ಬೀದರ: ಜಿಲ್ಲೆಯಲ್ಲಿ ಆನೇಕಾಲು ರೋಗ ನಿರ್ಮೂಲನೆಗಾಗಿ ಫೆ.21ರಿಂದ ಮಾರ್ಚ್ 20ರ ವರೆಗೆ ಜರುಗಲಿರುವ 2ನೇ ಸುತ್ತಿನ ಎಂಡಿಎ ಮತ್ತು ಐಡಿಎ ಮಾತ್ರೆಗಳ ಸಾಮೂಹಿಕ ಔಷಧ ಸೇವನೆ ಕಾರ್ಯಕ್ರಮವನ್ನು ಅಚ್ಚುಕಟ್ಟಾಗಿ ನಡೆಸಬೇಕು ಎಂದು ಜಿಲ್ಲಾಧಿಕಾರಿ ಗೋವಿಂದ ರೆಡ್ಡಿ ತಿಳಿಸಿದರು.
ನಗರದ ಡಿಸಿ ಕಚೇರಿ ಸಭಾಂಗಣದಲ್ಲಿ ನಡೆದ ಜಿಲ್ಲಾಮಟ್ಟದ ಸಮನ್ವಯ ಸಮಿತಿ ಸಭೆಯ ಅಧ್ಯಕ್ಷತೆ ವಹಿಸಿ ಮಾತನಾಡಿದ ಅವರು, ಜಿಲ್ಲೆಯಲ್ಲಿ ಆನೆಕಾಲು ರೋಗಿಗಳ ಪ್ರಕರಣ ಮತ್ತು ರೋಗ ಹರಡಿಸುವ ಸಕ್ರಿಯ ಪ್ರಕರಣಗಳು ಪದೇಪದೇ ಗೋಚರಿಸುತ್ತಿವೆ. ಆದ್ದರಿಂದ ಸರ್ಕಾರದ ಮಾರ್ಗದರ್ಶನುಸಾರ ಊಟದ ನಂತರ ಅರ್ಹ ಫಲಾನುಭವಿಗಳಿಗೆ ತ್ರಿವಳಿ ಮಾತ್ರೆ ಸೇವನೆಯ 2ನೇ ಸುತ್ತಿನ ಸಾಮೂಹಿಕ ಔಷಧ ಡಿ.ಇ.ಸಿ. ಅಲ್ಬೆಂಡಾಜೋಲ್ ಜೊತೆಯಲ್ಲಿ ಐವರ್ ಮೆಕ್ಟೀನ್ ತ್ರಿವಳಿ ಮಾತ್ರೆ ಸೇವನೆಗಾಗಿ ಜಿಲ್ಲಾದ್ಯಂತ ಸೂಕ್ಷ್ಮ ಕ್ರಿಯಾ ಯೋಜನೆ ಸಿದ್ಧಪಡಿಸಿದಂತೆ ಈ ಕಾರ್ಯಕ್ರಮವನ್ನು ಗುಣಾತ್ಮಕವಾಗಿ ಪ್ರತಿಶತ ಸಾಧನೆಗೈಯುವ ಹಾಗೆ ನಡೆಸಬೇಕು ಎಂದು ತಿಳಿಸಿದರು.
ಜಿಪಂ ಸಿಇಒ ಜಹೀರಾ ನಸೀಮ್ ಮಾತನಾಡಿ, ಕ್ರಿಯಾ ಯೋಜನೆ ಪರಾಮರ್ಶಿಸಿ ಯಾವುದೇ ಅಡೆತಡೆಯಾಗದಂತೆ ಪಿಡಿಒಗಳು ಸಕ್ರಿಯವಾಗಿ ಈ ಕಾರ್ಯಕ್ರಮದಲ್ಲಿ ಪಾಲ್ಗೊಂಡು, ಗರಿಷ್ಠ ಸಾಧನೆ ಮಾಡಬೇಕು. ಆರೋಗ್ಯ ಅಧಿಕಾರಿಗಳು ತಮ್ಮ ತಮ್ಮ ವ್ಯಾಪ್ತಿಯಲ್ಲಿ ನ್ಯೂನ್ಯತೆಗಳಿಗೆ ಆಸ್ಪದ ಇಲ್ಲದಂತೆ ಯಾವೊಬ್ಬ ಫಲಾನುಭವಿಗಳು ಮಾತ್ರೆ ಸೇವನೆಯಿಂದ ವಂಚಿತರಾಗದಂತೆ ಎಲ್ಲಾ ಇಲಾಖೆಗಳ ಸಹಕಾರ ಪಡೆದು ಕಾರ್ಯಕ್ರಮ ಯಶಸ್ವಿಗೊಳಿಸಲು ಸೂಚಿಸಿದರು.
