Advertisement
ಅವರವರ ನಂಬಿಕೆ ಅವರವರದು. ನಂಬಿಕೆ ಇದ್ದವರು ಆಚರಣೆ ಮಾಡಿದರೂ ಈ ನೆಲದ ಸಂಸ್ಕೃತಿ, ಆಚಾರ ಉಳಿಯುತ್ತದೆ. ಅದಕ್ಕಲ್ಲವೇ ಕವಿ ಡಾ| ಜಿ.ಎಸ್. ಶಿವರುದ್ರಪ್ಪ ನನ್ನ ಹಣತೆ ಕವನದಲ್ಲಿ ಹೇಳಿದ್ದು;
ತಾನಾಗಿ ತೆರೆದುಕೊಳ್ಳುವ ಕಣ್ಣುಗಳು.
Related Articles
ಬೆಳಕು. ಜೀವಿ ತನ್ನನ್ನು ಪ್ರೀತಿಸುವಷ್ಟು ಯಾರನ್ನೂ ಪ್ರೀತಿಸಲಾರ. ತಾನು ಎಂದರೆ ಬೆಳಕು. ನಮ್ಮೊಳಗಿರುವ ಬೆಳಕು. ಒಳಗೆಲ್ಲೋ ಕಳೆದು ಹೋದ ನಾನೆಂಬ ಬೆಳಕನ್ನು ಜೀವಲೋಕ ಹೊರಗೆ ಹುಡುಕುವ ಪರಿ ಇದು. ಹೊರಜಗದಲ್ಲಿ ಕಾಣ ಸಿಗುವ ಬೆಳಕುಗಳೆಲ್ಲ ನಮ್ಮೊಳಗೆ ಸ್ವತಃ ಬೆಳಗುವ ‘ನಾನು’ ಎಂಬ ಬೆಳಕಿನ ಪ್ರತಿಬಿಂಬಗಳು. ಶಿವರುದ್ರಪ್ಪನವರ ಮತ್ತೂಂದು ಕವನದಲ್ಲಿ ಹೀಗೆ ಹೇಳುತ್ತಾರೆ,
Advertisement
ಬೆಳಗು ಬಾ ಹಣತೆಯನುನನ್ನೆದೆಯ ಗುಡಿಯಲ್ಲಿ
ದಿವ್ಯ ದೀಪಾವಳಿಯ
ಶುಭ ಘಳಿಗೆಯಲ್ಲಿ
ಬೆಳಗು ಬಾ ಓ ಗೆಳತಿ
ನಿನ್ನ ಒಲವಿನ ಪ್ರಣತಿ
ಶತಮಾನಗಳ ತಿಮಿರ
ಮುಸುಕಿದಿ ಮಂದಿರದ ಎದೆಯಾಳದಲ್ಲಿ ಎಂದು. ಅದೇ ಕವಿ ಹಣತೆ ಕವನದಲ್ಲಿ ಹಣತೆ ಯಾವ ಚಂದ್ರಾದಿತ್ಯ ತಾರೆಗಳಿಗಿದು ಹೀನ, ಇಲ್ಲಿ ಬೆಳಗುತ್ತಿರುವ ಹಣತೆಗಿಹ ಸ್ಥಾನ ಸೂರ್ಯನೋ ಹಿರಿಸೊಡರು ಭುವನ ಭವನಕ್ಕೆ ಹಣತೆಯೋ ಕಿರಿಸೊಡರು ಮಣ್ಣು ಗುಡಿಸಲ್ಗೆ| ಎನ್ನುತ್ತಾರೆ. ನನ್ನೊಬ್ಬನಿಂದ ಜಗದ ಬೆಳಕು ಎಂದು ಮಿಣುಕುಹುಳದ ಮಾದರಿಯಲ್ಲಿ ಅಹಂಕಾರ ಪಡಬೇಕಿಲ್ಲವಾದರೂ ನಾನೊಬ್ಬ ಬೆಳಗುವ ಹಣತೆ ಸೂರ್ಯನ ಎದುರು ಏನೂ ಅಲ್ಲ ಎಂಬ ತಿಳಿವಳಿಕೆಯ ವಿನೀತ ಭಾವವೇ ನಮ್ಮನ್ನು ಮತ್ತಷ್ಟು ಹಿರಿದಾಗಿಸುತ್ತದೆ. ನಮ್ಮ ಅರಿವಿನ ಮಿತಿಯನ್ನು ಹೆಚ್ಚಿಸುತ್ತದೆ. ವರಕವಿ ದ. ರಾ. ಬೇಂದ್ರೆ ಬರೆದ “ಬೆಳಗು’ ಕವಿತೆ ಕನ್ನಡ ಕಾವ್ಯಾಕಾಶದಲ್ಲಿ ಹೊಸ ಬೆಳಗನ್ನು ಮೂಡಿಸಿತ್ತು. ಕವನದ ಕೊನೆಯ
ನುಡಿ ಹೀಗಿದೆ:
ಅರಿಯದು ಅಳವು ತಿಳಿಯದು ಮನವು
ಕಾಣದೋ ಬಣ್ಣಾ
ಕಣ್ಣಿಗೆ ಕಾಣದೋ ಬಣ್ಣಾ
ಶಾಂತಿರಸವೇ ಪ್ರೀತಿಯಿಂದಾ
ಮೈದೋರಿತಣ್ಣಾ
ಇದು ಬರಿ ಬೆಳಗಲ್ಲೋ ಅಣ್ಣಾ || ‘ಅಳವು’ ಅಂದರೆ ಸಾಮರ್ಥಯ. ಬೇಂದ್ರೆಯವರು “ಬೆಳಗಿ’ ನ ಪೂರ್ಣ ಅನುಭವವು ತಮ್ಮ ಪಂಚೇಂದ್ರಿಯಗಳ ಅಳವಿಗೆ ಹೊರತಾದದ್ದು ಎಂದು ಹೇಳಿದ್ದಾರೆ. ಮನುಷ್ಯನ ಪಂಚೇಂದ್ರಿಯಗಳ ಸಾಮರ್ಥಯವನ್ನು ಮೀರಿದ್ದು. ಆದುದರಿಂದಲೇ “ತಿಳಿಯದು ಮನವು’. ತನ್ನ ಪಂಚೇಂದ್ರಿಯಗಳ ಸಂವೇದನೆಯಿಂದಲೇ ಲೋಕವನ್ನು ತಿಳಿಯುವ ಮನಸ್ಸಿಗೆ “ಬೆಳಗಿ’ನ ಪೂರ್ಣ ಅನುಭವವನ್ನು ತಿಳಿಯಲು ಸಾಧ್ಯವಾಗುವುದಿಲ್ಲ. ಈ ಅನುಭವದ ಬಣ್ಣ ಹೊರಗಣ್ಣಿಗಾಗಲೀ ಒಳಗಣ್ಣಿಗಾಗಲೀ ಕಾಣದು. ಹಾಗಿರುವಾಗ ಅನಾದಿ ಕಾಲದಿಂದ ನಡೆದು ಬಂದ ಹಿರಿಯರು ಅನುಸರಿಸಿಕೊಂಡು ಬಂದ ಆಚರಣೆಗಳ ವಿಶ್ಲೇಷಣೆಗೆ ನಾವೆಷ್ಟರವರು.ನಮ್ಮ ಅರಿವಿನ ಮಿತಿ ಎಷ್ಟರದು ಎಂದು ನಾವು ನಿಜಮನದಲ್ಲಿ ಯೋಚಿಸಬೇಕು.