Advertisement

ಮುತಾಲಿಕ ಹಿಂದು ಸೇವೆಗೆ ನ್ಯಾಯ ಸಿಗಲಿ; ಶಾಸಕ ಯತ್ನಾಳ

04:48 PM Sep 07, 2022 | Team Udayavani |

ಮಹಾಲಿಂಗಪುರ: ಹಿಂದುತ್ವಕ್ಕಾಗಿ ತಮ್ಮ ಜೀವನವನ್ನೇ ಮುಡುಪಾಗಿಟ್ಟು ರಾಜ್ಯದ ಮತ್ತು ದೇಶದ ಹಳ್ಳಿ ಹಳ್ಳಿಗಳಿಗೆ ಸಂಚರಿಸಿ ಯುವಕರಲ್ಲಿ ಹಿಂದೂತ್ವದ ಜಾಗೃತಿ ಮೂಡಿಸುತ್ತಿರುವ ಶ್ರೀರಾಮಸೇನಾ ರಾಷ್ಟ್ರೀಯ ಅಧ್ಯಕ್ಷ ಪ್ರಮೋದ ಮುತಾಲಿಕ್‌ ಅವರ ಹಿಂದೂತ್ವ ಸೇವೆಗೆ ನ್ಯಾಯ ಸಿಗಬೇಕಾಗಿದೆ ಎಂದು ವಿಜಯಪುರ ನಗರ ಶಾಸಕ ಬಸನಗೌಡ ಪಾಟೀಲ ಯತ್ನಾಳ ಹೇಳಿದರು.

Advertisement

ಪಟ್ಟಣದ ಬನಶಂಕರಿ ಸಾಂಸ್ಕೃತಿಕ ಭವನದಲ್ಲಿ ಶ್ರೀರಾಮಸೇನಾ ಘಟಕದಿಂದ ಹಮ್ಮಿಕೊಂಡಿದ್ದ ಹಿಂದೂ ಯುವ ಧರ್ಮಸಭೆ ಹಾಗೂ ಪ್ರಮೋದ ಮುತಾಲಿಕ ಅವರ ತುಲಾಭಾರ ಸಮಾರಂಭದಲ್ಲಿ ಅವರು ಮಾತನಾಡಿದರು.

ರಾಜ್ಯದ ಬಿಜೆಪಿ ನಾಯಕರಿಗೆ ಚುನಾವಣೆ ಬಂದಾಗ ಮಾತ್ರ ಹಿಂದೂತ್ವ ನೆನಪಾಗುತ್ತದೆ. ಚುನಾವಣೆಯಲ್ಲಿ ಗೆದ್ದು ಬರುವರೆಗೆ ಪ್ರಮೋದ್‌ ಅವರು ಬೇಕು. ಗೆದ್ದು ಸಚಿವರಾಗಿ, ಮುಖ್ಯಮಂತ್ರಿಗಳಾದ ನಂತರ ಪ್ರಮೋದ್‌ ಅವರ ಸಮಾರಂಭದಲ್ಲಿ ವೇದಿಕೆ ಹಂಚಿಕೊಳ್ಳಲು ಹಿಂದೇಟು ಹಾಕುತ್ತಿರುವ ಬಿಜೆಪಿ ನಾಯಕರು, ಶಾಸಕರನ್ನು ಟೀಕಿಸಿದರು.

ರಾಜ್ಯದಲ್ಲಿ ಹಿಂದೂ ಕಾರ್ಯಕರ್ತರ ಮೇಲೆ ಹಲ್ಲೆ, ಕೊಲೆಗಳು ನಡೆಯುತ್ತಿವೆ. ಆದರೂ ರಾಜ್ಯ ಸರ್ಕಾರ ತಪ್ಪಿತಸ್ಥರ ವಿರುದ್ಧ ಕ್ರಮ ಜರುಗಿಸುತ್ತಿಲ್ಲ. ಕಠಿಣ ಕ್ರಮ ಕೈಗೊಳ್ಳುತ್ತೇವೆ ಎಂಬ ಹೇಳಿಕೆ ನೀಡುತ್ತಿದ್ದಾರೆ. ಕೊಲೆ ನಡೆದ 24 ಗಂಟೆಗಳಲ್ಲಿ ಕೊಲೆಗಾರರನ್ನು ಗುರುತಿಸಿ ಎನ್‌ಕೌಂಟರ್‌ ಮಾಡಬೇಕು ಎಂದು ಮುಖ್ಯಮಂತ್ರಿಗಳಿಗೆ ಹೇಳಿದ್ದೇನೆ. ನಮ್ಮ ದೇಶಕ್ಕೆ ಸ್ವಾತಂತ್ರ್ಯ ಸಿಕ್ಕಿದ್ದು ನೆಹರು ಅವರಿಂದ ಅಲ್ಲ, ನೇತಾಜಿ ಸುಭಾಶ್ಚಂದ್ರ ಬೋಸ್‌ ಅಂತಹ ಹಲವಾರು ಸ್ವಾತಂತ್ರ್ಯ ಹೋರಾಟಗಾರರಿಂದ ಎಂಬುದನ್ನು ತಿಳಿದುಕೊಳ್ಳಬೇಕು. ಯುವಕರು ಹಿಂದೂತ್ವದ ಉಳಿವಿಗಾಗಿ ಒಗ್ಗಟ್ಟಿನಿಂದ ಹೋರಾಟ ಮಾಡಬೇಕು. ಪ್ರಮೋದ ಮುತಾಲಿಕ ಅವರ ಹಿಂದೂತ್ವದ ಹೋರಾಟದ ಪರವಾಗಿ, ಅವರೊಂದಿಗೆ ಇರುತ್ತೇವೆ ಎಂದರು.