ಜಿಲ್ಲಾ ರೋಗವಾಹಕ ಆಶ್ರಿತ ರೋಗಗಳ ನಿಯಂತ್ರಣಾಧಿಕಾರಿ ಡಾ| ಸಂಜೀವಕುಮಾರ ಪಾಟೀಲ ಮಾತನಾಡಿ, ಈ ಕಾರ್ಯಕ್ರಮದಲ್ಲಿ ಒಟ್ಟು ತಂಡಗಳು 1,826, ಆಶಾ ಕಾರ್ಯಕರ್ತರು 1,346, ಅಂಗನವಾಡಿ ಕಾರ್ಯಕರ್ತೆಯರು 4,050, ಪ್ರಾಥಮಿಕ ಆರೋಗ್ಯ ಸುರಕ್ಷತಾಧಿಕಾರಿಗಳು 337, ಮೇಲ್ವಿಚಾರಕರು ಆರೋಗ್ಯ ನಿರೀಕ್ಷಣಾಧಿಕಾರಿಗಳು 177, ಕ್ಷೇತ್ರ ಆರೋಗ್ಯ ಶಿಕ್ಷಣಾಧಿಕಾರಿ 10, ಪ್ರಯೋಗ ಶಾಲಾ ತಂತ್ರಜ್ಞ ಅಧಿಕಾರಿಗಳು 01 ಭಾಗವಹಿಸಲಿದ್ದಾರೆ ಎಂದು ತಿಳಿಸಿದರು.
ಜಿಲ್ಲೆಯ ಎಲ್ಲಾ ಆರೋಗ್ಯ ಸಂಸ್ಥೆಗಳಲ್ಲಿ ಔಷಧ ಸೇವನಾ ಕೇಂದ್ರಗಳನ್ನು ಸ್ಥಾಪಿಸಲಾಗಿದೆ ಎಂದರು. ಈ ರೋಗದಿಂದ ಯಾವುದೇ ಸಾವಿನ ಸಂಖ್ಯೆ ಇರುವುದಿಲ್ಲ. ಆದರೆ, ಈ ರೋಗ ಬಾಧೆಯಿಂದ ನರಳುವಿಕೆ ಹೆಚ್ಚಾಗಿರುತ್ತದೆ. ಈ ರೋಗವು ನಮ್ಮ ಜಿಲ್ಲೆಯಿಂದ ನಿಯಂತ್ರಿಸಬೇಕಾದರೆ ಸುಲಭ ಉಪಾಯ ಕ್ಯೂಲೆಕ್ಸ್ ಸೊಳ್ಳೆ ನಿಯಂತ್ರಣ ಮತ್ತು ಪ್ರತಿ ವರ್ಷಕ್ಕೊಂದು ಬಾರಿ ಡಿಇಸಿ ಮಾತ್ರೆ ಹಾಗೂ ಆಲ್ಬೆಂಡಾಜೋಲ್ ಸೇವಿಸಬೇಕು ಎಂದರು.
ಡಿಎಚ್‌ಒ ಡಾ| ರತಿಕಾಂತ ಸ್ವಾಮಿ, ಅಧಿಕಾರಿಗಳಾದ ಡಾ| ಜಯಂತಿ, ಡಾ| ಶಿವಶಂಕರ ಬಿ., ಡಾ| ಮಹೇಶ ತೊಂಡಾರೆ, ಗಂಗೋತ್ರಿ ಚಿಮ್ಮನಚೋಡ, ಡಾ| ಶಂಕರೆಪ್ಪಾ ಬೊಮ್ಮ, ಡಾ| ಮಹೇಶ ಬಿರಾದರ, ಡಾ| ಶರಣಯ್ನಾ ಸ್ವಾಮಿ, ಡಾ| ಶಿವಕುಮಾರ ಸಿದ್ದೇಶ್ವರ, ಡಾ| ಪ್ರವೀಣಕುಮಾರ ಹೂಗಾರ, ಡಾ| ಸಂಗಾರಡ್ಡಿ, ಡಾ| ದೀಪಾ ಖಂಡ್ರೆ, ಜೇತುಲಾಲ ಪವಾರ ಇದ್ದರು.