Advertisement

ಅಸ್ಪೃಶ್ಯತೆ ನಿವಾರಣೆಗೆ ಮಠಮಾನ್ಯಗಳು ಮುಂದಾಗಲಿ

12:57 PM May 23, 2017 | Team Udayavani |

ಮೈಸೂರು: ಹಿಂದೂ ಸಮಾಜವನ್ನು ಕಾಡುತ್ತಿರುವ ಅಸ್ಪೃಶ್ಯತೆಯೆಂಬ ಸಾಮಾಜಿಕ ರೋಗ ನಿರ್ಮೂಲನೆಗೆ ಮಠ-ಮಾನ್ಯಗಳು ಮುಂದಾಗಬೇಕು ಎಂದು ಕೇಂದ್ರ ನಗರಾಭಿವೃದ್ಧಿ ಸಚಿವ ಎಂ. ವೆಂಕಯ್ಯ ನಾಯ್ಡು ಹೇಳಿದರು.

Advertisement

ಗಣಪತಿ ಸಚ್ಚಿದಾನಂದ ಸ್ವಾಮೀಜಿ 75ನೇ ಜನ್ಮ ದಿನೋತ್ಸವದ ಅಂಗವಾಗಿ ಆಯೋಜಿಸಿರುವ ವಜೊÅàತ್ಸವ ಸಮಾರಂಭ ಉದ್ಘಾಟಿಸಿ ಮಾತನಾಡಿ, ಭಾರತೀಯ ಸಮಾಜ ಆಧುನಿಕತೆಯತ್ತ ದಾಪುಗಾಲಿಟ್ಟಿದ್ದರೂ ಇಂದಿಗೂ ಅಸ್ಪೃಶ್ಯತೆ, ಅಸಮಾನತೆ, ಮೇಲು-ಕೀಳು ಎಂಬ ಅನಿಷ್ಠ ಪದ್ಧತಿಗಳು ಜೀವಂತವಾಗಿವೆ. ಇಂತಹ ಪದ್ಧತಿಗಳು ಹಿಂದು ಸಮಾಜಕ್ಕೆ ಶೋಭೆ ತರುವುದಿಲ್ಲ ಎಂದರು.

ಭಾರತ ಜಗತ್ತಿಗೇ ಆಧ್ಯಾತ್ಮ ಗುರು. ಧಾರ್ಮಿಕ ತತ್ವ-ಸಂದೇಶವನ್ನು ಇಡೀ ವಿಶ್ವಕ್ಕೆ ಪಸರಿಸಿದ್ದು ಭಾರತ. ಹೀಗಾಗಿ ಭಾರತೀಯ ಸಂಸ್ಕೃತಿಗೆ ಗೌರವ ಮತ್ತು ಘನತೆ ಹೆಚ್ಚಿದೆ. ಹಿಂದೂ ಸಮಾಜವನ್ನು ಕಾಡುತ್ತಿರುವ ಸಾಮಾಜಿಕ ರೋಗ ನಿರ್ಮೂಲನೆ ರಾಜಕಾರಣಿಗಳಿಂದಾಗದು, ಇದಕ್ಕಾಗಿ ಸಾಧು-ಸಂತರು, ಸ್ವಾಮೀಜಿಗಳು, ಧಾರ್ಮಿಕ ಗುರುಗಳು ಕಾರ್ಯತತ್ಪರರಾಗಬೇಕು. ಆಗ ಮಾತ್ರ ಸಮಾಜದಲ್ಲಿ ಸುಧಾರಣೆ ಕಾಣಬಹುದು ಎಂದು ಹೇಳಿದರು.

ಸಚ್ಚಿದಾನಂದ ಸ್ವಾಮೀಜಿ ನುಡಿದಂತೆ ನಡೆಯುವವರು. ಅವರ ಆಚಾರ-ವಿಚಾರ, ಭಕ್ತಿಭಾವ, ಧಾರ್ಮಿಕ ಆಚರಣೆಯಲ್ಲೂ ಯಾವುದೇ ಬೇಧ ಭಾವ ಮಾಡದೆ, ಎಲ್ಲ ಜನರೊಂದಿಗೆ ಮುಕ್ತವಾಗಿ ಬೆರೆಯುತ್ತಾರೆ. ಅವರ ಕಷ್ಟ$rಗಳಿಗೆ ಸ್ಪಂದಿಸುತ್ತಾರೆ. ಇದು ಸಮಾಜಕ್ಕೆ ಮಾದರಿ ಕೆಲಸ. ಜತೆಗೆ ಇಂದಿನ ಅಗತ್ಯ ಕೂಡ ಎಂದರು.

