ನೆಲಮಂಗಲ: ಗ್ರಾಮಗಳ ಅಭಿವೃದ್ಧಿಗೆ ಅಧಿಕಾರಿಗಳು ಜನಪ್ರತಿನಿಧಿಗಳ ಜತೆ ಕೈಜೋಡಿಸಿದರೆ ಗ್ರಾಮೀಣ ಜನತೆಯ ಮನೆ ಬಾಗಿಲಿಗೇ ಸೌಲಭ್ಯಗಳನ್ನು ತಲುಪಿಸಲು ಅನುಕೂಲವಾಗುತ್ತದೆ ಎಂದು ಜಿಪಂ ಕೃಷಿ ಮತ್ತು ಕೈಗಾರಿಕಾ ಸ್ಥಾಯಿ ಸಮಿತಿ ಅಧ್ಯಕ್ಷ ಟಿ.ತಿಮ್ಮರಾಯಪ್ಪ ಅಭಿಪ್ರಾಪಟ್ಟರು. ತಾಲೂಕಿನ ಅರಿಶಿನಕುಂಟೆ ಜಿಪಂ ಕ್ಷೇತ್ರ ವ್ಯಾಪ್ತಿಯ ಕೆ.ಜಿ.ಶ್ರೀನಿವಾಸ್‌ಪುರ ಗ್ರಾಮದ ರಸ್ತೆ ಅಭಿವೃದ್ಧಿ ಕಾಮಗಾರಿಗೆ ಚಾಲನೆ ನೀಡಿ ಮಾತನಾಡಿದರು.
ಕೆ.ಜಿ.ಶ್ರೀನಿವಾಸ್‌ಪುರ ಗ್ರಾಮ ಪಟ್ಟಣಕ್ಕೆ ಹತ್ತಿರವಿದ್ದರೂ ನಿರೀಕ್ಷಿತ ಪ್ರಮಾಣದಲ್ಲಿ ಅಭಿವೃದ್ಧಿ ಕಂಡಿಲ್ಲ. ಕೆಲ ದಿನಗಳ ಹಿಂದೆ ಗ್ರಾಮದ ದೇವಸ್ಥಾನದ ಕಾರ್ಯಕ್ರಮಕ್ಕೆ ಆಗಮಿಸಿದ್ದ ವೇಳೆ ರಸ್ತೆಯ ಸ್ಥಿತಿಗತಿಯನ್ನು ಕಂಡು ಬೇಸರವಾಗಿತ್ತು. ಆದ್ದರಿಂದ, ಜಿಪಂ ಅನುದಾನದ 18 ಲಕ್ಷ ರೂ. ವೆಚ್ಚದಲ್ಲಿ ಗ್ರಾಮದ ರಸ್ತೆಗೆ ಡಾಂಬರೀಕರಣ ಮಾಡಲಾಗುತ್ತಿದೆ.
ಬೇಸಿಗೆ ಸಮೀಪಿಸುತ್ತಿರುವುದರಿಂದ ಗ್ರಾಮೀಣ ಪ್ರದೇಶದ ಜನರು ನೀರನ್ನು ಪೋಲು ಮಾಡಬಾರದು. ನೀರಿನ ಸಮಸ್ಯೆ ತಲೆದೋರಬಾರದೆಂದು ಸರಕಾರ ಹಾಗೂ ಸ್ಥಳೀಯ ಸಂಸ್ಥೆಗಳು ಸಾಕಷ್ಟು ಎಚ್ಚರಿಕೆ ವಹಿಸುತ್ತಿವೆ. ಗ್ರಾಮದ ನೀರಿನ ಸಮಸ್ಯೆಯನ್ನು ಅರಿತು ಕೊಳವೆಬಾವಿ ಕೊರೆಸಲಾಗುತ್ತದೆ ಎಂದು ಭರವಸೆ ನೀಡಿದರು. ಗ್ರಾಮದ ಅಂಗನವಾಡಿ ಕೇಂದ್ರದ ಶಿಕ್ಷಕಿ ರೂಪಾದೇವಿ ಗ್ರಾಮದ ಮಕ್ಕಳನ್ನು ಉತ್ತಮ ರೀತಿಯಲ್ಲಿ ನೋಡಿಕೊಳ್ಳುತ್ತಿಲ್ಲ.
ಬೇರೆ ಊರಿನಿಂದ ಬರುವ ಇವರು ಬೇಜವಾಬ್ದಾರಿತನದಿಂದ ಕರ್ತವ್ಯ ನಿರ್ವಹಿಸುತ್ತಿದ್ದಾರೆ. ಅಂಗನವಾಡಿ ಶಿಕ್ಷಕಿ ತನ್ನ ಪತಿಯೊಂದಿಗೆ ಅಂಗನವಾಡಿ ಕೇಂದ್ರದಲ್ಲಿಯೇ ದಿನ ಕಳೆಯುವುದರಿಂದ ಮಕ್ಕಳು ಅಂಗನವಾಡಿ ಕೇಂದ್ರಕ್ಕೆ ಹೋಗಲು ಭಯ ಪಡುತ್ತಿದ್ದಾರೆ. ಆದ್ದರಿಂದ, ಕೂಡಲೇ ಅಂಗನವಾಡಿ ಶಿಕ್ಷಕಿಯನ್ನು ಬೇರೆಡೆಗೆ ವರ್ಗಾಯಿಸಬೇಕೆಂದು ಜಿಪಂ ಸದಸ್ಯ ಟಿ.ತಿಮ್ಮರಾಯಪ್ಪ ಅವರನ್ನು ಸ್ಥಳೀಯರು ಒತ್ತಾಯಿಸಿದರು.
ಈ ಸಂದರ್ಭದಲ್ಲಿ ವಾಜರಹಳ್ಳಿ ಗ್ರಾಪಂಅಧ್ಯಕ್ಷೆ ಮಂಜಮ್ಮ, ಸದಸ್ಯರಾದ ಕೆಂಪರಾಜು, ಉಮಾದೇವಿ, ಮಾಜಿ ಸದಸ್ಯ ರಾಜಣ್ಣ, ವೆಂಕಟರಮಣಪ್ಪ, ಗುತ್ತಿಗೆದಾರರಾದ ಕೆ.ಎಚ್.ಶ್ರೀನಿವಾಸಮೂರ್ತಿ, ಜಿಪಂ ಅಭಿಯಂತರೆ ಮೊನೀಷಾ, ಮುಖಂಡರಾದ ಅರಿಶಿನಕುಂಟೆ ಶಿವಕುಮಾರ್, ಸ್ವಾಮಿ, ಗಂಗಾಧರಪ್ಪ, ನರಸಿಂಹಮೂರ್ತಿ, ಮುನಿರಾಜು, ಬೈಲಪ್ಪ ಮತ್ತಿತರರು ಉಪಸ್ಥಿತರಿದ್ದರು.