ಶ್ರೀರಾಮಸೇನಾ ರಾಷ್ಟ್ರೀಯ ಅಧ್ಯಕ್ಷ ಪ್ರಮೋದ ಮುತಾಲಿಕ್‌ ಅವರಿಗೆ ಕಾರ್ಯಕರ್ತರು ತುಲಾಭಾರ ನಡೆಸಿದರು. ಸಾನ್ನಿಧ್ಯ ವಹಿಸಿದ್ದ ಮೈಗೂರಿನ ಶಿವಾನಂದ ಮಠದ ಗುರುಪ್ರಸಾದ ಸ್ವಾಮೀಜಿ, ರನ್ನಬೆಳಗಲಿಯ ಸಿದ್ದರಾಮ ಶಿವಯೋಗಿಗಳು, ತೇರದಾಳ ಶಾಸಕ ಸಿದ್ದು ಸವದಿ, ಶ್ರೀರಾಮಸೇನಾ ರಾಜ್ಯ ಪ್ರಧಾನ ಕಾರ್ಯದರ್ಶಿ ಮಹಾಲಿಂಗಪ್ಪ ಗುಂಜಿಗಾಂವಿ ಮಾತನಾಡಿದರು.

Advertisement

ಶ್ರೀರಾಮಸೇನಾ ರಾಷ್ಟ್ರೀಯ ಅಧ್ಯಕ್ಷ ಪ್ರಮೋದ ಮುತಾಲಿಕ್‌ ಮಾತನಾಡಿ, ಇತಿಹಾಸವನ್ನು ಅರಿಯದೇ ಸ್ವಾತಂತ್ರ್ಯ ಹೋರಾಟಗಾರ ವೀರ ಸಾವರ್ಕರ್‌ ಅವರನ್ನು ಸಿದ್ದರಾಮಯ್ಯನವರು ಟೀಕಿಸಿದ್ದರಿಂದಲೇ ರಾಜ್ಯದಲ್ಲಿನ ಎಲ್ಲ ಹಿಂದೂಪರ ಸಂಘಟನೆಗಳು ಒಗ್ಗಟ್ಟಾಗಿ, ಜಾಗೃತಗೊಂಡಿವೆ. ಹಿಂದೂರಾಷ್ಟ್ರ ನಿರ್ಮಿಸುವುದೆ ನಮ್ಮ ಗುರಿಯಾಗಿದೆ ಎಂದರು. ಯುವಕರು ಜಾತಿ, ಮತ ಬಿಟ್ಟು ಹಿಂದೂತ್ವಕ್ಕಾಗಿ ಹೋರಾಟ ಮಾಡಬೇಕಾಗಿದೆ.

ಸಾವರ್ಕರ್‌ ಅವರಂತಹ ಯಾವುದೇ ಮಹಾನ್‌ ಪುರುಷನಿಗೆ ಅವಮಾನವಾದಾಗ ಹಿಂದೂ ಕಾರ್ಯಕರ್ತರು ಅದರ ವಿರುಧª ಧ್ವನಿ ಎತ್ತು, ಪ್ರತಿಭಟಿಸುವಂತಾಗಬೇಕು ಎಂದರು. ಬಿಜೆಪಿ ಸರ್ಕಾರ ಮತ್ತು ಮುಖಂಡರ ವಿರುದ್ಧ ಕಿಡಿಕಾರಿದ ಅವರು ದೇವಸ್ಥಾನಗಳಿಗೆ ನೀಡುವ ಅನುದಾನವನ್ನು ಬಂದ್‌ ಮಾಡಿ, ಹಿಂದೂಪರ ಸಂಘಟನೆಗಳಿಗೆ ಅನುದಾನ ನೀಡಿ. ಹಿಂದೂ ಸಂಘಟನೆಗಳಿಗೆ ಬಲ ತುಂಬಬೇಕು ಎಂದು ಒತ್ತಾಯಿಸಿದರು.ಶ್ರೀರಾಮಸೇನಾ ರಾಜ್ಯ
ಉಪಾಧ್ಯಕ್ಷ ಬಸವರಾಜ ಗಾಯಕವಾಡ, ಪುರಸಭೆ ಅಧ್ಯಕ್ಷ ಬಸವರಾಜ ಹಿಟ್ಟಿನಮಠ, ಬಸನಗೌಡ ಪಾಟೀಲ, ಆನಂದ ಜಂಬಗಿಮಠ, ಅನೀಲ ಕಿರಿಕಿರಿ, ಯಮನಪ್ಪ ಕೋರಿ ಭಾಗವಹಿಸಿದ್ದರು. ಹಿಂದೂಪರ ಸಂಘಟನೆಗಳ ಕಾರ್ಯಕರ್ತರು ಸಭೆಯಲ್ಲಿ ಭಾಗವಹಿಸಿದ್ದರು.

Advertisement

Udayavani is now on Telegram. Click here to join our channel and stay updated with the latest news.

Next