ ಬಹುಶಃ ಮನುಷ್ಯನ ಅಹಂಕಾರಕ್ಕೆ ರುದ್ರಮಳೆಯ ಮದ್ದು ಅರೆಯುವ ಮೂಲಕ ಪ್ರಕೃತಿ ವೆರೈಟಿ ಶಾಸ್ತಿ ಮಾಡುತ್ತಿವೆಯೇನೋ ಎಂಬಂತೆ ಭಾಸವಾಗುತ್ತಿದೆ. ಎಷ್ಟರವರೆಗೆ ಅಂದರೆ ಮನುಷ್ಯ ತನ್ನ ಸಾಧನೆ-ಪ್ರತಿಷ್ಠೆಯ ಸೌಧಗಳಂತೆ ನಿರ್ಮಿಸಿದ ಮಹಾನಗರಗಳೂ ತೇಲುವ ಸ್ಥಿತಿಗೆ ತಲುಪಿದ್ದೂ ಇದೆ.

ಆದರೆ ವಿಪರ್ಯಾಸ,ಅದೆಷ್ಟೋ ಶ್ರಮಿಕರು ಹಗಲಿರುಳು ಬೆವರ ತೇಯ್ದು ತಮ್ಮ ನೆಮ್ಮದಿಯ ನಾಳೆಗಳ ಭರವಸೆಯಂತೆ ಕಟ್ಟಿದ ಮನೆ-ಆಸ್ತಿಗಳೂ ನಾಮಾವಶೇಷ ಅವಸ್ಥೆಗೆ ತಿರುಗಿದ ಉದಾಹರಣೆಗಳೂ ಬಹಳಷ್ಟಿವೆ. ಒಂದಷ್ಟು ಅಮಾಯಕ ಜೀವಗಳು ಗುಡ್ಡ ಕುಸಿತ, ಪ್ರವಾಹ, ಸಿಡಿಲು ಬಡಿತ, ಮರ ಉರುಳುವುದು ಮೊದಲಾದ ಪ್ರಕೃತಿಯ ಪ್ರಕೋಪಕ್ಕೆ ಬಲಿಯಾದ ನಿದರ್ಶನಗಳೂ ಹಸಿಯಾಗಿವೆ. ಮರುಭೂಮಿಯಲ್ಲಿನ ಓಯಸಿಸ್‌ ನಂತೆ ಅಲ್ಲಲ್ಲಿ ಸ್ಥಾಪಿತವಾದ ಗಂಜಿ ಕೇಂದ್ರಗಳಲ್ಲಿ ತಮ್ಮವರ-ತಮ್ಮದನ್ನು ಕಳೆದುಕೊಂಡು ಮೂಕ ರೋಧನೆಗೆ ಸಾಕ್ಷಿಯಾಗುವ ಮನಕಲಕುವ ಚಿತ್ರಣಗಳು ಕಣ್ಣಿಗೆ ಕಟ್ಟುವಂತಿದೆ. ಭವಿಷ್ಯದ ಕನಸು ಹೊತ್ತು ಸಂಘರ್ಷವನ್ನೇ ಜೀವನವನ್ನಾಗಿಕೊಂಡ ಎಳೆಯ ಚೇತನಗಳ ಆತಂಕವಂತೂ ಹೇಳತೀರದು. ಮೂಕ ಪಶು-ಪ್ರಾಣಿಗಳ ಅವಸ್ಥೆ ಹೃದಯವಿದ್ರಾವಕ. ಸಹಜ ಸೌಂದರ್ಯ-ಸೋಜಿಗಗಳಿಗೆ ಹೆಸರಾದ ಪ್ರವಾಸಿ ತಾಣಗಳು ಮರಣಕೂಪವಾಗಿ ಬದಲಾದ ವೈಪರೀತ್ಯಗಳು ಆತಂಕದ ಛಾಯೆ ಹರಡಿವೆ. ಇಷ್ಟು ಸಾಲದು ಎಂಬಂತೆ ಸ್ಪಂದಿಸಬೇಕಾದ ವ್ಯವಸ್ಥೆ ಅವ್ಯವಸ್ಥೆಯ ಆಗರವಾಗಿದ್ದನ್ನೂ ಕಂಡಿದ್ದೇವೆ. ಸೂರು-ಸೇರು ಎರಡನ್ನೂ ಕೊಳೆದುಕೊಂಡದ್ದಕ್ಕೆ ಪರಿಹಾರದ ಭರವಸೆಯ ಬಯಸಿ ಆಳುವ ದೊರೆಗಳ ಅಂಗಲಾಚಿ ಅಲ್ಲೊಂದಷ್ಟು ಪ್ರಹಸನಗಳು ನೊಂದವರನ್ನು ಮತ್ತೆ ನಿರಾಸೆಗೆ ದೂಡುವುದಕ್ಕೆ ಮೂಕ ಸಾಕ್ಷಿಯಾಗುವಾಗ ಮತ್ತೆ ಆ ದಿನಗಳು ಮರುಕಳಿಸದಿರಲಿ ಎಂಬ ಪ್ರಾರ್ಥನೆ ಮನದ ಒಂದು ಮೂಲೆಯಲ್ಲಿ ಮಾರ್ದನಿಸುವುದು ನಿಶ್ಚಿತ.

Advertisement

ಇಷ್ಟೆಲ್ಲ ನೋವುಗಳ ನಡುವೆ ಒಂದಷ್ಟು ಸಹೃದಯಿಗಳ ಸಹಾಯಹಸ್ತ, ಜೀವದ ಹಂಗು ತೊರೆದು ತಮ್ಮವರ ರಕ್ಷಿಸುವ ರಕ್ಷಣಾ ಸಿಬ್ಬಂದಿ, ನೊಂದವರಿಗಾಗಿ ಪ್ರಾರ್ಥಿಸುವ ಮನಗಳ ಕಂಡಾಗ ಸಮಾಜ ತಾನಂದುಕೊಂಡಷ್ಟು ಸ್ವಾರ್ಥಿಯಲ್ಲ ಎಂಬುದೇ ಸಮಾಧಾನ. ಒಟ್ಟಿನಲ್ಲಿ ಮುಂಬರುವ ಮಳೆಗಾಲಗಳು ಹಳೆಯ ಕಹಿ ಮರೆಸಲಾಗದಿದ್ದರೂ ಕ್ರೌರ್ಯವ ಸರಿಸಿ, ಶಾಂತಿಯ ಧರಿಸಿ, ಕನಿಷ್ಠ ಎಲ್ಲೋ ಕಳೆದುಹೋದ ಖುಷಿಯ ಮರೆಸುವಂತಿರಲಿ ಎಂಬುದಷ್ಟೇ ಸದಾಶಯ.

 

ಶಂತನು

ಎಸ್‌.ಡಿ.ಎಂ. ಕಾಲೇಜು, ಉಜಿರೆ

Advertisement

Udayavani is now on Telegram. Click here to join our channel and stay updated with the latest news.

Next