ಕೇಂದ್ರ ಸರಕಾರವು ಡಿಜಿಟಲೀಕರಣಕ್ಕೆ ಒತ್ತು ನೀಡುತ್ತಿದ್ದರೂ, ಮಂಗಳೂರು ಮಹಾನಗರ ಪಾಲಿಕೆಯಲ್ಲಿ ಮಾತ್ರ ಇನ್ನೂ, ಆನ್‌ಲೈನ್ ವ್ಯವಸ್ಥೆ ಸಮರ್ಪಕವಾಗಿ ಅನುಷ್ಠಾನಗೊಂಡಿಲ್ಲ. ಮಹಾನಗರ ಪಾಲಿಕೆಯ ನಿಗದಿತ ಪೌರ ಸೇವೆಗಳು ಆನ್‌ಲೈನ್ ಮುಖೇನ ಜನರ ಕೈಗೆಟಕುವಂತೆ ಮಾಡುವಲ್ಲಿ ಇನ್ನೂ ಸಾಕಾರವಾಗಿಲ್ಲ.
ಮೊದಲನೇ ಹಂತದಲ್ಲಿ ಆನ್‌ಲೈನ್ ಮುಖೇನ ನೀರಿನ್ ಬಿಲ್ ಪಾವತಿ ಮಾಡಲು ಮಾತ್ರ ಅವಕಾಶ ಕಲ್ಪಿಸಲಾಗುತ್ತಿದೆ ಎಂದು ಪಾಲಿಕೆ ಈ ಹಿಂದೆಯೇ ಹೇಳಿತ್ತು. ಆದರೆ, ಇನ್ನೂ, ಈ ವ್ಯವಸ್ಥೆ ಅನುಷ್ಠಾನಗೊಂಡಿಲ್ಲ.
ಪಾಲಿಕೆ ಸೇವೆಗಳು ಆನ್‌ಲೈನ್‌ನಲ್ಲಿ ಸಿಗಲಿವೆ ಎಂದು ಮಹಾನಗರ ಪಾಲಿಕೆ ಅಧಿಕಾರಿಗಳು ಭರವಸೆ ನೀಡಿ ಒಂದು ವರ್ಷ ಕಳೆದಿದೆ. ಆದರೂ, ಇನ್ನೂ ಆನ್‌ಲೈನ್ ಸೇವೆಗಳು ಮಾತ್ರ ವಿಳಂಬವಾಗಿವೆ. ಕಳೆದ ವರ್ಷ ಜನವರಿಯಿಂದ ನೀರಿನ ಶುಲ್ಕ, ಖಾತಾ ಬದಲಾಣೆ, ಖಾತಾ ನೋಂದಣಿ, ನೀರಿನ ಸಂಪರ್ಕ, ಯುಜಿಡಿ ಸಂಪರ್ಕ, ಪುರಭವನದ ಬಾಡಿಗೆ, ಮೈದಾನದ ಬಾಡಿಗೆ ಸಹಿತ ಮಂಗಳೂರು ಮಹಾನಗರ ಪಾಲಿಕೆಯಿಂದ 10 ಸೇವೆಗಳನ್ನು ಆನ್‌ಲೈನ್ ಮೂಲಕ ವ್ಯವಹರಿಸಬಹುದು ಎಂಬುದಾಗಿ ಪಾಲಿಕೆ ಅಧಿಕಾರಿಗಳು ತಿಳಿಸಿದ್ದರು. ಪ್ರಸ್ತುತ ನೀರಿನ ಬಿಲ್, ಪುರಭವನ ಬಾಡಿಗೆ ಸೇರಿದಂತೆ ಬಹುತೇಕ ಸೇವೆಗಳಿಗಾಗಿ ಜನರು ಪಾಲಿಕೆ ಕಚೇರಿ ಅಥವಾ ಮಂಗಳೂರು ಒನ್‌ಗೆ ತೆರಳಬೇಕಾಗಿದೆ. ಅಲ್ಲಿ ಗಂಟೆಗಟ್ಟಲೆ ನಿಂತು ತಮ್ಮ ಕೆಲಸಗಳನ್ನು ಮಾಡಿಸಿಕೊಳ್ಳಬೇಕಾಗಿದೆ. ಇದಕ್ಕೆ ಮುಕ್ತಿ ನೀಡುವ ನಿಟ್ಟಿನಲ್ಲಿ ಆನ್‌ಲೈನ್ ಸೇವೆ ಆರಂಭಿಸಲಾಗುವುದು ಎಂಬುದಾಗಿ ಪಾಲಿಕೆ ಹೇಳಿತ್ತು. ಮಹಾನಗರ ಪಾಲಿಕೆಯ ವಿವಿಧ ಸೇವೆಗಳ ಬಿಲ್‌ಗಳನ್ನು ಪಾವತಿಸುವುದೇ ದೊಡ್ಡ ತಲೆನೋವು. ಕನಿಷ್ಠ ನೀರಿನ ಬಿಲ್ ಪಾವತಿಸಲು ಮಂಗಳೂರು ಒನ್ ಕೇಂದ್ರದಲ್ಲಿ ಗಂಟೆಗಟ್ಟಲೆ ಸಾಲು ನಿಲ್ಲಬೇಕಿದ್ದು, ಹೆಚ್ಚಿನ ಮಂದಿ ತೊಂದರೆ ಅನುಭವಿಸುತ್ತಿದ್ದರು.