75ನೇ ಜನ್ಮ ದಿನೋತ್ಸವ ಆಚರಿಸಿಕೊಳ್ಳುತ್ತಿರುವ ಸಚ್ಚಿದಾನಂದ ಸ್ವಾಮೀಜಿ, ಅಸ್ಪೃಶ್ಯತೆ ನಿವಾರಣೆಗೆ ಈ ವರ್ಷ ಶ್ರಮಿಸಲು ಮುಂದಾಗಿರುವುದು ಸಂತಸ ತಂದಿದೆ. ಸನಾತನ ಹಿಂದೂ ಸಂಸ್ಕೃತಿಯ ರಾಯಭಾರಿಯಾಗಿರುವ ಸಚ್ಚಿದಾನಂದ ಸ್ವಾಮೀಜಿ, ಧಾರ್ಮಿಕ ಕಾರ್ಯದೊಂದಿಗೆ ಸಂಗೀತ ಚಿಕಿತ್ಸೆ, ಜಾnನ, ಪರಿಸರ ಸಂರಕ್ಷಣೆ ಸೇರಿದಂತೆ ಹತ್ತು ಹಲವು ಸಮಾಜಮುಖೀ ಕೆಲಸಗಳಲ್ಲಿ ತೊಡಗಿಸಿಕೊಂಡಿರುವುದು ಮೆಚ್ಚುಗೆಯ ಸಂಗತಿ. ಕನ್ನಡ, ತೆಲುಗು, ಹಿಂದಿ, ಇಂಗ್ಲಿಷ್‌, ಫ್ರೆಂಚ್‌ ಭಾಷೆಗಳಲ್ಲಿ ಎರಡು ಸಾವಿರ ಗೀತೆಗಳನ್ನು ರಚನೆ ಮಾಡುವ ಮೂಲಕ ಸಂಗೀತ ಕ್ಷೇತ್ರದಲ್ಲೂ ವಿಶೇಷ ಸಾಧನೆ ಮಾಡಿದ್ದಾರೆ ಎಂದು ಗುಣಗಾನ ಮಾಡಿದರು.

Advertisement

ಲೋಕೋಪಯೋಗಿ ಸಚಿವ ಡಾ.ಎಚ್‌.ಸಿ.ಮಹದೇವಪ್ಪ ಮಾತನಾಡಿ, ದೇಶದಲ್ಲಿ ಇಂದಿಗೂ ಅಸ್ಪೃಶ್ಯತೆ, ಅಸಮಾನತೆ, ಜಾತೀಯತೆ, ತಾರತಮ್ಯ ತಳವೂರಿರುವುದು ಅಂತಾರಾಷ್ಟ್ರೀಯ ಮಟ್ಟದಲ್ಲಿ ಭಾರತೀಯರು ತಲೆತಗ್ಗಿಸುವಂತೆ ಮಾಡಿದೆ ಎಂದರು. ಬೃಹತ್‌ ಕೈಗಾರಿಕಾ ಸಚಿವ ಆರ್‌.ವಿ.ದೇಶಪಾಂಡೆ ಮಾತನಾಡಿ, ಆಧ್ಯಾತ್ಮಿಕ ಗುರುಗಳು ಎಲ್ಲರನ್ನೂ ಒಗ್ಗೂಡಿಸಿಕೊಂಡು ಜಾತಿ, ಧರ್ಮವನ್ನು ಮೀರಿ ಸಮಾನತೆ ಮಂತ್ರ ಪಠಿಸಬೇಕು.

ಆಗ ಮಾತ್ರ ಸಮಾಜದ ಅಭಿವೃದ್ಧಿ ಸಾಧ್ಯ ಎಂದು ತಿಳಿಸಿದರು. ಸುತ್ತೂರು ಮಠಾಧೀಶರಾದ ಶಿವರಾತ್ರಿ ದೇಶಿಕೇಂದ್ರ ಸ್ವಾಮೀಜಿ, ಉಡುಪಿಯ ಪುತ್ತಿಗೆ ಮಠಾಧೀಶರಾದ ಸುಗುಣೇಂದ್ರ ತೀರ್ಥ ಸ್ವಾಮೀಜಿ, ದತ್ತ ವಿಜಯಾನಂದ ತೀರ್ಥ ಸ್ವಾಮೀಜಿ ಸಾನ್ನಿಧ್ಯ ವಹಿಸಿದ್ದರು. ಶಾಸಕರಾದ ವಾಸು, ಎಂ.ಕೆ.ಸೋಮಶೇಖರ್‌, ಜಿ.ಟಿ.ದೇವೇಗೌಡ ಉಪಸ್ಥಿತರಿದ್ದರು.

Advertisement

Udayavani is now on Telegram. Click here to join our channel and stay updated with the latest news.

Next